ಕದಂ, ಬಿ.ಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕದಂ, ಬಿ.ಪಿ. : 1922-2010. ಸಂಸದೀಯ ಪಟು, ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ಇವರ ಪೂರ್ಣ ಹೆಸರು ಬಾಲಸು ಪುರುಷು ಕದಂ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಉತ್ತರ ಕನ್ನಡ ಜಿಲ್ಲೆ ಕಾರವಾರಸದಾಶಿವ ಗಡದಲ್ಲಿ 1922 ಡಿಸೆಂಬರ್ 2ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಾರವಾರದಲ್ಲಿ ಮುಗಿಸಿದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡಕರ್ನಾಟಕ ಕಾಲೇಜು, ಕೊಲ್ಲಾಪುರದ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ಕಾರವಾರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿ (1948), ಅಪಾರ ಯಶಸ್ಸು ಗಳಿಸಿದರು. 1972ರ ವರೆಗೂ ಈ ವೃತ್ತಿಯನ್ನು ಮುಂದುವರಿಸಿದರು. ತರುಣ ರಾಷ್ಟ್ರೀಯವಾದಿ ಕದಂ ಕೊಲ್ಲಾಪುರ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿ, ಎರಡು ತಿಂಗಳು ಭೂಗತರಾಗಿದ್ದರು. ಆಗ ಎರಡು ತಿಂಗಳು ಕಾಲೇಜಿನಲ್ಲಿ ಗೈರು ಹಾಜರಾಗಿದ್ದ ಬಗ್ಗೆ ಪ್ರಾಂಶುಪಾಲರಿಗೆ ತಮ್ಮ ಚತುರ ಮಾತಿನಿಂದ ಮನದಟ್ಟು ಮಾಡಿಕೊಟ್ಟು ಪರೀಕ್ಷೆಗೆ ಕುಳಿತು ತೇರ್ಗಡೆಯಾದರು. ವಕೀಲಿ ವೃತ್ತಿಯಲ್ಲಿದ್ದಾಗ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ ನೆರವಾದರು.

ರಾಜಕೀಯ ಜೀವನ[ಬದಲಾಯಿಸಿ]

ರಾಜಕೀಯದಲ್ಲಿ ಧುಮುಕಿದ ಇವರು ಮುಂಬಯಿಯ ವಿಧಾನಸಭೆಗೆ ಕಾಂಗ್ರೆಸ್‍ ಪಕ್ಷದ ಶಾಸಕರಾಗಿ ಆಯ್ಕೆಯಾದರು (1952-57). ಕರ್ನಾಟಕ ವಿಧಾನಸಭೆಗೆ ಕಾರವಾರ ಕ್ಷೇತ್ರದಿಂದ ಆಯ್ಕೆಯಾಗಿ ಏಕಪ್ರಕಾರ ಮೂರು ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದರು. ಅನಂತರ ವಿಧಾನ ಸಭೆಯ ಉಪಸಭಾಪತಿ ಸ್ಥಾನ ಪಡೆದು ಐದು ವರ್ಷ ಕಾರ್ಯನಿರ್ವಹಿಸಿದರು. ಲೋಕಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿ (1977-81) ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ದುಡಿದರು.

ಸಂಘ ಸಂಸ್ಥೆಗಳಲ್ಲಿ[ಬದಲಾಯಿಸಿ]

ಇವರು ಹಲವು ಸಂಘ ಸಂಸ್ಥೆಗಳಲ್ಲೂ ಸೇವೆಸಲ್ಲಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಸದಾಶಿವಗಡ ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ (1983-2002); ಕಾರವಾರ ಜಿಲ್ಲಾ ಸ್ಕೂಲ್ ಬೋರ್ಡ್ ಸಮಿತಿಯ ಉಪಾಧ್ಯಕ್ಷ (1950-53), ಕಾಳಿ ಪ್ರಾಜೆಕ್ಟ್‌ ಜಲಾಶಯ ಹಾಗೂ ನಿರಾಶ್ರಿತರ ಸಮಸ್ಯೆ ಸಮಿತಿ ಅಧ್ಯಕ್ಷ, ಪಾರ್ಲಿಮೆಂಟ್ ಕಾಯಿದೆ ಸಮಿತಿ ಸದಸ್ಯ ಇವು ಮುಖ್ಯವಾದುವು.

ಇವರಿಗೆ ಬೇಸಾಯದಲ್ಲಿ ವಿಶೇಷ ಆಸಕ್ತಿ. ಅಗಾಧ ಪುಸ್ತಕ ಪ್ರೇಮಿ, ಒಳ್ಳೆಯ ಭಾಷಣಕಾರರು, ಸಂಘಟನಾ ಚತುರರು. ಕನ್ನಡ, ಇಂಗ್ಲಿಷ್, ಮರಾಠಿ, ಕೊಂಕಣಿಯಲ್ಲಿ ಸುಲಲಿತವಾಗಿ ಮಾತನಾಡಬಲ್ಲರು. ಸಂಸದೀಯ ಹಾಗೂ ಸಂವಿಧಾನ ತಜ್ಞರಾಗಿ ಅನೇಕ ಸಮಿತಿಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ತಮಗೆ ದೊರೆತ ಅಧಿಕಾರವನ್ನು ನಿಷ್ಟೆ, ಶ್ರದ್ಧೆ, ತ್ಯಾಗ, ಸಮರ್ಪಣ ಭಾವಗಳಿಂದ ನಿರ್ವಹಿಸಿದ್ದಾರೆ. ಇವರ ಧರ್ಮಪತ್ನಿ ರಮಾಬಾಯಿ.

ನಿಧನ[ಬದಲಾಯಿಸಿ]

ಇವರು ೧೮ ಫೆಬ್ರವರಿ ೨೦೧೦ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.[೧]

ಉಲ್ಲೇಖಗಳು[ಬದಲಾಯಿಸಿ]

  1. "Kadam dead". {{cite web}}: Cite has empty unknown parameter: |1= (help)