ಆಸುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಂಖ್ಯತತ್ತ್ವದ ಜನಕ ಕಪಿಲ ಆ ತತ್ತ್ವಗಳನ್ನು ಈ ಹೆಸರಿನ ಶಿಷ್ಯೋತ್ತಮನಿಗೆ ಮೊಟ್ಟಮೊದಲಿಗೆ ಬೋಧಿಸಿದನೆಂದು ಪ್ರತೀತಿ. ಆಸುರಿ ಎಂಬುವವನೊಬ್ಬ ಇದ್ದನೆಂಬ ವಿಚಾರದಲ್ಲಿ ಪಾಶ್ಚಾತ್ಯ ಸಂಶೋಧಕರಾದ ಗಾರ್ಬೆ ಮತ್ತು ಕೀತ್ ಸಂಶಯಪಡುತ್ತಾರೆ. ಕವಿರಾಜ ಗೋಪೀನಾಥರಾದರೋ ಇಂಥ ವ್ಯಕ್ತಿ ಇದ್ದನೆಂದು ಖಚಿತವಾಗಿ ಹೇಳುತ್ತಾರೆ. ನಿಜವಾಗಿ ಇದ್ದನೆಂಬುದಕ್ಕೆ ಪ್ರಬಲವಾದ ಆಧಾರಗಳಿವೆ. ಕಪಿಲ ಆಸುರಿಗೆ ಸಾಂಖ್ಯತತ್ತ್ವವನ್ನು ಬೋಧಿಸಿದನೆಂದು ಜಯಮಂಗಲಾ ಮತ್ತು ಮಾಥರವೃತ್ತಿಗಳು ಸಾರಿವೆ. ಮಹಾಭಾರತದ ಶಾಂತಿಪರ್ವ ಕಪಿಲನ ಮೊದಲನೆಯ ಶಿಷ್ಯನಾದ ಆಸುರಿ ಪಂಚಶಿಖನಿಗೆ ಸಾಂಖ್ಯತತ್ತ್ವವನ್ನು ಬೋಧಿಸಿದನೆಂದು ತಿಳಿಸುತ್ತದೆ. ಷಡ್ದರ್ಶನಸಮುಚ್ಚಯದ ಮೇಲೆ ಬರೆದಿರುವ ವ್ಯಾಖ್ಯಾನದಲ್ಲಿ ಹರಿಭದ್ರನು ಆಸುರಿಯ ಎರಡು ವಾಕ್ಯಗಳನ್ನು ಉದ್ಧರಿಸಿದ್ದಾನೆ. ನಿರ್ಲಿಪ್ತನಾದ ಪುರುಷ ಭೋಗದಲ್ಲಿ ಹೇಗೆ ಸಿಕ್ಕಿಕೊಂಡಿರುತ್ತಾನೆಂಬ ಪ್ರಶ್ನೆಗೆ ಚಂದ್ರಬಿಂಬ ನೀರಿನಲ್ಲಿ ಆಡಿದಂತೆ ಎಂದು ಉತ್ತರ ಕೊಟ್ಟಿರುತ್ತಾನೆ. ಈ ಉಪಮಾನ ಸಾಂಖ್ಯತತ್ತ್ವ ಬೋಧೆಗೆ ಬಹುಮುಖ್ಯವಾ ದದ್ದು. ಬಹುಶಃ ಸಾಂಖ್ಯತತ್ತ್ವವನ್ನು ಉಪಮಾನಗಳ ಮೂಲಕ, ರೂಪಕಥೆಗಳ ಮೂಲಕ ಮೊಟ್ಟಮೊದಲಿಗೆ ಪ್ರತಿಪಾದಿಸಿದವ ಆಸುರಿ ಇದ್ದಿರಬಹುದು. (ಸಂಖ್ಯಾದರ್ಶನ)

"https://kn.wikipedia.org/w/index.php?title=ಆಸುರಿ&oldid=609249" ಇಂದ ಪಡೆಯಲ್ಪಟ್ಟಿದೆ