ಅಷ್ಟಾವಧಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಷ್ಟ (ಎಂಟು) ಅವಧಾನ (ಆಲಿಸುವುದು) ಎಂಬ ಪದಗಳು ಸೇರಿ ಅಷ್ಟಾವಧಾನ ಎಂದಾಗಿದೆ. ಎಂಟು ಕಡೆಗಳಿಂದ ಕೇಳಿಬರುವ ಮಾತು ಮುಂತಾದವನ್ನು ಏಕಕಾಲದಲ್ಲಿ ಗ್ರಹಿಸುವ ಸಾಮರ್ಥ್ಯ, ಪ್ರತಿಭೆ, ಸ್ಮರಣಶಕ್ತಿಗಳಿಂದ ರೂಪುಗೊಳ್ಳುತ್ತದೆ. ಭಾರತೀಯ ಶಿಕ್ಷಣಸಂಪ್ರದಾಯದಲ್ಲಿ ಕಲಾತ್ಮಕವಾದ ಒಂದು ವಿದ್ಯೆ. 64 ಕಲೆಗಳಲ್ಲಿ ಒಂದೆಂದು ಪರಿಗಣಿಸಿರುವ ಸಂದರ್ಭಗಳುಂಟು. ಇದರೊಡನೆ ಕಂಡುಬರುವ ಶತಾವಧಾನ, ಸಮಸ್ತಾವಧಾನ-ಇವು ಇತರ ಬಗೆಗಳು. ಈ ವಿದ್ಯೆಯ ಅಭ್ಯಾಸ, ಪ್ರದರ್ಶನಗಳು ಇಂದಿಗೂ ಪ್ರಚಲಿತವಾಗಿವೆ. ಇದರಲ್ಲಿ ಪರಿಣತರಾದವರನ್ನು ಅಷ್ಟಾವಧಾನಿಗಳೆಂದು ಕರೆಯುತ್ತಾರೆ, ಹಾಗೆಯೇ ಶತಾವಧಾನದಲ್ಲಿ ನಿಷ್ಣಾತರು ಶತಾವಧಾನಿಗಳು. ಇದಕ್ಕೆ ಸಂಬಂಧಪಟ್ಟಂತೆ ಶತಾವಧಾನಿ ವೇಮೂರಿ ಶ್ರೀರಾಮಾಶಾಸ್ತ್ರಿಗಳಿಂದ ವಿರಚಿತವಾಗಿರುವ ಅವಧಾನವಿಧಾನವೆಂಬ ಗ್ರಂಥ ಪ್ರಸಿದ್ಧವಾಗಿದೆ.