ಹೊಸ್ತೋಟ ಮಂಜುನಾಥ ಭಾಗವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hostota Manjunath Bhagavat (Yakshagana)

ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ಉತ್ತರ ಕನ್ನಡ ಜಿಲ್ಲೆಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು. ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿದ್ದ ಶ್ರೇಷ್ಠ ಕಲಾವಿದರು. ಜನವರಿ ೭ - ೨೦೨೦ ರಂದು ಭಾಗವತರು ನಿಧನರಾದರು.

ಜೀವನ[ಬದಲಾಯಿಸಿ]

ಶ್ರೀ ಮಂಜುನಾಥ ಬಾಗವತರು ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕು ಹನ್ಮಂತಿ ಹೊಸ್ತೋಟದಲ್ಲಿ ಗಣಪತಿ ಹೆಗಡೆ ಮತ್ತು ಮಹಾದೇವಿ ಹೆಗಡೆ ದಂಪತಿಗೆ ದಿ. 15-2 -1940 ರಂದು ಜನಿಸಿದರು. ಹತ್ತಿರದ ಗೋಳಿ ಶಾಲೆಯಲ್ಲಿ ನಾಲ್ಕನೇಯ ತರಗತಿಯವರೆಗೆ ಓದಿದರು.

ಬಾಲ್ಯದಲ್ಲಿಯೇ ಹನುಮಂತಿಯ ಟೆಂಟ್ ಯಕ್ಷಗಾನ ಮೇಳದಲ್ಲಿ ಶಿವರಾಮ ಹೆಗಡೆ, ಮತ್ತು ಮಹಾಬಲ ಹೆಗಡೆಯವರಲ್ಲಿ ಯಕ್ಷಗಾನ ಕಲೆಯನ್ನು ಕಲಿತರು. ಇವರು ಭಾಗವತಿಕೆಯನ್ನೇ ಉಸಿರಾಗಿಸಿಕೊಂಡದ್ದು ಕೆರೆಮನೆ ಶಿವರಾಮ ಹೆಗ್ಡೆಯವರ ಪ್ರಭಾವದಿಂದ. ಆರಂಭದಲ್ಲಿ ಕೊಡಗಿಪಾಲ ಶಿವರಾಮ ಹೆಗ್ಡೆ ಇವರನ್ನು ರಂಗಕ್ಕೆ ತಂದಾಗ ಉತ್ಸಾಹದಿಂದ ಹಾಡುಗಾರಿಕೆ ನಡೆಸಿ ಹೆಚ್ಚಿನ ಜಿಜ್ಞಾಸೆ ಬೆಳೆಸಿಕೊಂಡು ಬಾಳೆಹದ್ದು ಕೃಷ್ಣ ಭಾಗವತ ಹಾಗೂ ಕೆರಮನೆ ಮಹಾಬಲ ಹೆಗ್ಡೆ ಇವರ ಶಿಷ್ಯನಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟೂ ಗಟ್ಟಿಗೊಳಿಸಿಕೊಂಡರು. ಅವರು 28 ವರ್ಷಗಳಕಾಲ ಅದೇ ಯಕ್ಷಗಾನ ಮೇಳಗಳಲ್ಲಿದ್ದು , ಭಾಗವಹಿಸುತ್ತಲೇ, ಆ ಕಲೆಯ ಅಭ್ಯಾಸ ಅಧ್ಯಯನ, ತರಬೇತಿ ಪಡೆದು, ಸಂಪ್ರದಾಯಕ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿ ಪ್ರಾವೀಣ್ಯತೆ ಪಡೆದರು.ಅಂದರೆ ಕ್ರಮೇಣ ಭಾಗವತಿಕೆ, ನೃತ್ಯ, ಚಂಡೆ, ಮದ್ದಳೆ, ವೇಷಗಾರಿಕೆ ಮಾಡುತ್ತಾ ಬಯಲಾಟದ ಅನೇಕ ತಿರುಗಾಟಗಳನ್ನು ಮಾಡಿದ ಅನುಭವ ಇವರದು. ತಮ್ಮ ಹಸ್ತೋಟಾ ಗಜಾನನ ಭಟ್ಟರು ಸ್ವತಃ ಇವರ ತಮ್ಮನಾಗಿದ್ದು ಇವರ ಮೇಳದಲ್ಲಿ ಚಂಡೆ ವಾದಕರಾಗಿದ್ದಕು. ಅಣ್ಣ ತಮ್ಮಮಂದಿರು ತಮ್ಮ ಜೀವನವನ್ನನೇ ಮುಡುಪಾಗಿಟ್ಟಿದ್ದರು.ಅವರ ತಮ್ಮನೂ ಅವರಂತೆ ಪ್ರಸಂಗ ಕರ್ತೃ ,ಭಾಗವತ, ಚೆಂಡೆ, ಮೃದಂಗವಾದಕ, ವೇಷಧಾರಿ, ಹಾಗು ಅರ್ಥಧಾರಿಗಳಾಗಿದ್ದರು‌. ಅಣ್ಣನಂತೆ ತಮ್ಮ ಎಂಬ ಖ್ಯಾತಿಗೂ ಭಾಜನರಾಗಿದ್ದರು‌.

ವಿರಕ್ತಿ[ಬದಲಾಯಿಸಿ]

೧೯೬೬-ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಕಾರವಾರದ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ಪ್ರಭಾನಂದ ಜೀ (ಸ್ವಾಮಿ ವಿರಜಾನಂದರ ಶಿಷ್ಯರು) ಅವರಿಂದ ಅಧ್ಯಾತ್ಮಿಕ ದೀಕ್ಷೆ ಪಡೆದು ಒಂದು ವರ್ಷ ಆಶ್ರಮವಾಸ ಮಾಡಿದರು. ಶ್ರೀ ರಾಮಕೃಷ್ಣ ಆಶ್ರಮಕ್ಕೆ ಸೇರಿ ಅಭಯ ಚೈತನ್ಯ ಬ್ರಹಚಾರಿ ಆದರು.
ಇಂದಿಗೂ ಹೊಸ್ತೋಟ ಮಂಜುನಾಥ ಭಾಗವತರು ಎಲ್ಲಾ ಅರ್ಥಗಳಲ್ಲಿ ಪರಿವ್ರಾಜಕರಾಗಿ ತಮ್ಮ ಸಂಪೂರ್ಣ ಸೇವೆಯನ್ನು ಯಕ್ಷಗಾನಕ್ಕೆ ಮುಡಿಪಾಗಿರಿಸಿರುವರು.

ಭಾಗವತಿಕೆಯ ಜೊತೆಯಲ್ಲಿ ಅರ್ಥಗಾರಿಕೆಯಲ್ಲೂ ಮೊದಲ ಪಂಕ್ತಿಗೆ ಅರ್ಹರಾದ ಇವರು ಸಂಶೋಧನತ್ಮಕ ನೆಲೆಯಲ್ಲಿ ಕಲೆಯನ್ನು ನೋಡುವ ಕಲಾ ಜಿಜ್ಞಾಸುಗಳಾಗಿರುವರು.

ಬಗೆಬಗೆಯ ಚಟುವಟಿಕೆ[ಬದಲಾಯಿಸಿ]

ಅನಂತರ ಹಲವಾರು ಊರು ಮೇಳಗಳಲ್ಲಿ ಯಕ್ಷಗಾನ ಕಲಿಕಾ ಶಿಬಿರಗಳು, ಶಾಲಾಮಕ್ಕಳಿಗೆ ಮತ್ತು ಮಹಿಳಯರಿಗೆ ,ಅಂಧರಿಗೆ (!) ಯಕ್ಷಗಾನ ತರಬೇತಿ, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟ್ಟುಗಳ ಅಧ್ಯಯನ ಮತ್ತು ಸಂಗ್ರಹ; ಸಿರಸಿಯ ಹತ್ತಿರ ಸ್ವರ್ಣವಲ್ಲಿ ಮಠದಲ್ಲಿ (ಯಕ್ಷ ಶಾಲ್ಮಲೆ) ಯಕ್ಷಗಾನದ ಅನುಸಂಧಾನ, ಭಾಗವತಿಕೆ , ಮೃದಂಗ, ವೇóಷಭೂಷಣ , ನೃತ್ಯ, ಭಾವಾಭಿನಯ ಪ್ರಾತ್ಯಕ್ಷತೆಯ ಗೋಷ್ಟಿಗಳು , ಬೇಸಿಗೆ ಶಿಬಿರಗಳು-ಅದರಲ್ಲಿ ಪ್ರಾತ್ಯಕ್ಷತೆಯ ಪ್ರಯೋಗ, ಹಲವಾರು ಯಕ್ಷಗಾನ ಸಪ್ತಾಹಗಳ ನಿರ್ದೇಶನ,ಯಕ್ಷಗಾನ ತಾಳಮದ್ದಲೆ (ಅಭಿನಯ ವೇಷಧರಿಸದೆ ಕುಳಿತು, ಸಂಭಾಷಣೆಯಲ್ಲಿ ಯಕ್ಷಗಾನ ಪ್ರಸಂಗ ನೆಡೆಸುವುದು-(ಕೆವಲ ಮಾತುಗರಿಕೆಯ ನಾಟಕೀಯ ಕಥಾ ಪ್ರಸಂಗ) ಈ ಎಲ್ಲಾ ಕಾರ್ಯಕ್ರಮಗಲನ್ನು ಬಿಡುವಿಲ್ಲದೆ ನಡೆಸಿದ್ದಾರೆ. ಜಾನಪದ ವಿಚಾರವೂ ಸೇರಿದಂತೆ ಹಲವೆಡೆ ಉಪನ್ಯಾಸ ನೀಡಿದ್ದಾರೆ.

ಭಾಗವತಿಕೆ
ಅಂದರೆ ಯಕ್ಷಗಾನದ ಪದ(ಪದ್ಯ)ಗಳನ್ನು ಅದರದ್ದೇ ಆದ ವಿಶಿಷ್ಟ ರಾಗ-ತಾಳಗಳ ಮೇಳದಲ್ಲಿ (ಜಾನಪದ ಮಟ್ಟು) ಹೇಳುವುದು;
ವೇಷಗಾರಿಕೆ
ಯಕ್ಷಗಾನ ವೇಷ ಧರಿಸುವುದು -ವೇಷದಲ್ಲಿ -ವೇಷಕ್ಕೆ ಶಾಸ್ತ್ರೀಯವಾದ ರೀತಿ ತಕ್ಕ ಬಣ್ಣಗಾರಿಕೆ, ಉಡುಪು ತೊಡುವ ವಿನ್ಯಾಸ, ಪೇಟ/ಮುಂಡಾಸ ಕಟ್ಟುವುದು ಮೊದಲಾದವುಗಳನ್ನು ಅವರೇ ಮಾಡಿಕೊಳ್ಳಬೇಕು;
ನೃತ್ಯ
ಯಕ್ಷಗಾನದ ಕುಣಿತಕ್ಕೆ ಹೆಜ್ಜೆ ಹಾಕುವುದು ಎನ್ನುತ್ತಾರೆ, ಪಾತ್ರಗಳಿಗೆ ತಕ್ಕ ರೀತಿ ಮತ್ತು ಅಯಾ ಭಾವ /ರಸಕ್ಕೆ ತಕ್ಕಂತೆ ಅಭಿನಯಿಸುವ ಮತ್ತು ಹೆಜ್ಜೆ ಹಾಕುವ ಕಲೆ , ಅದರಲ್ಲಿ ಕಣ್ಣು, ಕೈ, ದೇಹದ ಚಲನೆ, ನಿಲ್ಲುವ, ನಡೆಯುವ, ಉತ್ತರಿಸುವ ಭಂಗಿಯಲ್ಲಿ ಪರಿಣತಿ;
ಚಂಡೆ, ಮದ್ದಳೆ
ಭಾಗವತರ ಪದಕ್ಕೆ ರಾಗ ತಾಳಕ್ಕೆ ತಕ್ಕಂತೆ ಮದ್ದಳೆ (ಮೃದಂಗ) ನುಡಿಸುವುದು / ಬಾರಿಸುವುದು; ಅದೇ ರೀತಿ ಚಂಡೆ ಬಾರಿಸುವಿಕೆ, ಹೆಚ್ಚಾಗಿ ವೀರ, ರೌದ್ರ,ಭಯಾನಕ ರಸಗಳಿಗೆ ಚಂಡೆ ಬಾರಿಸುವರು; ಈಗೀಗ ಎಲ್ಲ ಪದಕ್ಕೂ ಅದನ್ನು ಬಾರುವ ಪದ್ದತಿ ಬಂದಿದೆ!
ಅರ್ಥಗಾರಿಕೆ
ಭಾಗವತರು ಹೇಳುವ ಪದಗಳಿಗೆ ಸ್ವಾರಸ್ಯವಾಗಿ ಸ್ವಂತಿಕೆಯುಳ್ಳ ಅರ್ಥವನ್ನು ಪೌರಾಣಿಕ ಶೈಲಿಯಲ್ಲಿ ಸಂಭಾಷಣೆಯ ಕ್ರಮದಲ್ಲಿ -ಹೇಳುವುದು;
ಇದಲ್ಲದೆ ರಂಗ ಪ್ರವೇಶ, ನಿರ್ಗಮನ ಮೊದಲಾದ ಯಕ್ಷಗಾನಕ್ಕೆ ವಿಶಿಷ್ಟವಾದ ಕ್ರಮ, ವಿದ್ಯೆಗಳಿವೆ. ಅವುಗಳೆಲ್ಲದರಲ್ಲಿಯೂ ಪರಿಣತಿ ಪಡೆಯುವುದು ಕಷ್ಟಸಾದ್ಯ.
ಭಾಗವತಿಕೆಯಲ್ಲಿ ರಾಗ ತಾಳಗಳ ಜೊತೆ ಭಾಷೆ ಛಂದಸ್ಸುಗಳ ಜ್ಞಾನ ಬೇಕು. ಅವರು ಈ ಯಕ್ಷಗಾನದ ಎಲ್ಲಾ ಕಲೆಯಲ್ಲಿ ಪರಿಣತಿಪಡೆಯುವುದರ ಜೊತೆಯಲ್ಲಿಯೇ ವಿಶೇಷವಾಗಿ ಕನ್ನಡ ಸಾಹಿತ್ಯ ಮತ್ತು ಛಂದಸ್ಸಿನ ಅಧ್ಯಯನ ಮಾಡಿದರು.

ರಚಿಸಿದ ಕೆಲವು ಯಕ್ಷಗಾನ ಪ್ರಸಂಗಗಳು[ಬದಲಾಯಿಸಿ]

  • :ರಾಮಾಯಣದ 19 ಪ್ರಸಂಗ ;
  • ಮಹಾಭಾರತದ 50 ಪ್ರಸಂಗ ;
  • ಭಾಗವತದ 20 ಪ್ರಸಂಗ ;
  • ರಾಮ ಕೃಷ್ಣ ಚರಿತೆ 27 ಪ್ರಸಂಗ ;
  • ಗೋ ಮಹಿಮಾಯಾನ 33 ಪ್ರಸಂಗ ;
  • ಮಕ್ಕಳಿಗಾಗಿ ಚೈತ್ರ ಪೂರ್ಣಿಮಾ (ಪಂಚತಂತ್ರ ಆಧರಿಸಿ) ;
  • ಮ್ಯಾಕ್ ಬೆತ್ ಆಧರಿಸಿ “ಮೇಘಕೇತ” ;
  • ಆಲ್ ಇಸ್ ವೆಲ್ ದಟ್ ಎಂಡ್ಸ್ ವೆಲ್ ಆಧರಿಸಿ :
  • ಗುಣಪನ ಕಲ್ಯಾಣಹೋಮರನ ಒಡೆಸ್ಸೀ ಕಾವ್ಯವನ್ನಾಧರಿಸಿ ಉಲ್ಲಾಸ ದತ್ತ ಚರಿತ್ರೆ 3 ಪ್ರಸಂಗಗಳು;
  • ಕಾಳಿದಾಸನ ಮೇಘದೂತ, ಶಾಕುಂತಲ; ,
  • ಭಾಸನ ಯೌಗಂಧರಾಯಣ, ಉತ್ತರರಾಮ ಚರಿತೆ, ದೂತವಾಕ್ಯ,
  • ಚಿತ್ರಪಟ ರಾಮಾಯಣ ,
ಮುಂತಾಗಿ 250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಒಂದಿಲ್ಲೊಂದುಕಡೆ ಪ್ರದರ್ಶನಗೊಳ್ಳುತ್ತಿವೆ. ಇವರ “ನಿಸರ್ಗಾನುಸಂಧಾನ” ಕನ್ನಡ ,ಹಿಂದಿ, ಸಂಸ್ಕøತ ಗಳಲ್ಲಿ ಭಾರತಾದ್ಯಂತ ಪ್ರದರ್ಶನ ಕಂಡಿದೆ. ಯಕ್ಷಗಾನವು “ಕರ್ನಾಟಕದ ಪ್ರಸಿದ್ಧ ಕಲೆಯಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾರೆ. ಹೀಗೆ ತಮ್ಮ ತನು-ಮನ-ಧನಗಳನ್ನು ಯಕ್ಷಗಾನ ಕಲೆಗೆ ಮೀಸಲಿಟ್ಟ ಮತ್ತೊಬ್ಬ ವ್ಯಕ್ತಿ ಇಲ್ಲ. ಹೀಗಾಗಿ ಭಾಗವತರು ಕೇವಲ ವ್ಯಕ್ತಿ ಮಾತ್ರವಲ್ಲ -ಶಕ್ತಿ ಮತ್ತು ಸಂಘಟನೆ ಯೂಆಗಿದ್ದಾರೆ ಎಂಬುದು ಪ್ರಾಜ್ಞರ ಅಭಿಮತ.

ಸಂಶೋಧನೆ ಮತ್ತು ಇತರೆ ಕೃತಿಗಳು[ಬದಲಾಯಿಸಿ]

  • ಯಕ್ಷಗಾನ ಶಿಕ್ಷಣ ಲಕ್ಷಣ -- ೫೦ ವರ್ಷದ ಸಮಗ್ರ ಸಂಶೋಧನೆ ಮತ್ತು ಶಿಕ್ಷಣ ಗ್ರಂಥ - ೨೦೧೯ ಯಕ್ಷಮಿತ್ರ ಟೊರಾಂಟೋ ದಿಂದ ಪ್ರಕಾಶಿತ.
  • ಸಂಪಾಜೆ ಯಕ್ಷಗಾನ ಸಮ್ಮೇಳನದ ಅದ್ಯಕ್ಷತೆ. ;
  • ಶಿವರಾಮ ಕಾರಂತ ಪ್ರತಿಷ್ಠಾನದಲ್ಲಿ ವಿಚಾರ ಪೂರ್ಣ ಪ್ರಬಂಧಮಂಡನೆ ;
  • ಮೂಡಲಪಾಯ ಯಕ್ಷಗಾನದ ವರದಿ ಮಂಡನೆ (ಬಿದಿರೇಹಳ್ಳಿ -ತುಮಕೂರುಜಿಲ್ಲೆ
  • ತಾಳೆಗರಿಯಲ್ಲಿನ ‘ಯಕ್ಷಗಾನ ಪ್ರಸಂಗಗಳ ಅಧ್ಯಯನ’ ಮತ್ತು ಅದರ ಪ್ರಕಟಣೆ (ಕೆಳದಿ ವಸ್ತು ಸಂಗ್ರಹಾಲಯ,), *‘ರಾಮಕೃಷ್ಣ ಚರಿತೆ’, ಮಹಾಕಾವ್ಯದ ಭಾವಾನುವಾದ (ರಾಮಕೃಷ್ಣಾಶ್ರಮ ಮೈಸೂರು),
  • ‘ಒಡಲಿನ ಮಡಿಲು-ಯಕ್ಷತಾರೆ’(ಬಯಲಾಟದ ನೆನಪುಗಳು) (ಅನೇಕ ಟ್ರಸ್ಟ್ ಬೆಂಗಳೂರು.);
  • ‘ಪವಾಡವಲ್ಲ ವಿಸ್ಮಯ’, (ಅಪೂರ್ವ ಅನುಭವಗಳು- ಅನೇಕ ಟ್ರಸ್ಟ್ ಬೆಂಗಳೂರು.) ಹೀಗೆ ಹಲವರು ಕೃತಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಸಂದರ್ಶನಗಳು ಪ್ರಕಟಗೊಂಡಿವೆ.

ಯಕ್ಷಗಾನ ಪ್ರಚಾರ ಚಳುವಳಿ[ಬದಲಾಯಿಸಿ]

ಉತ್ತರ ಕನ್ನಡ ಮತ್ತು ಮಲೆನಾಡುಗಳಲ್ಲಿ ಯಕ್ಷಗಾನದ ಸರ್ವಾಂಗ ಶಿಕ್ಷಣದ ಗುರುವಾಗಿ, ಭಾಗವತರಾಗಿ ತಮ್ಮ ಕಾರ್ಯವನ್ನು ಒಂದು ಚಳುವಳಿ ರೂಪವಾಗಿ ಬೆಳೆಸಿರುವರು. ಇವರ ಇಪ್ಪತೈದು ವರ್ಷಗಳ ತಿರುಗಾಟದಲ್ಲಿ ಸುಮಾರು 30 ಭಾಗಗಳಲ್ಲಿ ಸಾವಿರಕ್ಕೂ ಮಿಕ್ಕಿದ ಶಿಷ್ಯರನ್ನು ತಯಾರಿಸಿದ ಕೀರ್ತಿ ಇವರದಾಗಿದೆ. ಯಕ್ಷಗಾನ ಪಾಠ, ತರಬೇತಿ ನೀಡಿರುವ ಇವರು ಏಕವ್ಯಕ್ತಿ ಗುರುಕುಲವೆಂಬ ಪ್ರಶಂಸೆಗೆ ಪಾತ್ರರಾಗಿರುವರು. ಇವರ ಮತ್ತೊಂದು ಸಾಧನೆಯೆಂದರೆ ಶಿವಮೊಗ್ಗದ ಅಂಧ ವಿಕಾಸ ಕೇಂದ್ರದ ಮಕ್ಕಳಿಗೆ ತರಬೇತಿ ನೀಡಿ ಯಕ್ಷಗಾನವನ್ನು ಪ್ರದರ್ಶಿಸಿರುವ ಆಟಗಳು ಒಂದು ಅಭೂತಪೂರ್ವ ಹಾಗೂ ಗಿನ್ನೆಸ್ ದಾಖಲೆಯಾಗುವಂತಹ ಸಾಧನೆ ಎನ್ನಬಹುದು. ಯಕ್ಷಗಾನದಲ್ಲಿ ಪ್ರಚಲಿತ ಶಿಕ್ಷಣ ಯೋಜನೆಗಿಂತ ಭಿನ್ನವಾಗಿ ಗಣಿತದ ಮೂಲಕ ತಾಳವನ್ನು ಹೇಳಿಕೊಡುವುದು, ಅದಕ್ಕೆ ಚಲನೆಯನ್ನು ಹೊಂದಿಸುವ ಇವರದೇ ಆದ ರಾಚನೀಕ ಸ್ವರೂಪ ಮತ್ತು ಪದ್ಯ ಮಟ್ಟುಗಳನ್ನು ಕಲಿಸುವುದು ಶಿಕ್ಷಣ ಕ್ಷೇತ್ರದಲ್ಲಿಯೇ ಒಂದು ಹೊಸ ದೃಷ್ಠಿಕೋನವೆಂದು ತಿಳಿಯಲಾಗಿದೆ. ಶ್ರೀಯುತರು ನಡೆಸಿಕೊಡುವ ತಾಳ, ಮಟ್ಟು, ಹಾಡುಗಾರಿಕೆಯ ವಿಧಾನದ ಅನೇಕ ಪ್ರಕಾರಗಳನ್ನು ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರವು ದಾಖಲೀಕರಣ ನಡೆಸಿದೆ.
ಇವರು, ‘ಯಕ್ಷಗುರು’ ; ಯಕ್ಷಭೀಷ್ಮ , ಯಕ್ಷ ಋಷಿ , ಮುಂತಾಗಿ ಗುರುತಿಸಲ್ಪಟ್ಟಿದ್ದಾರೆ.ಮನೆ ಮಠವಿಲ್ಲದ ಇವರದು ಅವಧೂತರಮತೆ ಜೀವನ. ಇವರಿಗೆ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿಯೂ ಶೀಷ್ಯರು, ಅಭಿಮಾನಿಗಳು ಇದ್ದಾರೆ.
ತನಗನಿಸಿದ್ದನ್ನು ನೇರವಾಗಿ ಹಾಗೂ ನಿರ್ಭಯವಾಗಿ ಹೇಳುವ ಹಾಗೂ ವಸ್ತುನಿಷ್ಠತೆಯನ್ನು ಸತತವಾಗಿ ಕಾಪಾಡಿಕೊಂಡಿರುವ ಹೋಲಿಕೆಯಿಲ್ಲದ ಈ ವ್ಯಕ್ತಿ ಯಕ್ಷಗಾನದ ಪರಿವ್ರಾಜಕ. ಇವರದೇ ಆದ ಆಸ್ತಿ, ತಾಣ, ಎಂಬುದಿಲ್ಲ. ಸದಾ ಒಂದು ಕೈ-ಚೀಲ ಹೊತ್ತು ಯಕ್ಷಗಾನದ ಭಾಗವತಿಕೆ, ಯಕ್ಷಗಾನದ ಪ್ರಯೋಗ ನಡೆಸುವ ಇವರಿಗೆ ಇದೀಗ ವಯಸ್ಸು ೭೩. ಅವರ ಮಾತಿನಲ್ಲೇ ಹೇಳುವುದಾದರೆ ನೀವು ನನಗೆ ಸಮ್ಮಾನ, ಸಭೆ, ಸಮಾರಂಭ ನಡೆಸಬೇಡಿ, ನನಗೆ ಮಾಡಲು ಕೆಲಸ ಕೊಡಿ, ಕ್ಷೇತ್ರ (ಯಕ್ಷಗಾನ ಕುರಿತು) ಕೊಡಿ, ಸಂತೋಷದಿಂದ ನಡೆಸುವೆ ಎನ್ನುವ ಇವರ ಮಾತು ಆದರ್ಶನೀಯ.(ಸದಾ ತಿರುಗಾಟದಲ್ಲಿ ಇರುವ ಶ್ರೀಯುತರನ್ನು ಸಂಪರ್ಕಿಸಲು ಶ್ರೀ ಸೋಂದ ನಾಗರಾಜ ಜೋಷಿ-ಮೊಬೈಲ್: ೦೯೪೪೫೭೫೬೨೭೩.)

75 ರ ಸಂಭ್ರಮ[ಬದಲಾಯಿಸಿ]

ಶ್ರೀ ಮಂಜುನಾಥ ಭಾಗವತರ 75 ರ ಸಂಭ್ರಮದ ಸಂದರ್ಭದಲ್ಲಿ “ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು" ಮತ್ತು "ಬೆಳೆಯೂರು “ಮಹಾಗಣಪತಿ ಯಕ್ಷಗಾನ ಮಂಡಲಿ", ಸಂಯುಕ್ತವಾಗಿ ಕರ್ನಾಟಕಾದ್ಯಂತ ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಪ್ರಶಸ್ತಿಗಳು[ಬದಲಾಯಿಸಿ]

  • ಭಾರತೀಯ ಸಂಗೀತ ನಾಟಕ ಅಕಾಡೆಮಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1987;
  • ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ 2012 ;
  • ವಿಶೇಷ ಪ್ರಶಸ್ತಿ : ಜಾನಪದ ಅಕಾಡೆಮಿ,
  • ಪರಮದೇವ ಪ್ರಶಸ್ತಿ (ಅಗ್ನಿ ಟ್ರಸ್ಟ್) 2012;
  • ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ;
  • ಬ್ರಹ್ಮಾವರದ ಹಾರಾಡಿ ರಾಮ ಗಾಣಿಗ-ವೀರಭದ್ರನಾಯಕ ಪ್ರಶಸ್ತಿ ;
  • ಸೀತಾನದಿಗಂಗಮ್ಮ ಭಾಗವತ ಪ್ರಶಸ್ತಿ ;
  • ಉಪ್ಪೂರುನಾರಾಯಣ ಭಾಗವತ ಪ್ರಶಸ್ತಿ :
  • ರಾಮ ವಿಠಲ ಪ್ರಶಸ್ತಿ (ಪೇಜಾವರ ಶ್ರೀಗಳು) 2014;
  • ಆಳ್ವಾಸ್ ನುಡಿ ಪುರಸ್ಕಾರ (ಮೂಡುಬಿದರೆ);
ಇತರೆ
  • ಸಾಕೇತ ಟ್ರಸ್ಟ್ ಹೆಗ್ಗೋಡು ಇವರಿಗೆ 60ವರ್ಷ ತುಂಬಿದಾಗ ‘ಷಷ್ಯ್ಠಬ್ಧಿ’ -ಜೀವನ ಕೃತಿ ವಿಮರ್ಶೆ1999 ಪ್ರಕಟಿಸಿದೆ.
  • ಸ್ವರ್ಣವಲ್ಲಿ ಮಠದ ಯಕ್ಷ ಶಾಲ್ಮಲಾ ‘ಯಕ್ಷಋಷಿ’ ಕೃತಿಗಳನ್ನು ಪ್ರಕಟಿಸಿವೆ.
  • ಅನೇಕ ನಾರಾಯಣ ಜೋಶೀ ಟ್ರಸ್ಟ್ (ರಿ) ಬೆಣಗಳೂರು ಇವರ ಗೌರವಾರ್ಥ -ಯಕ್ಷ ಕಿರೀಟ ಮಾಲಿಕೆ ;
  • ಇವರಿಗೆ ಸಂಬಂಧ ಪಟ್ಟಂತೆ ‘ಬಹುಮುಖ’ ಮಹಿಳಾ ಯಕ್ಷಗಾನ ಕೆಲವು ನೋಟಗಳು; ಸಂ.ಮಮತಾ ಜಿ. 2013 :ಎಂಬ ಕೃತಿಯನ್ನು ಪ್ರಕಟಿಸಿದೆ

[೧][೨]

ನಿಧನ[ಬದಲಾಯಿಸಿ]

೦೭-೦೧-೨೦೨೦ ರಂದು ನಿಧನರಾದರು. ಸಿರ್ಸಿತಾಲೂಕಿನ ಸೋಂದಾದಲ್ಲಿ ಅಭಿಮಾನಿಯೋರ್ವರ ಮನೆಯಲ್ಲಿ ೧೫ ದಿನಗಳ ಕಾಲ ವಾಸಿಸುತ್ತಿದ್ದರು.[೩]

ನೋಡಿ[ಬದಲಾಯಿಸಿ]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ಬೆಳೆಯೂರು;ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ; ಇವರ ಕಿರು ಪರಿಚಯ ಪತ್ರ ಪ್ರಕಟಣೆ(ಸಂಗ್ರಹ,ಸಂಪಾದನೆನಪ್ರಕಟಣೆ:ಪ್ರಕಾಶಜೋಶಿ ಕಾರ್ಯದರ್ಶಿಅನೇಕ ನಾರಯಣಜೋಶಿ ಚಾರಿಟಬಲ್ ಟ್ರಸ್ಟ್(ರಿ)೭೯೯,೭ನೆಯ ಎ ಮುಖ್ಯರಸ್ತೆ,ಗೃಹಲಕ್ಷ್ಮೀ ಬಡಾವಣೆ ಬೆಂಗಳೂರು).
  2. ಲಿಂಕ್:http://www.anekatrust.com Archived 2017-05-09 ವೇಬ್ಯಾಕ್ ಮೆಷಿನ್ ನಲ್ಲಿ. ; ;mail to; anekanjc2013@gmail.com
  3. ಯಕ್ಷಗಾನದ ರಸಋಷಿ ಹೊಸ್ತೋಟ ಮಂಜುನಾಥ ಭಾಗವತರು ಇನ್ನಿಲ್ಲ