ಅಗ್ಗಿಷ್ಟಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂಗಳು ಗೃಹಾಗ್ನಿಯೆಂದು ಕರೆಯುವ ಸ್ಥಳ. ಗೃಹಾಗ್ನಿ ಬಹುಶಃ ಪುರಾತನಕಾಲದಿಂದ ಎಲ್ಲ ಜನರ ವಾಸಸ್ಥಳದಲ್ಲೂ ಗಣ್ಯ ಹಾಗೂ ಪವಿತ್ರ ಸ್ಥಾನವನ್ನು ಪಡೆದಿದೆ. ಹಿಂದೂಗಳಲ್ಲಿ ಗೃಹಾಗ್ನಿಯೆಂದರೆ ಅಡುಗೆಯ ಒಲೆಯ ಅಗ್ನಿಯಾಗಬಹುದು, ಹೋಮಾಗ್ನಿಯಾದರೂ ಆಗಬಹುದು. ಎರಡು ಸ್ಥಳಗಳೂ ಪವಿತ್ರವಾದುವೇ. ಹಿಂದೂ ಆದವನು ಯಾವನೂ ಕಾಲು ತೊಳೆದುಕೊಳ್ಳದೆ ಅಡುಗೆಯ ಮನೆಗೆ ಪ್ರವೇಶಿಸಕೂಡದು. ಬ್ರಾಹ್ಮಣರು ಸ್ನಾನಮಾಡಿ ಮಡಿ ಉಟ್ಟುಕೊಂಡ ಹೊರತು ಒಲೆಯಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸುವಂತಿಲ್ಲ. ಹೋಮಕ್ಕೆ ಪ್ರತ್ಯೇಕ ಸ್ಥಳವಿರುವಾಗಲೂ ಆ ಸ್ಥಳಕ್ಕೆ ಅಡುಗೆಯ ಒಲೆಯ ಬೆಂಕಿಯನ್ನು ಮಡಿಯುಟ್ಟ ಹೆಂಗಸರು ತುಂಬ ಕಟ್ಟುನಿಟ್ಟಿನಿಂದ ತಂದಿಡುತ್ತಾರೆ. ಪಾರಸಿಕರಿಗೆ ಗೃಹಾಗ್ನಿ ತುಂಬ ಪುಜ್ಯವಾದದ್ದು. ನಿಷ್ಠರಾದ ಪಾರಸಿಕರು ಅದು ಆರಿಹೋಗದಂತೆ ನಿರಂತರವಾಗಿ ಪೋಷಿಸುತ್ತಾರೆ. ಅದನ್ನು ಆರಿಸುವುದನ್ನು ಮಹಾಪಾಪವೆಂದು ಎಣಿಸುತ್ತಾರೆ. ಕಾಡು ಜನರಲ್ಲೂ ಇಂಥ ಭಾವನೆಯುಂಟು. ದಕ್ಷಿಣ ಆಫ್ರಿಕದ ಡಮಾರ ಜನರು ಗೃಹಾಗ್ನಿಯನ್ನು ಆರಿಹೋಗದಂತೆ ತುಂಬ ಜಾಗರೂಕತೆಯಿಂದ ಇಡುತ್ತಾರೆ. ಈ ಕರ್ತವ್ಯ ಪರಿಪಾಲನೆಯನ್ನು ಗುಂಪಿನ ಮುಖ್ಯಸ್ಥನ ಮಗಳಿಗೆ ವಹಿಸುತ್ತಾರೆ.