ಉತ್ಕಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಕಲ: ಉತ್ಕಲಜನ ವಾಸಿಸುತ್ತಿದ್ದ ಕಾರಣದಿಂದ ಅದೇ ಹೆಸರಿನಿಂದ ಪ್ರಸಿದ್ಧವಾಗಿದ್ದ ದೇಶ. ಓಢ್ರ (ಒಡಿಶಾ), ಕಲಿಂಗ ದೇಶಗಳಿಗೆ ಹೊಂದಿಕೊಂಡಿದ್ದು ಈ ದೇಶಕ್ಕೆ ರಾಂಜಿಯ ಬಳಿಯ ಬಲಸೋರ, ಮೋಹರ್ದಗಾ ಮತ್ತು ಮಧ್ಯಪ್ರದೇಶದ ಸುಗರಜ ಸೇರಿದ್ದುವು.

ದುರ್ಯೋಧನನ ಆಜ್ಞಾನುಸಾರವಾಗಿ ಕರ್ಣ ಈ ದೇಶವನ್ನೂ ಓಢ್ರವನ್ನೂ ಗೆದ್ದನೆಂದು ಹೇಳಿದೆ. ಅನೇಕ ಸಂಸ್ಕೃತ ಗ್ರಂಥಗಳಲ್ಲಿ ಓಢ್ರವೂ ಉತ್ಕಲವೂ ಒಂದೇ ಎಂಬ ಭಾವನೆ ಯುಂಟು. ಅವರ ದೃಷ್ಟಿಯಲ್ಲಿ ಉತ್ಕಲವೆಂಬುದು ಉತ್ಕಲಿಂಗದ, ಅಥವಾ ಕಲಿಂಗದ ಉತ್ತರ (ಉತ್) ಭಾಗದ (ಈಗಿನ ಛೋಟಾ ನಾಗಪುರದ ದಕ್ಷಿಣ ಭಾಗ) ಅಪಭ್ರಂಶ.

ಕನ್ನಡ/ಕರ್ನಾಟಕದೊಡನೆ ಸಂಬಂಧ[ಬದಲಾಯಿಸಿ]

ಕರ್ನಾಟಕದ ಹೊಲ ಉಳುವ ಕುಟುಂಬಗಳ (ಒಕ್ಕಲಿಗರು) ಒಕ್ಕಲ್ (ಒಕ್ಕಲು) ಪ್ರಾಚೀನ ಕಾಲದಲ್ಲಿ ಉತ್ಕಲವೆಂಬ ಸಂಸ್ಕೃತರೂಪ ತಳೆದಿರಬೇಕೆಂದು ಕೆಲವು ಸಂಶೋಧಕರ (ಉದಾ: ಹಿಸ್ಟರಿ ಆಫ್ ಒರಿಯನ್ ಲ್ಯಾಂಗ್ವೇಜ್ ಗ್ರಂಥದ ಕರ್ತೃ ಪಂಡಿತ ವಿನಾಯಕ ಶರ್ಮ) ಅಭಿಪ್ರಾಯ. ಕನ್ನಡ ದೇಶದ ಒಕ್ಕಲಿಗರೇ ಒಕ್ಕಲಿಗರು ಅಥವಾ ಉತ್ಕಲರೆಂಬ ಊಹೆ ನಿಜವಾದರೆ ಕನ್ನಡ ಭಾಷೆ ಸಂಸ್ಕೃತಿಗಳು ಪ್ರಾಚೀನಕಾಲದಲ್ಲಿ ಇಲ್ಲಿಯವರೆಗೂ ವ್ಯಾಪಿಸಿದ್ದುವೆನ್ನ ಬಹುದು.

ಇತಿಹಾಸ[ಬದಲಾಯಿಸಿ]

ಅನೇಕ ಮನೆತನದ ಅರಸರು ಇಲ್ಲಿ ರಾಜ್ಯವಾಳುತ್ತಿದ್ದರಾದರೂ ಇವರ ಆಳ್ವಿಕೆಗಳ ಅನುಕ್ರಮಣಿಕೆಯಾಗಲಿ ಇವರ ರಾಜ್ಯಗಳ ಎಲ್ಲೆಗಳಾಗಲಿ, ಈ ನಾನಾ ಅರಸರ ಪರಸ್ಪರ ಸಂಬಂಧ ಸ್ವರೂಪವಾಗಲಿ ಸರಿಯಾಗಿ ಗೊತ್ತಿಲ್ಲ. 8ನೆಯ ಶತಮಾನದ ಮಧ್ಯಕಾಲದಿಂದ 10ನೆಯ ಶತಮಾನದ ಅಂತ್ಯದವರೆಗೆ ಇಲ್ಲಿ ಆಳುತ್ತಿದ್ದ ಕರ ಅಥವಾ ಭೌಮರು ಶಕ್ತರು, ಪ್ರಸಿದ್ಧರು. 12ನೆಯ ಶತಮಾನದಲ್ಲಿ ಸೋಮವಂಶಿ ಸುವರ್ಣಕೇಸರಿ ರಾಜನನ್ನು ಚೋಡಗಂಗ ದೇವ ಸೋಲಿಸಿ ಉತ್ಕಲದೇಶವನ್ನು ವಶಪಡಿಸಿಕೊಂಡನೆಂದು ಕೂರ್ನಿ ತಾಮ್ರಶಾಸನದಿಂದ ಗೊತ್ತಾಗುತ್ತದೆ. ಪೂರ್ವದ ಚಾಲುಕ್ಯರು, ಚೋಳರು, ಯಾದವರು, ವಿಜಯನಗರದ ಅರಸರು ಮತ್ತು ಗಜಪತಿ ಅರಸರು ಅನುಕ್ರಮವಾಗಿ ಉತ್ಕಲವನ್ನಾಳುತ್ತಿದ್ದರು. ಇದು ಮುಂದೆ ಮೊಗಲರ, ಅನಂತರ ಬ್ರಿಟಿಷರ ವಶದಲ್ಲಿತ್ತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಉತ್ಕಲ&oldid=829320" ಇಂದ ಪಡೆಯಲ್ಪಟ್ಟಿದೆ