ಅವಯವ ಶೇಷಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಷೀಣವಾದ ನಿಷ್ಪ್ರಯೋಜಕ ಅವಯವಗಳು somanagouda(ವೆಸ್ಟೀಜಿಯಲ್ ಆರ್ಗನ್ಸ್‌). ಶೇಷಾಂಗಗಳೆಂದೂ ಕರೆಯುವರು. ಸಾಮಾನ್ಯವಾಗಿ ಇವುಗಳಿಗೆ ಯಾವುದೇ ನಿರ್ದಿಷ್ಟ ಕಾರ್ಯ ಇರುವುದಿಲ್ಲ.

ಪ್ರಾಣಿಗಳಲ್ಲಿ ಬಾಹ್ಯಸ್ಥಿತಿಗನುಗುಣವಾಗಿ ಅವುಗಳ ಜೀವನಕ್ರಮವೂ ಜೀವನಕ್ರಮ ಕ್ಕನುಗುಣವಾಗಿ ಅವುಗಳ ದೇಹರಚನೆಯೂ ಇರುವುವು. ಬಾಹ್ಯ ಪರಿಸ್ಥಿತಿಯಲ್ಲಿ ಸ್ಥಿರರೂಪದ ಬದಲಾವಣೆಗಳುಂಟಾದರೆ, ಅದರ ಪರಿಣಾಮ ಜೀವನಕ್ರಮ, ದೇಹರಚನೆಗಳ ಮೇಲೂ ಆಗಿ ಅವುಗಳಲ್ಲಿ ಮಾರ್ಪಾಟುಗಳಾಗುವುವು. ಒಂದು ವೇಳೆ ಹೀಗೆ ಆಗದಿದ್ದರೆ, ಪ್ರಾಣಿಗಳು ನಿರ್ವಂಶ (ಎಕ್ಸ್‌ಟಿಂ) ಆಗುವುವು. ಆದರೆ ಎಷ್ಟೋ ಪ್ರಾಣಿಗಳು ಬದಲಾದ ಪರಿಸ್ಥಿತಿಗನುಸಾರ ವಾಗಿ ತಮ್ಮ ಅಂಗಗಳನ್ನು ರೂಪಾಂತರಿಸಿಕೊಳ್ಳುವುವು. ಈ ಘಟನೆಯಲ್ಲಿ ಕೆಲವು ಅಂಗಗಳು ನಿರುಪಯುಕ್ತವಾಗುವುದುಂಟು. ಹೀಗೆ ನಿರುಪಯುಕ್ತಾಂಗಗಳು ರೂಪಾಂತರ ಹೊಂದಿ ಬೇರೆ ಕಾರ್ಯಗಳನ್ನು ನಿರ್ವಹಿಸದಿದ್ದರೆ, ಅವುಗಳ ಬೆಳವಣಿಗೆ ಕಾಲಕ್ರಮೇಣ ಕಡಿಮೆಯಾಗುತ್ತ ಹೋಗಿ, ಅಂತ್ಯದಲ್ಲಿ ಅದೃಶ್ಯವಾಗುವುದು. ಆದ್ದರಿಂದ ಅವಯವ ಶೇಷಗಳು ಬೇರೆ ಏನೂ ಇರದೆ ಒಂದಾನೊಂದು ಕಾಲದಲ್ಲಿ ಇತರ ಅವಯವಗಳಂತೆ ಸಾಮಾನ್ಯ ಅವಯವಗಳಾಗಿದ್ದು, ಕಾಲಮಾನ, ಪರಿಸ್ಥಿತಿಗನುಗುಣವಾಗಿ ಮಾರ್ಪಾಟು ಹೊಂದದೆ, ಕ್ರಮೇಣ ಕ್ಷೀಣವಾಗುತ್ತ ಹೋಗಿ, ವಿನಾಶದ ಅಂತಿಮ ಘಟ್ಟ ಮುಟ್ಟಿರುವ ಅಂಗಗಳ ಗುರುತುಗಳು ಮಾತ್ರವೆಂದು ಊಹಿಸಬಹುದು. ಉದಾಹರಣೆಗೆ, ಕುದುರೆಯ ಕಟ್ಟು ಮೂಳೆ (ಸ್ಪ್ಲಿಂಟ್ ಬೋನ್) ಶೇಷಾವಸ್ಥೆಯಲ್ಲಿದ್ದ ಅಂಗವಾಗಿದೆ. ಕುದುರೆಯ ಪೂರ್ವಜರಲ್ಲಿ 5 ಕಾಲ್ಬೆರಳುಗಳು ಇದ್ದವೆಂದು ಪಳೆಯುಳಿಕೆಗಳ ಆಧಾರದಿಂದ ಗೊತ್ತಾಗಿದೆ. ಓಡುವ ಸ್ವಭಾವಕ್ಕನುಗುಣವಾಗಿ, 1, 2, 4 ಮತ್ತು 5 ನೆಯ ಕಾಲ್ಬೆರಳುಗಳು ಮಾಯವಾಗಿ, ಕೇವಲ 3 ನೆಯ ಬೆರಳು ಉಳಿದು ಖುರವಾಗಿ ಮಾರ್ಪಾಟು ಹೊಂದಿರುವುದರಿಂದ ಖುರದ ಅಕ್ಕಪಕ್ಕದಲ್ಲಿದ್ದ ಕಟ್ಟುಮೂಳೆಗಳು, 2 ಮತ್ತು 4 ನೆಯ ಕಾಲ್ಬೆರಳುಗಳ ಶೇಷಾಂಗಗಳಾಗಿರುವುವು. ಇದರಂತೆ ಕೀವಿ ಎಂಬ ಪಕ್ಷಿಯ ರೆಕ್ಕೆಗಳು ಕೂಡ ಶೇಷಾವಸ್ಥೆಯ ಅವಯವಗಳೇ. ಇವು ಇದ್ದ ನಡುಗಡ್ಡೆಗಳಲ್ಲಿ ವೈರಿಗಳು ಇರದಿದ್ದರಿಂದ, ಇವುಗಳಿಗೆ ಹಾರಾಡುವ ಆವಶ್ಯಕತೆ ಬೀಳಲಿಲ್ಲ. ಆದ್ದರಿಂದ ರೆಕ್ಕೆಗಳು ಅನವಶ್ಯಕ ಅವಯವಗಳಾಗಿ ಪರಿಣಮಿಸಿ ಕಾಲಾಂತರದಲ್ಲಿ ಶೇಷಾವಸ್ಥೆಹೊಂದಿದ ಅಂಗಗಳಾದುವೆಂದು ತರ್ಕಿಸಬಹುದು. ಇದೇ ಪ್ರಕಾರ ಹೆಬ್ಬಾವುಗಳ ಹಿಂಗಾಲು, ತಿಮಿಂಗಲಗಳ ಕಟಿಚಕ್ರ (ಪೆಲ್ವಿಕ್ ಗರ್ಡಲ್) ಮತ್ತು ಹಿಂಗಾಲಿನ ಕಾಲುಗಳ ಎಲುಬುಗಳ ಶೇಷಾಂಗಕ್ಕೆ ಉದಾಹರಣೆಗಳನ್ನು ಕೊಡಬಹುದು. ಎಲ್ಲ ಪ್ರಾಣಿಗಳಲ್ಲೂ ಒಂದಿಲ್ಲೊಂದು ಅವಯವ ಶೇಷಗಳು ಇದ್ದೇ ಇರುವುವು. ಮನುಷ್ಯನ ಶರೀರದಲ್ಲಿಯೇ 150 ಕ್ಕಿಂತ ಹೆಚ್ಚು ಅವಯವ ಶೇಷಗಳನ್ನು ಗುರುತಿಸಬಹುದು. ಅಪೆಂಡಿಕ್ಸ್‌, ವಕ್ಷಸ್ಥಳ, ಹುಬ್ಬುಗಳ ಮೇಲಿರುವ ಕೂದಲುಗಳು, ಮೂರನೆಯ ಕಣ್ಣು ರೆಪ್ಪೆ, ಪುಚ್ಛ ಮಣಿ ಮೂಳೆಗಳು (ಕಾಕ್ಸಿಕ್ಸ್‌) (ಕೊಸಿಜಿಯಲ್ ಬೋನ್ಸ್‌) ಕಿವಿಯ ಸ್ನಾಯುಗಳು ಮುಂತಾದವು ಸಹಜವಾಗಿ ಕಂಡುಬರುವ ಹಲವಾರು ದೃಷ್ಟಾಂತಗಳು. ಅಪೆಂಡಿಕ್ಸ್‌ ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಉಪಯುಕ್ತ ಅಂಗವಾಗಿದ್ದು, ಮನುಷ್ಯನಲ್ಲಿ ಅವಯವ ಶೇಷವಾಗಿರುವುದು. ವಕ್ಷಸ್ಥಳ, ಹುಬ್ಬುಗಳ ಮೇಲಿರುವ ಕೂದಲುಗಳು ಇಡೀ ಶರೀರದ ಮೇಲಿದ್ದ ಕೂದಲುಗಳ ಶೇಷಗಳು. ಪುಚ್ಛ ಮಣಿ ಮೂಳೆಗಳು ಒಂದಾನೊಂದು ಕಾಲದಲ್ಲಿದ್ದ ಬಾಲದ ಗುರುತೆಂದೂ ಕಿವಿಯ ಸ್ನಾಯುಗಳು ಕಿವಿ ಅಲ್ಲಾಡಿಸುವುದಕ್ಕೆ ಉಪಯುಕ್ತವಾಗಿದ್ದ ಸ್ನಾಯುಗಳ ಶೇಷಗಳೆಂದೂ ಉದಾಹರಣೆಗಳು. ಪ್ರಾಣಿಶಾಸ್ತ್ರಕ್ಕೆ ಅವಯವ ಶೇಷಗಳ ಜ್ಞಾನ ಒಂದು ಮಹತ್ತ್ವದ ಅಂಗವಾಗಿದೆ. ಅವಯವ ಶೇಷಗಳ ಪರಿಚಯದ ಮೂಲಕ ಭಿನ್ನ ಭಿನ್ನ ಪ್ರಾಣಿಗಳಲ್ಲಿರುವ ಸಂಬಂಧವನ್ನು ಕಂಡುಹಿಡಿದು, ಅವುಗಳ ವಿಕಾಸ ಹೇಗೆ ಆಯಿತೆಂಬುದನ್ನು ಗುರುತಿಸಬಹುದು, ಶೇಷಗಳ ಅತ್ಯಧಿಕ ಮಹತ್ತ್ವ ಜೀವವಿಕಾಸವಾದಕ್ಕಿರಬಹುದು. ಇವು ವಿಕಾಸವಾದಕ್ಕೆ ಶಾಸ್ತ್ರೀಯ ಆಧಾರಗಳೆಂದು ಪರಿಗಣಿತವಾಗಿವೆ. ವಿವಿಧ ಜಾತಿಯ ಪ್ರಾಣಿಗಳು ಹೇಗೆ ಉಂಟಾದವು ಎಂಬುದಕ್ಕೆ ಎಷ್ಟೋ ವಾದಗಳುಂಟು. ಇವುಗಳಲ್ಲಿ ಒಂದು ವಾದ ವಿಶಿಷ್ಟ ನಿರ್ಮಾಣವಾದ. ಅದು ತಿಳಿಸುವಂತೆ ದೈವೀಕ ಪ್ರೇರಣೆಯಿಂದ, ಭಿನ್ನ ಭಿನ್ನ ಜಾತಿಯ ಪ್ರಾಣಿಗಳು ಹುಟ್ಟಿರುವುದರಿಂದ ಅವುಗಳಲ್ಲಿ ಯಾವ ಸಂಬಂಧ ಇರುವುದಿಲ್ಲ. ಇದಕ್ಕೆ ಪ್ರತಿಯಾಗಿ ಪ್ರಾಣಿಗಳು ಕಾಲ, ದೇಶ, ಪರಿಸರಕ್ಕನುಸಾರವಾಗಿ ರೂಪಾಂತರ ಹೊಂದಿ ವಿವಿಧ ಪ್ರಭೇದಗಳಾಗಿರುವುವೆಂದು ಊಹಿಸಬಹುದು. ಆದ್ದರಿಂದ ಜೀವವಿಕಾಸವಾದದ ಪ್ರಕಾರ ಈಗಿರುವ ವಿವಿಧ ಜಾತಿಗಳು ಒಂದಕ್ಕೊಂದು ಸಂಬಂಧಪಟ್ಟಿರುವುದೆಂದು ಗೊತ್ತಾಗಿದೆ. ಈ ತಿಳಿವಳಿಕೆಯನ್ನು ಸಿದ್ಧಪಡಿಸುವು ದಕ್ಕೆ ಅವಯವ ಶೇಷಗಳು ಒಳ್ಳೆಯ ನಿದರ್ಶಕಗಳು. ಆದರೆ ಅವಯವ ಶೇಷಗಳ ಅಸ್ತಿತ್ವಕ್ಕೆ ಯಾವುದೇ ವಿಶಿಷ್ಟ ನಿರ್ಮಾಣವಾದದ ಕಾರಣವನ್ನು ಕೊಡಲಿಕ್ಕೆ ಬರುವುದಿಲ್ಲ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: