ಅಕ್ರಮ ನಿರ್ಬಂಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ರಮ ನಿರ್ಬಂಧ - ಒಬ್ಬ ವ್ಯಕ್ತಿಯ ಚಲನವಲನದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಬಲವಂತವಾಗಿ ಒಂದೆಡೆ ಕೂಡಿಡುವುದು. ಇದನ್ನು ಇಂಡಿಯನ್ ಪೀನಲ್ ಕೋಡ್ 339ನೆಯ ಕಲಂನಲ್ಲಿ ವಿವರಿಸಿದೆ. ತನಗಿಷ್ಟ ಬಂದ ಕಡೆ ಹೋಗುವ ಹಕ್ಕು ವ್ಯಕ್ತಿಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಬೇರೆಯವರ ಮನೆಗೆ ಅಕ್ರಮವಾಗಿ ಪ್ರವೇಶಿಸುವುದು, ಇತರರ ಆಸ್ತಿವ್ಯವಹಾರಗಳಲ್ಲಿ ಕೈಹಾಕುವುದು-ಇತ್ಯಾದಿ ವ್ಯಕ್ತಿಸ್ವಾತಂತ್ರ್ಯವಲ್ಲ. ತಮಗೆ ಇಷ್ಟ ಬಂದ ಕಡೆ ಹೋಗುವ ಸ್ವಾತಂತ್ರ್ಯ ಎಲ್ಲ ವ್ಯಕ್ತಿಗಳಿಗೂ ಉಂಟು. ಅದನ್ನು ನಿರೋಧಿಸುವುದು ಅಕ್ರಮ ನಿರ್ಬಂಧ. ಆದರೆ ಎಲ್ಲ ನಿರ್ಬಂಧವೂ ಅಕ್ರಮವೆನಿಸುವುದಿಲ್ಲ. ಅವುಗಳಿಗೆ ನಿರ್ದಿಷ್ಟ ನಿಯಮಗಳಿರುತ್ತವೆ. ನೆಲದ ಮೇಲೆ ಅಥವಾ ನೀರಿನ ಮೇಲೆ ಹಾದುಹೋಗುವ ಖಾಸಗಿ ದಾರಿಹಕ್ಕನ್ನು ಹೊಂದಿದವನೊಬ್ಬನು ತನಗೊಬ್ಬನಿಗೆ ಆ ದಾರಿಯಲ್ಲಿ ಓಡಾಡುವ ಸಂಪುರ್ಣ ಹಕ್ಕಿದೆಯೆಂದು ತಿಳಿದು, ಇತರರು ಆ ದಾರಿಯಲ್ಲಿ ಹೋಗದಂತೆ ನಿರ್ಬಂಧಪಡಿಸಿದರೆ ಆಗ ಅದು ಅಕ್ರಮ ನಿರ್ಬಂಧ ಎನಿಸುವುದಿಲ್ಲ. ಏಕೆಂದರೆ, ಅಡ್ಡಿಪಡಿಸಿದಾತನಿಗಿರುವ ನ್ಯಾಯಸಮ್ಮತವಾದ ಹಕ್ಕಿನ ಪ್ರಕಾರ ಹಾಗೂ ಇತರರಿಗೆ ಆ ದಾರಿಯಲ್ಲಿ ಓಡಾಡುವ ಹಕ್ಕು ಇರುವುದಿಲ್ಲ. ಒಂದು ವೇಳೆ ಅಡ್ಡಗಟ್ಟಿದವನು ದಾರಿಹೋಕನ ಹಕ್ಕನ್ನು ಅಡ್ಡಪಡಿಸಿದ್ದರಿಂದ ಉದ್ಭವಗೊಂಡ ವಿವಾದವನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಬಗೆಹರಿಸಿಕೊಳ್ಳಬೇಕು. ಒಬ್ಬನನ್ನು ಒಂದು ಕೋಣೆಯಲ್ಲೋ ಮನೆಯಲ್ಲೋ ಕೂಡಿಹಾಕಿ ಹೊರಗೆ ಬರದಂತೆ ಆತನನ್ನು ನಿರ್ಬಂಧಿಸುವುದಾಗಲಿ, ಮನೆಯ ಯಜಮಾನನು ತನ್ನ ಮನೆಯೊಳಕ್ಕೆ ಹೋಗದಂತೆ ಬಾಗಿಲನ್ನು ಭದ್ರಪಡಿಸಿ ಅಥವಾ ನಿರ್ಬಂಧಿಸುವುದು ನಿಸ್ಸಂಶಯವಾಗಿ ಅಕ್ರಮ ನಿರ್ಬಂಧವಾಗುತ್ತದೆ. ಆದರೆ, ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಲ್ಲನ್ನೋ ಮರದ ದಿಮ್ಮಿಗಳನ್ನೋ ಇಟ್ಟು ಗುಳಿ ತೋಡಿದರೆ ಅದು ಅಕ್ರಮ ನಿರ್ಬಂಧವಾಗುವುದೆ? ದಾರಿಹೋಕನಿಗೆ ಆತ ಮುಂದಕ್ಕೆ ಹೋಗಲು ಅದು ಅಡ್ಡಿಯಾಗಿದೆಯೇ ಹೊರತು, ಹಿಂತಿರುಗಿ ಹೋಗಲು ಎಡಬಲಗಳಿಗೆ ಸರಿದುಹೋಗಲು ಯಾವ ಅಡ್ಡಿಯೂ ಇರುವುದಿಲ್ಲವಲ್ಲ - ಎಂದು ವಾದಿಸಿ ಇದು ಅಕ್ರಮ ನಿರ್ಬಂಧವಲ್ಲವೆಂದು ವಾದಿಸಬಹುದು. ಇದೂ ಅಕ್ರಮ ನಿರ್ಬಂಧವೆಂದು ನ್ಯಾಯಾಲಯಗಳು ತೀರ್ಪಿತ್ತಿವೆ. ತನಗೆ ಹಕ್ಕಿರುವ ದಿಕ್ಕಿನಲ್ಲಿ ಹೋಗುವವನೊಬ್ಬನನ್ನು ಬೇರೊಂದು ದಿಕ್ಕಿನಲ್ಲಿ ಹೋಗುವಂತೆ ಪ್ರೇರೇಪಿಸಿ ನಿರ್ಬಂಧಿಸಿದರೆ ಆಗ ಅದು ಅಕ್ರಮ ನಿರ್ಬಂಧವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಒಬ್ಬನ ವ್ಯಕ್ತಿಸ್ವಾತಂತ್ರ್ಯವನ್ನು ಮೊಟಕುಮಾಡುವ ಯಾವುದೇ ರೀತಿಯ ನಿರ್ಬಂಧವಾದರೂ ಅದು ಅಕ್ರಮ ನಿರ್ಬಂಧವಾಗುತ್ತದೆ.