ಗೋಲ್ಡನ್ ಬೋ, ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಗೋಲ್ಡನ್ ಬೋ, ದಿ' - ಇದು ಇಂಗ್ಲೆಂಡಿನ ಸುಪ್ರಸಿದ್ಧ ಮಾನವ ವಿಜ್ಞಾನಿ ಸರ್ ಜೇಮ್ಸ್‌ ಜಾರ್ಜ್ ಫ್ರೇಜ಼ರ್ ನಿಂದ (೧೮೫೪-೧೯೪೧) ಇಪ್ಪತ್ತನೆಯ ಶತಮಾನದ ಆರಂಭದಲ್ಲಿ (೧೮೯೦-೧೯೧೫) ರಚಿತವಾದ ಹನ್ನೆರಡು ಸಂಪುಟಗಳನ್ನುಳ್ಳ ಖ್ಯಾತ ಕೃತಿ (ಫ್ರೇಜ಼ರ್ ೧೯೩೬ ರಲ್ಲಿ ರಚಿಸಿದ ಆಫ್ಟರ್ಮಾತ್ ಎಂಬ ಅನುಬಂಧವೂ ಸೇರಿದರೆ ಹದಿಮೂರು ಸಂಪುಟಗಳಾಗುತ್ತವೆ). ಇದು ಮಾನವವಿಜ್ಞಾನ, ಜಾನಪದ, ಪುರಾಣ, ವಿಜ್ಞಾನ, ಧರ್ಮ ಇವೆಲ್ಲವನ್ನೂ ಒಳಗೊಂಡಿದ್ದು ಜನಪದ ಜೀವನವನ್ನು ಅರ್ಥವಿಸುವಲ್ಲಿ, ನಂಬಿಕೆಗಳನ್ನು ವಿಶ್ಲೇಷಿಸುವಲ್ಲಿ ಆಚಾರ್ಯ ಕೃತಿ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಫ್ರೇಜ಼ರನಿಗೆ ವಿಶೇಷವಾದ ಗೌರವ ಹಾಗೂ ಕೀರ್ತಿಯನ್ನು ತಂದುಕೊಟ್ಟಿತು. ಮುಖ್ಯವಾಗಿ ಇದರಲ್ಲಿ ಕುಲದೇವತಾಪದ್ಧತಿಗಳು ವಿಧಿನಿಷೇಧಗಳು ಮೊದಲಾದ ವಿಷಯಗಳ ಆಳವಾದ ವಿಶ್ಲೇಷಣೆಯಿದೆ.

ಗ್ರಂಥದ ಶೀರ್ಷಿಕೆಯ ಕುರಿತು[ಬದಲಾಯಿಸಿ]

  • ಇಟಲಿ ದೇಶದಲ್ಲಿ ನೆಮಿ ಎಂಬ ಸರೋವರ ದಂಡೆಯ ಮೇಲಿನ ತೋಪಿನಲ್ಲಿನ ಡಯಾನ ದೇವತೆಯ ಪೂಜಾರಿಯ ಸ್ಥಾನವನ್ನು ಗಳಿಸಬೇಕೆಂದು ಬಯಸುವ ವ್ಯಕ್ತಿ ಅಧಿಕಾರದಲ್ಲಿದ್ದ ಪೂಜಾರಿಯನ್ನು ಕೊಲ್ಲಬೇಕಾಗಿತ್ತು. ಕೊಲ್ಲುವ ಮೊದಲು ಅದೇ ತೋಪಿನಲ್ಲಿನ ಮರವೊಂದರ ಮೇಲೆ ಬೆಳೆದಿದ್ದ ಬಂದಳಿಕೆಯಂಥ ಕೊಂಬೆಯನ್ನು ಕತ್ತರಿಸಬೇಕಾಗಿತ್ತು. ಈ ಕೊಂಬೆ ವರ್ಜಿಲನ ಈನಿಯಡ್ ಮಹಾಕಾವ್ಯದಲ್ಲಿ ಬರುವ ಗೋಲ್ಡನ್ ಬೋ ಅಥವಾ ಚಿನ್ನದ ಕೊಂಬೆ ಐತಿಹ್ಯವನ್ನು ನೆನಪಿಗೆ ತರುವಂತಿತ್ತು.
  • ಫ್ರೇಜ಼ರನಿಗೆ ಈ ವಿಲಕ್ಷಣ ಸಂಪ್ರದಾಯದ ರಹಸ್ಯವನ್ನು ಭೇದಿಸುವ ಕುತೂಹಲವುಂಟಾಯಿತು. ಈ ಉದ್ದೇಶದಿಂದ ಈತ ನಡೆಸಿದ ಹದಿನೈದು ವರ್ಷಗಳ ಸಂಶೋಧನೆಯ ಫಲವೇ ಈ ಮಹತ್ಕೃತಿ. ಈ ಕೃತಿಗೆ ಗೋಲ್ಡನ್ ಬೋ ಎಂಬ ಹೆಸರು ಬರಲು ಇದೇ ಕಾರಣ. ಮೊದಲು ಈ ಸಂಬಂಧವಾಗಿ ಒಂದು ಚಿಕ್ಕ ಪ್ರಬಂಧ ಬರೆಯಬೇಕೆಂಬ ಉದ್ದೇಶ ಹೊಂದಿದ್ದ.
  • ಫ್ರೇಜ಼ರ್ ಈ ವಿಷಯಕ್ಕೆ ಪೋಷಕವಾಗಿ ಬರುವ ಧರ್ಮ, ಮಾಟ, ಬಲಿ, ರಾಜತ್ವದ ಉಗಮ, ನಿಷಿದ್ಧಗಳು, ಬೆಂಕಿಯ ಹಬ್ಬಗಳು, ಫಲಶಕ್ತಿವಿಧಿಗಳು ಮತ್ತು ಆ ಸಂಬಂಧವಾದ ದೇವತೆಯ ವಿಷಯ-ಈ ಮೊದಲಾದ ಸಂಗತಿಗಳನ್ನು ಪ್ರಪಂಚದ ವಿವಿಧ ಭಾಗಗಳಿಂದ ಆರಿಸಿದ ಹೇರಳವಾದ ಉದಾಹರಣೆಗಳ ಸಮೇತ ನೋಡಬೇಕಾಗಿ ಬಂತು. ಹೀಗಾಗಿ ಒಂದು ಸಣ್ಣ ಪ್ರಬಂಧವಾಗಬೇಕಾಗಿದ್ದ ಕೃತಿ ಹದಿಮೂರು ಸಂಪುಟಗಳ ವಿಸ್ತಾರವಾದ, ವಿದ್ವತ್ ಪೂರ್ಣ ಕೃತಿಯಾಗಿ ಪರಿಣಮಿಸಿತು.

ಗ್ರಂಥದ ಮಹತ್ವ[ಬದಲಾಯಿಸಿ]

  • ಇಂದು ಮಾನವವಿಜ್ಞಾನ, ಜಾನಪದ, ಪುರಾಣವಿಜ್ಞಾನ, ಧರ್ಮ-ಈ ಕ್ಷೇತ್ರಗಳಲ್ಲಿ ಹೆಚ್ಚು ವೈಜ್ಞಾನಿಕವಾದ ಸಂಶೋಧನೆ ನಡೆದಿದೆ. ಫ್ರೇಜ಼ರ್ ಪ್ರತಿಪಾದಿಸಿದ ಒಂದೊಂದು ವಿಷಯವೇ ಇಂದು ಒಂದೊಂದು ಸಂಶೋಧನೆಗಳ ಕ್ಷೇತ್ರವಾಗಿ ಪರಿಣಮಿಸಿದೆ. ಈ ಕ್ಷೇತ್ರಗಳಲ್ಲಿನ ಇಂದಿನ ವಿದ್ವಾಂಸರು ಫ್ರೇಜ಼ರನ ಕ್ರಮವನ್ನಾಗಲೀ ಸಿದ್ಧಾಂತಗಳನ್ನಾಗಲೀ ಒಪ್ಪುವುದಿಲ್ಲ. ಇವನದು ಹಳೆಯ ಕ್ರಮ ಎಂದೂ ಅವರಿಗೆ ಅನಿಸಬಹುದು. ಆದರೆ ಇಂದಿನ ಈ ಸಂಬಂಧವಾದ ಸಂಶೋಧನೆಗಳಿಗೆ ಭದ್ರವಾದ ಬುನಾದಿ ಹಾಕಿದ ಕೀರ್ತಿ ಫ್ರೇಜ಼ರನಿಗೆ ಸಲ್ಲುತ್ತದೆ.
  • ಗೋಲ್ಡನ್ ಬೋ ಕೃತಿಗೆ ಐತಿಹಾಸಿಕ ಮೌಲ್ಯ ಉಂಟು ಎಂಬುದನ್ನು ಮರೆಯಬಾರದು. ಜನಪದ ಸಂಪ್ರದಾಯಗಳ ಮತ್ತು ನಂಬಿಕೆಗಳ ವಿಶ್ವಕೋಶ ಎಂಬ ದೃಷ್ಟಿಯಿಂದಲೂ ಈ ಕೃತಿಗೆ ಮಹತ್ತ್ವದ ಸ್ಥಾನವಿದೆ. ಮಾನವನ ಜ್ಞಾನದ ಪರಿಧಿಯನ್ನು ವಿಸ್ತರಿಸಿದ, ಅಜ್ಞಾತವಾಗಿದ್ದ ಜ್ಞಾನಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿ ಜನತೆಯ ಕಣ್ಣು ತೆರೆಯಿಸಿದ ಹಾಗೂ ಒಂದು ವಿಶಿಷ್ಟ ಸಾಂಸ್ಕೃತಿಕ ಪ್ರಪಂಚದ ಪರಿಚಯ ಮಾಡಿಕೊಟ್ಟ ಉತ್ಕೃಷ್ಟ ಕೃತಿ ಎಂಬ ಕಾರಣದಿಂದಲಂತೂ ಗೋಲ್ಡನ್ ಬೋಗೆ ಶಾಶ್ವತ ಮೌಲ್ಯವಿದೆ ಎಂದು ಹೇಳಬಹುದು.
  • ಮಾನವಶಾಸ್ತ್ರ ಮತ್ತು ಜಾನಪದಗಳ ಮೇಲೆ ತನ್ನ ಪ್ರಭಾವವನ್ನು ಉಜ್ವಲವಾಗಿ ಬೀರಿದ ಈ ಕೃತಿ ಸಾಹಿತ್ಯಲೋಕದಲ್ಲಿ ಕಿಪ್ಲಿಂಗ್, ಟೆನಿಸನ್, ಎಲಿಯಟ್, ಎಜಾ಼್ರಪೌಂಡ್, ಲಾರೆನ್ಸ್‌ ಮೊದಲಾದ ಕವಿಗಳನ್ನು ತನ್ನತ್ತ ಆಕರ್ಷಿಸಿ ಅವರ ಕಾವ್ಯಸಂಪ್ರದಾಯಗಳ ಮೇಲೂ ತನ್ನ ಪ್ರಭಾವವನ್ನು ಹೊಮ್ಮಿಸಿದೆ.

ಆಧಾರಿತ ಗ್ರಂಥಗಳು[ಬದಲಾಯಿಸಿ]

  • ಗೋಲ್ಡನ್ ಬೋ ಬೃಹತ್ಕೃತಿಯನ್ನು ಇನ್ನಷ್ಟು ಜನಪ್ರಿಯವೂ ಬಾಲಪ್ರಿಯವೂ ಆಗುವಂತೆ ಮಾಡಿದ ಕೀರ್ತಿ ಫ್ರೇಜ಼ರನ ಹೆಂಡತಿಗೆ ಸೇರುತ್ತದೆ. ಮೂಲ ಗ್ರಂಥದಿಂದ ಸೊಗಸಾಗಿರುವ ಭಾಗಗಳನ್ನು ಆಯ್ದು ಬಹುಮಟ್ಟಿಗೆ ಮೂಲದ ಮಾತುಗಳನ್ನೇ ಉಳಿಸಿಕೊಂಡು ಸಂಗ್ರಹಿಸಿ ಲೀವ್ಸ್‌ ಫ್ರಮ್ ದಿ ಗೋಲ್ಡನ್ ಬೋ ಎಂಬ ಹೆಸರಿನಲ್ಲಿ ಈಕೆ ಒಂದು ಪುಸ್ತಕವನ್ನು ಪ್ರಕಟಿಸಿದ್ದಾಳೆ. ಅದರ ಮುನ್ನುಡಿಯಲ್ಲಿ ಈಕೆ ತನ್ನ ಉದ್ದೇಶ ಉಪದೇಶವಲ್ಲ, ರಂಜನೆಯನ್ನೊದಗಿಸುವುದು-ಎಂದು ಹೇಳಿಕೊಂಡಿದ್ದಾಳೆ. ಗೋಲ್ಡನ್ ಬೋ ಗ್ರಂಥದ ಪರಿಷ್ಕರಣಕಾರ್ಯವೂ ನಡೆದಿದೆ.
  • ತಿಯೋಡರ್ ಎಚ್. ಗ್ಯಾಸ್ಟರ್ ಎಂಬಾತ ದಿ ನ್ಯೂ ಗೋಲ್ಡನ್ ಬೋ (೧೯೫೯) ಎಂಬ ಪರಿಷ್ಕೃತ ಮುದ್ರಣವನ್ನು ಪ್ರಚುರಪಡಿಸಿದ್ದಾನೆ. ಇಲ್ಲಿ ಹೊಸ ಸಂಶೋಧನೆಯ ಹಿನ್ನೆಲೆಯಲ್ಲಿ ತೀರ ಹಳತು ಎಂದು ತೋರುವ ಭಾಗಗಳನ್ನು ಮೂಲ ಉದ್ದೇಶಕ್ಕೆ ಭಂಗ ತಾರದಂತೆ ಕಿತ್ತು ಹಾಕಲಾಗಿದೆ. ಜೊತೆಗೆ ಸಂಪಾದಕ ಫ್ರೇಜ಼ರನ ಒಂದೊಂದು ಅಭಿಪ್ರಾಯವನ್ನೂ ಹೊಸ ದೃಷ್ಟಿಯಿಂದ ಪರೀಕ್ಷಿಸಿ ಉಪಯುಕ್ತ ಟಿಪ್ಪಣಿಗಳನ್ನು ಬರೆಯಲಾಗಿದೆ. ಜಾನ್ ಕ್ಯಾನಿಂಗ್ ಎಂಬಾತ ಸಂಪಾದಿಸಿದ (೧೯೬೬) ಹಂಡ್ರಡ್ ಗ್ರೇಟ್ ಬುಕ್ಸ್‌ ಎಂಬ ಸಂಕಲನದಲ್ಲಿ ಗೋಲ್ಡನ್ ಬೋ ಸೇರಿರುವುದು ಗಮನಾರ್ಹ ಸಂಗತಿ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: