ಗುಂಡರ್ಟ್, ಹರ್ಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರ್ಮನ್ ಗುಂಡರ್ಟ್ 1814-93. ಮಲಯಾಳಂ ಭಾಷೆ ಮತ್ತು ಸಾಹಿತ್ಯ ಬೆಳೆವಣಿಗೆ ಮತ್ತು ಅದರ ಪ್ರಗತಿಗಾಗಿ ಹೆಚ್ಚಿನ ಕೆಲಸ ಮಾಡಿರುವ ವಿದ್ವಾಂಸ. ಜರ್ಮನಿಯಿಂದ ಭಾರತಕ್ಕೆ ಪಾದ್ರಿಯಾಗಿ ಬಂದ ಈತ ತನ್ನ ಜೀವಿತದ ಬಹು ಮುಖ್ಯ ಭಾಗವನ್ನು ಆ ಭಾಷೆ ಮತ್ತು ಸಾಹಿತ್ಯಕ್ಕೆ ಮೀಸಲಾಗಿಟ್ಟು ದುಡಿದಿದ್ದಾನೆ. ಮಲೆಯಾಳಿಗಳು ಈತನನ್ನು ಗುರುಸಮಾನನೆಂದು ಗೌರವಿಸುತ್ತಾರೆ.

ಮಲೆಯಾಳಂ ಭಾಷೆಗೆ ಕೊಡುಗೆ[ಬದಲಾಯಿಸಿ]

ಮಲೆಯಾಳಿ ಭಾಷೆಯಲ್ಲಿರುವ ಅನೇಕ ಪ್ರಥಮಗಳಿಗೆ ಗುಂಡರ್ಟ್ ಕಾರಣನಾಗಿದ್ದಾನೆ. ಈತ ರಚಿಸಿರುವ ಮಲೆಯಾಳಂ-ಇಂಗ್ಲಿಷ್ ನಿಘಂಟು ಶಾಸ್ತ್ರೀಯವೂ ಸಮಗ್ರವೂ ಆಗಿದೆ. ಈತನ ಮಲೆಯಾಳಂ ಭಾಷಾ ವ್ಯಾಕರಣ ಮತ್ತೊಂದು ಅದ್ಭುತ ಸಾಧನೆ. ಮಲೆಯಾಳಂ ಮೊದಲ ಭೂಗೋಳಶಾಸ್ತ್ರದ ಪುಸ್ತಕವನ್ನು ಬರೆದ ಹಾಗೂ ಗಾದೆಗಳನ್ನು ಸಂಗ್ರಹಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಮಲೆಯಾಳಂ ಭಾಷೆಯನ್ನು ಬರೆಯುವಾಗ ಅಗತ್ಯವಾದ ಲೇಖನ ಚಿಹ್ನೆಗಳನ್ನು ಪ್ರಥಮಬಾರಿಗೆ ಬಳಸಿದ ಈತನೇ. ಹಾಗೆಯೇ ಆ ಭಾಷೆಯಲ್ಲಿ ವೃತ್ತಾಂತ ಪತ್ರಿಕೆಗಳನ್ನು ಪ್ರಥಮ ಬಾರಿಗೆ ಹೊರಡಿಸಲು ಪ್ರಯತ್ನಿಸಿದವನೂ ಈತನೇ. ಗುಂಡರ್ಟ್ನ ಕೃತಿಗಳ ಸಂಖ್ಯೆ ಒಟ್ಟು 26 ಎನ್ನಲಾಗಿದೆ. ಮಲೆಯಾಳಂ ಭಾಷೆಯಲ್ಲಿನ ಆಧುನಿಕ ಗದ್ಯ ಒಂದು ನಿರ್ದಿಷ್ಟ ಶೈಲಿಯನ್ನು ಪಡೆದದ್ದು ಈತನಿಂದ ಎನ್ನಲಾಗಿದೆ.

ಬದುಕು[ಬದಲಾಯಿಸಿ]

ಗುಂಡರ್ಟ್ ಜರ್ಮನಿಯ ವರ್ಟೆನ್ಬರ್ಗ್ ಎಂಬಲ್ಲಿ ಜನಿಸಿದ. ನೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸ್ವಿಟ್ಜೆರ್ಲೆಂಡಿನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಪಾದ್ರಿಯಾದ. ನೋರಿಸ್ ಗ್ರೀನೆಜ್ನೊಂದಿಗೆ ಧರ್ಮಪ್ರಚಾರಕ ಮಂಡಲಿಯನ್ನು ಸೇರಿ ಕೆಲಸ ಮಾಡತೊಡಗಿದ. 1836ನೆಯ ಇಸವಿಯಲ್ಲಿ ಮತ ಪ್ರಚಾರಕ್ಕಾಗಿ ಜರ್ಮನಿಯನ್ನು ಬಿಟ್ಟು ಭಾರತಕ್ಕೆ ಬಂದ. ಸಮುದ್ರ ಮಾರ್ಗವಾಗಿ ಭಾರತಕ್ಕೆ ಪ್ರಯಾಣ ಮಾಡುವಾಗಲೇ ಬಂಗಾಳಿ, ಹಿಂದೂಸ್ತಾನಿ ಮತ್ತು ತೆಲುಗು ಭಾಷೆಗಳನ್ನು ಕಲಿತುಕೊಂಡ. 1836ರಲ್ಲಿ ಚೆನ್ನೈಯನ್ನು ತಲುಪಿದ. ತಿನ್ನೆಲ್ ವೇಲ್ ಮತ್ತು ಚಿತ್ತೂರಿನಲ್ಲಿ ತನ್ನ ಪ್ರಚಾರಕಾರ್ಯವನ್ನು ಆರಂಭಿಸಿದ. ಈ ಅವಧಿಯಲ್ಲಿ ತಮಿಳು ಭಾಷೆಯನ್ನು ಕಲಿತ. ತಮಿಳು ಭಾಷೆಯಲ್ಲಿಯೂ ಈತ ಒಂದು ಕೃತಿಯನ್ನು ರಚಿಸಿರುವುದಾಗಿ ಹೇಳುತ್ತಾರೆ.


ಅಲ್ಲಿಂದ ಗುಂಡರ್ಟ್ ಮೂಲ ಕ್ರೈಸ್ತಧರ್ಮ ಪ್ರಚಾರಕ ಮಂಡಲಿಯ ಸದಸ್ಯನಾಗಿ ಮಂಗಳೂರಿಗೆ ಬಂದ. ಬರುವ ಮಾರ್ಗದಲ್ಲಿ, ಇಂದಿನ ಕೇರಳದ ಒಂದು ಭಾಗವಾದ ತಿರುವನಂತಪುರದ ಆಗಿನ ರಾಜನಾದ ಸ್ವಾತಿ ತಿರುನಾಳ್ ಮಹಾರಾಜನ ಭೇಟಿಯಾಗುವ ಅವಕಾಶ ಆಕಸ್ಮಿಕವಾಗಿ ಒದಗಿತು. ಈತನಿಗೆ ಪ್ರಥಮವಾಗಿ ಮಲಯಾಳಂ ಭಾಷೆಯನ್ನು ಕೇಳುವ ಅವಕಾಶ ದೊರೆತದ್ದು ಅಲ್ಲಿಯೇ. 1839ರ ಏಪ್ರಿಲ್ನಲ್ಲಿ ಕೇರಳಕ್ಕೆ ಬಂದು ತಲ್ಲಿಚೇರಿಯ ಇಲ್ಲಿಕ್ಕುಣ್ಣುವಿನಲ್ಲಿ ನೆಲೆಸಿದ. ಅನಂತರ 1859ರ ವರೆಗೂ ಅಂದರೆ ಭಾರತವನ್ನು ಬಿಟ್ಟು ಹೊರಡುವವರೆಗೂ ತನ್ನ ಹೆಚ್ಚು ಕಾಲವನ್ನೆಲ್ಲ ಅಲ್ಲಿಯೇ ಕಳೆದು, ಅದನ್ನು ಮಲಯಾಳಂ ಭಾಷೆಯ ಅಭಿವೃದ್ದಿಗೆ ವಿನಿಯೋಗಿಸಿದ. ಜರ್ಮನಿಗೆ ಹಿಂತಿರುಗಿದ ಮೇಲೂ ತನ್ನ ತಂದೆಯೊಡನೆ ಸೇರಿ ಮಲಯಾಳಂ ಭಾಷೆಗಾಗಿ ಕೆಲಸ ಮಾಡಿದ. ಈತನ ನಿಘಂಟು ಕೆಲಸ ಪುರ್ತಿಯಾದದ್ದು ಜರ್ಮನಿಯಲ್ಲೆ. ಶಾಲಾ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಶಾಲೆಯ ಮಕ್ಕಳಿಗೆ ಉಪಯುಕ್ತವಾಗು ವಂತೆ ಈತ ಮಲಯಾಳಂನಲ್ಲಿ ಪಾಠಾಮಾಲಾ ಎಂಬ ಪಠ್ಯ ಪುಸ್ತಕವೊಂದನ್ನು ಸಿದ್ದಪಡಿಸಿದ. ಇದರಲ್ಲಿ ಗದ್ಯ ಭಾಗವನ್ನೆಲ್ಲ ತಾನೇ ಬರೆದು ಸೇರಿಸಿದ್ದಾನಲ್ಲದೆ ಪ್ರಾಚೀನ ಸಾಹಿತ್ಯಕೃತಿಗಳಿಂದ ಪದ್ಯಗಳನ್ನೂ ಹೊಸ ಯುಗದ ಕವನಗಳನ್ನೂ ಸಂಪಾದಿಸಿ ಕೊಟ್ಟಿದ್ದಾನೆ. ಈತ ಬರೆದ ಇತಿಹಾಸ ಪುಸ್ತಕ (ಕೇರಳ ಪೞಮ) ಎಂಬುದು ವಾಸ್ಕೋಡ ಗ್ಯಾಮನ ಆಗಮನದ ಕಾಲದಿಂದ ಹಿಡಿದು ಅನಂತರದ 31ವರ್ಷಗಳ ಅವಧಿಯ ಕೇರಳದ ಇತಿಹಾಸದ ಮೇಲೆ ಸಾಕಷ್ಟು ಬೆಳಕು ಚೆಲ್ಲುತ್ತದೆ. 1847ರ ತರುವಾಯ ರಾಜ್ಯ ಸಮಾಚಾರಂ ಮತ್ತು ಪಶ್ಚಿಮೋದಯಂ ಪತ್ರಿಕೆಗಳ ಸಂಪಾದಕನಾಗಿ ಗುಂಡರ್ಟ್ ತನ್ನ ಸ್ವಲ್ಪಕಾಲವನ್ನು ಮೀಸಲಾಗಿರಿಸಿದ. ಈ ಪತ್ರಿಕೆಗಳಲ್ಲಿ ಮೊದಲನೆಯದು ಸಂಪುರ್ಣವಾಗಿ ಕ್ರೈಸ್ತ ಧರ್ಮ ಪ್ರಸಾರಕ್ಕೆ ಮೀಸಲಾದದ್ದು. ಎರಡನೆಯದು ಇತಿಹಾಸ, ಭೂಗೋಳ, ಖಗೋಳಶಾಸ್ತ್ರ ಮತ್ತು ಇತರ ಅನೇಕ ಅಂದಿನ ಗಮನಾರ್ಹ ವಿಷಯಗಳನ್ನು ಒಳಗೊಂಡದ್ದು. ಈತ ಪತ್ರಿಕೆಯಲ್ಲಿ ಬರೆದ ಲೇಖನಗಳೆಲ್ಲ ಮುಂದೆ ಮಲಯಾಳಂ ರಾಜ್ಯ ಎನ್ನುವ ಕೃತಿಯಲ್ಲಿ ಒಟ್ಟಾಗಿ ಪ್ರಕಟಗೊಂಡವು. ಅನಂತರ ಜಾನ್ ಬನ್ಯನ್ನನ ಪಿಲ್ಗ್ರಿಮ್್ಸ ಪ್ರಾಗ್ರೆಸ್ ಎಂಬ ಪ್ರಸಿದ್ಧ ಗ್ರಂಥವನ್ನು ಈತ ಸಂಚಾರಿ ಕಳುಟಿ ಪ್ರಯಾಣಂ ಎಂಬ ಹೆಸರಿನಲ್ಲಿ ಭಾಷಾಂತರಿಸಿ ಪ್ರಕಟಿಸಿದ. ಗುಂಡರ್ಟ್ನ ಅತಿ ಮುಖ್ಯ ಕೃತಿಯಾದ ಮಲಯಾಳಂ-ಇಂಗ್ಲಿಷ್ ನಿಘಂಟು 1872ರಲ್ಲಿ ಪ್ರಕಟಗೊಂಡಿತು. ಇದರಲ್ಲಿ 25 ವರ್ಷಗಳ ಶ್ರಮದ ಫಲವನ್ನು ಕಾಣಬಹುದು. ಎಲ್ಲ ದರ್ಜೆಯ ಜನಗಳ ಆಡುಮಾತು ಮತ್ತು ಪ್ರಚಲಿತ ಸಾಹಿತ್ಯ, ಶಾಸ್ತ್ರಗ್ರಂಥಗಳಿಂದ ಇಲ್ಲಿ ಪದಗಳನ್ನು ಆಯಲಾಗಿದೆ. ಅರ್ಥೈಸುವಲ್ಲಿ ಶಾಸ್ತ್ರೀಯ ಕ್ರಮವನ್ನು ಅನುಸರಿಸಲಾಗಿದೆ. ಈ ನಿಘಂಟಿನ ವಿಶೇಷತೆಯೆಂದರೆ ಇದರಲ್ಲಿ ಎಲ್ಲ ಉಪಭಾಷಾ ರೂಪಗಳೂ ಗ್ರಾಮ್ಯಶಬ್ದಗಳೂ ಪೋರ್ಚುಗೀಸ್, ಪಾರಸಿ, ಹಿಂದೂಸ್ತಾನಿ, ಮತ್ತು ಇತರ ಭಾಷೆಗಳಿಂದ ಎರವಲಾಗಿ ಬಂದ ಪದಗಳೂ ಸೇರಿವೆ. ಪ್ರತಿಯೊಂದು ಪದದ ವ್ಯಾಕರಣ ಸ್ವರೂಪ, ಅದರ ಸಾಮಾನ್ಯ ಅರ್ಥಗಳನ್ನು ಸಕ್ರಮವಾಗಿ ಕೊಟ್ಟು ತಿಳಿಸಲಾಗಿದೆ. ಅನೇಕ ಕಡೆ ಪದಗಳಿಗೆ ಇತರೆ ಭಾಷಾಶಬ್ದಗಳೊಂದಿಗೆ ಇರುವ ಏಕ ಮೂಲವನ್ನು ಪತ್ತೆ ಹಚ್ಚಿ ತೋರಿಸಲಾಗಿದೆ.


ಗುಂಡರ್ಟನಿಗೆ ಬಹು ಭಾಷೆಗಳ ಪರಿಚಯವಿತ್ತಲ್ಲದೆ ಆತ ಅನೇಕ ಭಾಷೆಗಳಲ್ಲಿ ಪೂರ್ಣ ಪಂಡಿತನೂ ಆಗಿದ್ದ. ಜರ್ಮನ್, ಫ್ರೆಂಚ್, ಗ್ರೀಕ್, ಲ್ಯಾಟಿನ್, ಹೀಬ್ರು, ಇಂಗ್ಲಿಷ್, ಪರ್ಷಿಯನ್, ಬಂಗಾಳಿ, ಹಿಂದೂಸ್ತಾನಿ, ತೆಲುಗು, ಮಲಯಾಳಂ, ತಮಿಳು ಇತ್ಯಾದಿ ಹದಿನೆಂಟು ಭಾಷೆಗಳನ್ನು ಆತ ಕಲಿತಿದ್ದ.


ತಲ್ಲಿಚೇರಿಯ ಇಲ್ಲಿಕ್ಕುಣ್ಣುವಿನಲ್ಲಿ ಈತ ಕಳೆದ 20 ವರ್ಷಗಳಲ್ಲಿ ಸ್ವಲ್ಪ ಕಾಲ ಕರ್ನಾಟಕ ಹಾಗೂ ಮಲಯಾಳಂ ಜಿಲ್ಲೆಗಳಲ್ಲಿ ಶಾಲಾ ಇನ್ಸ್‌ಪೆಕ್ಟರಾಗಿ ಕೆಲಸ ಮಾಡಿದ. ಆ ಸಮಯದಲ್ಲಿ ಬೈಬಲ್ ಗ್ರಂಥವನ್ನು ಮಲಯಾಳಂನಲ್ಲಿ ವೇದಪುಸ್ತಕ ಪರಿಭಾಷಾ ಎಂಬ ಹೆಸರಿನಲ್ಲಿ ಅನುವಾದ ಮಾಡಿದ. ಹಾಗೆ ಮಾಡುವಾಗ ಹಳೆಯ ಒಡಂಬಡಿಕೆಯನ್ನು ಗ್ರೀಕ್ನಿಂದಲೂ ಹೊಸ ಒಡಂಬಡಿಕೆಯನ್ನು ಹೀಬ್ರುವಿನಿಂದಲೂ ನೇರವಾಗಿ ಈತ ಅವಲಂಬಿಸಿದ್ದಾನೆ. ಆಗ ಈತ ಬಳಿಸಿದ ಹೀಬ್ರು ಮತ್ತು ಗ್ರೀಕ್ ನಿಘಂಟುಗಳನ್ನು ಇಂದೂ ತಲ್ಲಿಚೇರಿಯ ಇಲ್ಲಿಕ್ಕುಣ್ಣುವಿನ ಇವನ ನಿವಾಸದಲ್ಲಿ ಸಂಗ್ರಹಿಸಿಡಲಾಗಿದೆ.


1843ರಲ್ಲಿ ಗುಂಡರ್ಟ್ ಕೇರಳೋಲ್ ಎಂಬ ಒಂದು ಕೃತಿಯನ್ನು ಪ್ರಕಟಿಸಿದ. ಅನೇಕ ತಾಳೆಗರಿಯ ಹೊತ್ತಗೆಗಳನ್ನೆಲ್ಲ ಅಭ್ಯಸಿಸಿ ಅವುಗಳನ್ನು ಇದರಲ್ಲಿ ವಿಮರ್ಶಿಸಲಾಗಿದೆ. ಇದಾದ ಎರಡುವರ್ಷಗಳ ಒಳಗೆ ರಂಜೊಗೊ ಮಾಲ ಎಂಬ ಹೆಸರಿನಲ್ಲಿ ಒಂದು ಸಾವಿರ ಗಾದೆಗಳ ಸಂಕಲನವೊಂದನ್ನು ಈತ ಹೊರತಂದ. 1851ರ ವೇಳೆಗೆ ಮಲಯಾಳಂ ಭಾಷಾ ವ್ಯಾಕರಣಂ ಗ್ರಂಥದ ಒಂದು ಭಾಗವನ್ನು ಪ್ರಕಟಿಸಿದ. 1860ರಲ್ಲಿ ಮಲಯಾಳಂ ವ್ಯಾಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ರೂಪದ ಪುಸ್ತಕವೊಂದನ್ನು ಬೆಳಕಿಗೆ ತಂದ. 1868ರಲ್ಲಿ ಸಂಪುರ್ಣ ವ್ಯಾಕರಣದ ತಿದ್ದಿದ ಆವೃತ್ತಿ ಹೊರಬಂತು. ಗುಂಡರ್ಟ್ ಜರ್ಮನಿಯಲ್ಲಿ ನಿಧನಹೊಂದಿದ. ಈತನ ಹೆಂಡತಿ ಇವನಿಗಿಂತ ಮೊದಲೇ ಅಂದರೆ 1855ರಲ್ಲಿ ನಿಧನಳಾಗಿದ್ದಳು. ತನ್ನ ಅಂತಿಮ ಕಾಲದವರೆಗೂ ಒಂದಲ್ಲ ಒಂದು ಭಾಷೆಗೆ ಗುಂಡರ್ಟ್ ಸೇವೆ ಸಲ್ಲಿಸುತ್ತಲೇ ಬಂದ. ಭಾರತದಿಂದ ಜರ್ಮನಿಗೆ ತೆರಳಿದ ಮೇಲೂ ಅಲ್ಲಿಂದ ಎರಡು ಮೂರು ಪತ್ರಿಕೆಗಳನ್ನು ಈತ ನಡೆಸುತ್ತಿದ್ದ.