ಗೀತರೂಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗೀತಕ್ಕೆ ಅಳವಡಿಸಿರುವ ನಾಟಕಗಳಿಗೆ ಈ ಹೆಸರಿದೆ. ಇವನ್ನು ಸಂಗೀತನಾಟಕ, ಗೇಯರೂಪಕ ಎಂದೂ ಕರೆವುದಿದೆ.

ಸಾಮಾನ್ಯವಾಗಿ ಹಿಂದಿನ ಮತ್ತು ಇಂದಿನ ಅನೇಕ ನಾಟಕಗಳಲ್ಲಿ ನಡುನಡುವೆ ವಿಫುಲವಾಗಿ ಛಂದೋಬದ್ಧವಾದ ಪದ್ಯಗಳು, ಹಾಡುಗಳೂ ಇರುತ್ತವೆ. ಅವನ್ನು ರಾಗವಾಗಿ ಹಾಡುವುದೂ ಸಂಪ್ರದಾಯ. ಆದರೆ ಅವುಗಳಲ್ಲಿ ಉಳಿದ ಭಾಗಗಳು ಗದ್ಯದಲ್ಲಿರುತ್ತವೆ. ಆದ್ದರಿಂದ ಆ ಭಾಗಗಳನ್ನು ಯಾರೂ ಹಾಡುವುದಿಲ್ಲ. ಹೀಗಾಗಿ ಅವನ್ನು ಗೀತರೂಪಕಗಳೆನ್ನಲಾಗದು. ಗೀತರೂಪಕಗಳಲ್ಲಿ ಎಲ್ಲವೂ ಗೇಯಯೋಗ್ಯವಾದ ಮಾತುಗಳೇ ಬರುತ್ತವೆ.

ರಂಗಭೂಮಿಯಲ್ಲಿ[ಬದಲಾಯಿಸಿ]

ಇಂದಿನ ರಂಗಭೂಮಿಯ ಪ್ರದರ್ಶನ ವೈವಿಧ್ಯಗಳಲ್ಲಿ ಗೀತರೂಪಕ ಪರಿಪೂರ್ಣ ವಾದ ಒಂದು ಪ್ರಭೇದವಾಗಿ ಬೆಳೆದಿದೆ. (ಮುಂದೆ ಆಪೆರ ಎಂಬ ಉಪಶಿರೋನಾಮೆ ಯಲ್ಲಿ ಇದರ ವಿವರಗಳಿವೆ.) ಇಲ್ಲಿ ಸಾಹಿತ್ಯ ಸಂಗೀತಗಳೆರಡಕ್ಕೂ ಒಂದಕ್ಕೊಂದು ಪೋಷಕವಾಗಿ, ಒಂದಕ್ಕೊಂದು ಎರಕಗೊಂಡಂತೆ ಜೊತೆ ಸೇರುತ್ತವೆ. ಸಂಗೀತದಲ್ಲಿ ರಸಾಭಿವ್ಯಕ್ತಿಗೆ ಅವಕಾಶ ಹೆಚ್ಚು. ಭಾವಗಳು ಪ್ರಭಾವಪೂರ್ಣಾವಾಗಿ, ತೀವ್ರತೆಯಿಂದ ಈ ಮಾಧ್ಯಮದಲ್ಲಿ ಪ್ರಕಟವಾಗುತ್ತವೆ; ಆದರೆ, ವಿವಿಧ ಭಾವ, ರಸಗಳ ಚಿತ್ರಣ ಒಡಮೂಡಿದರೂ ಸನ್ನಿವೇಶಗಳ ವಿವರವಾದ ಪರಿಸ್ಥಿತಿಗಳ ಅರಿವು ಮಾತುಗಳಷ್ಟು ಸ್ಪಷ್ಟವಾಗುವುದು ಇಲ್ಲಿ ಕಷ್ಟಸಾಧ್ಯ. ಈ ಕಾರ್ಯವನ್ನು ಇಲ್ಲಿ ಗೀತಗಳು ಮಾಡುತ್ತವೆ. ಆಗ ರಂಗಭೂಮಿಯ ಮೇಲೆ ಪರಿಪುರ್ಣವಾದ ಪ್ರದರ್ಶನ ಸ್ಥಿತಿಯೊದಗುತ್ತದೆ.

ಗೀತರೂಪಕಗಳಲ್ಲಿ ಸಾಹಿತ್ಯ ಅಥವಾ ಗೀತಗಳನ್ನು ಪಾತ್ರವರ್ಗ ಮತ್ತು ಹಿಮ್ಮೇಳದವರು ಹಾಡುತ್ತಾರೆ. ಸಂಗೀತ ವಾದ್ಯಮೇಳದ ರೂಪದಲ್ಲಿ ಮೊದಲಿನಿಂದ ಕೊನೆಯವರೆಗೂ ಜೊತೆಗೂಡಿರುತ್ತದೆ. ಕೆಲವೊಮ್ಮೆ, ರೂಪಕಗಳ ಆರಂಭ, ಮಧ್ಯಂತರ ಗಳಲ್ಲಿ ಪಾತ್ರಗಳೆರಡರ ಮಾತುಗಳ ನಡುವೆ, ವಿಶೇಷ ರಸಭಾವಗಳ ನಿರೂಪಣೆಗಾಗಿ ವಾದ್ಯಮೇಳವನ್ನು ಮಾತ್ರ ಹೊಂದಿಸಿಕೊಳ್ಳವುದೂ ಇದೆ.

ವರ್ಗೀಕರಣ[ಬದಲಾಯಿಸಿ]

ಸ್ಥೂಲವಾಗಿ ನಾವು ಗೀತರೂಪಕಗಳೆಂದು ಕರೆಯುವ ಪ್ರದರ್ಶನ ಪ್ರಕಾರವನ್ನು ಅವುಗಳ ನಿರೂಪಣಾ ವೈವಿಧ್ಯಗಳಿಗನುಸಾರವಾಗಿ ಹಲವು ರೀತಿಗಳಲ್ಲಿ ವರ್ಗೀಕರಿಸಲು ಸಾಧ್ಯವಾಗುತ್ತದೆ.

  • ಹಾಡುಗಳನ್ನು ಹಿನ್ನಲೆಯಲ್ಲಿ ಮಾತ್ರ ಇರಿಸಿಕೊಂಡು ಅವುಗಳಿಗನುಗುಣ ವಾಗಿ ಪಾತ್ರಗಳು ರಂಗದ ಮೇಲೆ ಮೂಕಾಭಿನಯವೆಸಗುವ ರೀತಿಯವು ಮೂಕರೂಪಗಳು.
  • ಬಿಳಿದೆರೆಯ ಹಿಂದೆ ಪಾತ್ರಗಳಿದ್ದು ಅವುಗಳ ಅಭಿನಯವನ್ನು ತೆರೆಯ ಮೇಲೆ ಛಾಯರೂಪದಲ್ಲಿ ಮೂಡಿಸುವ ವಿಧಾನವು ಛಾಯರೂಪಕ.
  • ಹಿನ್ನಲೆಯ ಹಾಡುಗಳಿಗನುಗುಣವಾಗಿ ರಂಗದ ಮೇಲೆ ಪಾತ್ರಗಳು ನೃತ್ಯಾಭಿನಯ ಮಾಡಿದಾಗ ಇಲ್ಲವೇ ಹಾಡುಗಳೇ ಇಲ್ಲದೆ ವಾದ್ಯಸಂಗೀತದ ಹಿನ್ನಲೆಯಲ್ಲಿ ಕೇವಲ ನಾಟ್ಯರೂಪದಲ್ಲಿ ನಿರೂಪಣೆಯೊದಗಿಸಿದಾಗ ಆವು ನೃತ್ಯರೂಪಕಗಳಾಗುತ್ತವೆ.

ಭಾರತದಲ್ಲಿ ಪ್ರಚಾರದಲ್ಲಿರುವ ಹಳೆಯ ಗೀತರೂಪಕಗಳು ಈ ಬಗೆಯ ನಿರ್ದಿಷ್ಟವಾದ ವಿಭಜನೆಗೆ ಅಳವಡುವುದಿಲ್ಲ. ಅವು ಗೀತನೃತ್ಯಗಳ ಪ್ರತ್ಯೇಕತೆಯನ್ನು ಇರಿಸಿಕೊಂಡು ರಚನೆಗೊಂಡವುಗಳೂ ಅಲ್ಲ; ಆ ರೀತಿಯಲ್ಲಿ ಬೆಳೆದುಬಂದುವುಗಳೂ ಅಲ್ಲ. ಗೀತರೂಪಕಗಳಲ್ಲಿ ನೃತ್ಯವೂ ನೃತ್ಯರೂಪಕಗಳಲ್ಲಿ ಗೀತವೂ ಬೆರೆದುಕೊಂಡೇ ರೂಪಕಗಳು ರಚನೆಯಾಗಿರುವ ಕಾರಣ ಭಾರತೀಯ ಸಂಗೀತವೆಂದರೆ ಗೀತವಾದ್ಯ ನೃತ್ಯಗಳೆಂಬ ತ್ರಿವಿಧಗಳ ಸಮ್ಮಿಲನವಾಗಿದ್ದುದೂ ಇರಬಹುದು. ಗೀತಂ ವಾದ್ಯಂಚ ನೃತ್ಯಂಚ ತ್ರಯಂ ಸಂಗೀತಮುಚ್ಯತೇ ಎನ್ನುವುದು ಸಂಗೀತಕ್ಕೆ ಹಿಂದಿನ ಶಾಸ್ತ್ರಕಾರರು ಹೇಳಿದ ಲಕ್ಷಣ. ಮುಂದೆ ಸಂಗೀತ ನೃತ್ಯಗಳು ತಮ್ಮ ಪ್ರತ್ಯೇಕತೆಯನ್ನು ಪ್ರದರ್ಶಿಸಿ ಬೆಳೆದಾಗ ಲಾಕ್ಷಣಿಕರು ಗೀತ ವಾದ್ಯೋಭಯಂ ಯತ್ರ ಸಂಗೀತಮಿತಿ ಕೇಚನ ಎಂದರು.

ಭಾರತೀಯ ಗೀತರೂಪಕಗಳು[ಬದಲಾಯಿಸಿ]

ಭಾರತೀಯ ಗೀತರೂಪಕಗಳ ಮೂಲವನ್ನು ಪ್ರಚಲಿತಶಕದ ಪ್ರಾರಂಭದಿಂದಲೇ ಗುರುತಿಸಬಹುದು. ಕಾಳಿದಾಸವಿಕ್ರಮೋರ್ವಶೀಯ ನಾಟಕದ ನಾಲ್ಕನೆಯ ಅಂಕ ಅಭಿನಯದೊಂದಿಗೆ ಹಾಡಿದ ಗೀತಗಳ ಸಂಕಲನವಾಗಿದೆ. ಪುರೂರವ ಊರ್ವಶಿಯ ವಿರಹದಿಂದ ಉನ್ಮತ್ತನಾಗಿ ವನದಲ್ಲಿ ಅಲೆಯುತ್ತ ಗಿಡಮರ ಪಕ್ಷಿಸಂಕುಲಗಳನ್ನು ಕುರಿತು ಊರ್ವಶಿಯನ್ನು ಕಂಡಿರಾ ಎಂದು ಕೇಳುವ ಸಂದರ್ಭಗಳೆಲ್ಲ ಸಂಸ್ಕೃತ ಭಾಷೆಯಲ್ಲಿರದೆ ಪ್ರಾಕೃತ ಅಪಭ್ರಂಶ ಗೀತಗಳಾಗಿವೆ. ಇವನ್ನು ರಂಗನಿರ್ದೇಶನದಲ್ಲಿ ಕವಿ ಚರ್ಚರಿಕಾ ಎಂದು ಕರೆದಿದ್ದಾನೆ. ಚರ್ಚರಿಕಾ ಎಂದರೆ ನೃತ್ಯಗೀತೆ, ಸಂಗೀತ ನೃತ್ಯವಿಧಾನವಿಶೇಷ ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆದುದರಿಂದ ಕಥಾಭಾಗಗಳನ್ನು ರಂಗದ ಮೇಲೆ ಪ್ರದರ್ಶಿಸುವಾಗ ಗೀತನೃತ್ಯರೂಪಕಗಳಾಗಿ ಪ್ರದರ್ಶಿಸುವ ಕ್ರಮವೂ ಭರತಖಂಡದಲ್ಲಿ ಹಿಂದಿನಿಂದಲೇ ಇತ್ತೆಂದು ಕಂಡುಬರುತ್ತದೆ.


ಸಂಪೂರ್ಣ ಕಥಾನಕವನ್ನು ಗೀತನೃತ್ಯವಾಗಿ ಪ್ರದರ್ಶಿಸಿದ ಆಧುನಿಕ ಗೀತರೂಪಕ ಗಳ ಮತ್ತು ನೃತ್ಯರೂಪಕಗಳ ಮೂಲವನ್ನು 12ನೆಯ ಶತಮಾನದ ಜಯದೇವ ಕವಿಯ ಗೀತಗೋವಿಂದ ಕಾವ್ಯದಲ್ಲಿ ಕಾಣುತ್ತೇವೆ. ಇದು ನೃತ್ಯಸಂಗೀತಗಳಿಂದಲೇ ಪ್ರದರ್ಶಿಸುವ ಸಲುವಾಗಿ ರಚಿಸಲ್ಪಟ್ಟ ಕಾವ್ಯವೆಂಬುದನ್ನು ಅಷ್ಟಪದಿಗಳಿಗೆ ಹೇಳಿರುವ ರಾಗತಾಳಗಳ ಸ್ಪಷ್ಟವಾದ ನಿರ್ದೇಶನದಿಂದ ಕಂಡುಕೊಳ್ಳಬಹುದು. ಈ ಸಂಸ್ಕೃತ ಕಾವ್ಯ 12 ಸರ್ಗಗಳಿಂದಲೂ 24 ಅಷ್ಟಪದಿಗಳಿಂದಲೂ ಕೂಡಿದೆ. ಇದನ್ನೇ ಅನುಸರಿಸಿದ ಇನ್ನೊಂದು ಸಂಸ್ಕೃತಗೀತ-ನೃತ್ಯರೂಪಕವೆಂದರೆ 16ನೆಯ ಶತಮಾನದ ಯತಿನಾರಾಯಣತೀರ್ಥರ ಕೃಷ್ಣಲೀಲಾ ತರಂಗಿಣಿ. ಈ ಕಾವ್ಯ 12 ತರಂಗಗಳಿಂದಲೂ ಹಲವು ಶ್ಲೋಕ, ಗದ್ಯನಿರ್ದೇಶನಗಳಿಂದಲೂ ಕೂಡಿದೆ.


ಕರ್ನಾಟಕ ಸಂಗೀತ ಪಿತಾಮಹಾರೆನಿಸಿದ ವಾಗ್ಗೇಯಕಾರ ತ್ಯಾಗರಾಜರು (1759-1847) ನೌಕಚರಿತ್ರೆ, ಪ್ರಹ್ಲಾದಭಕ್ತಿವಿಜಯ ಮತ್ತು ಸೀತಾರಾಮವಿಜಯ ಎಂಬ ಮೂರು ತೆಲುಗು ಸಂಗೀತನಾಟಕಗಳನ್ನು ಬರೆದಿದ್ದಾರೆ. ಅರುಣಾಚಲ ಕವಿರಾಯ (1711-1778) ಎಂಬುವವರು ತಮಿಳಿನಲ್ಲಿ ರಾಮನಾಟಕ ಎಂಬವ ಸಂಗೀತ ನಾಟಕವನ್ನು ರಚಿಸಿದ್ದಾರೆ. 19ನೆಯ ಶತಮಾನದಲ್ಲಿದ್ದ ಗೋಪಾಲಕೃಷ್ಣಭಾರತಿ ಎಂಬುವರಿಂದ ರಚಿತವಾದ ನಂದನಾರ್ ಚರಿತ್ರೆ ತಮಿಳಿನಲ್ಲಿ ಅತ್ಯಂತ ಪ್ರಸಿದ್ಧವಾದ ಸಂಗೀತನಾಟಕ ವೆನಿಸಿದೆ. ಇವುಗಳೆಲ್ಲವನ್ನು ಗೀತನಾಟಕ ಎನ್ನುವುದಕ್ಕಿಂತ ಸಂಗೀತನಾಟಕ ಎಂದು ಕರೆಯುವುದು ಉಚಿತ. ಭಕ್ತಶಿರೋಮಣಿಗಳೂ ಅಪ್ರತಿಮ ಸಂಗೀತವಿದ್ವಾಂಸರೂ ವಾಗ್ಗೇಯಕಾರರೂ ಆದ ಇವರ ಈ ನಾಟಕಗಳು ಅತ್ಯುತ್ತಮ ಸಂಗೀತಕೃತಿಮಾಲಿಕೆಗಳಾಗಿ ಕಂಗೊಳಿಸಿದವು. ರಂಗಭೂಮಿಯ ಮೇಲೆ ವಿವಿಧಪಾತ್ರಗಳು ಇವನ್ನು ಹಾಡುವಾಗ ಸಾಹಿತ್ಯಕ್ಕಿಂತಲೂ ಸಂಗೀತದ ಕಡೆಗೇ ಇವುಗಳ ಭಾರ ಹೆಚ್ಚಾಗುವುದು ಸ್ವಾಭಾವಿಕ ವಾದುದರಿಂದ ಆಧುನಿಕ ಗೀತರೂಪಕಗಳಿಗೆ ಇವನ್ನು ಮೊದಲ ಮೆಟ್ಟಲುಗಳೆನ್ನಬಹುದು.

ಹೀಗೆಯೇ, ಉತ್ತರ ದಕ್ಷಿಣ ಕನ್ನಡ ಜಿಲ್ಲೆಗಳ ಯಕ್ಷಗಾನ, ಕೇರಳಕಥಕ್ಕಳಿ ತಮಿಳುನಾಡಿನ ಭಾಗವತಮೇಳ, ಆಂಧ್ರದ ಕೂಚುಪುಡಿಗಳಲ್ಲೂ ಇಂದಿನ ಗೀತರೂಪಕಗಳ ಮೂಲವನ್ನು ಗುರುತಿಸಬಹುದು. ಕಥಾನಕವನ್ನು ಹಿಮ್ಮೇಳವಾಗಿ ಹಾಡುವುದು. ರಂಗದಲ್ಲಿ ಉಚಿತವಾದ ವೇಷಭೂಷಣಗಳನ್ನು ಧರಿಸಿದ ಪಾತ್ರವರ್ಗ ಹಾಡುಗಳಿಗನುಗುಣವಾಗಿ ನೃತ್ಯ, ಅಭಿನಯಗಳನ್ನೆಸಗುವುದು- ಇದು ಈ ಬಗೆಯ ಪ್ರದರ್ಶನಗಳಲ್ಲಿ ಕಂಡುಬರುವ ಸಾಮಾನ್ಯಕ್ರಮ. ಕನ್ನಡದ ಯಕ್ಷಗಾನದಲ್ಲಿ ಪಾತ್ರಗಳಿಗೆ ನೃತ್ಯದೊಂದಿಗೆ ಮಾತುಗಾರಿಕೆಗೂ ಅವಕಾಶವಿದೆ. ಕಥಕಳಿಯಲ್ಲಿ ಪಾತ್ರಗಳ ಕಾರ್ಯವೆಲ್ಲವೂ ನೃತ್ಯ, ಮೂಕಾಭಿನಯಗಳ ಮೂಲಕವೇ ಸಾಗುತ್ತದೆ. ಆದುದರಿಂದ ಈ ಬಗೆಯ ಪ್ರದರ್ಶನಗಳು ಗೀತ ನೃತ್ಯಸಂಗೀತಗಳಿಂದ ಕೂಡಿದಂಥವು, ಅಷ್ಟೆ.

ಆಪೆರ[ಬದಲಾಯಿಸಿ]

ಇಂದು ನಾವು ಗೀತರೂಪಕ ಎನ್ನುವಾಗ ಪಾಶ್ಚಾತ್ಯನಾಟಕ ಪ್ರಕಾರಗಳಲ್ಲೊಂದಾದ ಆಪೆರ ಎಂಬ ನಿರೂಪಣ ವಿಧಾನವೊಂದನ್ನು ಲಕ್ಷ್ಯದಲ್ಲಿರಿಸಿ ಕೊಂಡಿರುತ್ತೇವೆ. ಪಾಶ್ಚಾತ್ಯ ವಿದ್ವಾಂಸರು ಆಪೆರಗಳ ಮೂಲವನ್ನು ಗ್ರೀಕ್ ದುರಂತನಾಟಕಗಳಿಗೆ ಕೊಂಡೊಯ್ಯುತ್ತಾರೆ. ದುರಂತ ಚಿತ್ರಣವನ್ನು ಕಾವ್ಯ, ಸಂಗೀತ, ನೃತ್ಯಗಳ ಮೂಲಕ ಪ್ರದರ್ಶಿಸುವ ವಿಧಾನದಿಂದಲೇ ಆಪೆರ ವಿಧಾನಗಳ ಅನುಸರಣೆ ಯಿಂದಲೇ ಇಂದಿನ ಗೀತರೂಪಕಗಳು ಉಂಟಾದುವು ಎಂದೂ ಹೇಳುತ್ತಾರೆ. ಇಂದು ನಾವು ಆಪೆರ ಎಂದು ಖಚಿತವಾಗಿ ಕರೆಯುವ, ಪಾಶ್ಚಾತ್ಯ ರಂಗಭೂಮಿ ಪ್ರದರ್ಶನ ಪ್ರಕಾರ ಹುಟ್ಟಿದುದು ಇಟಲಿಯಲ್ಲಿ, 16ನೆಯ ಶತಮಾನದ ಬರೋಕ್ ಕಲಾವಿಧಾನ ಪ್ರಬುದ್ಧ ಸ್ಥಿತಿಯಲ್ಲಿದ್ದಾಗ. ಸದ್ಯಕ್ಕೆ ಸಿಕ್ಕಿರುವ ಸಾಹಿತ್ಯದ ದೃಷ್ಟಿಯಿಂದ ಹೇಳುವುದಾದರೆ ಇಟಲಿಯ ಪ್ರಥಮ ಆಪೆರ ಜಾಕೊಪೊ ಪೆರಿಯ (1597) ದಾಫ್ನೆ. ಈಗ ಇದರ ಸಂಗೀತ ವಿವರಗಳು ಕಳೆದುಹೋಗಿವೆ. ನಿಜವಾಗಿ ಆಪೆರಗಳನ್ನು ಮೊದಲ ಭಾರಿಗೆ ಸಮರ್ಥವಾಗಿ ರಚಿಸಿದವನೆಂದರೆ ಮಾಂಟೆವೆರ್ಡಿ. ಮೊದಲ ಆಪೆರ ಭವನ ನಿರ್ಮಾಣವಾದದ್ದು ವೆನಿಸಿನಲ್ಲಿ, 1637ರಲ್ಲಿ. ಸಂಗೀತ ಭಾಷಣ ಮತ್ತು ಮೇಳ ವಾದ್ಯ ಹಾಗೂ ಹಾಡುಗಾರಿಕೆಗಿದ್ದ ಪ್ರಾಶಸ್ತ್ಯ ಕಡಿಮೆಯಾಗಿ ರಾಗಕ್ಕೂ ತಜ್ಞ ಹಾಡುಗಾರನಿಗೂ ಪ್ರಾಧಾನ್ಯ ಬಂದಾಗ ಆಪೆರಕ್ಕೆ ನಿರ್ದಿಷ್ಟವಾದ ಒಂದು ರೂಪು ಬಂದಿತೆನ್ನಬಹುದು. ಪ್ರಾರಂಭದಲ್ಲಿ ಪುರಾಣಗಳಿಂದ ಆಪೆರ ಕಥಾವಸ್ತುವನ್ನು ಆಯ್ಕೆ ಮಾಡುತ್ತಿದ್ದರು. ಅನಂತರ ಹರ್ಷನಾಟಕಗಳು ಪ್ರಹಸನಗಳು ಬಳಕೆಗೆ ಬಂದುವು. 17ನೆಯ ಶತಮಾನದಲ್ಲಿ ಮೂರು ಅಂಕಗಳ ಆಪೆರ ಸೀರಿಯ ಉದಯವಾಗಿ ಹಿಂದಿನ ಆಪೆರಗಳಲ್ಲಿರುತ್ತಿದ್ದ ಅಸಂಬದ್ಧ ಸಂಗತಿಗಳು ಅತ್ಯಲಂಕಾರ ಮಾತುಕತೆಗಳು ಕಡಿಮೆಯಾದವು. ಆಪೆರ ಬಫಾದಲ್ಲಿ ಸಂಗೀತವಿಲ್ಲದ ಸಂಭಾಷಣೆಗೆ ಸ್ಥಾನವಿರಲಿಲ್ಲ. ಆಪೆರಕಾಮೀಕ್ ಬಂದ ಮೇಲೆ ಸಂಗೀತವಿಲ್ಲದ ಸಂಭಾಷಣೆಗೆ ಎಡೆಸಿಕ್ಕಂತಾಯಿತು. ಫ್ರೆಂಚ್ ಮಹಾಕ್ರಾಂತಿಯಾದ ಮೇಲೆ, ನಯನಮನೋಹರವೂ, ರಸೋದ್ರೇಕ ಉಳ್ಳವೂ ಆದ ಅನೇಕ ಆಪೆರಗಳು ನಿರ್ಮಾಣವಾದವು. ಅನಂತರ, ಐತಿಹಾಸಿಕ ವಸ್ತುವನ್ನುಳ್ಳ, ಧಾರ್ಮಿಕ, ಮನೋಭಾವವನ್ನು ಶ್ರುತಪಡಿಸುವ ತೀವ್ರರಾಗಭಾವಗಳನ್ನುಳ್ಳ ಗ್ರಾಂಡ್ ಆಪೆರಗಳು ಬಂದವು. ಆಪೆರ ಕರ್ತೃಗಳಲ್ಲಿ ಬಹು ಮುಖ್ಯರಾದವರೆಂದರೆ ಗ್ಲುಕ್, ಮೋಟ್ಸಾರ್ಟ್, ವೆರ್ಡಿ, ಪುಷೀನಿ.


ಆಪೆರಕಾಮೀಕ್ನಿಂದ ಕವಲೊಡೆದು ಮೇಲೆದ್ದ ಒಂದು ಬಗೆಯ ನಾಟಕವನ್ನು ಆಪೆರೆಟ್ಟ ಎನ್ನುತ್ತಾರೆ. ಇವುಗಳ ವಸ್ತು ಲಘುವೂ ಕರುಳು ಕರಗಿಸುವಂಥದ್ದೂ ಆಗಿರುತ್ತದೆ. ಅನೇಕ ವೇಳೆ ಇವುಗಳಲ್ಲಿ ವ್ಯಂಗ್ಯ ಪ್ರಧಾನವಾಗಿರುತ್ತದೆ. ಸಂಭಾಷಣೆ ಗದ್ಯದಲ್ಲಿದ್ದರೂ ಹಿತವಾದ ಲಘುಸಂಗೀತ ಉದ್ದಕ್ಕೂ ಇರುತ್ತದೆ. ಆಫೆನ್ಬಾಕ್, ಜೋಹಾನ್ ಸ್ಟ್ರುಅಸ್ (ಕಿರಿಯ), ಗಿಲ್ಬರ್ಟ್ ಮತ್ತು ಸಲಿವನ್, ವಿಕ್ಟರ್ ಹರ್ಬಿರ್ಟ್, ರಾಮ್ಬರ್ಗ್ ಸಿಗ್ಮಂಡ್-ಇವರು ಪ್ರಸಿದ್ಧ ಆಪರೆಟ್ಟ ಕರ್ತೃಗಳು.


ಮಾರಿಯಾ ಕಲಾಸ್, ಲಿಸಾ ಡೆಲ್ಲ ಕಾಸಾ, ಸಿಯೊ ಪಿಂತ್ಯಾ, ಆನಾ ಲಿಸೆ ರಾಥೆನ್ಬರ್ಗರ್, ಎನ್ರಿಕೊ ಕರೂಸೊ, ಜಾನ್ ಪಿಯರ್ಸ್, ಜೋನ್ ಸದರ್ಲೆಂಡ್, ಕ್ಯಾತಲೀನ್ ಫೆರಿಯರ್ ಮೊದಲಾದವರು. ಆಧುನಿಕರಲ್ಲಿ ಖ್ಯಾತ ಆಪೆರ ಕಲಾವಿದರು.

ಪಾಶ್ಚಾತ್ಯ ಆಪೆರಗಳು ಒಬ್ಬ ವ್ಯಕ್ತಿಯ ಕಲ್ಪನೆ ಅಥವಾ ರಚನೆಗಳಲ್ಲ; ನಾಲ್ಕು ಮಂದಿ ಪ್ರತಿಭಾಶಾಲಿಗಳ ಒಮ್ಮತದ ನಿರ್ಮಾಣಗಳು. ಸಂಯೋಜಕನಾದವ ವಸ್ತು ಮತ್ತು ಇಡಿಯ ರೂಪಕದ ರೀತಿ, ನೀತಿಗಳ ವಿವರಗಳನ್ನು ನಿಶ್ಚಯಿಸುತ್ತಾನೆ; ಸಾಹಿತಿ ಹಾಡುಗಳನ್ನು ರಚಿಸುತ್ತಾನೆ; ಸಂಗೀತ ವಿದ್ವಾಂಸ ಇಡಿಯ ರೂಪಕವನ್ನು ಸ್ವರ ಸಂಯೋಜನೆಗೆ ಒಳಪಡಿಸುತ್ತಾನೆ; ನಿರ್ದೇಶಕ ರಂಗಸಿದ್ಧತೆ, ವೇಷಭೂಷಣ, ಪರಿಕರಗಳನ್ನು ತೀರ್ಮಾನಿಸುತ್ತಾನೆ. ಆಪೆರಗಳಲ್ಲಿ ವಾದ್ಯಸಂಗೀತಕ್ಕೆ ತುಂಬ ಪ್ರಾಮುಖ್ಯ ಇದೆ. ವಿವಿಧ ಸನ್ನಿವೇಶಗಳಲ್ಲಿ ಭಾವಪ್ರದರ್ಶನ, ಪರಿವರ್ತನೆ, ತೀವ್ರತೆ, ಪ್ರಖರತೆಗಳನ್ನು ಪರಿಣಾಕಾರಿಯಾಗಿ ನಿರೂಪಿಸಲು ವಾದ್ಯಮೇಳ ಸಂಗೀತ ಅತ್ಯಂತ ಸಹಕಾರಿಯಾಗು ವಂತೆ ಮಾಡಿದ್ದಾರೆ. ಕಥಾ ಸಂದರ್ಭಗಳಿಗೆ ಪೋಷಕವಾಗಿ ಮತ್ತು ರೂಪಕದ ಮಧ್ಯಂತರಗಳಲ್ಲಿ ನೃತ್ಯವನ್ನೂ ಸಂಯೋಜಿಸುತ್ತಾರೆ. ಆದರೆ ಇಡಿಯ ಪ್ರದರ್ಶನವೇ ನೃತ್ಯಗಳಿಂದ ಪುರೈಸುವ ರೀತಿ ರೂಪುಗೊಂಡಾಗ ಬ್ಯಾಲೆ ಎಂಬ ಇನ್ನೊಂದು ಬಗೆಯ ನಿರೂಪಣ ವಿಧಾನ ರೂಪುಗೊಳ್ಳುತ್ತದೆ.


ಪಾಶ್ಚಾತ್ಯ ಆಪೆರಗಳು ಅವುಗಳ ವಸ್ತುಭಿನ್ನತೆಯಿಂದಾಗಿ ಎರಡು ವಿಧಗಳಲ್ಲಿ ವರ್ಗೀಕರಣ ಹೊಂದಿವೆ. ಆಪೆರ ಗ್ರಾಂಡ್ ಎಂಬುದು ಗಂಭೀರವಾದ ಕಥಾ ವಸ್ತುವನ್ನೊಳಗೊಂಡಿದ್ದು ಕಾರುಣ್ಯ, ದುರಂತಗಳಲ್ಲಿ ಅಂತ್ಯವಾಗುತ್ತದೆ. ಆಪೆರ ಕಾಮಿಕ್ ಎಂಬುದು ಇನ್ನೊಂದು ವರ್ಗ. ಇದರಲ್ಲಿನ ಕಥಾಸನ್ನಿವೇಶದಲ್ಲಿ ಹಾಸ್ಯ, ವಿಡಂಬನೆಗಳಿಗೆ ಅವಕಾಶ ಹೆಚ್ಚು. ಪಾತ್ರಧಾರಿಗಳಲ್ಲಿ ಹೆಚ್ಚಿನವರು ವಿದೂಷಕವರ್ಗಕ್ಕೆ ಸೇರಿದವರು. ವಿನೋದಪೂರ್ಣವಾದ ಹಾಡುಗಳೂ ಕೆಲವೊಮ್ಮೆ ಗದ್ಯ ಸಂಭಾಷಣೆಗಳೂ ಇದರಲ್ಲಿ ಕಾಣಿಸಿಕೊಳ್ಳುತ್ತವೆ. ಕೇವಲ ಉತ್ತೇಜಕ ಪರಿಸರಗಳ ಪ್ರದರ್ಶನ ವಿನ್ಯಾಸಗಳಿಂದಲೇ ಈ ವರ್ಗದ ಆಪೆರಗಳು ಮುಂದುವರಿಯುತ್ತವೆ.


ಸಂಗೀತದ ಸ್ಥಾನ[ಬದಲಾಯಿಸಿ]

ಗೀತರೂಪಕಗಳು ಸಾಹಿತ್ಯ ಸಂಗೀತಗಳ ಸಂಗಮ. ಆದರೆ ಪ್ರದರ್ಶನಾವಕಾಶದಲ್ಲಿ, ಅವು ಒಂದನ್ನೊಂದು ಮೀರಿಸುವಂತೆ ತಮ್ಮ ವೈಯಕ್ತಿಕತೆಯನ್ನು ಮೆರೆಸಬಾರದು. ಸಾಹಿತ್ಯ ವೈಖರಿಯ ಅಥವಾ ಸಂಗೀತ ಸೌಂದರ್ಯದ ಪ್ರದರ್ಶನ ಗೀತರೂಪಕಗಳ ಉದ್ದೇಶವಲ್ಲ. ಇಡಿಯ ರೂಪಕದ ಯಾವುದೇ ಒಂದು ಭಾಗವೂ ಕೇವಲ ಸಾಹಿತ್ಯ ಇಲ್ಲವೆ ಸಂಗೀತಕ್ಕೆ ಪ್ರಧಾನ್ಯ ತೋರಿಸುವ ಲಕ್ಷಣವನ್ನು ಹೊಂದಿರಬಾರದು. ಸಂಗೀತ ಸಾಹಿತ್ಯಗಳು ಪ್ರತಿಯೊಂದು ಹೆಜ್ಜೆಗೂ ಒಂದನ್ನೊಂದು ಅನುಸರಿಸಬೇಕು; ಒಂದರಲ್ಲೊಂದು ಬೆರೆಯಬೇಕು; ಒಂದೇ ಆಗಿ ಕಂಗೊಳಿಸಬೇಕು.


ಹಿನ್ನಲೆಯ ವಾದ್ಯಮೇಳ ಗೀತರೂಪಕಗಳಲ್ಲಿ ಪ್ರಮುಖವಾದ ಒಂದು ಅಂಗ. ಆದರೆ ಇದು ಯಾವುದೇ ಒಂದು ವಾದ್ಯವೈಖರಿಯನ್ನು ಪ್ರದರ್ಶಿಸುವ ಅಂಗವಲ್ಲ. ಒಂದು ಭಾವಪ್ರತಿಪಾದನೆಯ ಅವಕಾಶದಲ್ಲಿ ಒಂದೊಂದು ವಾದ್ಯ ವಿಶೇಷ ಪ್ರಮುಖಪಾತ್ರವಹಿಸಿದರೂ ಅವುಗಳೆಲ್ಲವುಗಳ ಒಮ್ಮತವೇ ಕೊನೆಯಲ್ಲಿ ಉಳಿಯುವಂತಾಗಬೇಕು. ವಾದ್ಯಮೇಳದ ಸಾಮೂಹಿಕ ಧ್ವನಿರೂಪಕದ ಸಾಹಿತ್ಯವನ್ನು ಮುಳುಗಿಸಬಾರದು; ಅಭಿನಯಕ್ಕೆ ರಸಾನುಭವಕ್ಕೆ ಅದು ಆತಂಕವಾಗಬಾರದು.


ಗೀತರೂಪಕಗಳಲ್ಲಿ ಸಾಹಿತ್ಯ ಅನಿವಾರ್ಯವಾದರೂ ಅದು ಕಾವ್ಯಲಕ್ಷಣಗಳನ್ನೆಲ್ಲ ಹೊಂದಿರಬೇಕಾಗಿಲ್ಲ. ಚಿಂತನಾವಕಾಶವುಳ್ಳ ಸಾಹಿತ್ಯದ ಸ್ವಾರಸ್ಯನುಭವ ಓದು ಗಬ್ಬವಾಗಿ ರಂಜಿಸಬಹುದಲ್ಲದೆ ರಂಗಭೂಮಿ ಪ್ರದರ್ಶನಗಳಲ್ಲಿ ಕಂಗೊಳಿಸಲಾರದು. ವಾದ್ಯಮೇಳ ಸಂಗೀತದ ಹೊನಲಿನಲ್ಲಿ, ರಂಗವ್ಯವಸ್ಥೆ, ವೇಷಭೂಷಣಗಳ ಅಪುರ್ವ ಶೋಭೆಗಳಲ್ಲಿ ಪ್ರದರ್ಶನ ಸಾಗುತ್ತಿರುವಾಗ ವಿರಾಮ ವಿಶ್ಲೇಷಣಾರ್ಹವಾದ ಸಾಹಿತ್ಯ ಸ್ವಾರಸ್ಯಾನುಭವಕ್ಕೆ ಅವಕಾಶ ದೊರೆಯುವುದಿಲ್ಲ. ಸಂಗೀತದಲ್ಲಿ ಮೂಡಿದ ಭಾವಗಳನ್ನು ಸ್ಪಷ್ಟಪಡಿಸುವ, ಕಥಾನಕವನ್ನು ವಿವರಿಸಿ ಮುಂದುವರಿಸುವ, ಸುಲಭ ಸ್ವರಸಂಯೋಜನೆಗೆ ಅವಕಾಶವಿರುವಂತೆ ಲಾಲಿತ್ಯಪುರ್ಣವಾದ ಪದರಚನೆಗಳುಳ್ಳ, ಅಂತ್ಯಪ್ರಾಸಹಿತವಾದ ಸಾಹಿತ್ಯವೇ ಗೀತರೂಪಕಗಳಿಗೆ ಉತ್ತಮ ಸಾಹಿತ್ಯವೆನಿಸುತ್ತದೆ.


ಗೀತರೂಪಕ ಸಂಗೀತ ಕಥಾವಸ್ತುವಿನ ಭಾವ, ರಸಗಳನ್ನು ಪ್ರತಿಬಿಂಬಿಸುವಂತಿರ ಬೇಕು. ಇವುಗಳ ಸಂಗೀತ ಮಾರ್ಗಪದ್ಧತಿಯಲ್ಲೇ ಇರಬೇಕಾದ ಅವಶ್ಯವಿಲ್ಲ. ಭಾರತೀಯ ಮಾರ್ಗಸಂಗೀತ ಪದ್ಧತಿಯಲ್ಲಿ ರಾಗಗಳು ಕರುಣ, ಶೃಂಗಾರ ವೀರರಸಗಳನ್ನು ಪ್ರತಿಬಿಂಬಿಸಿದಷ್ಟು ಪ್ರಭಾವಯುತವಾಗಿ ಉಳಿದ ರಸಗಳನ್ನು ಪ್ರತಿಪಾದಿಸುವುದಿಲ್ಲ. ಹಿಂದಿನ ಸಂಗೀತ ವಿದ್ವಾಂಸರು, ವಾಗ್ಗೇಯಕಾರರು, ಎಲ್ಲರೂ ಪರಮಭಾಗವತರೂ ಭಕ್ತಿಪಂಥಿಗಳೂ ಆಗಿದ್ದು ಸಂಗೀತವನ್ನು ಪರಮಾರ್ಥ ಸಾಧನಮಾರ್ಗವೆಂದು ತಿಳಿದಿದ್ದರು. ಅಂಥವರಿಗೆ ಲೌಕಿಕ ರೀತಿನೀತಿಗಳಿಗಾಗಿ ಸಂಗೀತವನ್ನು ಬಳಸುವ ಅವಶ್ಯಕತೆಯಾಗಲಿ ಔಚಿತ್ಯವಾಗಲಿ ಕಾಣಿಸಲಿಲ್ಲ. ಆದುದರಿಂದ ಭಾರತೀಯ ಮಾರ್ಗ ಸಂಗೀತದಲ್ಲಿ ಹಾಸ್ಯ, ಅದ್ಭುತ, ಭೀಭತ್ಸ, ರೌದ್ರ ಮೊದಲಾದ ಯಶಸ್ವೀ ನಿರೂಪಣ ಕಷ್ಟಸಾಧ್ಯವಾಗುತ್ತದೆ. ರಂಗಭೂಮಿಯ ಮೇಲೆ ಎಲ್ಲ ರಸಗಳ ಪ್ರತಿಪಾದನೆಯೂ ಅನಿವಾರ್ಯ. ಆದುದರಿಂದ ದೇಶ್ಯರಾಗಗಳೂ ರಸಭಾವಗಳಿಗನುಗುಣವಾಗಿ ಮೇಳೈಸಿದ ಸಂಗೀತ ಸ್ವರಗಳೂ, ಮಿಶ್ರರಾಗಗಳು ಲಲಿತ ಅಥವಾ ಸುಗಮ ಸಂಗೀತ ಎನಿಸಿ ಗೀತರೂಪಕಗಳಲ್ಲಿ ಮಾರ್ಗಸಂಗೀತದೊಡನೆ ಪ್ರಮುಖ ಸ್ಥಾನ ಪಡೆಯಬೇಕಾಗುತ್ತದೆ.


ಸಾಹಿತ್ಯ ಸಂಗೀತಗಳೆರಡರ ಎರಕವಾದ ಗೀತರೂಪಕದ ನಿರ್ಮಾಣ ಇಬ್ಬಗೆಯಲ್ಲಾಗಬಹುದು. ಸಾಹಿತಿ ವಸ್ತು ವಸ್ತುವನ್ನು ಆರಿಸಿಕೊಂಡು ಉಚಿತನುಡಿಗಳಿಂದ ರೂಪಕವನ್ನು ಪುರೈಸಿದ ಬಳಿಕ ಸಂಗೀತಗಾರ ಆ ಹಾಡುಗಳಿಗೆ ಸನ್ನಿವೇಶಗಳಿಗೆ ಒಪ್ಪುವ ಸ್ವರಸಂಯೋಜನೆಯನ್ನು ಮಾಡುವುದು ಒಂದು ವಿಧದ ರಚನಾಕ್ರಮ. ಸಂಗೀತಗಾರ ವಸ್ತುವಿನ ರಚನಾವಿಧಾನವನ್ನು ಕಲ್ಪಿಸಿಕೊಂಡು ವಿವಿಧ ಸನ್ನಿವೇಶಗಳಿಗೆ ಮತ್ತು ಹಾಡುಗಳ ಸ್ಥಳಗಳಿಗೆ ಅನುಗುಣವಾದ ಸ್ವರಸಂಯೋಜನೆಯನ್ನು ಪುರೈಸಿದ ಬಳಿಕ ಗೀತಭಾಗಗಳನ್ನು ರಚಿಸುವ ಹೊಣೆಯನ್ನು ಸಾಹಿತಿಗೊಪ್ಪಿಸುವುದು ಎರಡನೆಯ ವಿಧ. ಸಂಗೀತ ಸಾಹಿತ್ಯಗಳೆರಡರಲ್ಲೂ ರಚನಾಶಕ್ತಿಯನ್ನು ಹೊಂದಿದವರು ವಿರಳವಾದುದರಿಂದ ಕವಿ ಮತ್ತು ಸಂಗೀತಗಾರರ ಈ ರೀತಿಯ ಪರಸ್ಪರ ಸಹಕಾರ ಅನಿವಾರ್ಯವಾಗುತ್ತದೆ. ಸಾಮಾನ್ಯ ಸಂಗೀತಜ್ಞಾನವಿದ್ದ ಸಾಹಿತಿ, ಸಾಹಿತ್ಯಾಭಿರುಚಿವುಳ್ಳ ಸಂಗೀತಗಾರ, ಇವರಿಂದ ನಿರ್ಮಾಣವಾದ ಗೀತರೂಪಕಗಳು ಉತ್ತಮವಾಗಿರುತ್ತವೆ. ಆದರೂ, ಸಾಹಿತಿ ಮತ್ತು ಸಂಗೀತಗಾರರು ತಮಗೆ ಪಾಂಡಿತ್ಯವಿಲ್ಲದ ಕ್ಷೇತ್ರದಲ್ಲಿ ಎಷ್ಟೊಂದು ಅಭಿರುಚಿಯುಳ್ಳವರಾಗಿದ್ದರೂ ಒಬ್ಬರೊಡನೊಬ್ಬರು ಎಷ್ಟೇ ಸಹಮತದಿಂದ ವರ್ತಿಸಿದರೂ ಭಾವರಸಗಳ ಪರಿಪೋಷಣೆಯಲ್ಲಿ ಹೆಜ್ಜೆ ಹೆಜ್ಜೆಗೂ ಏಕತ್ವವನ್ನು ಸಾಧಿಸಿ ಗೀತರೂಪಕಗಳನ್ನು ಪರಿಪುರ್ಣಗೊಳಿಸುವುದು ಅಷ್ಟೊಂದು ಸುಲಭವಲ್ಲ. ಆದುದರಿಂದ ಸಂಗೀತ-ಗೀತ ಅಥವಾ ಧಾತು ಮಾತುಗಳೆರಡೂ ಒಬ್ಬನಿಂದಲೇ, ಎಂದರೆ ವಾಗ್ಗೇಯ ಕಾರನಿಂದ ರಚನೆಗೊಂಡ ಗೀತರೂಪಕಗಳು ಮಾತ್ರ ಅತ್ಯುತ್ತಮ ಗೀತರೂಪಕಗಳಾಗುತ್ತವೆ.


ಆಧುನಿಕ ಗೀತರೂಪಕಗಳಲ್ಲಿ ಪೌರಾಣಿಕ, ಚಾರಿತ್ರಿಕ, ಅಥವಾ ಕಾಲ್ಪನಿಕವಾದ ನಿರುಪಾಧಿಕ ವಸ್ತುಗಳಿರುವಂಥವು. ಮತ್ತು ಲಘು ವಿನೋದ ಅಥವಾ ಕುಚೇಷ್ಟೆಯೇ ಉದ್ದೇಶವಾಗಿರುವ ವಿಡಂಬನಾತ್ಮಕ ರೂಪಕಗಳು ಎಂಬ ಎರಡು ವರ್ಗಗಳನ್ನು ಗುರುತಿಸಬಹುದು. ಮೊದಲನೆಯ ವರ್ಗದಲ್ಲಿ ಸಾಹಿತ್ಯ ಸಂಗೀತಗಳೆರಡಕ್ಕೂ ಸಮಾನವಾದ ಪ್ರಾಧಾನ್ಯ. ಗೀತಗಳು ಕಾವ್ಯಲಕ್ಷಣಗಳನ್ನೂ ಸಂಗೀತವು ಮಾರ್ಗಸಂಪ್ರದಾಯವನ್ನು ಹೆಚ್ಚಾಗಿ ಹೊಂದಿರುತ್ತದೆ. ಕೆಲವೊಮ್ಮೆ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆಯುವುದೂ ಇದೆ. ವಿಡಂಬನ ವರ್ಗದಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯ ಹೆಚ್ಚು. ಗೀತಗಳೆಲ್ಲವೂ ಸಾಮಾನ್ಯವಾಗಿ ಜಾನಪದಶೈಲಿಯಲ್ಲಿರುತ್ತವೆ ಅಥವಾ ಪದ್ಯ ಗಂಧಿ ಗದ್ಯಗಳಾಗಿರುತ್ತವೆ. ಸರಳ ರಗಳೆಗಳಾಗಿರುವುದೂ ಉಂಟು. ಇಂಥ ರೂಪಕಗಳಲ್ಲಿ ಸಾಹಿತ್ಯದ ಪ್ರತಿಯೊಂದು ಶಬ್ದವೂ ಅರ್ಥವಾಗದಿದ್ದಲ್ಲಿ ಸ್ವಾರಸ್ಯಾನುಭವಕ್ಕೆ ಕೊರತೆ ಯಾಗುತ್ತದೆ. ಸಂಗೀತ ಇಲ್ಲಿ ಕೇವಲ ಹಿನ್ನಲೆಯನ್ನಾಶ್ರಯಿಸುತ್ತದೆ; ಕೆಲವೊಮ್ಮೆ ಮಧ್ಯಂತರಗಳಲ್ಲಿ ಸ್ವಲ್ಪ ಪ್ರಾಮುಖ್ಯವನ್ನು ಪಡೆಯಲೂಬಹುದು. ಗೀತಗಳೆಲ್ಲವನ್ನೂ ಜಾನಪದ ಧಾಟಿಗಳಲ್ಲಿ ಅಥವಾ ಸಂಗೀತಸ್ವರಗಳ ಆಧಾರದಲ್ಲಿ ರಾಗ ನಿರ್ದೇಶನವಿರಹಿತ ವಾಗಿ, ಕೇವಲ ಭಾವಕ್ಕನುಗುಣವಾದ, ಶ್ರಾವ್ಯ ಮೌಲ್ಯದ ಸ್ವರಜೋಡಣೆಗಳಿಂದ ರೂಪಿಸಿಕೊಳ್ಳಬೇಕಾಗುತ್ತದೆ.


ಕನ್ನಡ ಗೀತರೂಪಕಗಳು[ಬದಲಾಯಿಸಿ]

ಕನ್ನಡದಲ್ಲಿ ಆಧುನಿಕ ಗೀತರೂಪಕಗಳ ಮೂಲ ಪುರುಷರು ಇಬ್ಬರು -ಶಿವರಾಮ ಕಾರಂತರು ಮತ್ತು ಪು. ತಿ.ನರಸಿಂಹಾಚಾರ್ಯರು. ಕಾರಂತರ ಗೀತರೂಪಕಗಳು ಸಂಗೀತ ಮಾಧ್ಯಮದ ಮೂಲಕವೇ ಸಾಗವಂಥವು. ಅವುಗಳಿಂದ ಸಂಗೀತವನ್ನು ಹೊರತಾಗಿಸಿದರೆ ರೂಪಕವೇ ಇಲ್ಲವಾಗುತ್ತದೆ. ಗೀತಗಳ ಹಾಡುವಿಕೆಯನ್ನು ಅವರು ಹಿಂದೂಸ್ತಾನೀ ಸಂಗೀತ ಪದ್ಧತಿಯಲ್ಲಿರಿಸಿದ್ದಾರೆ. ಅವರ ರೂಪಕಗಳನ್ನು ಸಂಗೀತ ರಹಿತವಾಗಿ ಓದಿದಲ್ಲಿ ನೀರಸವಾಗಿ ಕಾಣಿಸಬಹುದು. ಆದರೆ, ರಂಗಭೂಮಿಯ ಮೇಲೆ, ಪ್ರದರ್ಶನದಲ್ಲಿ ಇವು ಸಂಗೀತದೊಡನೆ ಸೇರಿದಾಗ ಸತ್ತ್ವಪೂರ್ಣವಾದ ಹಾಡುಗಳಾಗಿ ಪರಿಣಮಿಸುತ್ತವೆ; ಇವು ಸಂಗೀತದೊಂದಿಗೆ ಸಮರಸವಾಗಿ ಬೆರೆಯುತ್ತವೆ; ಸಾಹಿತ್ಯ ಸಂಗೀತಗಳೆರಡರ ಸಂಗಮವಾದ ಅದ್ಭುತ ರಸಲೋಕವೊಂದನ್ನು ಕಾಣಿಸುತ್ತವೆ. ಗೀತರೂಪಕಗಳ ಎಲ್ಲ ಪ್ರಕಾರಗಳಿಗೂ ಕಾರಂತರ ರೂಪಕಗಳಲ್ಲಿ ಉದಾಹರಣೆಗಳಿವೆ. ಲವಕುಶ, ಸಾವಿತ್ರಿ ಸತ್ಯವಾನ ರೂಪಕಗಳು ಗಂಭೀರವಾದ ಪೌರಾಣಿಕ ಕಥಾವಸ್ತುವನ್ನೊಳಗೊಂಡವು. ಬುದ್ಧೋದಯ, ಕಿಸಾಗೌತಮಿ ಗಳು ಚಾರಿತ್ರಿಕ ರೂಪಕಗಳು. ಮುಕ್ತದ್ವಾರವೆಂಬುದು ನರ್ತನ ಸಹಿತವಾದ ನೇಪಥ್ಯಮೇಳ ಗಾನವನ್ನೊಳಗೊಂಡ, ವಿಚಾರಪುರ್ಣವಾದ ಸುಂದರ ಕಲ್ಪನೆ. ಸೋಮಿಯ ಸೌಭಾಗ್ಯ, ಯಾರೋ ಅಂದರು- ರೂಪಕಗಳ ವಸ್ತು, ಶೈಲಿಗಳು ಜಾನಪದ. ಸುಲಿಗೆಗೆ ಇಲ್ಲವು ಸಾವು ಎಂಬುದು ವಿಡಂಬನಾತ್ಮಕ ಪ್ರಹಸನ. ನರಸಿಂಹಾಚಾರ್ಯರ ಗೀತರೂಪಕಗಳಲ್ಲಿನ ಹಾಡುಗಳು ಕಾವ್ಯಸೌರಭವನ್ನು ಸೂಸುತ್ತಿರುವ ಸುಂದರಕವನಗಳು. ಕರ್ಣಾಟಕ ಸಂಗೀತಜ್ಞಾನ ಅವರಿಗೆ ಸಾಕಷ್ಟು ಚೆನ್ನಾಗಿಯೇ ಇರುವುದರಿಂದ ಹಾಡುಗಳೆಲ್ಲವನ್ನೂ ಛಂದೋಬದ್ಧ ಸಂಗೀತ ಕೃತಿಗಳನ್ನನುಸರಿಸಿ ರಚಿಸಿದ್ದಾರೆ. ಅವರ ರೂಪಕಗಳಲ್ಲಿ ಕೆಲವು ಬಿಡಿಗೀತಗಳನ್ನು ರಾಗತಾಳ ನಿಬದ್ಧವಾದ ಸಂಗೀತಕೃತಿಗಳಂತೆಯೇ ಹಾಡಲು ಸಾಧ್ಯವಾಗುತ್ತದೆ; ಮಾತ್ರವಲ್ಲ, ಹಾಗೆ ಹಾಡಿದಾಗ ಅವುಗಳ ಶೋಭೆಗೂ ಕೊರತೆ ಯಾಗುವುದಿಲ್ಲ. ಆಚಾರ್ಯರ ಗೀತರೂಪಕಗಳನ್ನು ಓದುಗಬ್ಬವಾಗಿ, ಸಂಗೀತ ವಿರಹಿತವಾಗಿ ಹಾಡಿದಾಗಲೂ ಅವುಗಳ ಅನುಪಮ ಸೌಂದರ್ಯದ ಅರಿವಾಗುತ್ತದೆ. ಕವಿಯ ಚಿಂತನಫಲವಾದ ವಿಶ್ಲೇಷಣೆ, ವಿಶೇಷಾರ್ಥಗಳು ಮನಮುಟ್ಟುತ್ತವೆ. ರಂಗಭೂಮಿಯ ಮೇಲೆ ಈ ರೂಪಕಗಳನ್ನು ಅಭಿನಯಿಸುವಾಗಲಂತೂ ಅವಕ್ಕೆ ಇನ್ನೂ ಹೆಚ್ಚಿನ ಶೋಭೆಯುಂಟಾಗುತ್ತದೆ. ಆದರೆ ಕವಿಯ ಪ್ರತಿಭಾ ಮೂಲವಾದ ಚಿಂತನವೈಶಿಷ್ಟ್ಯಗಳನ್ನು ಮಾತ್ರ, ಮೊದಲೊಮ್ಮೆ ಗೀತರೂಪಕಗಳನ್ನು ಓದಿರದ ಪ್ರೇಕ್ಷಕರು ಸಂಪೂರ್ಣವಾಗಿ ಅರಿತು, ಅನುಭವಿಸುವುದು ಕಷ್ಟಸಾಧ್ಯ. ಆದುದರಿಂದ ಆಚಾರ್ಯರ ಗೀತರೂಪಕಗಳು ರಂಗಪ್ರದರ್ಶನದಲ್ಲಿ ಸಂಗೀತಕ್ಕೆ ಅತ್ಯುತ್ತಮವಾಗಿ ಅಳವಡಿಸುವ ಕೃತಿಮಾಲಿಕೆಗಳಾಗಿ ಪರಿಣಮಿಸಲೂ ಸಾಧ್ಯವಿದೆ. ಅವರ ಹಂಸದಮಯಂತಿ, ಗೋಕುಲ ನಿರ್ಗಮನಗಳು ಶ್ರಾವ್ಯ ಗೀತರೂಪಕಗಳ ದೃಷ್ಟಿಯಿಂದ ಅತ್ಯುತ್ತಮವಾದ ಗೀತರೂಪಕಗಳು. ಡಿ.ವಿ. ಗುಂಡಪ್ಪನವರ ಭಸ್ಮಾಸುರ ಮೋಹಿನಿ ಗೀತ ಶಾಕುಂತಲ ಎಂಬೆರಡು ಗೀತರೂಪಕ ಗಳು ಇದೇ ವರ್ಗಕ್ಕೆ ಸೇರುವಂಥವು.

ಶಿವರಾಮ ಕಾರಂತ ಮತ್ತು ಪು.ತಿ.ನರಸಿಂಹಾಚಾರ್ಯರು ಕನ್ನಡದಲ್ಲಿ ಆಧುನಿಕ ಗೀತರೂಪಕಗಳ ಮೂಲ ಪುರುಷರು. ಗೀತಗಳ ಹಾಡುವಿಕೆಯನ್ನು ಕಾರಂತರು ಹಿಂದುಸ್ತಾನೀ ಸಂಗೀತ ಪದ್ಧತಿಯಲ್ಲಿರಿಸಿದ್ದಾರೆ. ಇವರ ರೂಪಕಗಳನ್ನು ಸಂಗೀತ ರಹಿತವಾಗಿ ಓದಿದಲ್ಲಿ ನೀರಸವಾಗಿ ಕಾಣಿಸಬಹುದು. ಆದರೆ ರಂಗಭೂಮಿಯ ಮೇಲೆ, ಪ್ರದರ್ಶನದಲ್ಲಿ ಇವು ಸಂಗೀತದೊಡನೆ ಸೇರಿದಾಗ ಸತ್ತ್ವಪೂರ್ಣವಾದ ಹಾಡುಗಳಾಗಿ ಪರಿಣಮಿಸುತ್ತವೆ; ಸಂಗೀತದೊಂದಿಗೆ ಸಮರಸವಾಗಿ ಬೆರೆಯುತ್ತವೆ; ಸಾಹಿತ್ಯ ಸಂಗೀತಗಳೆರಡರ ಸಂಗಮವಾದ ಅದ್ಭುತ ರಸಲೋಕವೊಂದನ್ನು ಕಾಣಿಸುತ್ತವೆ. ಗೀತರೂಪಕಗಳ ಎಲ್ಲ ಪ್ರಕಾರಗಳಿಗೂ ಕಾರಂತರ ರೂಪಕಗಳಲ್ಲಿ ಉದಾಹರಣೆಗಳಿವೆ. ಲವಕುಶ, ಸಾವಿತ್ರಿ ಸತ್ಯವಾನ ರೂಪಕಗಳು ಗಂಭೀರವಾದ ಪೌರಾಣಿಕ ಕಥಾವಸ್ತುವನ್ನೊಳಗೊಂಡವು. ಬುದ್ಧೋದಯ, ಕಿಸಾಗೌತಮಿಗಳು ಚಾರಿತ್ರಿಕ ರೂಪಕಗಳು. ಮುಕ್ತದ್ವಾರವೆಂಬುದು ನರ್ತನಸಹಿತವಾದ ನೇಪಥ್ಯಮೇಳ ಗಾನವನ್ನೊಳಗೊಂಡ, ವಿಚಾರಪೂರ್ಣವಾದ ಸುಂದರ ಕಲ್ಪನೆ. ಸೋಮಿಯ ಸೌಭಾಗ್ಯ, ಯಾರೋ ಅಂದರು ರೂಪಕಗಳ ವಸ್ತು ಶೈಲಿಗಳು ಜನಪದದವು. ಸುಲಿಗೆಗೆ ಇಲ್ಲವು ಸಾವು ಎಂಬುದು ವಿಡಂಬನಾತ್ಮಕ ಪ್ರಹಸನ. ಪು.ತಿ.ನರಸಿಂಹಾಚಾರ್ಯರ ಗೀತರೂಪಕಗಳಲ್ಲಿನ ಹಾಡುಗಳು ಕಾವ್ಯಸೌರಭವನ್ನು ಸೂಸುತ್ತಿರುವ ಸುಂದರ ಕವನಗಳು. ಕರ್ಣಾಟಕ ಸಂಗೀತಜ್ಞಾನದ ಹಿನ್ನೆಲೆಯಲ್ಲಿ ಹಾಡುಗಳೆಲ್ಲವನ್ನೂ ಛಂದೋಬದ್ಧ ಸಂಗೀತ ಕೃತಿಗಳನ್ನನುಸರಿಸಿ ಇವರು ರಚಿಸಿದ್ದಾರೆ. ಇವರ ರೂಪಕಗಳಲ್ಲಿನ ಕೆಲವು ಬಿಡಿಗೀತಗಳನ್ನು ರಾಗತಾಳನಿಬದ್ಧವಾದ ಸಂಗೀತಕೃತಿಗಳಂತೆಯೇ ಹಾಡಲು ಸಾಧ್ಯ; ಮಾತ್ರವಲ್ಲ, ಹಾಗೆ ಹಾಡಿದಾಗ ಅವುಗಳ ಶೋಭೆಗೂ ಕೊರತೆಯಾಗುವುದಿಲ್ಲ. ಈ ಗೀತರೂಪಕಗಳನ್ನು ಓದುಗಬ್ಬವಾಗಿ, ಸಂಗೀತರಹಿತವಾಗಿ ಹಾಡಿದಾಗಲೂ ಅವುಗಳ ಅನುಪಮ ಸೌಂದರ್ಯದ ಅರಿವಾಗುತ್ತದೆ. ಕವಿಯ ಚಿಂತನಫಲವಾದ ವಿಶ್ಲೇಷಣೆ ವಿಶೇಷಾರ್ಥಗಳು ಮನಮುಟ್ಟುತ್ತವೆ. ರಂಗಭೂಮಿಯ ಮೇಲೆ ಈ ರೂಪಕಗಳನ್ನು ಅಭಿನಯಿಸುವಾಗಲಂತೂ ಅವಕ್ಕೆ ಇನ್ನೂ ಹೆಚ್ಚಿನ ಶೋಭೆಯುಂಟಾಗುತ್ತದೆ. ಆದರೆ ಕವಿಯ ಪ್ರತಿಭಾಮೂಲವಾದ ಚಿಂತನವೈಶಿಷ್ಟ್ಯಗಳನ್ನು ಮಾತ್ರ ಮೊದಲೊಮ್ಮೆ ಗೀತರೂಪಕಗಳನ್ನು ಓದಿರದ ಪ್ರೇಕ್ಷಕರು ಸಂಪೂರ್ಣವಾಗಿ ಅರಿತು ಅನುಭವಿಸುವುದು ಕಷ್ಟಸಾಧ್ಯ. ಆದುದರಿಂದ ಪು.ತಿ.ನ. ಅವರ ಗೀತರೂಪಕಗಳು ರಂಗಪ್ರದರ್ಶನದಲ್ಲಿ ಸಂಗೀತಕ್ಕೆ ಅತ್ಯುತ್ತಮವಾಗಿ ಅಳವಡುವ ಕೃತಿಮಾಲಿಕೆಗಳಾಗಿ ಪರಿಣಮಿಸಲೂ ಸಾಧ್ಯವಿದೆ. ಇವರ ಹಂಸದಮಯಂತಿ, ಗೋಕುಲನಿರ್ಗಮನ ಇವು ಶ್ರವ್ಯ ಗೀತರೂಪಕಗಳ ದೃಷ್ಟಿಯಿಂದ ಅತ್ಯುತ್ತಮವಾದವು. ಡಿ.ವಿ.ಗುಂಡಪ್ಪನವರ ಭಸ್ಮಾಸುರ ಮೋಹಿನಿ, ಗೀತ ಶಾಕುಂತಲ ಎಂಬೆರಡು ಗೀತರೂಪಕಗಳೂ ಇದೇ ವರ್ಗಕ್ಕೆ ಸೇರುವಂಥವು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಗೀತರೂಪಕ&oldid=894446" ಇಂದ ಪಡೆಯಲ್ಪಟ್ಟಿದೆ