ಚರ್ಚೆಪುಟ:ಯಜ್ಞ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಜ್ಜ್ಞಗಳಲ್ಲಿ ಸೋಮಯಾಗ ಒಂದು, ಅದರಲ್ಲಿ ಪ್ರಾಣಿಗಲನ್ನು ಬಲಿಕೊಡುವ ನಿಯಮವಿದೆ. ಹಿಟ್ಟಿನಲ್ಲಿ ಪ್ರಾಣಿಆಕೃತಿಮಾಡಿ ಬಲಿ ಕೊಡಬೇಕೆಂಬ ಹೇಳಿಕೆ ಅರಣ್ಯಕದಲ್ಲಿದೆಯೆಂದು ಹೇಳುತ್ತಾರೆ. ಅದರ ಬಗೆಗೆ ಪ್ರಜಾವಾಣಿ ೨೯-೫-೨೦೧೬ ರಲ್ಲಿ ಧೀರ್ಘ ಲೇಖನದಲ್ಲಿ ಚರ್ಚಿಸಲಾಗಿದೆ. ಇದನ್ನು ಚರ್ಚೆಗೆ ಮಾತ್ರಾ ಉಪಯೋಗಿಸ ತಕ್ಕದ್ದು!

  • ಲೇಖಕ : ಲಕ್ಷ್ಮೀಪತಿ ಕೋಲಾರ: ಧರ್ಮ ಸಂಕಟ ಸೃಷ್ಟಿಸಿರುವ ಮಾದಕ ಸೋಮ!(Sun, 29/05/2016)
  • ಅದರ ಕೆಲವು ಭಾಗ:
  • ಮತ್ತೂರಿನಲ್ಲಿ ಸಂಕೇತಿ ಬ್ರಾಹ್ಮಣರು ಸೋಮಯಾಗವನ್ನು ನಡೆಸಿ, ನಂತರ ಸೋಮರಸದ ಸೇವನೆಯೊಂದಿಗೆ ಯಜ್ಞಕುಂಡದಲ್ಲಿ ಬೆಂದ ಮೇಕೆಯ ಮಾಂಸವನ್ನು ಪ್ರಸಾದವನ್ನಾಗಿ ಸೇವಿಸಿದರೆಂಬ ಪ್ರಜಾವಾಣಿಯ ಸುದ್ದಿ (ಮೇ 4, 2016) ಅನೇಕ ಧರ್ಮಭೀರುಗಳಿಗೆ, ಅದರಲ್ಲೂ ವಿಶೇಷವಾಗಿ ವೈದಿಕ ಸಮುದಾಯಕ್ಕೆ ದೊಡ್ಡ ಆಘಾತವನ್ನೇ ಉಂಟುಮಾಡಿದೆ!
  • ಆದರೆ ಆರ್ಷೇಯ ಹಾಗೂ ವೈದಿಕ ಮೂಲದ ಯಜ್ಞಯಾಗಾದಿಗಳ ಸಂಪ್ರದಾಯಗಳನ್ನು ಮತ್ತು ವಿಧಿನಿಯಮಗಳನ್ನು ಬಲ್ಲವರು ಆಘಾತಗೊಳ್ಳುವಂತಹದ್ದೇನನ್ನು ಮತ್ತೂರಿನ ಈ ಸಂಕೇತಿಗಳು ಮಾಡಿದ್ದಾರೆಂಬುದೇ ನನಗಿನ್ನೂ ಅರ್ಥವಾಗುತ್ತಿಲ್ಲ! ಯಜ್ಞದ ಆಚರಣೆಗಳಲ್ಲಿನ ಪಶುಬಲಿ ಮತ್ತು ಇಂದು ಮಾದಕದ್ರವ್ಯವಾಗಿ ಪರಿವರ್ತಿತವಾಗಿರುವ ಸೋಮರಸದ ಸೇವನೆ ಕಾನೂನಿನ ಪ್ರಕಾರ ಅಪರಾಧಗಳಾಗಿವೆ ಎಂಬುದೇನೋ ನಿಜ. (???)
  • ಆದರೂ ಯಜುರ್‌ವೇದದ ಋಷಿಗಳು ಕಟ್ಟುನಿಟ್ಟಾಗಿ ರೂಪಿಸಿರುವ ಯಜ್ಞಾಚರಣೆಗಳನ್ನು ಮತ್ತೂರಿನ ಸಂಕೇತಿ ವೈದಿಕರು ಸಾಂಕೇತಿಕವಾಗಿಯಾದರೂ ಆಚರಿಸಿಯೇ ತೀರುವ ಧರ್ಮ ಬದ್ಧತೆ ಮತ್ತು ಮುಗ್ಧ ಪ್ರಾಮಾಣಿಕತೆಯನ್ನು ಈ ಸೈಬರ್–ನ್ಯಾನೋ ಯುಗದಲ್ಲೂ ಧೈರ್ಯವಾಗಿ ಪ್ರದರ್ಶಿಸಿದ್ದಕ್ಕೆ ಮಾತ್ರ ಆಶ್ಚರ್ಯವಾಗುತ್ತಿದೆ. ಅವರ ತಿಳಿವಳಿಕೆಯಲ್ಲಿ ಖಂಡಿತ ಲೋಪವೇನೂ ಇದ್ದಂತಿಲ್ಲ, ಆಚರಿಸಿದ ಕಾಲದ ಹೊರತೂ!
  • ಸಂಪ್ರದಾಯಿನಿಷ್ಠ ವೈದಿಕರು ನಿಜಕ್ಕೂ ಆತಂಕಗೊಳ್ಳಬೇಕಾದ ವಿಚಾರಗಳು ಬೇರೆಯವೇ ಇವೆಯಲ್ಲವೇ? ಒಬ್ಬ ವೈದಿಕ ಬ್ರಾಹ್ಮಣನು ತನ್ನ ಧರ್ಮ ಪರಿಪಾಲನೆಗಾಗಿ ಯಥಾವತ್ ಯಜುಸ್ ಪರಿಕ್ರಮದಲ್ಲಿದ್ದಂತೆಯೇ ಯಜ್ಞದ ವಿಧಿಗಳೆಲ್ಲವನ್ನೂ ನೆರವೇರಿಸಲೇಬೇಕಲ್ಲವೇ? ಇಲ್ಲದಿದ್ದಲ್ಲಿ ಖಂಡಿತ ವೈದಿಕಚ್ಯುತಿ ತಪ್ಪಿದ್ದಲ್ಲವಲ್ಲ? ಅದಕ್ಕೆಂದೇ ಪ್ರಾಚೀನ ಋಷಿಗಳು ವೇದಗಳ ಮೂಲಕವೇ, ಅದರಲ್ಲೂ ತ್ರಯೀ ವೇದಗಳ ಮೂಲಕವೇ ವೈದಿಕ ಬ್ರಾಹ್ಮಣರನ್ನು ಗುರುತಿಸುವ ಪರಂಪರೆ ಪ್ರಾರಂಭಿಸಿದ್ದು.
  • ಆಯಾಯ ಶಾಖೆಗಳವರೇ ಅಧ್ವರ್ಯು, ಹೋತೃ, ಉದ್ಘಾತೃ, ಋತ್ವಿಜ ಹಾಗು ಅಥರ್ವಣ ಬ್ರಾಹ್ಮಣರಾಗಿ ತಮ್ಮ ತಮ್ಮ ಪಾಲಿನ ಯಜ್ಞ ವಿಧಿಗಳನ್ನು ನಿರ್ವಹಿಸಬೇಕೆಂದು ವಿಧಿಸಿದ್ದು. ಅಂದರೆ ಮೂಲದಲ್ಲಿ ಇವು ಬ್ರಾಹ್ಮಣ ಪಂಗಡದೊಳಗಿನ ವರ್ಣಗಳೇ ವಿನಾ ಬೇರೆಯಲ್ಲ. ಆದರೆ ಇಂದು ಬಹುತೇಕ ಯಾವ ಬ್ರಾಹ್ಮಣ ವರ್ಣಗಳವರೂ ತಮ್ಮ ಮೂಲ ಧರ್ಮವಿಧಿಗಳನ್ನು ನಿರ್ವಹಿಸುತ್ತಿಲ್ಲ.

ಪ್ರಾಚೀನ ವೇದ ಋಷಿಗಳು ರೂಪಿಸಿದ ಬ್ರಾಹ್ಮಣ ವರ್ಣಗಳನ್ನು ಮೀರಿದ್ದಾರೆ. ವೈದಿಕ ಪೂರ್ವಜ ಋಷಿಗಳು ಪರಮಧರ್ಮವೆಂದು ಆಚರಿಸುತ್ತಿದ್ದುದು ಈ ಯಜ್ಞ–ಯಾಗಾದಿಗಳನ್ನೇ ತಾನೇ? ಆ ಮೂಲಾಚರಣೆಗಳೇ ಇಲ್ಲದಿದ್ದ ಮೇಲೆ ವೈದಿಕವೆಂಬುದು ಎಲ್ಲಿ ಉಳಿಯಿತು? ವೈದಿಕವೆಂದರೇನೇ ಅಗ್ನಿ, ಸೋಮ, ಬಲಿಗಳನ್ನೊಳಗೊಂಡ ಇಂದ್ರಾದಿ ವೇದ ದೇವತೆಗಳಿಗೆ ಯಜ್ಞದ ಮೂಲಕ ಸೋಮ ಹಾಗು ಬಲಿಪಶುವಿನ ಮಾಂಸವನ್ನು ಹವಿಸ್ಸಾಗಿ ಅರ್ಪಿಸುವುದೇ ತಾನೇ? ದುರಂತವೇನೆಂದರೆ ಈ ವೈದಿಕ ಧರ್ಮದ ಮೂಲಾಚರಣೆ­ಗಳನ್ನಿಂದು ಆಚರಿಸಲಾಗದಂತಾಗಿದೆ! ಧರ್ಮಶ್ರದ್ಧೆ ನಿಜವೇ ಆದರೆ ವೈದಿಕ ಧರ್ಮಭೀರುಗಳು ನಿಜಕ್ಕೂ ಹೆದರಬೇಕಾದ್ದು ತಮ್ಮ ಈ ಧರ್ಮಚ್ಯುತಿಯ ಕಾರಣಕ್ಕಾಗಿ ಅಲ್ಲವೇ?

ಯಜ್ಞಗಳ ಮೂಲಕ ಆರಾಧನೆ:[ಬದಲಾಯಿಸಿ]

  • ಭಗವದ್ಗೀತೆಯಲ್ಲಿ ಕೃಷ್ಣ ಸ್ವಯಂ ನಾನೇ ಆದಿಯಜ್ಞವೆಂದು ಹೇಳಿದ್ದಾನೆ. ಅರ್ಜುನನಿಗೆ ಬೋಧಿಸುತ್ತಾ– ‘ಯಜ್ಞಗಳ ಮೂಲಕ ನನ್ನನ್ನು ಆರಾಧಿಸು. ಸೋಮರಸವನ್ನು ಸೇವಿಸಿ, ಪಾಪಗಳೆಲ್ಲವನ್ನೂ ತೊಳೆದುಕೋ, ಸ್ವರ್ಗವನ್ನು ಪಡೆ’ ಎಂದಿದ್ದಾನೆ. ಮುಂದುವರೆದು, ‘ಯಾರು ಯಜ್ಞಗಳನ್ನು ನಿರ್ವಹಿಸುವುದಿಲ್ಲವೋ ಅಂತಹವರಿಗೆ, ಇತರ ಲೋಕಗಳಂತಿರಲಿ (ಸ್ವರ್ಗಲೋಕ, ಪಿತೃಲೋಕ) ಈ ಲೋಕದಲ್ಲೇ ಅಸ್ತಿತ್ವವಿರುವುದಿಲ್ಲ... ಆದ್ದರಿಂದ ವೇದ, ಯಜ್ಞಗಳ ಜ್ಞಾನದ ದಿವ್ಯ ಫಲವನ್ನು ಅರಿ.
  • ಯಾಕೆಂದರೆ ನಾನೇ ಋಕ್, ಸಾಮ ಮತ್ತು ಯಜುಸ್ ಆಗಿದ್ದೇನೆ’ ಎಂದಿದ್ದಾನೆ (ಬಿಬೇಕ್ ದೇಬ್‌ರಾಯ್, ಮಹಾಭಾರತ, ಸಂ.5). ಯಜ್ಞ– ಯಾಗಾದಿಗಳನ್ನು ನೆರವೇರಿಸದ ವೈದಿಕರಿಗೆ ಮೋಕ್ಷವು ದುರ್ಲಭವೆಂಬ ಅಭಿಪ್ರಾಯವೂ ಇದೆಯಲ್ಲವೇ? ಆದರೆ ನೈಷ್ಠಿಕ ವೈದಿಕರು, ಜೈನ–ಬೌದ್ಧರ ಅಹಿಂಸೆಯ ನೈತಿಕತೆಗೆ ಅಂದು ಸಮಾಜದೆದುರು ಅಳುಕಿ ಬಂದು ಇಂದು ನಿಂತಿರುವುದಾದರೂ ಎಲ್ಲಿ?!
  • ತನ್ನ ಆರ್ಷೇಯ ಮೂಲವೂ ಸನಾತನವೂ ಆದ ಯಜನಧರ್ಮಕ್ಕೆ ತರ್ಪಣ ನೀಡಿ ತನ್ನದಲ್ಲದ ಪೂಜನ ಧರ್ಮದ ಅಧಿಕೃತ ವಕ್ತಾರಿಕೆಯನ್ನು ವಹಿಸಿಕೊಳ್ಳುವ ಹಂತಕ್ಕೆ! ನಿಗಮೋಕ್ತ ಯಜ್ಞಗಳನ್ನು ನಿರ್ವಹಿಸಬೇಕಾದ ಯಜನ ಧರ್ಮದ ವೈದಿಕರು ತಮ್ಮ ಆರ್ಯಮೂಲಕ್ಕೆ ಯಾವ ರೀತಿಯಲ್ಲೂ ಸಂಬಂಧಪಟ್ಟಿರದಿದ್ದ ದ್ರಾವಿಡಭಾಷಿಕರ ಪೂಜನ ಧರ್ಮದ ವಿಧಿಗಳನ್ನು ನಿರ್ವಹಿಸುವುದೆಂದರೆ ಏನರ್ಥ?!
  • ಆರ್ಯಶ್ರದ್ಧೆ ಮತ್ತು ಸಂಪ್ರದಾಯಗಳನ್ನು ತೊರೆದಂತೆಯೇ ಅಲ್ಲವೇ? ಅಂದರೆ ವೈದಿಕ ಶಾಸ್ತ್ರಶುದ್ಧಿ ಎಲ್ಲಿ ಉಳಿದಂತಾಯಿತು? ಪೂಜನ ಧರ್ಮ ವೈದಿಕಾರ್ಯರಿಗೆ ಸೇರಿದ್ದೆಂದು ಯಾವ ಪ್ರಾಚೀನ ವೇದಾಂಗಗಳಲ್ಲಿ ಉಲ್ಲೇಖಿಸಲಾಗಿದೆ? ಇದು ಸ್ಪಷ್ಟವಾಗಿ ಧರ್ಮಾಂತರವೇ. ಇದು ಕೇವಲ ನನ್ನ ತೀರ್ಮಾನ ಮಾತ್ರವಲ್ಲ. ಆಂಧ್ರದ ಕಡುಸಂಪ್ರದಾಯನಿಷ್ಟ ವೈದಿಕ ಬ್ರಾಹ್ಮಣ ರಾಣಿನರಸಿಂಹ ಶಾಸ್ತ್ರಿಗಳ ವಿವೇಚನಾಯುತವಾದ ತೀರ್ಮಾನವೂ ಕೂಡ.
  • ನರಸಿಂಹ ಶಾಸ್ತ್ರಿಗಳ ಮಗ ರಾಣಿ ಶಿವಶಂಕರ ಶರ್ಮ ಅವರು ತಮ್ಮ ಜೀವನ ಹಾಗೂ ತಮ್ಮ ತಂದೆಯವರ ಕುರಿತು ಬರೆದಿರುವ ‘ಕೊನೆಯ ಬ್ರಾಹ್ಮಣ’ದಲ್ಲಿ ಇಂತಹ ದಿಟ್ಟ ಅಭಿಪ್ರಾಯಗಳಿವೆ. ನರಸಿಂಹಶಾಸ್ತ್ರಿಗಳು ತಮ್ಮ ಎಂಬತ್ತು ವರ್ಷಗಳ ಜೀವನದುದ್ದಕ್ಕೂ ಎಂದೂ ಯಾವ ದೇವಾಲಯಕ್ಕೂ ಒಮ್ಮೆ ಕೂಡ ಹೋದವರಲ್ಲ.

ಅಷ್ಟ್ಯಾಕೆ ಮನೆಯಲ್ಲಿ ಕೂಡ ಯಾವ ದೇವರಿಗೂ ಪೂಜೆ ಮಾಡಿದವರಲ್ಲ! ಅವರ ದೊಡ್ಡ ಮಗ ಹಿಂದೂವಾದಿಯಾಗಿ ವೈದಿಕ ಸಂಪ್ರದಾಯದಿಂದ ಪಥಭ್ರಷ್ಟನಾಗಿದ್ದರೆ, ಎರಡನೆಯ ಮಗ ಶಿವಶಂಕರಶರ್ಮ ಎಡಪಂಥೀಯನಾಗಿದ್ದಾನೆ! ಹೀಗಾಗಿ ಆರ್ಷೇಯ ಪರಂಪರೆಯ ನರಸಿಂಹ ಶಾಸ್ತ್ರಿಗಳು ಕೊರಗುತ್ತಿದ್ದುದು ತಮ್ಮ ಅಪರ ಕರ್ಮಗಳನ್ನು ನಡೆಸಬಲ್ಲ ಅರ್ಹತೆ ತನ್ನಿಬ್ಬರು ಮಕ್ಕಳಿಗೂ ಇಲ್ಲವಲ್ಲ ಎಂದು.

  • ಅಂದರೆ ನರಸಿಂಹಶಾಸ್ತ್ರಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ವೈದಿಕರು ಹಿಂದೂಮತವನ್ನು ಒಪ್ಪುವುದೇ ಮತಾಂತರವೆಂದು ಗುರುತಿಸುವುದು. (ಕೊನೆಯ ಬ್ರಾಹ್ಮಣ; ಮೂಲ ತೆಲುಗು: ರಾಣಿ ಶಿವಶಂಕರ ಶರ್ಮ; ಆಂಗ್ಲಾನುವಾದ: ಡಿ. ವೆಂಕಟರಾವ್; ಕನ್ನಡಕ್ಕೆ: ಸುಜಾತ ಪಟ್ಟಾಡಿ / ವೆಂಕಟೇಶ ಪಟ್ಟಾಡಿ). ಆದರೆ ದ್ರಾವಿಡ ಭಾಷಿಕರು ಶತಮಾನಗಳಿಂದಲೂ ಆಚರಿಸುತ್ತ ಬಂದಿರುವ ಬಲಿ ಆಚರಣೆಗಳು ತಮ್ಮದಲ್ಲವೆಂದು ಎಂದೂ ಹಿಂದೆ ಸರಿದಿಲ್ಲವಷ್ಟೇ ಅಲ್ಲ, ಇಂದಿಗೂ ಆಚರಿಸುತ್ತಲೇ ಇದ್ದಾರೆ. ಹಿಂಸೆಗಳನ್ನು ವಿರೋಧಿಸುವ ಮಾತು ಬೇರೆ.

ನರಸಿಂಹ ಶಾಸ್ತ್ರಿಗಳಿಗೆ ಆರ್ಷೇಯವಾದ ವೈದಿಕ ಸಂಪ್ರದಾಯದ ಬಗ್ಗೆ ಅಪಾರ ಜ್ಞಾನವಿದ್ದಿರಬಹುದಾದರೂ ಆರ್ಯಭಾಷಿಕರಾದ ಕಕೇಷಿಯನ್ ಜನಾಂಗದ ಇತಿಹಾಸದ ಬಗ್ಗೆ ಹೆಚ್ಚು ಅರಿವು ಇದ್ದಂತಿಲ್ಲ. ಯಾಕೆಂದರೆ ಹಿಂದೂ ಎಂಬ ಶಬ್ದವನ್ನು ಹುಟ್ಟುಹಾಕಿದ್ದೇ ಭಾರತದ ಆರ್ಯವೈದಿಕರ ನಿಕಟ ವಂಶಸಂಬಂಧಿಗಳೂ, ಅವರ ದಾಯಾದಿಗಳೂ ಆದ ಜೊರಾಷ್ಟ್ರಿಯನ್ ಪಾರ್ಸಿಗಳು. ಅದೂ ಇಂದಿನ ಇರಾನಿನಲ್ಲಿ.

  • ಇರಾನ್ ಎಂದರೇನೇ ಆರ್ಯನ್ ಎಂದರ್ಥ. ಇರಾನ್ ಎಂಬ ಪದ ಹುಟ್ಟಿದ್ದೇ ಆರ್ಯ > ಅಯ್ರಿಯನ್ > ಇರಾನ್ ಎಂಬ ವರ್ಣಪಲ್ಲಟದ ಮೂಲಕ. ಅದರ ನೆನಪು ಇಂದಿಗೂ ಉತ್ತರಭಾರತದ ಆರ್ಯಭಾಷಿಕರಲ್ಲಿ ಎಷ್ಟು ಹಸಿಯಾಗಿದೆಯೆಂದರೆ, ಸ್ಮೃತಿ ಇರಾನಿ ಎಂಬ ನಾಮಪದದ ಮೂಲಕವಾದರೂ ಅದನ್ನು ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ! ಜೊರಾಷ್ಟ್ರಿಯನ್ ಪಾರ್ಸಿಗಳ ‘ಝೆಂಡ್ ಅವೆಸ್ತಾ’ ಮತ್ತವರ ಸಂಸ್ಕೃತಿಯನ್ನು ಅರಿಯದೆ ನಾವು ವೈದಿಕ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಕೂಡ ಸ್ಪಷ್ಟವಾಗಿ ಅರಿಯುವುದು ಖಂಡಿತ ಸಾಧ್ಯವಿಲ್ಲ.
  • ಆದರೆ ವೈದಿಕರಲ್ಲಿ ಎಷ್ಟು ಮಂದಿ ‘ಅವೆಸ್ತಾ’ವನ್ನು ಅಧ್ಯಯನ ಮಾಡಿದ್ದಾರೋ ನನಗಂತೂ ಗೊತ್ತಿಲ್ಲ. ಯುರೋಪನ್ನೂ ಒಳಗೊಂಡಂತೆ ಜಗತ್ತಿನ ಬಹುದೊಡ್ಡ ಸಮುದಾಯವಾಗಿರುವ ಆರ್ಯನ್ ಭಾಷಿಕ ಕಕೇಷಿಯನ್ ಜನಾಂಗದಲ್ಲಿ ಸೋಮಸಂಸ್ಕೃತಿ ಮತ್ತು ಯಜ್ಞ ಯಾಗಾಚರಣೆಗಳನ್ನು ರೂಢಿಸಿಕೊಂಡವರು ಕೇವಲ ಪಾರ್ಸಿಗಳು ಮತ್ತು ಭಾರತದ ವೈದಿಕ ಬ್ರಾಹ್ಮಣರು ಮಾತ್ರ. ಮಧ್ಯ ಏಷ್ಯಾದ ಸ್ಟೆಪ್ಪೀಸ್ ನದಿ ಪ್ರದೇಶದಿಂದಲೇ ವೇದಗಳ ರಚನೆ ಆರಂಭವಾಗಿರಬೇಕು. ಬಹುಶಃ ಋಗ್ವೇದದ ಪ್ರಾಚೀನ ಮಂಡಲಗಳ ಕೆಲಭಾಗಗಳಷ್ಟೇ ಅಲ್ಲಿ ರಚನೆಯಾಗಿರಬಹುದು.

ಬಹುಪಾಲು ಋಕ್‌ಗಳ ರಚನೆಯಾದದ್ದು ಇರಾನ್ ಮತ್ತು ಆಫ್ಘಾನಿಸ್ತಾನಗಳಲ್ಲೇ. ಯಾಕೆಂದರೆ ವೇದಗಳಲ್ಲಿನ ಭೌಗೋಳಿಕ ವಿವರಗಳನೇಕವು ಈ ಭೂಭಾಗಕ್ಕೆ ಬಹುತೇಕ ಹೋಲುತ್ತವೆ. ಉದಾಹರಣೆಗೆ, ಆಫ್ಘಾನಿಸ್ತಾನದ ಹೆಲ್ಮಂದ್ ನದಿಯನ್ನೇ ಪಾರ್ಸಿಗಳು ‘ಹರಕೆತಿ’ ಎಂದು ಕರೆದದ್ದು. ಪಾರ್ಸಿಗಳ ‘ಹ’ಕಾರ ವೈದಿಕರಲ್ಲಿ ‘ಸ’ಕಾರವಾಗಿ ಬದಲಾಗುವುದು ತುಂಬಾ ಸಾಮಾನ್ಯ ಸಂಗತಿ. ಹಾಗಾಗಿ ಹರಕೆತಿ ವೇದಗಳಲ್ಲಿ ಸರಸ್ವತಿಯಾಗಿ, ಹಿಂದೂ ಸಿಂಧುವಾಗಿ, ಹೋಮ ಸೋಮವಾಗಿ, ಹವನ ಸವನವಾಯಿತು.

  • ಅಹುರ್ (ಮಜ್ದಾ) ಅಸುರನಾದ. ಹರೊಯೂ ಸರಯೂವಾಗಿ ಬದಲಾಯಿತು. ಈ ನೆಲದಲ್ಲಿ ಆರ್ಯನ್ ಊರ್ಮಿ ಉಕ್ಕುಕ್ಕಿ ಹರಿಯುವಾಗಲೆಲ್ಲ ನನಗೆ ನೆನಪಾಗುವುದು– ಭಾರತದ, ಅದರಲ್ಲೂ ಉತ್ತರ ಭಾರತದ ವೈದಿಕರಿಗಿಂತಲೂ ಹೆಚ್ಚು ಶುದ್ಧವಾದ ಕಕೇಷಿಯನ್ ವಂಶತಳಿಯ ಜನರು ಇಂದು ಇರಾನ್–ಇರಾಕ್‌ಗಳ ಕುರ್ದಿಶ್‌­ಗಳಲ್ಲಿದ್ದಾರೆ; ಕಜಕಸ್ತಾನ್, ತುರ್ಕೆಮೆನಿಸ್ತಾನ್ ಹಾಗು ಆಫ್ಘಾನಿಸ್ತಾನಗಳಲ್ಲಿದ್ದಾರೆ ಎಂಬಂಶವೇ.
  • ಉತ್ತರ ಧ್ರುವದ ಆ ಸ್ಫಟಿಕ ನೀಲಕಣ್ಣುಗಳನ್ನು ದಕ್ಷಿಣದ ಯಾವ ಬ್ರಾಹ್ಮಣರಲ್ಲೂ ನಾನಂತೂ ಕಂಡಿದ್ದಿಲ್ಲ. ಆದರೂ ಸರಯೂ–ಸರಸ್ವತಿ ನದಿಗಳನ್ನು ಭಾರತಕ್ಕೆ ತಂದು ಪುರಾಣ–ಮಹಾಕಾವ್ಯಗಳನ್ನು ರಚಿಸಿ ತಮ್ಮ ಸಾಂಸ್ಕೃತಿಕ ರಾಜಕಾರಣವನ್ನು ಸಮರ್ಥವಾಗಿ ನಿರ್ವಹಿ­ಸಿದರು. ಅಲೆಮಾರಿಗಳಾಗಿದ್ದ ಅಂದಿನ ಬುಡಕಟ್ಟು ಸ್ವರೂಪದ ಜನರು ತಮ್ಮ ಹಿಂದಿನ ಮೂಲ ನೆಲೆಗಳಲ್ಲಿರುತ್ತಿದ್ದ ನದಿ, ಪರ್ವತ, ದೈವತ್ವದ ಪರಿಕಲ್ಪನೆಗಳನ್ನು ಹೀಗೆ ತಮ್ಮ ನೆನಪಿನ ಬಂಡಿಗಳಲ್ಲಿ ಹೊತ್ತೊಯ್ಯುತ್ತಿದ್ದುದು ಜಗತ್ತಿನಾದ್ಯಂತ ಸಹಜವೇ ಆಗಿತ್ತು.

ಚರಿತ್ರೆ– ಸಂಪ್ರದಾಯದ ನಡುವೆ... ಬಹುಶಃ ನರಸಿಂಹಶಾಸ್ತ್ರಿಗಳಿಗೆ ಇಂತಹ ನೂರಾರು ಐತಿಹಾಸಿಕ ಅಂಶಗಳ ಪರಿಚಯವಿದ್ದಿದ್ದರೆ ಅವರು ಹಿಂದೂ ಧರ್ಮವನ್ನು ‘ಪ್ರಚ್ಛನ್ನ ಕ್ರೈಸ್ತ’ವೆಂದು ಕರೆಯುತ್ತಿರಲಿಲ್ಲ. ಯಾಕೆಂದರೆ ಬಹುಪಾಲು ಯುರೋಪ್ ಕ್ರೈಸ್ತ ಮತಾವಲಂಬಿಗಳು ಕೂಡ ಕಕೇಷಿಯನ್ನರೇ. ಜರ್ಮನ್ನರು ಇಂದಿಗೂ ತಮ್ಮನ್ನು ಆರ್ಯನ್ನರೆಂದೇ ಗುರುತಿಸಿಕೊಳ್ಳುವುದು. ಸಂಸ್ಕೃತದ ಅನೇಕ ಪದಗಳು ಇಂದು ದ್ರಾವಿಡ ಭಾಷೆಗಳೊಳಗೆ ಸೇರಿಹೋಗಿವೆಯಾದರೂ ಸಂಸ್ಕೃತ ಭಾಷೆ ಹಿಂದೂ ಧರ್ಮಿಗಳಾಗಿರುವ ದ್ರಾವಿಡರ ಭಾಷೆಗಳಿಗಿಂತ ಗ್ರೀಕ್, ಲ್ಯಾಟಿನ್, ಜರ್ಮ್ಯಾನಿಕ್, ಕೆಲ್ಟಿಕ್, ಸ್ಲಾವಿಕ್, ಇಟಾಲಿಯನ್, ಇಂಗ್ಲಿಷ್‌ನಂತಹ ಇಂಡೋಯುರೋಪಿಯನ್ ಭಾಷಾ ಗುಂಪಿಗೇ ಅತಿ ಹೆಚ್ಚು ಸಮೀಪವಿದೆ. ಇದು ಭಾಷಾ ವಿಜ್ಞಾನಿಗಳೆಲ್ಲರಿಗೂ ತಿಳಿದಿರುವಂತಹದ್ದೇ. ಆದರೆ ನರಸಿಂಹಶಾಸ್ತ್ರಿಗಳಂತಹವರಿಗೆ ಮಾನವ ವಿಕಸನದ ಇತಿಹಾಸಗಳು ಮುಖ್ಯವಲ್ಲ. ಜನಾಂಗೀಯ ವರ್ಣವ್ಯವಸ್ಥೆಯ ವೈದಿಕ ಸಂಪ್ರದಾಯವೇ ಮುಖ್ಯ. ಆದರೂ ಅವರು ನೀಲಿಕಣ್ಣುಗಳವರಾಗಿ ಇರಲಿಲ್ಲವೆಂದೇ ಕುರುಡಾಗಿ ನಂಬಿದ್ದೇನೆ. ನರಸಿಂಹ ಶಾಸ್ತ್ರಿಗಳಿಗೆ ಯಾಕೆ ಹಿಂದೂ ಧರ್ಮಕ್ಕೆ ಸೇರಿದ ವೈದಿಕ ಬ್ರಾಹ್ಮಣರೆಲ್ಲರೂ ಮತಾಂತರಗೊಂಡಿದ್ದಾರೆಂದು ಅನಿಸಿರಬಹುದೆಂಬುದಕ್ಕೆ ಸದ್ಯ ನನಗೆ ಗೋಚರಿಸುತ್ತಿರುವ ಕಾರಣಗಳು ಮುಖ್ಯವಾಗಿ ಎರಡು. ಮೊದಲನೆಯದು, ಹಿಂದೂ ವೈದಿಕ ಬ್ರಾಹ್ಮಣರು ತಮ್ಮ ಆರ್ಷೇಯ ಮೂಲದ ಯಜ್ಞ–ಯಾಗಾದಿ, ಸಂಪ್ರದಾಯ–ವಿಧಿಗಳಿಂದ ದೂರ ಸರಿದಿದ್ದಾರೆ ಅಥವಾ ಅವುಗಳಿಂದ ಶಾಶ್ವತವಾಗಿ ನಿವೃತ್ತರಾಗಿದ್ದಾರೆ ಎಂಬುದು. ಎರಡನೆಯದು, ಹಿಂದೂ ಧರ್ಮದಲ್ಲಿ ಮುಖ್ಯವಿಧಿಗಳೆಂದು ಆಚರಣೆಗೊಳ್ಳುತ್ತಿರುವುದು ಬಹುತೇಕ ದ್ರಾವಿಡ ಭಾಷಿಕರ ಪೂಜನ ಧರ್ಮ ಮತ್ತು ಸಂಸ್ಕೃತಿಯ ಮೂಲದ್ದು ಎಂಬುದು. ಇದು ನರಸಿಂಹಶಾಸ್ತ್ರಿಗಳಿಗೆ ಚೆನ್ನಾಗಿ ಮನದಟ್ಟಾಗಿರುವುದರಿಂದಲೇ ಅವರು ಹಿಂದೂ ಮತಕ್ಕೂ ಸನಾತನ ವೈದಿಕಕ್ಕೂ ಏನೇನೂ ಸಂಬಂಧವಿಲ್ಲ ಎಂದಿರುವುದು. ಪೂಜೆ ಎಂಬ ಪದವು ಶುದ್ಧ ದ್ರಾವಿಡ ಪದ. ಪೂ+ಚೆಯ್ ಎಂದರೆ ‘ಹೂವು ಇಟ್ಟು’ ಮಾಡುವ ಕ್ರಿಯೆ ಎಂದಷ್ಟೇ ಅರ್ಥ. ಚೆಯ್, ಸೇಯ್, ಗೇಯ್ ಎಂಬೆಲ್ಲಾ ಪದಗಳೂ ಈ ಅರ್ಥವನ್ನೇ ಹೊಂದಿವೆ. ಪ್ರಾಚೀನ ಕಾಲದಿಂದಲೂ ದ್ರಾವಿಡರು ಮಾಡುತ್ತಾ ಬಂದಿರುವ ಪೂಜೆ ಖಂಡಿತ ದೇವರಿಗಲ್ಲ. ಯಾಕೆಂದರೆ ‘ದೇವ’ ಎಂಬ ಪದವೇ ದ್ರಾವಿಡ ಭಾಷೆಯದ್ದಲ್ಲ. ಪೂಜೆಯ ಪದ್ಧತಿ ಶುರುವಾದಾಗ ಅವರಿಗಿನ್ನೂ ದೇವ ಎಂಬ ಪದದ ಪರಿಚಯವೂ ಇರಲಿಲ್ಲ. ಪಾರ್ಸಿಗಳ ಕೆಡುಕು, ದುಷ್ಟ ಎಂಬರ್ಥದ ‘ದಏವ’ ಪದವೇ ಸಂಸ್ಕೃತದಲ್ಲಿ ದೇವ ಎಂದಾಗಿದ್ದು! ಪಾರ್ಸಿ ಮತ್ತು ವೈದಿಕರ ನಡುವಿನ ಅಜ್ಞಾತವಾಗುಳಿದಿರುವ ದಾಯಾದಿ ಮತ್ಸರದಿಂದಾಗಿ ಅವರ ನಡುವಿನ ಎಲ್ಲವೂ ಏತಿ ಎಂದರೆ ಪ್ರೇತಿ ಎಂದಾಗಿದೆ. ಪಾರ್ಸಿಗಳ ಸರ್ವಶಕ್ತ ಅಹುರ್‌ಮಜ್ದಾ ವೈದಿಕರಲ್ಲಿ ದುಷ್ಟ ಅಸುರನಾಗಿದ್ದರೆ, ವೈದಿಕರ ದೇವ ಪಾರ್ಸಿಗಳಲ್ಲಿ ದುಷ್ಟ ‘ದಏವ’ನಾಗಿದ್ದಾನೆ. ದ್ರಾವಿಡ ಸಂಸ್ಕೃತಿಯ ಮೂಲದಲ್ಲಿ ಎಂದೂ ದೈವತ್ವದ ಕಲ್ಪನೆ ಕುಡಿಯೊಡೆದಿದ್ದೇ ಇಲ್ಲ. ಅವರು ಪೂಜಿಸುವ ಲಿಂಗ, ಶಿವ, ಮುರುಗರೆಲ್ಲರೂ ಅವರ ಪೂರ್ವಿಕ ಪಿತೃಗಳು. ಹಾಗಾಗಿ ಅದೊಂದು ರೀತಿಯಲ್ಲಿ ಭೂತಾರಾದನೆಯೇ. ತಮ್ಮ ಪೂರ್ವೀಕ ಪಿತೃಗಳನ್ನು ಅವರು ಕರೆಯುತ್ತಿದ್ದುದು ‘ಕೊ’ ಎಂದು. ತಮ್ಮ ಪೂರ್ವೀಕ ಪಿತೃಗಳನ್ನು ಪೂಜಿಸುವ ಸ್ಥಳಗಳನ್ನೇ ಅವರು ಕೊ+ಇಲ್=ಕೋಯಿಲ್ ಎಂದು ಕರೆದುಕೊಂಡರು. ಇಂದಿಗೂ ಗುಡಿಗಳನ್ನು ತಮಿಳುನಾಡಿನಲ್ಲಿ ಕೋಯಿಲ್ ಎಂದೂ, ತೆಲುಗಿನಲ್ಲಿ ಕೋವೆಲ ಎಂದು ಕರೆಯುವ ವಾಡಿಕೆ ಉಳಿದುಕೊಂಡೇ ಬಂದಿದೆ. ಗುಡಿ ಸಂಸ್ಕೃತಿ ನಿಸ್ಸಂಶಯವಾಗಿ ದ್ರಾವಿಡರದ್ದು. ‘ಕೊನೆಯ ಬ್ರಾಹ್ಮಣ’ದ ಕೆಲವು ಮಾತುಗಳನ್ನು ಇಲ್ಲಿ ಗಮನಿಸುವುದು ಸೂಕ್ತ ಎನಿಸುತ್ತಿದೆ. 1. ನಮ್ಮ ಸನಾತನ ಬ್ರಾಹ್ಮಣ ಕುಟುಂಬಕ್ಕೆ ಈ ಹಿಂದೂ ಧರ್ಮ ಅಥವ ಮತದೊಂದಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲ. 2. ಬ್ರಾಹ್ಮಣರಿಗೂ ಹಿಂದೂ ಧರ್ಮವೆಂಬುದಕ್ಕೂ ಐತಿಹಾಸಿಕವಾಗಿ ಸಂಬಂಧವಿಲ್ಲವೆಂದು ತಿಳುದುಬರುತ್ತದೆ. ಆದರೆ ಈ ವಿಷಯ ಮರೆಯಾಗಿ ಬ್ರಾಹ್ಮಣರೆಂದರೇನೇ ಹಿಂದೂಧರ್ಮ ಮತ್ತು ಆ ಮತದ ಪ್ರತಿನಿಧಿಗಳು ಎನ್ನುವಷ್ಟರ ಮಟ್ಟಿಗೆ ಅಲಕ್ಷ್ಯ, ವಿಸ್ಮೃತಿ ಜಗತ್ತಿನಲ್ಲಿ ವ್ಯಾಪಿಸಿಬಿಟ್ಟಿದೆ. 3. ಇಸ್ಲಾಂ ಮತದ ಬಗ್ಗೆ ಸನಾತನ ಧಾರ್ಮಿಕರಿಗೆ ಸದಾ ಸದಭಿಪ್ರಾಯವೇ ಇದೆ. ಅದಕ್ಕೆ ಕಾರಣವೇನೆಂದರೆ, ಸನಾತನ ಧರ್ಮಕ್ಕೆ ಮೂಲಸ್ತಂಭಗಳೆಂದು ಭಾವಿಸಲ್ಪಡುವ ಶಂಕರಮಠಗಳ ತಂಟೆಗೆ ಮುಸ್ಲಿಮರು ಎಂದೂ ಬಾರದಿರುವುದು. ಭಾರತ ದೇಶವನ್ನು ಆಳಿದ ಇಸ್ಲಾಂ ರಾಜರು ಶಂಕರ ಪೀಠಗಳ ಬಗ್ಗೆ ಯಾವತ್ತೂ ಗೌರವದಿಂದ ನಡೆದುಕೊಂಡಿದ್ದರು. 4. ಸನಾತನ ಧರ್ಮದಲ್ಲಿ ಗುಡಿ ಅಥವ ದೇವಾಲಯ ಇಲ್ಲ. ದೇವಾಲಯಗಳೆಂಬುದು ಸನಾತನ ಧರ್ಮಕ್ಕೆ ಸೇರಿದ ಬ್ರಾಹ್ಮಣರ ಸೃಷ್ಟಿಯಲ್ಲ. 5. ಭಕ್ತಿಮಾರ್ಗ ಎಂಬುದು ಅವೈದಿಕ. ಅದನ್ನು ಅಧಮ ಪದ್ಧತಿಯೆಂದೂ, ಪಾಮರವಾದದ್ದೆಂದೂ ಭಾವಿಸುತ್ತಾರೆ. 6. ವೇದಾಭ್ಯಾಸದ ಓದು ಗ್ರಂಥವಿಲ್ಲದ ಓದು ಮತ್ತು ಅರ್ಥವಿಲ್ಲದ ಓದು. ಅಲ್ಲದೆ ಅಕ್ಷರವಿಲ್ಲದ ಓದು ಕೂಡ. ಬ್ರಾಹ್ಮಣರ ಜಗತ್ತಿನಲ್ಲಿ ಈ ಅನಕ್ಷರತೆಗೆ ಗೌರವವಿದೆ. ಆ ಗೌರವ ಇನ್ನೂ ಮುಂದುವರೆಯುತ್ತಲೇ ಇದೆ. 7. ಹಿಂದೂ ಧರ್ಮವಲ್ಲ, ಮತ; ಅದು ಮರೆಮುಸುಕಿನ ಛದ್ಮವೇಷ ತೊಟ್ಟಿರುವ ಕ್ರೈಸ್ತವ ಸನಾತನ. 8. ಕುಲದ ಬಗ್ಗೆ ಮಾತನಾಡದಿದ್ದರೆ ಯಾವುದರ ಬಗ್ಗೆಯೂ ಮಾತನಾಡಿದಂತಲ್ಲ. ಕುಲವನ್ನೂ ಕುಲಧರ್ಮವನ್ನೂ ತಿಳಿಯದಿದ್ದರೆ ಮೋಕ್ಷವಿಲ್ಲ. ವ್ಯಾವಹಾರಿಕ ಜಗತ್ತಿನಲ್ಲಿ ಕುಲವೆಂಬುದು ಮರೆಯಲಾಗದ ವಾಸ್ತವ. 9. ಹಿಂದೂ ಮತ ಆಧುನಿಕವಾದದ್ದು. ವೈದಿಕ ಧರ್ಮವನ್ನು, ಆಚಾರವನ್ನು ಒಡೆದು ಹೋಳಾಗಿಸಲು ಅದು ಕಂಕಣ ಕಟ್ಟಿಕೊಂಡಿದೆ... ಪರಾಜಿತ ಕುಲಗಳ ಸ್ವಾಸ್ಥ್ಯಕ್ಕಾಗಿ ಬ್ರಾಹ್ಮಣ್ಯವನ್ನು ಹರಿದು ಹಂಚಲು ನೋಡುತ್ತಿದೆ– ಈ ಹಿಂದೂಧರ್ಮ. ದೇಶವಿಡೀ ಧಾರ್ಮಿಕ ನೆಲೆಯಲ್ಲಿ ಭಾವುಕ ವಿಷವಲಯವಾಗಿ ಪರಿವರ್ತನೆಗೊಂಡಿರುವ ಈ ಸಾಂಸ್ಕೃತಿಕ ಅವನತಿಯ ಸಂದರ್ಭದಲ್ಲಿ ಇಂತಹ ನಿಲುವುಗಳನ್ನು ಪ್ರಕಟಪಡಿಸಿರುವುದು ಖಂಡಿತ ಸಾಧಾರಣದ ವಿಷಯವಲ್ಲ. ಭಕ್ತಿಪಂಥದ ಕುರಿತ ಮಾತು, ಹಿಂದೂ ವೈದಿಕ ಮೂಲದ್ದೆಂಬುದನ್ನು ಅರಿಯದೆ ಪ್ರಚ್ಛನ್ನ ಕ್ರೈಸ್ತವೆಂದಿರುವ ಮಾತು ಮತ್ತು ಕುಲ–ವರ್ಣವ್ಯವಸ್ಥೆಯನ್ನು ಅನುಮೋದಿಸಿರುವುದನ್ನು ನನ್ನಂತಹ ಯಾರೂ ಒಪ್ಪುವುದು ಸಾಧ್ಯವಿಲ್ಲದಿದ್ದರೂ, ಉಳಿದಂತೆ ರಾಣಿ ನರಸಿಂಹಶಾಸ್ತ್ರಿಗಳು ವ್ಯಕ್ತಪಡಿಸಿರುವ ನಿಲುವುಗಳೆಲ್ಲಾ ನನ್ನ ತಿಳಿವಳಿಕೆಯ ಪ್ರಕಾರ ಯಥಾರ್ಥ ಸತ್ಯಗಳೇ ಆಗಿವೆ. ಆದರೂ ಕಡು ಸಂಪ್ರದಾಯನಿಷ್ಠ ವೈದಿಕರಾಗಿದ್ದ ನರಸಿಂಹಶಾಸ್ತ್ರಿಗಳು ತಮ್ಮ ಜೀವಿತಾವಧಿಯಲ್ಲಿ ಯಜುಸ್ ಪರಿಕ್ರಮಗಳನ್ನು ಚಾಚೂತಪ್ಪದಂತೆ ಯಜ್ಞವಿಧಿಗಳನ್ನು ನೆರವೇರಿಸಿದ್ದರೇ, ಮಾಂಸಾಹಾರದೊಂದಿಗೆ ಸೋಮರಸವನ್ನು ಸೇವಿಸಿದ್ದರೇ ಎಂಬ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿಯಿಲ್ಲ. ಹಾಗೆ ಮಾಡಿಲ್ಲದಿದ್ದಲ್ಲಿ ಅವರು ಕೂಡ ಸನಾತನ ನಿಷ್ಠ ಸಂಪ್ರದಾಯವಾದಿ ವೈದಿಕರಾಗಿ ಉಳಿದಿರಲು ಸಾಧ್ಯವಿಲ್ಲ.

ಯಜ್ಞದ ವ್ಯುತ್ಪತ್ತಿ[ಬದಲಾಯಿಸಿ]

ಯಜ್ಞದ ಮೂಲಧಾತು ‘ಯಜ್’ ಎಂದು ಮಾಮೂಲಿಯಾಗಿ ಹೇಳುವುದುಂಟು. ಆದರೆ ‘ಯಜ್’ ಎಂಬುದು ಧಾತುವಲ್ಲ. ಅದೊಂದು ಕ್ರಿಯಾಪದ. ಅದರೊಂದಿಗೆ ‘ನ್’ ಎಂಬ ಮತ್ತೊಂದು ಕ್ರಿಯಾಪದವೂ ಸೇರಿಕೊಂಡಿದೆ. ಯಜ್, ಇಜ್ ಎಂಬ ಜೋಡಿ ಕ್ರಿಯಾಪದಗಳಲ್ಲಿ ‘ಇ’ ಅಥವ ‘ಯ’ಗಳ ಅರ್ಥ ಗಮನ, ಹೋಗುವುದು, ಸೇರುವುದು ಎಂದಿತ್ತು. ಅಂದರೆ ಹುಟ್ಟಿಸುವುದು, ಯೌನಕ್ರಿಯೆಯನ್ನು ಮಾಡುವುದು ಎಂದಿತ್ತು (ವನ್ಯಜೀವಿ ವೈದಿಕರಲ್ಲಿ). ಯೌನಕ್ರಿಯೆ ಎಂದರೆ ಜನನ ಕ್ರಿಯೆಯೇ... (ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ; ಇತಿಹಾಸಾಚಾರ್ಯ ವಿ.ಕಾ.ರಾಜವಾಡೆ; ನವಕರ್ನಾಟಕ ಪ್ರಕಾಶನ). ರಾಜವಾಡೆಯವರೇ ಹೇಳಿರುವಂತೆ ಅಗ್ನಿ ಮತ್ತು ಅಗ್ನಿಕುಂಡವೇ ಆರ್ಯ ಸಂಸ್ಕೃತಿಯ ಮೂಲ ಉಗಮ. ಪೂರ್ವೀಕ ವೈದಿಕರು ಯಾವ ಯಾವ ಕಾರ್ಯಗಳನ್ನು ಅಗ್ನಿಯ ಸುತ್ತಮುತ್ತ ಮಾಡಿ ಮುಗಿಸುತ್ತಿದ್ದರೋ ಆ ಎಲ್ಲಾ ಕಾರ್ಯಗಳನ್ನು ಅದೇ ರೀತಿ ಅಗ್ನಿಯ ಮುಂದೆ ಮಾಡುವುದರಿಂದ ಇಷ್ಟಕಾಮ ಸಿದ್ಧಿ ಪಿತೃಗಳಿಗೆ ಹೇಗೆ ಪೂರ್ವಕಾಲದಲ್ಲಿ ಸಿಕ್ಕಿತೋ ಹಾಗೆಯೇ ಈಗಲೂ ತಮಗೆ ಸಿಗುತ್ತದೆ ಎಂಬ ಭಾವನೆ ಸಹಜವಾಗಿಯೇ ಉಂಟಾಯಿತು (ಪು. 114). ಅಗ್ನಿಯ ಸಹಾಯದಿಂದ ಒಳ್ಳೆಯ ಭೋಜನ–ಪಾಕನಿಷ್ಪತ್ತಿ ಆಯಿತು. ಕ್ರೂರ ಪ್ರಾಣಿಗಳು ಹಾಗೂ ಶತ್ರುಗಳಿಂದ ರಕ್ಷಣೆ ಸಿಕ್ಕಿತು. ದಟ್ಟವಾದ ಕಾಡು ಹುಲ್ಲುಗಾವಲಾಯಿತು. ಹಾಗಾಗಿ ಋಷಿ ಪೂರ್ವಜರಿಗೆ ಅಗ್ನಿ ತುಂಬಾ ಇಷ್ಟವಾದ ದೇವತೆಯಾಯಿತು. ಎಷ್ಟರಮಟ್ಟಿಗೆಂದರೆ– ತಿನ್ನುವುದು, ಆಡುವುದು, ಏಳುವುದು, ಮಲಗುವುದು ಮತ್ತು ಪ್ರಜೋತ್ಪಾದನೆ ಮಾಡುವುದು ಎಲ್ಲವನ್ನೂ ಅಗ್ನಿಸಾಕ್ಷಿಯಾಗಿ ಮಾಡತೊಡಗಿದರು. ಇಂದಿಗೂ ಹಿಂದೂ ಧರ್ಮದಲ್ಲಿ ಮದುವೆಗಳು ನಡೆಯುವುದು ಕೂಡ ಅಗ್ನಿಸಾಕ್ಷಿಯಾಗಿಯೇ ತಾನೇ? ಆದರೆ ಜಲಸಂಸ್ಕೃತಿಯ ಶಿವಗಂಗಾಧರನ ಒಕ್ಕಲುಗಳಾದ ದ್ರಾವಿಡ ಭಾಷಿಕರು ಕೂಡ ಅಗ್ನಿಸಾಕ್ಷಿಯಾಗಿ ವಿವಾಹವಾಗುವುದು ಮಾತ್ರ ಸಾಂಸ್ಕೃತಿಕ ವಿಪರೀತ ಮತ್ತು ವಿರೋಧಾಭಾಸವಾಗಿದೆ. ‘ಯಜುಸ್’ ಎಂದರೆ ಯಜ್ಞ ಎಂಬರ್ಥವಷ್ಟೇ. ರಾಜವಾಡೆ ಅವರು ತಮ್ಮ ಮಾತಿಗೆ ಪೂರಕವಾಗಿ ಯಜುರ್ವೇದದಲ್ಲಿನ ಅನುವಾಕ್ಕನ್ನೇ ಉದಾಹರಣಾರ್ಥವಾಗಿ ಮಂಡಿಸಿದ್ದಾರೆ. ‘ಸೋಮಸ್ಯಾಹಂ ದೇವಯಜ್ಯಯಾ ಸುರೇತಾರೇತೊ ಧಿಷೀಯಾ ಇತ್ಯಾಹ ಸೋಮೋ ವೈ ರೇತೋಧಾಃ ತೇನೈವ ರೇತ ಆತ್ಮನ್‌ದತ್ತೇ’. ಇದರರ್ಥ, ಸೋಮನ ದೇವಯಜ್ಯದಿಂದ ಪ್ರಭೂತ ರೇತಸ್ ಆಗಿ ರೇತಧಾರಣೆ ಮಾಡುತ್ತೇನೆ. ಏಕೆಂದರೆ ಸೋಮನು ರೇತಸ್ಸನ್ನು ಉತ್ಪನ್ನ ಮಾಡುತ್ತಾನೆ. ಕೃಷ್ಣ ಮತ್ತು ಶುಕ್ಲ ಯಜುರ್ವೇದ ಸಂಹಿತೆಯಲ್ಲಿನ ಅಶ್ವಮೇಧಯಾಗದ ಕುರಿತು ರಾಜವಾಡೆಯವರು ಅಕ್ಷರಶಃ ಪಾಠಾಂತರವನ್ನು ನೀಡಿದ್ದಾರೆ. ಅವು ಅತ್ಯಂತ ನಾಟಕೀಯವಾಗಿವೆ. ಆದರೆ ಅಲ್ಲಿ ಯಜ್ಞದ ಯಜಮಾನನಾದ ರಾಜ, ರಾಣಿ, ಆಕೆಯ ಸಖಿಯರು, ಹೋತೃ ಮುಂತಾದವರ ನಡುವೆ ನಡೆಯುವ ಸಂಭಾಷಣೆ ಅಶ್ಲೀಲತೆಯ ಪರಮಾವಧಿ ಎಂಬಂತಿದೆ. ಅದನ್ನಿಲ್ಲಿ ಉಲ್ಲೇಖಿಸುವುದು ಖಂಡಿತ ಸಾಧುವಲ್ಲವೆಂದೇ ತಿಳಿದು ನಾನು ಕೈಬಿಟ್ಟಿದ್ದೇನೆ. ಒಟ್ಟು ನಾನೂರು ರೀತಿಯ ಯಜ್ಞಗಳಿವೆಯೆಂದು ಪ್ರಾಜ್ಞರೇ ಉಲ್ಲೇಖಿಸುತ್ತಾರೆ. ‘ಬೋಧಾಯನ ಗೃಹ್ಯಸೂತ್ರ’ವು ಅವುಗಳನ್ನು 21 ರೀತಿಯವೆಂದು ವಿಭಾಗಿಸುತ್ತದೆ. ಇದರಲ್ಲಿ ಸಪ್ತ ಸೋಮಯಜ್ಞಗಳೂ ಬರುತ್ತವೆ. ಸೋಮವೇ ಪ್ರಧಾನ ಹವಿಸ್ಸು ಈ ಯಾಗಗಳಲ್ಲಿ. ಸೋಮವೆಂಬ ಹವಿಸ್ಸನ್ನು ‘ಹವ್ಯವಾತ್’ ಆದ ಅಗ್ನಿಯು ದೇವತೆಗಳಿಗೆ ತಲುಪಿಸುತ್ತಾನೆ. ಸ್ವರ್ಗ ಬಯಸುವವರು ಗರುಡ ಪಕ್ಷಿಯ ವಿನ್ಯಾಸದಲ್ಲಿ ಅಗ್ನಿಕುಂಡ ಸ್ಥಾಪಿಸಬೇಕು ಎಂಬಂತಹ ನಿಯಮಗಳು ಇವೆ. ಸೋಮವನ್ನು ಕುರಿತು ಬಲಿಷ್ಟವಾದ ಎತ್ತು, ಯುದ್ಧ ಕುದುರೆ, ಹಕ್ಕಿ, ವೃಕ್ಷ, ದೇವರ ದೇವ, ಇಂದ್ರನ ಮಿತ್ರ, ಪ್ರಜಾಪತಿ ಮತ್ತು ಮನಸ್ಸಿನ ಅಧಿದೇವರು ಎಂಬೆಲ್ಲ ವರ್ಣನೆಗಳು ಬಳಕೆಯಾಗಿವೆ. ವೈದಿಕ ಯಜ್ಞಗಳಲ್ಲಿ ಸೋಮಯಜ್ಞವೇ ಅತ್ಯಂತ ಪ್ರಾಚೀನ ಎಂಬುದು ಗಮನಾರ್ಹ. ಋಗ್ವೇದದ ಒಂಬತ್ತನೇ ಮಂಡಲವು ಸೋಮಕ್ಕೆ ಮೀಸಲಾದ ಮಂಡಲ. ಈ ‘ಸೋಮ ಸಂಸ್ಕೃತಿ’ ಋಗ್ವೇದದ ಋಷಿಗಳನ್ನೆಷ್ಟು ಕಾಡಿದೆಯೆಂದರೆ ನೂರಾ ಹದಿನಾಲ್ಕು ಋಚೆಗಳ ಮೂಲಕ ಸೋಮನನ್ನು ಕೊಂಡಾಡಿ ಸ್ತುತಿಸಿದ್ದಾರೆ. ಬಹುಶಃ ಋಗ್ವೇದದ ಸೋಮಮಂಡಲದ ಋಕ್‌ಗಳ ರಚನೆಯಾಗುವ ಕಾಲಕ್ಕೆ ವೈದಿಕಾರ್ಯರು ಆಫ್ಘಾನಿಸ್ತಾನದಲ್ಲಿ ಇದ್ದಿರಬೇಕೆನಿಸುತ್ತದೆ. ಯಾಕೆಂದರೆ ಸೋಮವನ್ನು ಅವರು ಪರ್ವತೀವೃಧ್ ಎಂದು ವಿವರಿಸಿ ಮುಜಾವತ್ ಪರ್ವತವನ್ನು ಪ್ರಸ್ತಾಪಿಸಿದ್ದಾರೆ. ಮುಜಾವತ್ ಪರ್ವತ ಇರುವುದು ಆಫ್ಘಾನಿಸ್ತಾನದಲ್ಲೇ. (ಮುಜಾಹಿದ್ದೀನ್‌ಗಳೂ ಇಲ್ಲಿ ಅಪ್ರಯತ್ನಪೂರ್ವಕವಾಗಿ ನೆನಪಾಗುತ್ತಾರೆ). ಇಂಡೋ–ಇರಾನಿಯನ್ ಭಾಷಾ ಮೂಲದ ‘ಸವ್’ (Sav) ಎಂಬ ಧಾತುವಿನಿಂದ ಸೌಮ ಎಂಬ ಪದ ಹುಟ್ಟಿಕೊಂಡಿತು. ಈ ಸೌಮವೇ ಸಿಥಿಯನ್ನರ ಹೌಮ, ಪಾರ್ಸಿಗಳ ಹೋಮ ಹಾಗೂ ವೈದಿಕರ ಸೋಮ ಪದಗಳು ರೂಪುಗೊಳ್ಳಲು ಕಾರಣವಾಯಿತು. ‘ಸವ್’ ಎಂದರೆ ಹಿಂಡು ಎಂಬ ಧಾತ್ವರ್ಥವಿದೆ. ಅಂದರೆ ಸಸ್ಯವೊಂದನ್ನು ಹಿಂಡಿ ತೆಗೆದ ಪಾನೀಯವೇ ‘ಸೋಮ’ ಎಂದಾಗುವುದಷ್ಟೇ.

‘ಸೋಮ’ದ ಜಾಡು ಹಿಡಿದು..[ಬದಲಾಯಿಸಿ]

ಸೋಮವನ್ನು ಕುಡಿಯಲಿಕ್ಕೆ ದೇವರಿಗೆ ಚಂದ್ರನೇ ಬಟ್ಟಲು! ಹಾಗಾಗಿಯೇ ಸೋಮ ಎಂದರೆ ಚಂದ್ರನೆಂಬ ಸಮೀಕರಣವೂ ನಡೆಯಿತು. ಅಥರ್ವವೇದ ಸೋಮವನ್ನು ‘ಔಷಧೀಯ ಸಸ್ಯಗಳ ರಾಜ’ ಎಂದು ಕರೆದಿದೆ. ವಿದ್ವಾಂಸರು ನೂರಾರು ರೀತಿಯ ಸಸ್ಯಪ್ರಭೇದಗಳನ್ನು ಸೋಮದ ಮೂಲವೆಂದು ಗುರುತಿಸುವ ಪ್ರಯತ್ನ ನಡೆಸಿದ್ದಾರೆ. ಸೈಬೀರಿಯಾದ ಮಾಂತ್ರಿಕರು Amanitha Muscaria ಎನ್ನುವ ಅಣಬೆಯಿಂದ ಮಾದಕ ದ್ರವ್ಯವನ್ನು ತೆಗೆದು ಬಳಸುತ್ತಿದ್ದ ಬಗ್ಗೆ ಪ್ರಾಕ್ತನ ಪುರಾವೆಗಳು ಸಾಕಷ್ಟು ದೊರೆತಿರುವುದರಿಂದಲೂ ಆರ್ಯರಿದ್ದ ಭಾಗದಲ್ಲೇ ಸೈಬೀರಿಯಾ ಪ್ರದೇಶವೂ ಇದ್ದುದರಿಂದಲೂ ಅನೇಕರು ‘ಅಮನಿತ ಮಸ್ಕೇರಿಯ’ ಅಣಬೆಯೇ ಸೋಮರಸದ ಮೂಲವೆಂದು ವಾದಿಸಿದ್ದಾರೆ. ಆದರೆ ಮನು ಅಣಬೆಯನ್ನು ಯಾವ ರೀತಿಯಿಂದಲೂ ಸೇವಿಸಬಾರದೆಂದು ನಿಷೇಧಿಸಿದ್ದಾನೆ. ಮುಜಾವತ್ ಪರ್ವತಾವಳಿಯ ತಪ್ಪಲಿನಲ್ಲಿನ ‘ಶರ’ ಎಂಬ ಕಬ್ಬು ಪ್ರಭೇದದ ಕಡ್ಡಿಯೊಂದರಿಂದ ಬಾಣಗಳನ್ನು ತಯಾರಿಸುತ್ತಾರೆ. ಬಾಣ ಎಂಬುದಕ್ಕೆ ಶರ ಎಂಬ ಪದ ಪ್ರಯೋಗ ಇಲ್ಲಿಂದಲೇ ಬಂತೇನೋ? ಈ ಶರದಿಂದಲೂ ಮಾದಕ ಪಾನೀಯ ಲಭ್ಯವೆಂಬುದರೊಂದಿಗೆ, ಅದು ಮುಜಾವತ್ ತಪ್ಪಲಿನಲ್ಲಿಯೇ ಬೆಳೆವುದರಿಂದ ಕೂಡ ಅದನ್ನು ಸೋಮದ ಮೂಲವೆಂದು ಗುರುತಿಸುವ ಪ್ರಯತ್ನಗಳು ನಡೆದಿದ್ದಿರಬೇಕು. ಋಗ್ವೇದದಲ್ಲಿ ಶರ್ಯಾವನತ್ ಎಂಬ ಪ್ರದೇಶವನ್ನೂ ಸೋಮದ ಮೂಲ ನೆಲೆಯೆಂದು ವರ್ಣಿಸಲಾಗಿದೆ. ಕ್ರಿಸ್ ಬರ್ನೆಟ್ ಎಂಬಾತ ‘Canabbis and the Soma Solution’ ಎಂಬ ಪುಸ್ತಕವನ್ನೇ ಬರೆದಿದ್ದು, ಗಾಂಜಾ ಗಿಡವೇ ‘ಸೋಮ’ ಮೂಲವೆಂದಿದ್ದಾನೆ. ಬಿ.ಜಿ.ಎಲ್. ಸ್ವಾಮಿ ಅವರೂ ಗಾಂಜಾಗಿಡವೇ ಸೋಮದ ಮೂಲವೆಂದಿದ್ದಾರೆ. ಚೀನಾದಲ್ಲಿ ಗಾಂಜಾ ಗಿಡವನ್ನು Hu-ma ಎಂದು ಕರೆಯುತ್ತಿದ್ದುದರಿಂದಲೇ ಹೋಮ, ಸೋಮ ಎಂಬ ಪದಗಳು ಹುಟ್ಟಲು ಕಾರಣವಾಯಿತೆಂಬುದು ಮತ್ತೂ ಹಲವರ ವಾದ. ಆದರೆ ಸೋಮಸಸ್ಯದಲ್ಲಿ ಅನೇಕ ಪ್ರಭೇದಗಳಿರುವ ಸೂಚನೆ ಋಗ್ವೇದದಲ್ಲೇ ಇದೆ. ಶುಶ್ರುತನೇ ಇಪ್ಪತ್ತನಾಲ್ಕು ಬಗೆಯ ಸೋಮಲತೆಗಳ ಬಗ್ಗೆ ಮಾತನಾಡಿದ್ದಾನೆ. ಹೀಗಾಗಿ ಮೇಲೆ ಪ್ರಸ್ತಾಪ ಆದವುಗಳೆಲ್ಲ ಮಾದಕಗುಣ ಹೊಂದಿದ್ದರೂ ಅವು ಸೋಮದ ಮೂಲ ಅಲ್ಲವೆನಿಸುತ್ತೆ. ಆದರೆ ಬಹುತೇಕ ವಿದ್ವಾಂಸರು ‘ಎಫೆಡ್ರ’ ಎಂಬ ಕಳ್ಳಿ ಗಿಡದಿಂದ ಬೆಳೆವ ಸಸ್ಯವನ್ನೇ ಸೋಮದ ಮೂಲವೆಂದು ಪ್ರತಿಪಾದಿಸಿದ್ದಾರೆ. ಜಗತ್ತಿನ ಅನೇಕ ಭಾಗಗಳಲ್ಲಿ ಎಫೆಡ್ರ ಬೆಳೆಯುವುದಲ್ಲದೆ ಅನೇಕ ಪ್ರಭೇದಗಳನ್ನೂ ಒಳಗೊಂಡಿದೆ. ಅದರಲ್ಲಿ ಎಫೆಡ್ರ ಸಿನಿಕ (Ephedra Sinica) ಎಂಬ ಪ್ರಭೇದವು ಆಫ್ಘಾನಿಸ್ತಾನದಲ್ಲಿ ಹೆಚ್ಚು ಬೆಳೆಯುವುದರಿಂದ ಅದೇ ಸೋಮರಸವನ್ನೀಯುವ ಸಸ್ಯವೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಚೀನಾದಲ್ಲೂ ಈ ಸಸ್ಯ ಬೆಳೆಯುತ್ತದೆ. ಅಲ್ಲಿ ಪ್ರಾಚೀನ ಕಾಲದಿಂದಲೂ ಆ ಸಸ್ಯದ ಔಷಧೀಯ ಬಳಕೆ ಆಗುತ್ತಿದ್ದು, ಅದನ್ನು Ma Haung ಎಂದು ಕರೆಯುತ್ತಾರೆ. ಅಸ್ತಮಾ, ಚಳಿ, ಜ್ವರ, ಕೀಲು ನೋವುಗಳಿಗೆ ‘ಎಫೆಡ್ರ’ ಪರಿಣಾಮಕಾರಿ ಎನ್ನುತ್ತಾರೆ. ಚೀನಾದ ವೇಶ್ಯಾವಾಟಿಕೆಗಳಲ್ಲಿ ಎಫೆಡ್ರದಿಂದ ಟೀ ಮಾಡಿಕೊಡುವ ಪರಿಪಾಠವೂ ಇತ್ತಂತೆ. ಈ ಕಹಿಯ ಎಫೆಡ್ರ ಟೀಗೆ ಗನೋರಿಯ ಮತ್ತು ಸಿಫಿಲಿಸ್ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆಯೆಂಬುದು ಅಲ್ಲಿನವರ ನಂಬಿಕೆ. ಎಫೆಡ್ರಿನ್ ಎಂಬ ಆಲ್ಕಾಲಾಯ್ಡ್ ಕೇಂದ್ರ ನರಮಂಡಲ ವ್ಯವಸ್ಥೆಯನ್ನು ಪ್ರಚೋದಿಸುವ ಗುಣ ಹೊಂದಿದೆ. (ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಕೋಟಿಗೂ ಹೆಚ್ಚು ಮೌಲ್ಯದ ಎಫೆಡ್ರ ಪುಡಿಯನ್ನು ವಶಪಡಿಸಿಕೊಂಡದ್ದನ್ನು ನೆನಪಿಸಿಕೊಳ್ಳಿ). ಕ್ಯಾಲೋರಿಗಳನ್ನು ವೇಗವಾಗಿ ದಹಿಸಬಲ್ಲ ಗುಣ ಹೊಂದಿರುವ ಎಫೆಡ್ರಾ ಲವಲವಿಕೆ ಹೆಚ್ಚಿಸಿ, ದೃಷ್ಟಿಕೋನವನ್ನು ಕೂಡ ಚುರುಕಾಗಿಸುತ್ತದೆ. ಝೆನ್ ಸನ್ಯಾಸಿಗಳು ಧ್ಯಾನದ ಸಂದರ್ಭದಲ್ಲಿ ಇದನ್ನು ಬಳಸುತ್ತಿದ್ದರಂತೆ. ಲೈಂಗಿಕ ಶಕ್ತಿಯನ್ನು ವೃದ್ಧಿಸಬಲ್ಲ ಎಫೆಡ್ರ ಧೂಮಪಾನ ವ್ಯಸನಿಗಳಿಗೂ ಉಪಯುಕ್ತ. ಮನುಷ್ಯನನ್ನು ಜಾಗ್ರತ ಅವಸ್ಥೆಯಲ್ಲಿ ಇಡಬಲ್ಲ ಎಫೆಡ್ರವನ್ನು ಚೆಂಗೀಸ್ ಖಾನನ ಅಂಗರಕ್ಷಕರು ಕೂಡ ಬಳಸುತ್ತಿದ್ದರಂತೆ. ಯಾಕೆಂದರೆ ಅವರು ನಿದ್ದೆಗೆ ಜಾರಿದರೆ ಅವರ ತಲೆಯೂ ಹಾರುತ್ತಿತ್ತಂತೆ! ಕಲ್ಲುಗಳಿಂದ ಜಜ್ಜಿ ಸೋಮರಸವನ್ನು ಬಸಿಯಲಾಗುತ್ತಿತ್ತು. ಒರಳು ಕಲ್ಲಿನಂತಹ ಸಾಧನವನ್ನೂ ಬಳಸುತ್ತಿದ್ದರು. ಹಾಲು, ಜೇನುತುಪ್ಪಗಳನ್ನೂ ಇದರಲ್ಲಿ ಬೆರೆಸುತ್ತಿದ್ದರು. ಅಮೃತತ್ವದ ಭಾವನೆ ನೀಡುವುದರಿಂದ ವೈದಿಕ ಋಷಿಗಳು ಇದನ್ನೇ ಅಮೃತವೆಂದೂ ಕರೆದರು. ಇಂಡೋಯುರೋಪಿಯನ್ ಭಾಷೆಯಲ್ಲಿ ಅಮೃತವನ್ನೇ ‘ಅಂಬ್ರೋಸಿಯ’ (Ambrosia) ಎಂದು ಕರೆಯುವುದುಂಟು. 1960–70ರವರೆಗೂ ಇರಾನ್‌ನ ಪಾರ್ಸಿಗಳಿರುವ ಹಳ್ಳಿಯೊಂದರಲ್ಲೂ ಸೋಮಯಾಗ ನಡೆಯುತ್ತಿತ್ತಂತೆ. ಅಲ್ಲಿ ಸಿಗುವ ಎಫೆಡ್ರಾದ ಕಡ್ಡಿಗಳನ್ನವರು ಭಾರತದಲ್ಲಿರುವ ಪಾರ್ಸಿ ಬಂಧುಗಳಿಗೆ ರಫ್ತು ಕೂಡ ಮಾಡುತ್ತಿದ್ದರಂತೆ. ಕ್ರಿ.ಪೂ. 50 ಸಾವಿರ ವರ್ಷಗಳ ಹಿಂದೆಯೇ ಉತ್ತರ ಇರಾಕಿನ ಷಮೀದರ್ ಎಂಬ ಗುಹೆಯಲ್ಲಿನ ನಿಯಾಂಡ್ರ್‌ತಲ್ ಮಾನವರ ಸಮಾಧಿಗಳಲ್ಲಿ ಎಫೆಡ್ರಾದ ಪರಾಗರೇಣುಗಳಿದ್ದದ್ದು ಪತ್ತೆಯಾಗಿದೆ. ಕ್ರಿ.ಪೂ. 2000 ವರ್ಷಗಳ ಹಿಂದಿನ ತರಿನ್ ಎಂಬ ನದಿದಂಡೆಯ ಮಮ್ಮಿಗಳಲ್ಲಿನ ಚೀಲಗಳಲ್ಲಿ ಎಫೆಡ್ರಾ ಸಿನಿಕ ದೊರೆತಿದೆ. ಮಧ್ಯ ಏಷ್ಯಾದ ಗೊನೂರ್ ಪ್ರಾಂತ್ಯದ ಮುರ್ಗಾಬ್–ಅಮು ನದಿ ಬಯಲಲ್ಲಿನ ಆರ್ಯರ ಪ್ರಾಕ್ತನ ಅವಶೇಷಗಳಲ್ಲಿ ಸೋಮರಸವನ್ನು ಹಿಂಡಿ ತೆಗೆವ ಸಾಧನಗಳು ಸಿಕ್ಕಿವೆ.ಜೊತೆಗೆ ಗಸಗಸೆ ಹಾಗೂ ಗಾಂಜಾದ ಕುರುಹುಗಳು ಸಹ ಕಾಣಿಸಿವೆ. ಬ್ಯಾಕ್ಟ್ರಿಯಾದ ಪಾರ್ಸಿಗಳ ಅಗ್ನಿದೇವಾಲಯದಲ್ಲೂ ಸಹ ಸೋಮರಸ ತೆಗೆವ ಸಾಧನಗಳು ಪತ್ತೆಯಾಗಿವೆ. ಪಶುವಧೆಗೆ ಆಧಾರಗಳು ವೈದಿಕ ಸಾಹಿತ್ಯದಲ್ಲೇ ಯಜ್ಞಗಳ ಸಂದರ್ಭದಲ್ಲಿ ಪಶುವಧೆ ನಡೆಯುತ್ತಿದ್ದುದಕ್ಕೆ ಸಾಕಷ್ಟು ಆಧಾರಗಳು ಲಭಿಸುತ್ತವೆ. ‘ಶಂಕರಸ್ಕಂದ’ದ ಅಧಿಕರಣಗಳ ಪಾದ ಒಂದರಲ್ಲಿ ಬಲಿಪಶುವಿನ ಸುತ್ತ ಬೆಂಕಿಯ ಪಂಜಿನ ಪ್ರದಕ್ಷಿಣೆ ಮುಗಿಯುತ್ತಿದ್ದಂತೆಯೇ ಬಲಿ ನೀಡಬೇಕೆಂದು ಹೇಳಿದೆ. ಪಾದ ಎರಡರಲ್ಲಿ ಆರು ಬಲಿಗಳನ್ನು ನೀಡುವಂತಿದ್ದಲ್ಲಿ, ಹವಿಸ್ಸಿನ ಲಭ್ಯವಿರುವ ಎರಡು ಮಂತ್ರಗಳಲ್ಲಿ ಮೊದಲನೆಯ ಮಂತ್ರವನ್ನೇ ಮೊದಲು ಮೂರು ಬಲಿಗಳಿಗೂ, ಎರಡನೆಯ ಮಂತ್ರವನ್ನು ನಂತರದ ಮೂರು ಬಲಿಗಳಿಗೂ ಬಳಸಬೇಕೆಂದು ಪರಿಹಾರ ಸೂಚಿಸಿದೆ. ಕೆಲವೊಮ್ಮೆ ಬಲಿಯ ತಲೆ ವಾಯುವಿಗೆ ಸೇರಿದ್ದಾದ್ದರಿಂದ ಮುಖ್ಯ ಅಗ್ನಿವೇದಿಯ ಬಳಿಯೇ ಬಲಿ ಕೊಡಬಹುದೆಂದಿದೆ. ಶಾಖೆಗಳಿರುವ (Branches) ಯೂಪಸ್ತಂಭವನ್ನೇ (ಬಲಿಗಂಭ) ಬಳಸಬೇಕೆಂದು ಸಹ ನಿಯಮ ವಿಧಿಸಿದೆ. ಯೂಪಸ್ತಂಭಕ್ಕೆ ಬಲಿಪಶುವನ್ನು ಕಟ್ಟುವಾಗ ಹೇಳಲೇಬೇಕಾದ ಯೂಪ ಮಂತ್ರಗಳೂ ಇವೆ. ಸೋಮಯಾಗವಂತೂ ವೈದಿಕ ಬ್ರಾಹ್ಮಣರಿಗೆ ಕಡ್ಡಾಯ. ಅದೂ ವಸಂತ ಋತುವಿನಲ್ಲೇ ಆಚರಿಸಬೇಕೆಂಬ ನಿಯಮವೂ ಇದೆ. ಮತ್ತೂರಿನ ಕೇಶವ ಅವಧಾನಿ ಎಂಬ ವೇದಾಂತಿಯೊಬ್ಬರು ಒಮ್ಮೆ ಅಲ್ಲಿನ ವೇದಾಂತ ಶಿಬಿರದಲ್ಲಿ ಭಾಗವಹಿಸಿದ್ದವರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ‘‘ಸೋಮಯಾಗದಲ್ಲಿ ಬಲಿ ಕಡ್ಡಾಯ. ಇಂದಿಗೂ ಈ ನಿಯಮವನ್ನೇ ಅನುಸರಿಸಲಾಗುತ್ತದೆ. ಆದರೆ ಮುಖ್ಯ ವೇದಿಕೆಯಿಂದ ದೂರದಲ್ಲಿ ಬಲಿ ನೀಡಿ ಅದರ ಕೆಲವು ಭಾಗಗಳನ್ನು ದ್ರವ್ಯವನ್ನಾಗಿ ಈ ಶ್ರೌತ ಯಾಗದಲ್ಲಿ ಬಳಸಲಾಗುವುದಷ್ಟೇ ಅಲ್ಲದೆ ಶಾಸ್ತ್ರವಿಧಿಯ ಅಂಗವಾಗಿ ಯಜ್ಞದ ಅಧ್ವರ್ಯು ಬೆಂದುಳಿದ ಮಾಂಸವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ’’ ಎಂದು ಹೇಳಿದ್ದರಂತೆ (ಅಂತರ್ಜಾಲ ಮಾಹಿತಿ). ಆದರೆ ಗೌತಮ ಮತ್ತು ಆಪಸ್ತಂಭ ಸೂತ್ರದಲ್ಲಿ ಮಾಂಸಾಹಾರವನ್ನು ಮಾಮೂಲಿಯಾಗಿಯೇ ಸ್ವೀಕರಿಸುವಂತೆ ಹೇಳಲಾಗಿದೆ. ಇದೇ ಸೋಮಯಾಗದಲ್ಲಿ ಒಂದೇ ಕಾಲಕ್ಕೆ ಎಲ್ಲ ರೀತಿಯ ಪ್ರಾಣಿಗಳನ್ನೂ ಬಲಿ ಕೊಡಬಹುದಾದರೂ, ಕೊನೆಯಲ್ಲಿ ಮಾತ್ರ ಮೇಕೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದಿದೆ. ಬಲಿಯ ಕೆಲವು ಭಾಗಗಳನ್ನು ಆಹುತಿಯಾಗಿ ಅರ್ಪಿಸುವಂತೆಯೇ ಉಳಿದ ಭಾಗಗಳನ್ನು ಅಧ್ವರ್ಯು, ಹೋತೃ, ಋತ್ವಿಜ ಹಾಗು ಉದ್ಘಾತೃಗಳು ತಿನ್ನಬೇಕೆಂದೇ ಸೂಚಿಸಲಾಗಿದೆ. (ಮೋನಿಯರ್ ವಿಲಿಯಮ್ಸ್, ಬ್ರಾಹ್ಮಣಿಸಂ ಅಂಡ್ ಹಿಂದೂಯಿಸಂ, ಪು-369). ಯಜ್ಞಗಳಿಗಾಗಿಯೇ ಮೀಸಲಾಗಿರುವ ಯಜುರ್‌ವೇದದಲ್ಲಂತೂ ಪಶುಬಲಿಗಳ ಬಗ್ಗೆ ವಿಫುಲ ಮಾಹಿತಿಗಳಿವೆ. ಬಲಿಯಾದ ಮೇಕೆ ಇಂದ್ರ, ಪೂಷಣರ ಬಳಿಗೆ, ಅಂದರೆ ಸ್ವರ್ಗಕ್ಕೆ ಸೇರುವುದೆಂದು ಋಗ್ವೇದದಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ (ಋಗ್ವೇದ : 1, 162.8). ಬಲಿ ಕೊಡುವಾಗ ಅಶ್ವಿನಿ ದೇವತೆಗಳಿಗೆ ಕಪ್ಪು ಪ್ರಾಣಿ, ಸರಸ್ವತಿಗೆ ಟಗರು, ಇಂದ್ರನಿಗೆ ಎತ್ತನ್ನು ಬಲಿಕೊಡಬೇಕೆಂದು ಯಜುರ್‌ವೇದ ನಿರ್ದೇಶಿಸಿದೆ (ಯಜುರ್ : 1.8.21). ಹಸುವನ್ನು ಕತ್ತಿ ಅಥವ ಕೊಡಲಿಯಿಂದ ಕೊಲ್ಲಬಹುದು (ಋಗ್ವೇದ : ಘಿ 72.6). ‘ತೈತ್ತಿರೀಯ ಬ್ರಾಹ್ಮಣ’ವು ವಿಷ್ಣುವಿಗೆ ಕುಳ್ಳ ಹಸು, ಇಂದ್ರನಿಗೆ ಚೂಪು ಕೋಡಿನ ಎತ್ತು, ಪೂಷಣನಿಗೆ ಕಪ್ಪು ಹಸು ಮತ್ತು ರುದ್ರನಿಗೆ ಕೆಂಪು ಹಸುವನ್ನು ಬಲಿಕೊಡಬಹುದೆಂದು ಸೂಚಿಸಿದೆ. ಮನು ಕೂಡ ಗೋವಧೆಯನ್ನು ನಿಲ್ಲಿಸಲಿಲ್ಲ. ಬದಲಿಗೆ ಕೆಲವು ಆಚರಣೆಗಳಲ್ಲಿ ಗೋಮಾಂಸ ಭಕ್ಷಣೆಯನ್ನೇ ಕಡ್ಡಾಯವಾಗಿಸಿದ. ಸೋಮಯಾಗದ ಅನುಭಂಧ್ಯದ ಬಲಿಗಳಲ್ಲಿ ಹಸು–ಎತ್ತುಗಳನ್ನು ವರುಣ–ಮಿತ್ರರಿಗೆ ಆಹುತಿಯಾಗಿಸಬೇಕೆಂದಿದೆ. ವಾಯುವಿಗೆ ಬಿಳಿಮೇಕೆ ಹಾಗು ಸರಸ್ವತಿಗೆ ಕರುವನ್ನು ಬಲಿಯಾಗಿ ನೀಡುವಂತೆಯೂ ಸೂಚಿಸಲಾಗಿದೆ. ಸವಿತೃ–ಇಂದ್ರರಿಗೆ ಎತ್ತುಗಳನ್ನು ಬಲಿ ಕೊಡುವಂತೆ ಹೇಳಲಾಗಿದೆ. ‘ಶತಪಥ ಬ್ರಾಹ್ಮಣ’ವು ಯಾಜ್ಞವಲ್ಕ್ಯ ಋಷಿಯು ಎಳೆಯದಾಗಿದ್ದಲ್ಲಿ ಹಸು–ಎತ್ತಿನ ಮಾಂಸವನ್ನು ತಿನ್ನುತ್ತಾನೆ ಎಂದು ಉಲ್ಲೇಖಿಸಿದೆ (ಶತಪಥ : 3.1.2.21). ಭವಭೂತಿಯ ‘ಉತ್ತರರಾಮ ಚರಿತ’ದಲ್ಲಿ ಸೌಧಾತಕಿ ಮತ್ತು ದಂಡಾಯನರ ಸಂಭಾಷಣೆಯಂತೂ ತುಂಬಾ ಸ್ವಾರಸ್ಯಕರವಾಗಿದೆ. ದಂಡಾಯನ ಆಶ್ರಮಕ್ಕೆ ಬಂದದ್ದು ವಸಿಷ್ಠರೆಂದು ತಿಳಿದಾಗ: ‘‘ನಾನು ಹುಲಿಯೋ ಅಥವಾ ತೋಳವೋ ಬಂದಿರಬಹುದೆಂದು ಎಣಿಸಿದ್ದೆ. ಯಾಕೆಂದರೆ ನನ್ನ ಬಡಪಾಯಿ ಕರು ಅವರು ಬಂದಾಗಲಿಂದ ಬೆಚ್ಚಿಬಿದ್ದು ಚಡಪಡಿಸುತ್ತಿದೆ’’ ಎನ್ನುತ್ತಾನೆ. ಅದಕ್ಕೆ ಸೌಧಾತಕಿ: ‘‘ದೊಡ್ಡ ವಿದ್ವಾಂಸ ಅತಿಥಿಯಾಗಿ ಬಂದಾಗ ಗೋಮಾಂಸದೊಂದಿಗೆ ಮಧುಪರ್ಕ ನೀಡಬೇಕೆಂದು ಧರ್ಮಶಾಸ್ತ್ರಗಳೇ ಹೇಳಿಲ್ಲವೇ?’’ ಎನ್ನುತ್ತಾನೆ. ಕಾಳಿದಾಸನ ‘ಮೇಘದೂತ’ದಲ್ಲೂ ಹೀಗೆ ‘ರಂತಿದೇವನ ಪಾಕಶಾಲೆಗಾಗಿ ವಧೆಯಾದ ಗೋವುಗಳ ನೆತ್ತರ ಸಂಭ್ರಮದಿಂದ ಚರ್ಮನ್‌ವತಿ ನದಿ ಎದ್ದಿತು’ ಎಂದು ವರ್ಣಿಸಿದ್ದಾನೆ. ಅಶ್ವಲಾಯನ ಗೃಹ್ಯ ಸೂತ್ರವು ಎತ್ತನ್ನು ಬಲಿಯಾಗಿ ನೀಡುವ ‘ಶೂಲಗವ’ ಎಂಬ ಆಚರಣೆ ಬಗ್ಗೆ ಹೇಳಿದೆ (ಅಶ್ವಲಾಯನ : 4.9.10) ಪಾಪ–ಪುಣ್ಯದ ಜಿಜ್ಞಾಸೆ ಜೈನರಲ್ಲಿ ಇಂದಿಗೂ ಒಂದು ಜನಪ್ರಿಯ ಮಾತಿದೆ. ಅದೇನೆಂದರೆ ‘‘ಯಾಗದ ಕಂಬಗಳಿಗಾಗಿ ಮರ ಕಡಿವುದು ಮತ್ತು ಸ್ವರ್ಗದಾಸೆಗಾಗಿ ಪ್ರಾಣಿಬಲಿ ನೀಡುವುದು ಪುಣ್ಯವಾದರೆ, ಮತ್ತ್ಯಾವುದನ್ನು ಪಾಪ ಎನ್ನಬೇಕು?!’’ ಸ್ವಾಮಿ ವಿವೇಕಾನಂದರಂತೂ ‘‘ಇದೆಲ್ಲಾ ಬ್ರಾಹ್ಮಣರ ಸೃಷ್ಟಿ. ಬಿಸುಡಿ ಇದನ್ನು’’ ಎಂದು ವೈದಿಕರ ಯಜ್ಞ ಹಿಂಸೆಗಳ ಬಗ್ಗೆ ಹರಿಹಾಯ್ದಿದ್ದಾರೆ. (ದಿ ಕಂಪ್ಲೀಟ್ ವರ್ಕ್ಸ್ ಆಫ್ ಸ್ವಾಮಿ ವಿವೇಕಾನಂದ, ಸಂ.3, ಪು-523). ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ‘‘ಪೂಜಿಸಲಾಗುವ ಅಗ್ನಿಕುಂಡ ರಕ್ತಸಿಕ್ತವಾಗಿದ್ದಲ್ಲಿ ಅದನ್ನು ಚೂರುಚೂರಾಗಿ ಒಡೆದುಹಾಕಿ’’ ಎಂದು ಪ್ರತಿಕ್ರಿಯಿಸಿದ್ದಾರೆ. ಡಿ.ಡಿ. ಕೊಸಾಂಬಿ ಅವರು ತಮ್ಮ ‘ಏನ್‌ಷಿಯಂಟ್ ಇಂಡಿಯಾ’ ಪುಸ್ತಕದಲ್ಲಿ ‘‘ಯಾಕೆ ಇಂದಿನ ಸಂಪ್ರದಾಯಸ್ಥ ಹಿಂದೂ, ಗೋಮಾಂಸ ಸೇವನೆಯನ್ನು ನರಮಾಂಸ ಭಕ್ಷಣೆಯೆಂಬಂತೆ ನೋಡುತ್ತಾನೆ? ಹಿಂದೆ ವೈದಿಕ ಬ್ರಾಹ್ಮಣರು ಯಜ್ಞಗಳಲ್ಲಿ ಬಲಿಯಾದ ಗೋಮಾಂಸ ತಿಂದು ಕೊಬ್ಬಿರಲಿಲ್ಲವೇ?’’ ಎಂದು ಪ್ರಶ್ನಿಸಿದ್ದಾರೆ. ಮಧ್ವಾಚಾರ್ಯರು ಸಂಪ್ರದಾಯವನ್ನು ಬಿಡಲಿಷ್ಟಪಡದೆ ಜೀವಂತ ಪಶುವಿಗೆ ಬದಲಾಗಿ ಪಿಷ್ಟ ಪಶುವನ್ನು ನಿರ್ಮಿಸಿ ಬಲಿ ಕೊಡುವಂತೆ ಪರ್ಯಾಯ ಮಾರ್ಗವನ್ನು ಸೂಚಿಸಿದ್ದೂ ಇದೆ. ವೈದಿಕ ದೇವರುಗಳಲ್ಲಿ ಒಬ್ಬನಾದ ಮಿತ್ರನ ಪಂಥವೊಂದು ಯುರೋಪಿನಾದ್ಯಂತ ಒಂದು ಕಾಲಕ್ಕೆ ಹಬ್ಬಿತ್ತು. ಆತನ ರಹಸ್ಯ ದೇವಾಲಯಗಳಲ್ಲಿನ ಎಲ್ಲ ಪ್ರತಿಮೆಗಳೂ ಎತ್ತನ್ನು ಕಠಾರಿಯಿಂದ ತಿವಿದು ಕೊಲ್ಲುವಂತೆಯೇ ಕಡೆದಿಡಲಾಗಿದೆ. ತಮ್ಮ ಭಾವುಕ ಕಲ್ಪನೆ, ಶ್ರದ್ಧಾವಂತವೂ ಮತ್ತು ಗಾಢವೂ ಆದಂತಹ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವೆಂಬಂತಿರುವ ಇತಿಹಾಸದ ಸತ್ಯಗಳಿವೆ ಎಂಬ ನೆಲವಾಸ್ತವವನ್ನು ಎಲ್ಲರೂ ಅರಿಯಬೇಕಿದೆ. ದುರ್ಬಲ ಮನಸ್ಸು ಮತ್ತು ಅಜ್ಞಾನ ಯಾರನ್ನೂ ಎಂದಿಗೂ ಸತ್ಯದ ಬಳಿಗೊಯ್ಯುವುದಿಲ್ಲ. ಧರ್ಮ–ಸಂಸ್ಕೃತಿಗಳ ಚಾರಿತ್ರಿಕ ಅರಿವಿನಿಂದ ದೊರೆಯುವ ಸಹಿಷ್ಣುತೆ ನನ್ನ ಮಟ್ಟಿಗಂತೂ ಒಂದು ಕಾಲಾತೀತ ಮೌಲ್ಯದಂತೆ ಕಾಣಿಸುತ್ತಿದೆ. ಇಂತಹ ಸಹಿಷ್ಣುತೆಯೊಂದೇ ಯಾವುದೇ ಮನುಷ್ಯನನ್ನು ನಾಗರಿಕತೆಯ ಅತ್ಯುನ್ನತ ಸೋಪಾನದಲ್ಲಿರಿಸಬಲ್ಲದು. [[೧]]