ಕರಿಬಸವಶಾಸ್ತ್ರೀ ಎನ್ ಆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಿಬಸವಶಾಸ್ತ್ರೀ ಎನ್ ಆರ್೧೮೫೨-೧೯೨೩. ಮೈಸೂರಿನಲ್ಲಿ ಹುಟ್ಟಿ ಬೆಳೆದ ಅಂದಿನ ವಿದ್ವಾಂಸರಲ್ಲಿ ಗಮನಾರ್ಹರು. ಇವರು ನಂಜನಗೂಡು ಪಂಡಿತ ರುದ್ರಶಾಸ್ತ್ರೀಗಳ ಮಕ್ಕಳು. ಇವರು ಬಾಲ್ಯವನ್ನು ನಂಜನಗೂಡಿನಲ್ಲಿ ಕಳೆದರು. ಮೈಸೂರಿಗೆ ಬಂದ ಕರ್ಣಾಟಕ ಭಾಷಾರತ್ನಂ ಕರಿಬಸವ ಶಾಸ್ತ್ರೀಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಹಲವಾರು ವರ್ಷ ಶ್ರದ್ಧೆಯಿಂದ ಕನ್ನಡ, ಸಂಸ್ಕೃತ ಭಾಷೆಗಳನ್ನೂ ಸಾಹಿತ್ಯ, ವೇದಾಂತ ಶಾಸ್ತ್ರಗಳನ್ನೂ ಕಲಿತು ಉದ್ದಾಮ ಪಂಡಿತರಾದರು. ಯಜಮಾನ್ ವೀರ ಸಂದಪ್ಪನವರ ಉದಾರ ಆಶ್ರಯದಿಂದ ಅಭಿವೃದ್ಧಿಗೆ ಬಂದರು. ಮೈಸೂರು ಸ್ಟಾರ್ ಎಂಬ ವಾರಪತ್ರಿಕೆಗೆ ಲೇಖಕರಾಗಿ ಸೇರಿಕೊಂಡು ವಿಖ್ಯಾತರಾದರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಪಂಡಿತರಾದರು (೧೯೧೭). ವೀರಶೈವ ಗ್ರಂಥ ಪ್ರಕಾಶಿಕೆ ಎಂಬ ಮಾಸ ಪತ್ರಿಕೆಯನ್ನು ಸ್ಥಾಪಿಸಿ ಹಲವಾರು ಪ್ರಾಚೀನ ಗ್ರಂಥಗಳನ್ನು ಬೆಳಕಿಗೆ ತಂದರು. ಅದರಿಂದ ವೀರಶೈವ ಸಾಹಿತ್ಯದ ಹಲವಾರು ಮಹತ್ತ್ವದ ಗ್ರಂಥಗಳು ಬೆಳಕಿಗೆ ಬಂದವು. ಈ ಮಹನೀಯರು ಶಿವಯೋಗಿ ಶಿವಾಚಾರ್ಯರ ಸಿದ್ಧಾಂತ ಶಿಖಾಮಣಿ ಸಟೀಕ. ಗುರುರಾಜ ಕವಿಯ ಸಂಸ್ಕೃತ ಪಂಡಿತಾರಾಧ್ಯಚರಿತೆಗಳನ್ನು ಪ್ರಕಟಿಸಿ ಮಹೋಪಕಾರ ಮಾಡಿದರು. ಸೌಂದರ ಪುರಾಣ, ಧರ್ಮ ಶಿರೋಮಣಿ, ರೇವಣ ಸಿದ್ಧೇಶ್ವರ ಪುರಾಣ, ಪಾಲ್ಕುರಿಕೆ ಸೋಮೇಶ್ವರ ಪುರಾಣ, ವೀರಶೈವ ದೀಕ್ಷಾವಿಧಿ, ಶಿವಯೋಗ ಪ್ರದೀಪಿಕಾ, ಶಿವಸೂತ್ರ ರತ್ನ, ತತ್ತ್ವಪ್ರಕಾಶಿಕಾ, ರಕ್ಷಾಶತಕಂ, ಶಂಕರಲಿಂಗ ಕಂದ, ಸ್ತುತಿ ಮುಕ್ತಾವಳಿ, ದೇವೀ ಕಾಲೋತ್ತರಾಗಮಂ ಸಟಿಕ, ವೃಷಭೇಂದ್ರ ವಿಜಯ, ಸಟೀಕ ಶತಕತ್ರಯ, ಕರ್ಣಾಟಕ ಶಬ್ದಮಂಜರಿ, ಬಸವೇಶ ಜನನ-ಎಂಬ ಗ್ರಂಥಗಳನ್ನು ಸಂಪಾದಿಸಿ ಪ್ರಕಟಸಿದರು. ಬಸವರಾಜವಿಜಯ ಮತ್ತು ಚೆನ್ನಬಸವ ವಿಜಯ ಎಂಬ ಉದ್ದಾಮ ಗ್ರಂಥಗಳನ್ನು ಕನ್ನಡ ಗದ್ಯ ಶೈಲಿಯಲ್ಲಿ ಬರೆದು ಪ್ರಕಟಿಸಿದರು.