ವಿಷಯಕ್ಕೆ ಹೋಗು

ಆಂಟಿನ್ ಲಾರೆಂಟ್ ಲವಾಸಿಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಟಿನ್ ಲಾರೆಂಟ್ ಲವಾಸಿಯೆ
ಜನನ(೧೭೪೩-೦೮-೨೬)೨೬ ಆಗಸ್ಟ್ ೧೭೪೩
ಪ್ಯಾರಿಸ್, ಫ್ರಾನ್ಸ್
ಮರಣ8 May 1794(1794-05-08) (aged 50)
ಪ್ಯಾರಿಸ್, ಫ್ರಾನ್ಸ್
ಕಾರ್ಯಕ್ಷೇತ್ರರಸಾಯನಶಾಸ್ತ್ರಜ್ಞ ಹಾಗು ಜೀವಶಾಸ್ತ್ರಜ್ಞ
ಪ್ರಸಿದ್ಧಿಗೆ ಕಾರಣ
  • ದಹನ ಕ್ರಿಯೆಯ ರಹಸ್ಯ,
  • ಆಮ್ಲಜನಕವನ್ನು ಪತ್ತೆಹಚ್ಚಿದ್ದು,
  • ಜಲಜನಕವನ್ನು ಪತ್ತೆಹಚ್ಚಿದ್ದು
ಹಸ್ತಾಕ್ಷರ

ಆಂಟಿನ್ ಲಾರೆಂಟ್ ಲವಾಸಿಯೆ(Antoine-Laurent de Lavoisier) (೨೬ ಆಗಸ್ಟ್ ೧೭೪೨ - ೮ ಮೇ ೧೭೯೪). ಈತ ಒಬ್ಬ ಫ್ರಾನ್ಸ್ ದೇಶದ ನಾಗರೀಕ ಮತ್ತು ರಸಾಯನಶಾಸ್ತ್ರ ತಜ್ಞ. ೧೮ನೇ ಶತಮಾನದಲ್ಲಿ ನಡೆದ ರಸಾಯನಶಾಸ್ತ್ರ ಕ್ರಾಂತಿಯ ಕೇಂದ್ರ ಬಿಂದುವೆಂದೇ ಹೇಳಬಹುದು. ಇವನು ನವೋದಯ ರಸಾಯನ ಶಾಸ್ತ್ರಕ್ಕೆ ಹಾಗು ಜೀವಶಾಸ್ತ್ರಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಿದರೆ ಈತನನ್ನು "ಆಧುನಿಕ ರಸಾಯನ ಶಾಸ್ತ್ರದ ಪಿತಾಮಹ" ಎಂದೇ ಹೇಳಬಹುದು.ವಸ್ತುಗಳು ಉರಿಯುವುದು, ಸಿಡಿಮದ್ದು ಸ್ಫೋಟಗೊಳ್ಳುವುದು, ಲೋಹಗಳಿಗೆ ತುಕ್ಕು ಹಿಡಿಯುವುದು, ಪ್ರಾಣಿಗಳ ಉಸಿರಾಟ ಇವೆಲ್ಲವೂ ಒಂದೊಂದು ರೀತಿಯ ದಹನ ಕ್ರಿಯೆಗಳೆಂದು ಮತ್ತು ಪ್ರತಿಯೊಂದು ವಸ್ತುವಿನ ಜೊತೆಗೂ ಅವು ವಿಭಿನ್ನ ವೇಗದಲ್ಲಿ ನಡೆಯುತ್ತವೆ ಎಂದೂ ಜಗತ್ತಿಗೆ ಮೊತ್ತ ಮೊದಲಿಗೆ ಸಾರಿದ ವ್ಯಕ್ತಿ.ದಹನ ಕ್ರಿಯೆಗೆ ಆಮ್ಲಜನಕವು ಅತ್ಯವಶ್ಯವೆಂದು ಹೇಳಿದ್ದಷ್ಟೇ ಅಲ್ಲದೆ ಆಮ್ಲಜನಕ ಮತ್ತು ಜಲಜನಕದ ಇರುವಿಕೆಯನ್ನು ಪತ್ತೆ ಹಚ್ಚಿ ಅವುಗಳಿಗೆ ಹೆಸರು ಕೊಟ್ಟಿದ್ದು ಇದೇ ಲವಾಸಿಯೇ. ಸಿಲಿಕಾನ್ ಎಂಬ ಧಾತುವೊಂದು ಇದ್ದಿರಬಹುದೆಂದು ಈತ ಮೊದಲೇ ಊಹಿಸಿದ್ದ.ಅದುವರೆವಿಗೂ ಇಡೀ ಪ್ರಪಂಚ ಗಂಧಕವನ್ನು ಒಂದು ಸಂಯುಕ್ತ ರಾಸಾಯನಿಕ ವಸ್ತು ಎಂದೇ ಭಾವಿಸಿತ್ತು, ಆದರೆ ಅದು ಸಂಯುಕ್ತ ವಸ್ತುವಿನ ಬದಲಾಗಿ ಮೂಲ ಧಾತು ಎಂದು ಸಾದರ ಪಡಿಸಿದವನು ಈತನೇ. ಲವಾಸಿಯೇ ನ ಬಹಳ ಮುಖ್ಯ ಒಂದು ಅಧ್ಯಯನವೆಂದರೆ ಅದು ದಹನ ಕ್ರಿಯೆಯಲ್ಲಿ ಆಮ್ಲಜನಕದ ಪಾತ್ರವನ್ನು ಕುರಿತಾಗಿದ್ದು. ೧೭೭೮ ರಲ್ಲಿ ಆಮ್ಲಜನಕವನ್ನು ಹಾಗು ೧೭೮೩ರಲ್ಲಿ ಜಲಜನಕವನ್ನು ಪತ್ತೆ ಹಚ್ಚಿದ ಲವಾಸಿಯೇ ದಹನಕ್ರಿಯೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ , ಅಲ್ಲಿಯವರೆಗೂ ಪ್ರಚಲಿತದಲ್ಲಿದ್ದ ಫ್ಲೋಜಿಸ್ಟಾನ್ ಪ್ರಮೇಯ[] ತಪ್ಪೆಂದು ಸಾರಿ ಹೇಳಿದ. ಫ್ಲೋಜಿಸ್ಟಾನ್ ಪ್ರಮೇಯ ದಹನ ಕ್ರಿಯೆಯ ರಹಸ್ಯವನ್ನು ಹೀಗೆ ಬಣ್ಣಿಸುತ್ತದೆ "ದಹನವಾಗಬಲ್ಲ ವಸ್ತುಗಳಲ್ಲಿ ಬೆಂಕಿಯಂತಹ 'ಫ್ಲೋಜಿಸ್ಟಾನ್' ಎಂಬ ವಸ್ತುವೊಂದು ಅಡಗಿರುತ್ತದೆ, ಹೊತ್ತಿ ಉರಿಯಲು ಇದೇ ಕಾರಣ". ಲವಾಸಿಯೇ ಮೆಟ್ರಿಕ್ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಿದ್ದಾನೆ ಹಾಗು ರಾಸಾಯನಿಕಗಳ ವರ್ಗೀಕರಣ ನವೀಕರಣ ಕಾರ್ಯದಲ್ಲೂ ಕೈ ಜೋಡಿಸಿದ್ದಾನೆ.ಫ್ರೆಂಚ್ ಕ್ರಾಂತಿಯು ಉತ್ತುಂಗದಲ್ಲಿದ್ದ ಕಾಲದಲ್ಲಿ ಲವಾಸಿಯೇ ತಂಬಾಕು ಸರಬರಾಜುಗಳಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನ್ನು ಜೀನ್-ಪೌಲ್-ಮ್ಯಾರತ್ ಬಹಿರಂಗ ಮಾಡುತ್ತಾನೆ. ಇದಾಗಿ ಮ್ಯಾರತ್ ಸಾವಿನ ಒಂದು ವರ್ಷದ ನಂತರ ಲವಾಸಿಯೇ ಶಿರಚ್ಚೇಧನ ಶಿಕ್ಷೆಗೆ ಒಳಗಾಗುತ್ತಾನೆ.

ಲವಾಸಿಯೆ ಜೀವನ ಚರಿತ್ರೆ

[ಬದಲಾಯಿಸಿ]

ಲವಾಸಿಯೆ ೨೬ ಆಗಸ್ಟ್ ೧೭೪೩ರಲ್ಲಿ ಪ್ಯಾರಿಸ್ ನ ಸ್ಥಿತಿವಂತ ಕುಟುಂಬವೊಂದರಲ್ಲಿ ಜನಿಸುತ್ತಾನೆ. ಆತನ ತಂದೆ ಪ್ಯಾರಿಸ್ ಸಂಸತ್ತಿನ ವಕಾಲತ್ತು ವೃತ್ತಿಯಲ್ಲಿದ್ದವರು. ತಾಯಿಯು ಲವಾಸಿಯೆ ಐದು ವರ್ಷದ ಬಾಲಕನಾಗಿದ್ದಾಗಲೆ ಮರಣವನ್ನಪ್ಪಿದ್ದಳು. ಲವಾಸಿಯೆ ಹನ್ನೊಂದು ವರ್ಷದ ಪ್ರಾಯದವನಾಗಿದ್ದಾಗ ಶಾಲಾ ಶಿಕ್ಷಣ ಪಡೆಯಲು ಆರಂಭಿಸಿದ. ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕಾಲೇಜ್ ಡೆಸ್ ಕ್ವಾಟ್ರ್-ನೇಶಸ್ ಎಂಬ ಶಿಕ್ಷಣ ಸಂಸ್ಥೆಯಲ್ಲಿ ೧೭೫೪ ರಲ್ಲಿ ಆರಂಭಿಸಿ ೧೭೬೦ -೬೧ ರಷ್ಟರಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಖಗೋಳಶಾಸ್ತ್ರ ಮತ್ತು ಗಣಿತ ಶಾಸ್ತ್ರ ಗಳಲ್ಲಿ ಅಪಾರ ಪರಿಣತಿಯನ್ನು ಪಡೆದುಕೊಂಡು ಆ ವಿಷಯಗಳ ಮೇಲೆ ಸಂಶೋಧನೆಗಳಿಗೂ ಮೊದಲಾದ.

ತತ್ವಶಾಸ್ತ್ರದ ತರಗತಿಗಳಲ್ಲಿ ಬಹಳ ಉತ್ಸುಕನಾಗಿ ಪಾಲ್ಗೊಳ್ಳುತ್ತಿದ್ದ ಲವಾಸಿಯೇ ನನ್ನು ಕಂಡ ಪ್ರಾಧ್ಯಾಪಕ ಅಬ್ಬೆ ನಿಕೋಲಸ್ ಸ್ವತಹ ಒಬ್ಬ ಗಣಿತಜ್ಞ ಹಾಗು ಖಗೋಳಶಾಸ್ತ್ರಗಳಲ್ಲಿ ಆಸಕ್ತಿ ಇರಿಸಿಕೊಂಡಿದ್ದ ವ್ಯಕ್ತಿ, ಈತನೇ ಬಾಲಕ ಲವಾಸಿಯೇಗೆ ಪವನಶಾಸ್ತ್ರದ ಬಗ್ಗೆ ಆಸಕ್ತಿ ಕೆರಳಿಸಿದ. ಮುಂದೆ ಲವಾಸಿಯೇ ವೃತ್ತಿಗಾಗಿ ಕಾನೂನು ಅಧ್ಯಯನ ಮಾಡಿ ಪದವಿ ಪಡೆದರೂ ವಿಜ್ಞಾನದ ಕಡೆ ಅಪಾರ ಸೆಳೆತವಿದ್ದರಿಂದ ಕಾನೂನು ರಂಗದಲ್ಲಿ ಮುಂದುವರೆಯದೆ ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡ.

ನೈಸರ್ಗಿಕ ವಿಜ್ಞಾನಗಳ ಮೇಲೆ ಅಪಾರ ಒಲವು ಹೊಂದಿದ್ದ ಲವಾಸಿಯೇ ಅದಕ್ಕೆ ಸಂಬಂಧ ಪಟ್ಟ ಎಲ್ಲಾ ಉಪನ್ಯಾಸಗಳಿಗೂ ಹಾಜರಾಗಿ ಅಪಾರ ಜ್ಞಾನ ಸಂಪಾದಿಸಿದ. ಲವಾಸಿಯೇಯ ರಸಾಯನ ಶಾಸ್ತ್ರದ ಮೇಲಿನ ಒಲವನ್ನು ಮತ್ತು ಹೆಚ್ಚಿಸಿದ್ದು ಎಟಿನ್ ಕೊಂಡಿಲಕ್ ಎಂಬ ಒಬ್ಬ ಫ್ರೆಂಚ್ ವಿದ್ವಾಂಸ. ಲವಾಸಿಯೇ ಯ ಮೊದಲ ರಾಸಾಯನಿಕ ಸಂಭಂದಿತ ಲೇಖನ ಪ್ರಕಟವಾಗಿದ್ದು ೧೭೬೪ರಲ್ಲಿ. ೧೭೬೩-೬೭ ರವರೆಗೆ ಭೂರಚನಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ಭೂಗರ್ಭ ಇಲಾಖೆಯ ಸರ್ವೇಕ್ಷಣಾ ಇಲಾಖೆಯಲ್ಲಿ ೧೭೬೭ರಲ್ಲಿ ಕೆಲಸವನ್ನೂ ಮಾಡಿದ. ೧೭೬೪ರಲ್ಲಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಲ್ಲಿ ಜಿಪ್ಸಮ್ ನ ಭೌತಿಕ ಮತ್ತು ರಾಸಾಯನಿಕ ಗುಣಗಳ ಬಗ್ಗೆ ತಾನೇ ತಯಾರು ಮಾಡಿದ್ದ ಪ್ರಬಂಧವೊಂದನ್ನು ಮಂಡಿಸಿದ್ದ. ೧೭೬೬ ರಲ್ಲಿ 'ನಗರ ಪ್ರದೇಶಗಳ ಬೀದಿದೀಪಗಳ' ಬಗ್ಗೆ ಪ್ರಬಂಧವೊಂದನ್ನು ಮಂಡಿಸಿ ಭೇಶ್ ಎನಿಸಿಕೊಂಡು ಫ್ರಾನ್ಸ್ ರಾಜರಿಂದ ಚಿನ್ನದ ಪದಕವನ್ನು ಬಹುಮಾನವಾಗಿ ಪಡೆದಿದ್ದ. ೧೭೬೮ರಲ್ಲಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಿಂದ ನೇಮಕಾತಿ ಪತ್ರ ಬಂದು ತಲುಪಿತು. ಲವಾಸಿಯೇನ ವೈಜ್ಞಾನಿಕ ಆಸಕ್ತಿಗಳನ್ನು ಕಂಡು ಆತನನ್ನು ವಿಜ್ಞಾನ ಅಕಾಡೆಮಿ ನೇಮಕ ಮಾಡಿಕೊಂಡಿತ್ತು. ೧೭೬೯ ರಲ್ಲಿ ಮೊತ್ತ ಮೊದಲ ಫ್ರಾನ್ಸ್ ಭೌಗೋಳಿಕ ನಕಾಶೆ ತಯಾರು ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ.

ಆಕರಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]