ಉಭಯ ನರಹುರಿ ಪ್ರಾಣಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಭಯ ನರಹುರಿ ಪ್ರಾಣಿಗಳು
ಒಂದು ಜೀವಂತ ಒಳಪದರವುಳ್ಳ ಉಭಯ ನರಹುರಿ ಜೀವಿ, ಟಾನಿಸೆಲಾ ಲೀನಿಯೇಟಾ ಮೂಲ ಸ್ಥಾನದಲ್ಲಿ ಛಾಯಾಚಿತ್ರಿಸಲಾಗಿದೆ: ಪ್ರಾಣಿಯ ಮುಂಭಾಗದ ತುದಿ ಬಲಕ್ಕಿದೆ.
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಮೊಲಸ್ಕಾ
Sub-classis: {{{1}}}
ಬ್ಲ್ಞಾವೀಲ್, ೧೮೧೬

ಉಭಯ ನರಹುರಿ ಪ್ರಾಣಿಗಳುಕಡಲ ಮೃದ್ವಂಗಿಗಳನ್ನು ಒಳಗೊಂಡ (ಮೆರೈನ್ ಮೊಲಸ್ಕ್‌್ಸ) ಒಂದು ವರ್ಗ (ಆಂಫಿನ್ಯೂರ): ಅಪ್ಲಕೋಫೊರ (ಕವಚ ಫಲಕಗಳಿರದ ಕೀಟ ರೂಪದ ಪ್ರಾಣಿಗಳು) ಮತ್ತು ಪಾಲಿಪ್ಲಕೋಫೊರ (ಬೆನ್ನ ಮೇಲೆ ಎಂಟು ಕವಚ ಫಲಕಗಳಿರುವ ಚಪ್ಪಟೆ ದೀರ್ಘವೃತ್ತರೂಪದವು) ಇದರ ಎರಡು ಉಪವರ್ಗಗಳು, ಸಮನಾದ ಎರಡು ಜೊತೆ ನರತಂತುಗಳಿರುವುದರಿಂದ ಲ್ಯಾಟಿನ್ ಭಾಷೆಯಲ್ಲಿ ಆಂಫಿನ್ಯೂರ ಎಂಬ ಹೆಸರು ಬಂದಿದೆ. ಪ್ರಾಣಿಯ ಲಕ್ಷಣವಿಷ್ಟು - ಕಣ್ಣು, ಕರಬಳ್ಳಿಗಳು (ಟೆಂಟಕಲ್ಸ್‌) ಇರದ ಅಸ್ಪಷ್ಟವಾದ ತಲೆ; ಅದರ ಕೆಳಭಾಗದಲ್ಲಿ ಚಲಿಸಲು ಉಪಯುಕ್ತವಾದ ಮಾಂಸಖಂಡಗಳಿಂದ ತುಂಬಿದ ದಪ್ಪ ತೆವಳು ಪಾದ; ಮೇಲ್ಭಾಗ ಮತ್ತು ಪಕ್ಕಗಳನ್ನು ಆವರಿಸಿರುವ ಒಂದು ಹೊದಿಕೆ (ಮ್ಯಾಂಟಲ್). ಹೊದಿಕೆಯ ಹೊರಭಾಗದಲ್ಲಿ ಒಂದು ಅಥವಾ ಎರಡು ಫಲಕಗಳಿರುವ, ಸ್ರವಿಸುವ ಸುಣ್ಣದ ಚಿಪ್ಪು. ಕೆಲವು ಪ್ರಾಣಿಗಳಿಗೆ ಚಿಪ್ಪಾಗಲಿ, ಕಾಲುಗಳಾಗಲಿ ಇರುವುದಿಲ್ಲ. ಬಾಯಿ ಮತ್ತು ಆಸನದ್ವಾರ ದೇಹದ ಕೆಳಭಾಗದಲ್ಲಿ ಎರಡು ತುದಿಗಳಲ್ಲಿವೆ. ಅನ್ನನಾಳ ನೆಟ್ಟಗಿದೆ. ಬಾಯ ಅಂಗುಳಲ್ಲಿ ಹಲ್ಲುಗಳನ್ನೊಳಗೊಂಡ ರ್ಯಾಡ್ಯುಲ ಎಂಬ ಉಜ್ಜುವ ಅಂಗವೂ ಲಾಲಾಗ್ರಂಥಿಗಳೂ ಇವೆ. ಸಮಗಾತ್ರವಾದ ಒಂದು ಜೊತೆ ಕಿವಿರುಗಳು ಹೊರ ಹೊದಿಕೆಯ ಪದರದಲ್ಲಿವೆ. ಉಭಯ ನರಹುರಿ ಪ್ರಾಣಿಗಳು ಸಾಮಾನ್ಯವಾಗಿ ಎಲ್ಲ ಸಮುದ್ರಗಳಲ್ಲೂ ತೀರಕ್ಕೆ ಸಮೀಪವಾಗಿ ಆಳವಿಲ್ಲದ ಭಾಗಗಳಲ್ಲಿ ವಾಸಿಸುತ್ತವೆ. ಬಂಡೆ, ಹವಳ, ಕಡಲಸಸ್ಯಗಳು ಮುಂತಾದುವುಗಳ ಮೇಲೆ ತೆವಳುತ್ತ ಅಲ್ಲಿ ಬೆಳೆದಿರುವ ಪಾಚಿ ಮುಂತಾದ ಸಸ್ಯಗಳನ್ನು ತಿಂದು ಬದುಕುವುವು. ಇವುಗಳ ರೂಢನಾಮ ಕೈಟನ್. ಪಾಲಿಪ್ಲಕೋಫೊರ (ಬಹುಫಲಕಿಗಳು): ಈ ಉಪವರ್ಗದ ಕೈಟನ್ನುಗಳನ್ನು ಕೆಲವರು ಗ್ಯಾಸ್ಟ್ರಾಪೊಡ ವರ್ಗದಲ್ಲಿ ಲೋರಿಕೇಟ ಎಂಬ ಪ್ರತ್ಯೇಕವಾದ ಒಂದು ಉಪವರ್ಗಕ್ಕೆ ಸೇರಿಸಿರುವರು. ಕೈಟನ್ನುಗಳ ದೇಹ ಸಾಮಾನ್ಯವಾಗಿ ಸ್ವಲ್ಪ ಉದ್ದ ಮತ್ತು ಚಪ್ಪಟೆ. ಇವು ತುಂಬ ದೊಡ್ಡಗಾತ್ರಕ್ಕೆ ಬೆಳೆಯುವುದಿಲ್ಲ. ಇವುಗಳಲ್ಲಿರುವ ಎಂಟು ಫಲಕಗಳಲ್ಲಿ ಮೊದಲನೆಯ ಮತ್ತು ಕೊನೆಯ ಫಲಕಗಳು ಅರ್ಧ ಗೋಳಾಕಾರವಾಗಿಯೂ ಮಿಕ್ಕವು ಆಯಾಕಾರವಾ ಗಿಯೂ ಇವೆ. ಫಲಕಗಳು ಒಂದರ ಹಿಂದೊಂದು ಮನೆಯ ಹೆಂಚುಗಳಂತೆ ಜೋಡಣೆ ಯಾಗಿವೆ. ಹೀಗಿರುವುದರಿಂದ ಈ ಪ್ರಾಣಿಗಳು ತಮ್ಮನ್ನು ಯಾವುದಾದರೂ ವೈರಿಗಳು ಹೆದರಿಸಿದಾಗ ತಮ್ಮ ಮೈಯ್ಯನ್ನು ಆರ್ಮಡಿಲೊ ಇಲ್ಲವೇ ಮರಹೇನುಗಳ ಹಾಗೆ ಸುತ್ತಿಕೊಳ್ಳುತ್ತವೆ. ಕ್ರಿಪ್ಟೊಕೈಟನ್ನಿನಂಥ ಪ್ರಾಣಿಗಳಿಗೆ ಮುಳ್ಳುಗಳಿಂದಾದ ಆವೃತವಾದ ಚಿಪ್ಪಿನ ಹೊದಿಕೆ ಇದೆ. ಟೋನಿಸಿಯ ಎಂಬುದರಲ್ಲಿ ಇವು ಹೆಚ್ಚು ಸಂಖ್ಯೆಯಲ್ಲಿವೆ. ಈ ಪ್ರಾಣಿಗಳಿಗೆ ಲಾಲಾಗ್ರಂಥಿ, ರ್ಯಾಡ್ಯುಲ ಮತ್ತು ಪಿತ್ತಜನಕಾಂಗಗಳೂ ಇವೆ. ತಲೆಯ ಭಾಗದಲ್ಲಿ ಗಂಟಲಿನ ಸುತ್ತ ಒಂದು ನರವ್ಯೂಹವಿದೆ. ಅದರಿಂದ ಎರಡು ಜೊತೆ ನರಗಳು ಪಾದಕ್ಕೂ ಹೊರ ಹೊದಿಕೆಗೂ ಸಾಗಿವೆ. ಪ್ರಾಣಿಯ ದೇಹದ ಹಿಂಭಾಗದ ಮಧ್ಯದಲ್ಲಿ ಹೃದಯವಿದೆ. ಇದನ್ನು ಪೆರಿಕಾರ್ಡಿಯಂ ಕವಚ ಆವರಿಸಿದೆ. ಮಧ್ಯದಲ್ಲಿರುವ ಒಂದೇ ಒಂದು ಹೃತ್ಕುಕ್ಷಿಯ ಎರಡು ಪಕ್ಕಗಳಲ್ಲೂ ಹೃತ್ಕರ್ಣಗಳಿವೆ. ಮೂತ್ರ ಜನಕಾಂಗಗಳ ಒಳ ತುದಿಗಳಲ್ಲಿ ಹೃತ್ಕವಚದಲ್ಲೂ ಹೊರತುದಿಗಳು ಆಸನದ್ವಾರದ ಪಕ್ಕದಲ್ಲೂ ಹೊರಗಡೆಗೆ ತೆರೆಯುತ್ತವೆ. ಇವು ಏಕಲಿಂಗಿಗಳು ; ಇವುಗಳ ಜನನದ್ವಾರಗಳೂ ಸೊಲೆನೊಗ್ಯಾಸ್ಟ್ರೆಸುಗಳಲ್ಲಿದ್ದ ಹಾಗೆ ಹೃತ್ಕವಚದೊಳಕ್ಕೆ ತೆರೆಯುವುದಿಲ್ಲ. ಜನನನಾಳಗಳ ಮೂಲಕ ಜನನಾಣುಗಳು ಹೊರಬರುತ್ತವೆ. ಇವುಗಳ ಜೀವನ ಚರಿತ್ರೆಯಲ್ಲಿ ಟ್ರೋಕೋಫೋರ್ ಎಂಬ ಲಾರ್ವದ ಅವಸ್ಥೆ ಕಂಡುಬರುತ್ತದೆ. 4-80 ಸಮಗಾತ್ರದ ಕಿವಿರುಗಳು ಹೊರಹೊದಿಕೆಯ ಮಡಿಕೆಯಲ್ಲಿವೆ. ವೆಸ್ಟ್‌ ಇಂಡೀಸ್ ಮತ್ತು ಇತರ ದೇಶಗಳಲ್ಲಿ ಕೈಟನ್ನಿನ ಕಾಲುಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಮಾನೋಪ್ಲಕೋಫೊರ (ಏಕಫಲಕಿಗಳು): ಚಿಪ್ಪಿನಲ್ಲಿ ಒಂದು ಫಲಕ ಮಾತ್ರ ಇದೆ. ರ್ಯಾಡ್ಯುಲಾದಲ್ಲಿ ಆರುಸಾಲು ಹಲ್ಲುಕೂಡಿವೆ. ಚಿಪ್ಪಿನ ಅಗ್ರಭಾಗದ ಅಡಿಯಲ್ಲಿ ಹೊಟ್ಟೆ ಇದೆ. ಸಮಗಾತ್ರದ ಎರಡು ಪಿತ್ತಜನಕಾಂಗಗಳೂ ಅನ್ನನಾಳದ ಜೊತೆಗೆ ಕೂಡಿಕೊಂಡಿವೆ. ವಿಶಾಲವಾದ ಕಾಲು ಐದು ಜೊತೆ ಕಿವಿರುಗಳ ನಡುವೆ ಇದೆ. ಪ್ರತಿಯೊಂದು ಕಿವಿರಿನ ಜೊತೆಗೂ ಒಂದೊಂದು ಮೂತ್ರಾಂಗವೂ ಕೂಡಿದೆ. ನರವ್ಯೂಹ ಕೈಟನಿನಲ್ಲಿರವ ಹಾಗೆಯೇ ಇದೆ ; ದೇಹಾವಕಾಶ ಚೆನ್ನಾಗಿ ರೂಪುಗೊಂಡಿದೆ. ಮೂತ್ರಾಂಗಗಳು (ನೆಫ್ರೀಡಿಯಗಳು) ಕಿವಿರನ ಅಡಿಯಲ್ಲಿ ತೆರೆಯುತ್ತವೆ. ಅಂಗಾಂಗಗಳಿಂದ ಉತ್ಪತ್ತಿಯಾದ ವಿಸರ್ಜನ ಪದಾರ್ಥಗಳು ಕೆಲವು ನೆಫ್ರೀಡಿಯಗಳ ಮೂಲಕ ಹೊರಬರುತ್ತವೆ. ಇವುಗಳೆಲ್ಲ ಏಕಲಿಂಗಿಗಳು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: