ಏಂಜೆಲ್ ಮೇರಿ, ಜೋಸೆಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಂಜೆಲ್ ಮೇರಿ, ಜೋಸೆಫ್: ಅಥ್ಲೆಟಿಕ್ಸ್‌ನ ನಾನಾ ವಿಭಾಗಗಳಲ್ಲಿ ಪರಿಣಿತರಾದ ಪ್ರಸಿದ್ಧ ಕ್ರೀಡಾಪಟು. ಅರ್ಜುನ್ ಪ್ರಶಸ್ತಿ ವಿಜೇತೆ. ದಾವಣಗೆರೆಯಲ್ಲಿ ಜನಿಸಿದ ಇವರು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಕ್ರೀಡಾಕೂಟಗಳ ಮೂಲಕ ರೂಪುಗೊಂಡರು. ಪ್ರಾರಂಭದಲ್ಲಿ ಪುರ್ಣವೇಗದ ಓಟ (ಸ್ಪ್ರಿಂಟ್) ಹಾಗೂ ಉದ್ದ ನೆಗೆತ (ಲಾಂಗ್ ಜಂಪ್) ಸ್ಪರ್ಧೆಗಳಲ್ಲಿ ಮೇಲ್ಮೆ ಸಾಧಿಸಿದರು. ಅನಂತರ ದಕ್ಷಿಣ ರೈಲ್ವೆ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿ ಹಲವಾರು ವರ್ಷ ಭಾರತೀಯ ಕ್ರೀಡಾರಂಗದಲ್ಲಿ ದಕ್ಷಿಣ ರೈಲ್ವೆಯ ಕ್ರೀಡಾಪಟುವಾಗಿ ಭಾರತಕ್ಕೆ ಹಿರಿಮೆ ತಂದುಕೊಟ್ಟರು.[೧]

ಓಟದ ನಾನಾ ವಿಭಾಗಗಳಲ್ಲಿ ಸ್ಪರ್ಧಿಸಿ, ಮೂರು ಏಷ್ಯನ್ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಈಕೆ ದೆಹಲಿಯ 1982ರ ಏಷ್ಯನ್ ಕ್ರೀಡೆಯ ಸ್ವರ್ಧೆಯಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಓಟದ ಸ್ವರ್ಧೆಗಳಿಗೆ ವಿದಾಯ ಹೇಳಿದರು. 1978ರ ಬ್ಯಾಂಕಾಕ್ ಏಷ್ಯನ್ ಕ್ರೀಡೆಗಳಲ್ಲಿ ಭಾಗವಹಿಸಿ ಪೆಂಟಾತ್ಲಾನ್ ಹಾಗೂ ಉದ್ದ ನೆಗೆತದಲ್ಲಿ ಪಾಲ್ಗೊಂಡರು. ಉದ್ದ ನೆಗೆತದಲ್ಲಿ ಬೆಳ್ಳಿ ಪದಕ ಗಳಿಸಿದರು. 6.05 ಮೀ. ಉದ್ದ ಜಿಗಿತದೊಂದಿಗೆ ಇವರು ದಾಖಲೆ ನಿರ್ಮಿಸಿದ್ದಾರೆ. ಭಾರತದ ಅಥ್ಲೆಟಿಕ್ಸ್‌ ರಂಗದಲ್ಲಿ ಸಕಲ ವಿಭಾಗ ಕ್ರೀಡಾಪಟು (ಆಲ್ ರೌಂಡರ್) ಎಂದು ಖ್ಯಾತಿ ಪಡೆದಿದ್ದಾರೆ.[೨]

ಇವರ ಮಹತ್ತರವಾದ ಸಾಧನೆಗೆ ಮನ್ನಣೆಯಿತ್ತು ಭಾರತ ಸರ್ಕಾರ ಇವರಿಗೆ 1978-79ರ ಸಾಲಿನ ಅರ್ಜುನ ಪ್ರಶಸ್ತಿ ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ಹಾಗೂ ದಸರಾ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದೆ. ಇವರು ಸದ್ಯದಲ್ಲಿ ದಕ್ಷಿಣ ರೈಲ್ವೆ ವಿಭಾಗದ ಕ್ಷೇಮಾಭಿವೃದ್ಧಿ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Angel Mary Joseph ,sportsbharti.com". Archived from the original on 2016-08-15. Retrieved 2017-03-16.
  2. https://web.archive.org/web/20101101210431/http://keralaathletics.org/history.html
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: