ದುರಗ ಮುರುಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುರುಗ ಮುರುಗಿ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ದುರುಗ ಮುರುಗಿಯು ಉತ್ತರ ಕರ್ನಾಟಕ ಭಾಗದ ಒಂದು ವಿಶಿಷ್ಟ ಕಲೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಲೆಯನ್ನು ದುರುಗ ಮುರುಗಿಯೊಂದೂ, ಮುರುಗಮ್ಮನಾಡಿಸುವವರು ಎಂದು, ದಕ್ಷಿಣ ಕರ್ನಾಟಕದಲ್ಲಿ ಉರು ಮಾರಿಯಮ್ಮ ಅಥವಾ ಕೊಲ್ಲಾಪುರದಮ್ಮ ಎಂಬ ವಿವಿಧ ಹೆಸರುಗಳಲ್ಲಿ ಕರೆಯಲಾಗುವುದು. ಈ ಕಲೆ ಜನರಿಗೆ ತುಂಬಾ ವಿಶಿಷ್ಟವಾದದ್ದು. ಯಾಕೆಂದರೆ ಮಾರಮ್ಮನ ರೂಪದ ಈ ದೇವತೆ ಒಂದು ಕಡೆ ನೆಲೆ ನಿಲ್ಲುವವಳಲ್ಲ, ಊರೂರು ಸುತ್ತುವಳು ಎಂಬ ನಂಬಿಕೆ. ದುರುಗ ಮುರುಗಿಯವರು ಅಥವಾ ಮುರುಗಮ್ಮದವರು ಎಂದೇ ಕರೆಯುಲಾಗುವ ಒಂದು ವಿಶೇಷ ಜನಾಂಗ ತಮ್ಮ ದೇವತೆಯನ್ನು ಪೆಟ್ಟಿಗೆಯಲ್ಲಿಟ್ಟು, ಅದನ್ನು ಹೊತ್ತುಕೊಂಡು ಊರಾಡುತ್ತಾರೆ. ಊರಾಡುವ ಸಂದರ್ಭದಲ್ಲಿ ಪೆಟ್ಟಿಗೆಯನ್ನು ಹೊತ್ತು ಉರುಮೆ ಅಥವಾ ಅರೆ ವಾದ್ಯದ ಬಡಿತಕ್ಕೆ ತಕ್ಕಂತೆ ಕುಣಿಯುವುದಲ್ಲದೆ, ಪೋತುರಾಜನ ವೇಷ ಹಾಗು ಸೋಮನ ಮುಖವಾಡ ಪ್ರದರ್ಶನ ಕೂಡ ನೀಡುತ್ತಾರೆ. ಇವರಲ್ಲಿ ಪೆಟ್ಟಿಗೆ ದುರುಗ ಮುರುಗಿಯವರು ಹಾಗೂ ಬುಟ್ಟಿ ದುರುಗ ಮುರುಗಿಯರೆಂದು ಎರಡು ವಿಧ. ಬುಟ್ಟಿ ದುರುಗ ಮುರುಗಿಯವರು ಬುಟ್ಟಿಯಲ್ಲಿ ತಮ್ಮ ದೇವರನ್ನಿಟ್ಟು ಹೊತ್ತು ಊರಾಡುತ್ತಾರೆ.

ಇತಿಹಾಸ[ಬದಲಾಯಿಸಿ]

ಪಶುಪಾಲನಾ ಹಂತದ ಹಲವು ಜನವರ್ಗಗಳು ತಾವು ಒಂದು ಕಡೆ ಖಾಯಂ ಆಗಿ ನೆಲೆ ನಿಲ್ಲುವುದಕ್ಕೆ ಮೊದಲು ಅಲೆಮಾರಿಗಳಾಗಿದ್ದರು. ಅಂತಹ ಸಂಧರ್ಭಗಳಲ್ಲಿ ತಾವು ನಂಬಿದ ದೇವರ ಪ್ರತಿರೂಪವನ್ನು ಪೆಟ್ಟಿಗೆಯಲ್ಲಿಟ್ಟು ತಮ್ಮ ಜೊತೆ ಹೊತ್ತು ಹೋಗುತ್ತಿದ್ದರು. ಅನೇಕ ಅಲೆಮಾರಿ ಜನವರ್ಗ ಒಂದಾನೊಂದು ಕಾಲಕ್ಕೆ ಈ ಪದ್ಧತಿ ಅನುಸರಿಸುವುದನ್ನು ಕೆಲ ವಿದ್ವಾಂಸರು ಧೃಡ ಪಡಿಸುತ್ತಾರೆ. ಆದರೆ ಇಂತಹ ವಲಸೆ ಜನವರ್ಗ ಕೂಡ ಖಾಯಂ ಪ್ರವಾಸಿಗಳಾಗಿ ಮಾರ್ಪಟ್ಟಿರುವುದರಿಂದ ಹೊತ್ತು ತಿರುಗುವ ಪೆಟ್ಟಿಗೆ ದೇವತೆಗಳನ್ನು ನಾವು ಕಾಣಲಾಗುತ್ತಿಲ್ಲಾ. ಆದರೆ ಆಡು ಬಲ್ಲರು ಮತ್ತು ಮ್ಯಾಸ ಬೇಡರಲ್ಲಿ ಈಗಲೂ ನೆಲೆಗೊಂಡ, ಆದರೆ ಪೆಟ್ಟಿಗೆಯಲ್ಲೇ ಇಟ್ಟು ಪೂಜಿಸುವ ದೇವತೆಗಳನ್ನು ಕಾಣಬಹುದು. ಅಂತಹ ಜನವರ್ಗದ ಕಾವಲುಗಳಾಗಿ ಪೆಟ್ಟಿಗೆ ದೇವರನ್ನು ಹೊತ್ತು, ಜನವಿರುವ ಕಡೆಗೆ ಹೋಗಿ ಆರಾಧನೆಗೆ ಒಳಪಡುತ್ತಿದ್ದ ಒಂದು ಗುಂಪು ಒಂದು ಜನಾಂಗವಾಗಿ ಮಾರ್ಪಟ್ಟಿತೇ ಎಂಬ ಬಗ್ಗೆ ಚಿಂತಿಸುವ ಅವಶ್ಯಕತೆ ಇದೆ.

ಆಚರಣೆ[ಬದಲಾಯಿಸಿ]

ಮೊದಲು ಊರಿನ ಒಂದು ಬೀದಿಯ ವಿಶಾಲ ಸ್ಥಳದಲ್ಲಿ ಪೆಟ್ಟಿಗೆಯನ್ನು ಪ್ರತಿಷ್ಠಾಪಿಸಿ, ಗಂಟೆ ಸದ್ದು ಮಾಡಲಾಗುತ್ತಾದೆ. ಹೆಂಗಸರು ಗುರುಮೆ ಸದ್ದು ಮಾಡುತ್ತಾ ಮುರಗಮ್ಮನ ಸ್ತುತಿ ಹಾಡುತ್ತಾ ಗಂಡಸರು ಒಂದೆರಡು ಬಾರಿ ಚಾವಟಿಯಿಂದ ತನ್ನ ಬರಿ ಮೈಗೆ ಹೊಡೆದುಕೊಂಡು ದೇವರನ್ನು ಹೊಗಳುತ್ತಾರೆ.

'ಮರಗಮ್ಮ ಬಂದಾಳ್ರೇ ಯವ್ವಾ

ದುರುಗಮ್ಮ ಬಂದಾಳ್ರೇ ಯವ್ವಾ

ತಾಯಿ ಬಂದಾಳ ಬರ್ರೇ ಯವ್ವಾ

ಬರ್ರೇ ತಾಯಿ ಬರ್ರೇ ತಾಯಿ

ಬುರು ಬುರು ಪೋಚಮ್ಮ ಬಂದಾಳ ಬರ್ರೇ ಯವ್ವ

ಕಂವಟಿಗಿ ಮುರಗಮ್ಮ ಆವ್ಲಾರ ದುರ್ಗಮ್ಮ ಬಂದಾಳ

ಆಲಳ್ಳಿ ಮರಗಮ್ಮ ಬಂದಾಳ ಬರ್ರೇ ತಾಯೀ

ಬಸಪಟ್ಟಣ ಮರಗಮ್ಮ ಬಂದಾಳ ನೋಡ್ರೇ ಯವ್ವಾ

ಭಾರಾ ಭಾರಾ ಬರ್ರೀ ಮರದಾಗ ಜ್ವಾಳಾ ತಗಂಡು ಬರ್ರೇ

ಹೀಗೆ ಸ್ತುತಿ ಮಾಡುತ್ತಾ ಚಾವಟಿ ಎಟು ಹೊಡೆದುಕೊಳ್ಳುವ ಈ ಪೋತರಾಜ ತನ್ನ ಪೆಟ್ಟಿಗೆ ಇಟ್ಟಲ್ಲಿಂದ ಆ ಬೀದಿಯ ಅಂತ್ಯದ ವರೆಗೆ ಕರೆಯುತ್ತಾನೆ. ಅಂದರೆ ಉರುಮೆ ವಾದ್ಯದದ ಗತಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಕೈಲಿ ಹಿಡಿದ ಚಾವಟಿಯನ್ನು ಎತ್ತಿ ತಿರುಗಿಸುತ್ತಾ ಆ ಚಾವಟಿಯನ್ನು ಎರಡು ಕೈಗಳಿಂದ ಹಿಡಿದು ಹಿಂಡುತ್ತಾ, ಲಘುವಾಗಿ ನರ್ತಿಸುತ್ತಾನೆ. ಮಧ್ಯೆ ಮಧ್ಯೆ ಆವೇಶ ಬಂದವನಂತೆ ಚಾವಟಿಯಿಂದ ಪಟಪಟನೆ ಮೈಗೆ ಹೊಡೆದುಕೊಳ್ಳುತ್ತಾನೆ. ಕೆಲವೊಮ್ಮೆ ರಕ್ತ ಕೂಡ ವಸರುತ್ತದೆ. ಈ ರೀತಿಯ ಒಂದು ವೇಷ ಆದ ಮೇಲೆ ಮುಖಕ್ಕೆ ಮುಖವಾಡ ಹಾಕಿಕೊಂಡು ಉರುಮೆ ಗತಿ ತಕ್ಕಂತೆ ನರ್ತಿಸುತ್ತಾನೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಚೌಡಿಯ ಮುಖವಾಡವನ್ನು, ದಕ್ಷಿಣ ಭಾಗಗಳಲ್ಲಿ ಸೋಮನ ಮುಖವಾಡ ಹಾಕಿಕೊಂಡು ದೈಯ್ಯಧಪ್ಪ... ದೈಯಧಕ್ಕ ಎನ್ನುತ್ತಾ ಅಭಿನಯಿಸುತ್ತಾರೆ. ಊರ ಜನ ಈ ವೇಶ ನೋಡಲು ಸೇರುತ್ತಾರೆ. ಹೆಣ್ಣು ಮಕ್ಕಳು ಮರದಲ್ಲಿ ರಾಗಿ, ಜೋಳ, ಕಾಳು ಮುಂತಾದ ಧವಸ ಧಾನ್ಯಗಳನ್ನು ತುಂಬಿ ತಂದು ದೇವತೆಗೆ ಅರ್ಪಿಸುತ್ತಾರೆ. ಪೂಜಾರಿ ಅರ್ಥಾತ್ ಪೋತರಾಜ ಅವರ ಮೊರಕ್ಕೆ ಭಂಡಾರ ಹಚ್ಚಿ ಹಿಂದೆ ಕೊಡುತ್ತಾನೆ. ಆ ಭಂಡಾರವನ್ನು ಆನಂತರ ಮನೆ ಮಕ್ಕಳಿಗೆಲ್ಲಾ ಹಚ್ಚಲಾಗುತ್ತದೆ. ಹೀಗೆ ಆಗಾಗ ಬರುವ ದೇವತೆಗೆ ಕೆಲವರು ಹರಕೆ ಹೊರುವುದುಂಟು. ಅಂತವರು ಆ ಮಾರಮ್ಮನಿಗೆ ಕಾಲುಕಡಗ, ಗೆಜ್ಜೆ, ಚೈನು ಆಟಿಕೆ ಸರ, ಬೆಳ್ಳಿಯ ಕಾಸಿನ ಸರ, ತೋಳುಭಂದಿ ಮುಂತಾದ ಒಡವೆಗಳನ್ನು ಅರ್ಪಿಸುವುದುಂಟು. ಸಾಮಾನ್ಯವಾಗಿ ಆ ಪೂಜಾರಿ ಅವುಗಳನ್ನು ತನ್ನ ಪೆಟ್ಟಿಗೆಯ ಮುಂಭಾಗದಲ್ಲಿ ನೇತು ಬಿಟ್ಟು ಅಲಂಕರಿಸುತ್ತಾನೆ. ಪ್ರತೀ ಊರಿಗೆ ಹೋದಾಗಲೂ ಇಂತಿಂತ ಒಡವೆಗಳನ್ನು ಈಂತಿಂತ ಊರವರು ಕೊಟ್ಟರೆಂದು ಹೇಳಿ ಅವರಿಗೆ ಒದಗಿದ ಕಷ್ಟ ಪರಿಹಾರ ಬಗೆಯನ್ನು ಹೊಗಳುತ್ತಾನೆ.

ಇದು ಗೌಡ್ರ ಮಲ್ಲವ್ವ ಮಾಡಿಸಿಕೊಟ್ಟಾಳ ಬೆಳ್ಳಿ ಬಟ್ಟಾಳ...

ಇದು ಲಕ್ಕವ್ವ ಕೊಟ್ಟಾಳ ಬೆಳ್ಳಿ ಛತ್ತಿಕೀ..

ಇದು ಗಂಗಾಬಾಯಿ ಕೊಟ್ಟಾಳ ಬೆಳ್ಳಿ ಕಣ ಬಟ್ಟಾಳಾ...

ಇದು ಗೌರವ್ವ ಮಾಡಿಸಿ ಕೊಟ್ಟಾಳ ಬೆಳ್ಳಿ ನತ್ತೂ

ಹೀಗೆ ಅವನ ಹೊಗಳಿಕೆ ನಡೆಯುತ್ತದೆ. ಅವನಿಗೆ ಬರುವ ಭಿಕ್ಷೆ ಹಾರೈಕೆ ಬಂದ ಮೇಲೆ ಮತ್ತೆ ಪೆಟ್ಟಿಗೆಯನ್ನು ಹೊತ್ತು ಮುಂದಿನ ಬೀದಿಗೆ ಹೋಗುತ್ತಾನೆ. ಈ ದೇವತೆ ಆಗಾಗ ಊರಿಗೆ ಬಂದು ಹೋಗುವುದರಿಂದ ರೋಗರುಜಿನ ದೂರವಾಗುತ್ತದೆಂದು ಜನ ನಂಬುತ್ತಾರೆ. ಇದಲ್ಲದೇ ಇತರೆ ಗ್ರಾಮ ದೇವತೆಯರ ಹಬ್ಬ ಜಾತ್ರೆಗಳಲ್ಲಿ ಊರಿಮಾರಮ್ಮನ ಅಥವಾ ಮುರಗಮ್ಮನನ್ನು ಒಂದು ಗೊತ್ತಾದ ಸ್ಥಳದಲ್ಲಿಟ್ಟು ಮೇಲ್ಕಾಣಿಸಿದಂತೆ ಪ್ರದರ್ಶಿಸುವ ಪದ್ದತಿಯೂ ಇದೆ.

ವೇಷ ಭೂಷಣ, ವಾದ್ಯ[ಬದಲಾಯಿಸಿ]

ಇವರ ವೇಷಭೂಷಣಗಳು ವಿಚಿತ್ರವಾಗಿಯೇ ಇರುತ್ತವೆ. ಮುಖಕ್ಕೆ ಅರಿಶಿಣ, ಹಣಗೆ ದೊಡ್ಡದಾಕಾರದ ಕುಂಕುಮ, ಕಾಡಿಗೆ, ಪೊದೆ ಮೀಸೆ, ಎದೆಗೂ ಅರಿಶಿಣ, ಕುಂಕುಮ ಭಂಡಾರದ ಲೇಪನ, ಕೈ ರೆಟ್ಟಿಗೆ ಬೆಳ್ಳಿಯ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಪೊದೆ ಗೆಜ್ಜೆ ಸಾಮಾನ್ಯವಾಗಿ ಸೀರೆಯನ್ನು ನೀರಿಗೆಯಾಗಿ ಕಚ್ಚೆ ರೀತಿಯಲ್ಲಿ ಕಟ್ಟಿದ ಕಾಸೆ, ಕೈಯಲ್ಲಿ ಚಾವಟಿ ಅಥವಾ ಚಡಿ - ಇವು ಪೆಟ್ಟಿಗೆ ಹೊತ್ತ ಪೂಜಾರಿಯ ವೇಷ. ಅವನ ಜೊತೆ ಬರುವ ಹೆಣ್ಣಿನದ್ದು (ಸಾಮಾನ್ಯವಾಗಿ ಹೆಂಡತಿ) ಬೇರೆಯದ್ದೇ ಚಿತ್ರ. ಮಾಮೂಲಿ ಹೆಂಗಸರ ವೇಷವಾದರೂ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ವಿವಿಧ ಬೆಳ್ಳಿಯ ಒಡವೆಗಳಿರುತ್ತವೆ. ನಡುವಿನ ಒಂದು ಕಡೆ ಬಟ್ಟೆಯಲ್ಲಿ ತೂಗು ಹಾಕಿಕೊಂಡ ಮಗು, ಇನ್ನೊಂದು ಕಡೆ ಭಿಕ್ಷೆ ಸಂಗ್ರಹಿಸುವ ಅಸುಬೆ ಚೀಲ, ಕುತ್ತಿಗೆಗೆ ನೇತು ಹಾಕಿಕೊಂಡ ಅರೆ ಅಥವಾ ಉರುಮೆ ವಾದ್ಯ. ಎರಡು ಕಡೆ ತೆಳುವಾದ ಚರ್ಮವನ್ನು ಹೊಂದಿದ ಉರುಮೆ ವಾದ್ಯವನ್ನು ಒಂದು ಕಡೆಯಿಂದ ಬಡಿಯುತ್ತಾ ಇನ್ನೊಂದು ಕಡೆಯಿಂದ ಜಜ್ಜುತ್ತಾರೆ. ಉಜ್ಜುವ ಕಡೆಯಿಂದ ದರ್ರಬುರ್ರಾ ಎಂದ ಶಬ್ಧ ಬಂದರೆ ಬಡಿಯುವ ಕಡೆಯಿಂದ ಢಮ್ಮ ಢಮ್ಮಿ, ಢಮ್ಢ ಢಮ್ಮಿ ಎಂಬ ಶಬ್ಧ ಬರುತ್ತದೆ. ಈ ಶಬ್ಧವನ್ನು ಕೇಳಿ ಬಂತೆಂದರೆ ಊರಮ್ಮ ಬಂದಳೆಂದು ಜನ ಗುರುತಿಸುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. ಪ್ರೋ. ಹೆ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪುಟ ೨೭-೨೯.