ಗಾಲ್ ಮಿಡ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಲ್ ಮಿಡ್ಜ್ - ಒಂದು ಬಗೆಯ ಹಾರುವ ಸಣ್ಣ ಕ್ರಿಮಿ.

ಇದು ಡಿಪ್ಪರ ಗಣದ ಸಿಸಿಡೊಮೈಯಿಡೆ ಕುಟುಂಬಕ್ಕೆ ಸೇರಿದೆ. ಹಲವು ಜಾತಿ ಮತ್ತು ಪ್ರಭೇದಗಳು ಹಲವು ತರಹದ ಸಸ್ಯಗಳಲ್ಲಿ ಬದುಕುತ್ತವೆ. ಬತ್ತದ ಮತ್ತು ಮುಸುಕಿನ ಜೋಳದ ಸಸ್ಯಗಳಲ್ಲಿ ಜೀವನ ಚರಿತ್ರೆಯನ್ನು ಸಾಗಿಸುವ ಮಿಡ್ಜ್ ಗಳನ್ನು ಓರ್ಸಿಯೋಲಿಯ ಓರೈಝ, ಬಸವನ ಪಾದದ ಮರದಲ್ಲಿ ಬದುಕುವ ಮಿಡ್ಜ್ ಗಳನ್ನು ಪ್ಯಾರಡಿಪ್ಲೋಸೀಸ್ ಟ್ಯಮಿಫೆಕ್ಸ, ಕಿತ್ತಳೆ ಜಾತಿಯ ಗಿಡಗಳಲ್ಲಿ ಬೆಳೆಯುವವನ್ನು ಪ್ಯಾರಡಿಪ್ಲೋಸೀಸ್ ಲಾಂಜಿಫೈಲಾ ಎಂದು ಕರೆಯಲಾ ಗುತ್ತದೆ. ಹೇನುಗಳು ವಾಸಿಸುವ ಸಸ್ಯಗಳಲ್ಲಿಯೂ ಸಹ ಇವು ವಾಸಿಸುತ್ತವೆ. ಸಸ್ಯಗಳಲ್ಲಿ ಪ್ರೌಢ ಮಿಡ್ಜ್ ಗಳು ಗಂಟು ಉಂಟುಮಾಡುತ್ತವೆ. ಹೆಣ್ಣು ಮಿಡ್ಜ್ ಕೆಂಪು ವರ್ಣದ ಉದರವನ್ನು ಹೊಂದಿದೆ. ಗಂಡಿನ ದೇಹವು ತಿಳಿಹಳದಿ ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಗಂಡು ಮಿಡ್ಜ್ ಹೆಣ್ಣಿಗಿಂತ ಚಿಕ್ಕದಾಗಿರುತ್ತದೆ. ಎರಡು ಜೊತೆ ರೆಕ್ಕೆಗಳನ್ನು ಹೊಂದಿದ್ದು 3 ರಿಂದ 3.5 ಮಿಮೀ ವಿಸ್ತಾರವಾಗಿರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಸಹ 10 ಕ್ಕಿಂತ ಹೆಚ್ಚು ಖಂಡಗಳಿರುವ ಮಣಿಸರದಾಕಾರದ ಸ್ಪರ್ಶಾಂಗಗಳನ್ನು ಹೊಂದಿವೆ.

ನಿಶಾಚಾರಿಗಳಾಗಿದ್ದು ರಾತ್ರಿ ಸಮಯದಲ್ಲಿ ಸುಲಭವಾಗಿ ದೀಪದ ಬೆಳಕಿನ ಸಹಾಯದಿಂದ ಹಿಡಿಯಬಹುದು. ಕೊನೆಯ ಕೋಶಾವಸ್ಥೆಯಿಂದ (ಪ್ಯುಪ) ಹೊರಬಂದ ತಕ್ಷಣವೆ ಪ್ರೌಢ ಮಿಡ್ಜ್ ಗಳು ಸಮ್ಮಿಲನದಲ್ಲಿ (ಸಂತಾನಕ್ರಿಯೆ) ತೊಡಗುವುದು ಒಂದು ವಿಶಿಷ್ಟ ಲಕ್ಷಣ. ಆದರೆ ಹೆಣ್ಣು ಮಿಡ್ಜ್ ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ಸಂತಾನಕ್ರಿಯೆಯಲ್ಲಿ ಭಾಗಿಯಾಗಿರುತ್ತದೆ. ಒಂದು ಹೆಣ್ಣು ಮಿಡ್್ಜ 100-200 ಮೊಟ್ಟೆಗಳನ್ನು ಅದರ ಜೀವಿತಾವಧಿ ದಿವಸಗಳಲ್ಲಿ ಇಡುತ್ತದೆ. ಗಂಡು ಮಿಡ್ಜ್ ಮಾತ್ರ ಸಮ್ಮಿಲನ ಕ್ರಿಯೆಮುಗಿದ 12 ರಿಂದ 18 ಗಂಟೆಗಳ ಒಳಗೆ ಸಾಯುತ್ತದೆ. ಮೊಟ್ಟೆಗಳು ಉದ್ದವಾದ ಕೊಳವೆಯಾಕಾರದಲ್ಲಿರುತ್ತವೆ. ಆಗ ತಾನೇ ಹೊಸದಾಗಿ ಇಟ್ಟಿದ್ದ ಮೊಟ್ಟೆಗಳಲ್ಲಿ ವರ್ಣವೈವಿಧ್ಯವಿದೆ. ಶ್ವೇತ, ಗುಲಾಬಿ, ಕೆಂಪು ಮತ್ತು ಹಳದಿ ಬಣ್ಣಬರಬಹುದು. ಹುಳುಗಳು ಮೊಟ್ಟೆಯಿಂದ ಹೊರಬರುವ ಮುನ್ನ, ಆ ಮೊಟ್ಟೆಗಳು ಶಿಲಾರಾಶಿಯಂತೆ ಹೊಳೆಯುತ್ತಿರುತ್ತವೆ. ಒಂದು ಅಥವಾ 3-4 ಮೊಟ್ಟೆಗಳ ಗುಂಪುಗಳು ಬತ್ತದ ಚಿಗುರೊಡೆಯುವ ಗಿಣ್ಣುಗಳಲ್ಲಿ, ಎಲೆಯ ತಳದ ಭಾಗಗಳಲ್ಲಿ ಹಾಗೂ ಎಲೆಯ ಮೇಲ್ಭಾಗಗಳಲ್ಲಿ ಕಂಡು ಬರುತ್ತವೆ. ಮೊಟ್ಟೆಗಳ ಬೆಳೆವಣಿಗೆ 3-4 ದಿವಸಗಳಲ್ಲಿ ಮುಗಿಯುತ್ತದೆ.

ಕೋಶಾವಸ್ಥೆ[ಬದಲಾಯಿಸಿ]

ಮಿಡ್ಜ್ ಗಳ ಕೋಶಾವಸ್ಥೆಯ ಮೊದಲ ಹುಳು ಕಾಲುಗಳಿಲ್ಲದ 1ಮಿಮೀ ಉದ್ದದ ಬೂದು ಅಥವಾ ಶ್ವೇತವರ್ಣದ್ದಾಗಿರುತ್ತದೆ. ಈ ಹುಳುಗಳು ಕಾಂಡದಲ್ಲಿ ಚಿಗುರು ಬರುವ ಅಥವಾ ಗಿಣ್ಣುಗಳಿರುವ ಜಾಗದಲ್ಲಿ ಆಹಾರಕ್ಕಾಗಿ ನೆಲೆಸಿರುತ್ತವೆ. ಒಂದು ಗಿಣ್ಣಿನಲ್ಲಿ ಒಂದು ಹುಳು ಮಾತ್ರ ಇರುತ್ತದೆ. ಈ ಹುಳುಗಳು ಗಿಣ್ಣಿನ ಬುಡವನ್ನು ತಿನ್ನುತ್ತಾ ಹೋಗುತ್ತವೆ. ಕೊನೆಗೆ ಕೊಳವೆಯಾಕಾರದ ಗಂಟು ಉತ್ಪತ್ತಿಯಾಗುತ್ತದೆ. ಈ ಗಂಟುಗಳು ಸಸ್ಯಗಳು ಚಿಗುರು ಒಡೆಯುವುದನ್ನು ಹಾಗೂ ಎಲೆಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತವೆ. ಎಡೆಬಿಡದೆ ಚಿಗುರು ಒಡೆಯುವ ತಳವನ್ನು ಹಾಗೂ ಕಾಂಡವನ್ನು ತಿನ್ನುವ ಹುಳುವಿನಿಂದ ಗಂಟು ದೊಡ್ಡದಾಗುತ್ತಾ ಹೋಗುತ್ತದೆ. ಕೋಶಾವಸ್ಥೆಯ ಹುಳುಗಳ ಬೆಳೆವಣಿಗೆಯೂ 3-4 ಹಂತದಲ್ಲಿದ್ದು 15-20 ದಿವಸಗಳಲ್ಲಿ ಕೋಶಾವಸ್ಥೆಯ ಕೊನೆಯ ಹಂತ ತಲುಪುತ್ತವೆ.

ಕೋಶಾವಸ್ಥೆಯ ಕೊನೆಯ ಹಂತದ ಹುಳುವು ತಿಳಿ ಗುಲಾಬಿ ಬಣದ್ದಾಗಿದ್ದು ಉದರವು ಮುಳ್ಳುಗಳಿಂದ ಆವೃತಗೊಂಡಿರುತ್ತದೆ. ಪ್ರೌಢಾವಸ್ಥೆಗೆ ಬರುವುದರೊಳಗೆ ಕೆಂಪುಬಣ್ಣಕ್ಕೆ ತಿರುಗುತ್ತದೆ. ಕೊನೆಯ ಹಂತದಲ್ಲಿ ಹುಳುಗಳು 2-2.5 ಮಿಮೀ ಉದ್ದ ಹಾಗೂ 0.6-0.8 ಮಿಮೀ ದಪ್ಪವಿರುತ್ತವೆ. ಈ ಕೊನೆಯ ಹಂತದ ಬೆಳೆವಣಿಗೆಯು 2-8 ದಿವಸಗಳಲ್ಲಿ ಮುಗಿದು ಪ್ರೌಢಾವಸ್ಥೆಯ ಮಿಡ್ಜ್ ಗಳಾಗಿ ಬೆಳೆಯುತ್ತವೆ. ಈ ಎಲ್ಲಾ ಬೆಳೆವಣಿಗೆಗಳೂ ಸಸ್ಯಗಳ ಗಂಟಿನಲ್ಲಿಯೇ ನಡೆಯುತ್ತವೆ.