ಹಾಸ್ಯ ಪ್ರಬಂಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಸ್ಯ ಪ್ರಬಂಧಗಳು[ಬದಲಾಯಿಸಿ]


  • ಹಾಸ್ಯ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆದವುಗಳು. ನಿಜ ಘಟನೆಗಳನ್ನು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ನೋಡಿ ಬರೆದ ಪ್ರಬಂಧಗಳನ್ನು ಲಘು ಪ್ರಬಂಧಗಳೆಂದು ಕರೆಯಬಹುದು.
  • ಶ್ರೀ ನಾಡಿಗೇರ ಕೃಷ್ಣ್ರಾಯ , ಶ್ರೀ ನಾ. ಕಸ್ತೂರಿ ಮೊದಲಾದವರು ಈ ಬಗೆಯ ಪ್ರಬಂಧಕ್ಕೆ ಹೆಸರಾದವರು. ಹಿಂದೆ ಇದ್ದ ಕೊರವಂಜಿ ಹಾಸ್ಯ ಪತ್ರಿಕೆ ಹಾಸ್ಯ ಪ್ರಬಂಧಕ್ಕೆ ಹೆಸರಾಗಿತ್ತು. ಈ ಬಗೆಯೆ ಪ್ರಬಂಧಕ್ಕೆ ಉದಾಹರಣೆಯಾಗಿ ಕೆಳಗಡೆ ಒಂದೆರಡು ಲಘು ಹಾಸ್ಯ ಪ್ರಬಂಧಗಳನ್ನು ಕೊಟ್ಟಿದೆ.

ಮರೆಗುಳಿತನದ ಇತಿಹಾಸ[ಬದಲಾಯಿಸಿ]


  • ಇತಿಹಾಸ ಸ್ವಲ್ಪ ಬೇಜಾರು ಉಂಟುಮಾಡುವ ವಿಷಯ. ಆದರೂ ಎಲ್ಲದಕ್ಕೂ ಒಂದು ಇತಿಹಾಸ ಇದ್ದೇ ಇರುವುದು ಒಂದು ಸತ್ಯ ಸಂಗತಿ. ಹಾಗೇಯೇ ಮರಗುಳಿತನಕ್ಕೂ ಒಂದು ಇತಿಹಾಸ ಇದ್ದೇ ಇದೆ. ಮರೆವು ಮತ್ತು ಮರೆಗುಳಿತನ ಬೇರೆ ಬೇರೆ. ಬೇಡವಾದುದನ್ನು ಮರೆಯುವುದು , ನಮಗೆ ಹಿತವಾದುದನ್ನು ನೆನಪಿಟ್ಟುಕೊಳ್ಳುವುದು ಸ್ವಾಭಾವಿಕ. ಬೇಕಾದ್ದನ್ನು ಅಗತ್ಯವಾದ ಸಮಯದಲ್ಲೇ ಮರೆಯುವುದು ಮರೆಗುಳಿತನ.
  • ಅತ್ಯಂತ ಪ್ರಾಚೀನ ಸಾಹಿತ್ಯವನ್ನು ಹುಡುಕಿದರೆ, ಶ್ರೀರಾಮನ ಬಂಟ ವೀರ ಹನುಮನಿಗೆ ಈ ಮರೆಗುಳಿತನ ಇದ್ದ ಬಗ್ಗೆ ಆಧಾರಗಳು ಸಿಗುತ್ತವೆ. ಒಳ್ಳೆಯ ಸಮಯದಲ್ಲೇ ಅವನನ್ನು ಈ ಮರೆವು ಕಾಡುತ್ತಿತ್ತು. ಎದುರಿಗೆ ಅಗಾಧ ಸಮುದ್ರ ; ಆಚೆ ಲಂಕೆ ; ಅಲ್ಲಿಗೆ ಸೀತೆಯನ್ನು ಹುಡುಕಲು, ಸಮುದ್ರವನ್ನು ಹಾರಿಹೋಗುವ ಶಕ್ತಿ ಯಾರಿಗಿದೆ? ಎಂದು ಎಲ್ಲಾ ಕಪಿ ಜಂಬೂಕಗಳು ಚಿಂತಿಸುತ್ತಿದ್ದರೆ, ಹನುಮ ಒಂದು ಬಂಡೆಯ ಮೇಲೆ ಏಕಾಂಗಿಯಾಗಿ ಕುಳಿತು ಚಿಂತಿಸುತ್ತಿದ್ದ. ಜಾಂಬವ ಅವನ ಹತ್ತಿ ರ ಬಂದು , ಮಾರುತಿ ನಿನಗ ಆ ಶಕ್ತಿ ಉಂಟು, ಬುದ್ಧಿಯನ್ನು ಎಲ್ಲಿಟ್ಟಿದ್ದೀಯಾ ನಿನ್ನ ಶಕ್ತಿಯನ್ನು ನೆನಪಸಿಕೋ ಎಂದಾಗ, ಓ ಹೌದಲ್ಲಾ ಎಂದು ಲಂಕೆಗೆ ಹಾರಿದ.
  • ಲಂಕೆಯನ್ನು ಸುಟ್ಟು, ಕೋಟೆಯನ್ನು ಹಾರಿ, ಲಂಕಾ ತೀರಕ್ಕೆ ಬಂದು ಬೆಂಕಿಯಿಂದ ಉರಿಯುತ್ತಿರುವ ಬಾಲದ ತುದಿಯನ್ನು ಸಮುದ್ರದಲ್ಲಿ ಅದ್ದಿದಾಗ, ಅಯ್ಯೋ ಸೀತಮ್ಮನಿಗೆ ಒಂದು ಮಾತು ಹೇಳಿ ಬರಲು ಮರೆತೆ. ಎಂದುಕೊಂಡು ಮತ್ತೆ ವಾಪಾಸು ಹೋಗಿ ಬಂದ. ಲಕ್ಷ್ಮಣ ಯುದ್ಧದಲ್ಲಿ ಮೋರ್ಛೆ ಹೋದಾಗ ಸಂಜೀವಿನೀ ಮೂಲಿಕೆಯ ಒಂದು ಕಡ್ಡಿಯನ್ನು ತರಲು, ಗಿಡದ ಲಕ್ಷಣಗಳನ್ನು ವೈದ್ಯ ಸುಷೇಣ ಹೇಳಿ , ಬೇಗ ತೆಗೆದುಕೊಂಡು ಬಾ, ಮಾರುತಿಯನ್ನು ಕಳುಹಿಸಿದ. ಅವನು ಆ ಪರ್ವತಕ್ಕೆ ಹೋಗುವಷ್ಟರಲ್ಲಿ ಆ ಮೂಲಿಕೆಯ ವಿವರವನ್ನು ಮರೆತು ಗುಡ್ಡವನ್ನೇ ತಂದ. ಕಡ್ಡಿಯನ್ನು ತಾ ಎಂದರೆ ಗುಡ್ಡವನ್ನೇ ತಂದೆಯಾ? ಎಂದು ಅಚ್ಚ ಕನ್ನಡದಲ್ಲಿ ಸುಷೇಣ ಹೇಳಿದ್ದು, ಇಂದಿಗೂ ಮರೆಯದ ಗಾದೆ. ಕನ್ನಡ ವಿದ್ವಾಂಸರು ಕೆಲವರು ವಾನರರು ಕನ್ನಡಿಗರಾಗಿದ್ದರೆಂದು ಸಾಧಿಸಿದ್ದಾರೆ ! ಎಂದರೆ - ಕನ್ನಡಿಗರೆಲ್ಲರೂ ವಾನರ ವಂಶಜರೆಂದು ಅರ್ಥ ಬಂದರೆ, ಅದಕ್ಕೆ ಅವರು ಜವಾಬ್ದಾರರಲ್ಲ.
  • ಇನ್ನು ತ್ರೇತಾಯುಗವನ್ನು ದಾಟಿ ದ್ವಾಪರ ಯುಗಕ್ಕೆ ಬಂದರೆ, ಅಲ್ಲಿ ಕರ್ಣನಿಗೆ ಈ ಮರೆಗುಳಿತನ ಅಂಟಿತ್ತು. ಅತಿರಥರ ಪಟ್ಟಿ ಮಾಡುವಾಗ , ಭೀಷ್ಮ , ಧನುರ್ವೀರ ಕರ್ಣನನ್ನು ಒಬ್ಬ ಸಾಮಾನ್ಯ ರಥಿಕರ ಪಟ್ಟಿಗೆ ಸೇರಿಸಿದ. ಕಾರಣ ಕೇಳಿದರೆ, ಅವನು ಮರಗುಳಿ; ಆಪತ್ಕಾಲದಲ್ಲಿ ಅವನು ಅಸ್ತ್ರ ಮಂತ್ರಗಳನ್ನೇ ಮರೆಯ ಬಹುದು, ಆದ್ದರಿಂದ ಅವನು ಅತಿರಥನಲ್ಲವೆಂದು ಭೀಷ್ಮ ಹೇಳಿದ್ದು ಇತಿಹಾಸ.
  • ಅರ್ಜುನನಿಗೂ ಸ್ವಲ್ಪ ಮರೆಗುಳಿತನ ವಿತ್ತೆಂದು ಹೇಳಬಹುದು. ತಾನು ಲಗ್ನವಾಗಿ ಸುಖಪಟ್ಟ ಚಿತ್ರಾಂಗದೆ , ಉಲೂಪಿಯರನ್ನೇ ಮರೆತಿದ್ದ. ಅವನ ಮರೆಗುಳಿತನ ಗೊತ್ತಿದ್ದೇ , ಶ್ರೀ ಕೃಷ್ಣ ಯುದ್ಧದಲ್ಲಿ ಸಾರಥಿಯಾಗಿ ಅರ್ಜುನನ ಜೊತೆಯಲ್ಲೇ ಇದ್ದು ಪದೇ ಪದೇ ಅವನು ಮರೆತ ಅನೇಕ ವಿಚಾರಗಳನ್ನು ಜ್ಞಾಪಿಸುತ್ತಿದ್ದ. ಕೌರವ - ಪಾಂಡವರ ಯುದ್ಧ ಪ್ರಾರಂಭ ವಾಗುವ ಸಮಯದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸಿದ್ದು ಎಲ್ಲರಿಗೂ ಗೊತ್ತು. ಅನೇಕ ವರ್ಷಗಳ ನಂತರ ಅರ್ಜುನ ಕೃಷ್ಣನಿಗೆ , ಆಗ ನೀನು ಉಪದೇಶ ಮಾಡಿದ್ದು ಮರೆತುಹೋಗಿದೆ, ಮತ್ತೊಮ್ಮೆ ಗೀತೆಯನ್ನು ಹೇಳು, ಎಂದಿದ್ದು ; ಶ್ರೀ ಕೃಷ್ಣ, ಈಗ ನನಗೆ ಮೂಢ್ ಇಲ್ಲ, ಎಂದು ಹೇಳಿ ತಪ್ಪಿಸಿಕೊಂಡಿದ್ದು ದಾಖಲೆ ಇದೆ.
  • ಇವರಿಗೆಲ್ಲಾ ಮುನಿಗಳ ಶಾಪ, ಎಂದು ಹೇಳುತ್ತಾರೆ. ಆದರೆ ನನಗೆ ಅನುಮಾನ. ಹನುಮಂತನು ಮಗುವಿದ್ದಾಗ, ಬೆಳಗಿನ ಸೂರ್ಯನನ್ನು ಹಣ್ಣೆಂದು ಹಿಡಿಯಲು ಹೋದಾಗ ಇಂದ್ರನು ಅವನನ್ನು ವಜ್ರಾಯುಧದಿಂದ ಹೊಡೆದ ಕಥೆ ಇದೆ. ಪುರಾಣಗಳ ಪ್ರಕಾರ ವಜ್ರಾಯುಧ ವೆಂದರೆ ಸಿಡಿಲು. ಆ ಹೊಡೆತಕ್ಕೆ ಬಹಳ ಹೊತ್ತು ಮಗು ಮಾರುತಿ , ಎಚ್ಚರವಿಲ್ಲದೆ ಮಲಗಿದ್ದನಂತೆ. ಅವನು ಚಿಕ್ಕವನಿದ್ದಾಗ ಸಿಡಿಲು ಹೊಡೆದಿತ್ತೇ ? ಅಥವಾ ವಾನರನಾದ್ದರಿಂದ ಹುಡುಗಾಟಿಕೆಯಲ್ಲಿ ಬೆಳಗಿನ ಸೂರ್ಯನನ್ನು ಹಣ್ಣು ಎಂದು ಭಾವಿಸಿ ಹಿಡಿಯಲು ಬೆಟ್ಟದಿಂದ ಹಾರಿ ತಲೆಗೆ ಪೆಟ್ಟು ಬಿದ್ದಿತ್ತೇ? ಸಂಶೋಧಕರು ಹೇಳಬೇಕು. ಇನ್ನು ಕರ್ಣನ ವಿಚಾರ , ಅವನದು ಅಸಹಜ ಜನನವಾದ್ದರಿಂದ ಹುಟ್ಟುವಾಗಲೇ ತಲೆಗೆ ಪಟ್ಟು ಬಿದ್ದಿರಲು ಸಾಧ್ಯ. ಏನೇ ಆಗಲಿ ಕಾರಣಗಳು ನಮಗೆ ಅಷ್ಟು ಮುಖ್ಯವಲ್ಲ. ಇತ್ತೀಚಿನ ಇತಿಹಾಸಗಳನ್ನು ಹುಡುಕಿದರೆ , ಇನ್ನೂ ಅನೇಕ ಈ ಬಗೆಯ ವ್ಯಕ್ತಿಗಳು ಚರಿತ್ರೆಯ ಪುಟಗಳಲ್ಲಿ ಸಿಗಬಹುದು.
  • ಪ್ರಸ್ತುತಕ್ಕೆ ಬರೋಣ. ಅಂಚೆ ಡಬ್ಬಿಗೆ ಕಾರ್ಡು ಹಾಕಲು ಹೋದವರು, ಸ್ನೇಹಿತರೊಡನೆ ಹರಟೆ ಹೊಡೆದು, ಹಾಗೇ ಬಂದುದನ್ನು ಸ್ವಾರಸ್ಯವಾಗಿ ಬರೆದವರಿದ್ದಾರೆ.

ಇತ್ತೀಚೆಗೆ ಒಬ್ಬ ಮಹಾನುಬಾವರು ಹೆಂಡತಿಯನ್ನು ಕರೆದುಕೊಂಡು ಲಗ್ನದ ಮನೆಗೆ ಬೈಕಿನಲ್ಲಿ ಹೊರಟಿದ್ದರು. ಸಾಗರದಲ್ಲಿ ಬಂಕಿನಲ್ಲಿ ಪೆಟ್ರೋಲ್ ತುಂಬಿಸಿದವರೇ ಹಣ ಕೊಟ್ಟು ಬೈಕ್ ಹತ್ತಿ ಹೊರಟಾಯಿತು. ತಡವಾದುದಕ್ಕೆ ಅವಸರ. ನೇರವಾಗಿ ಲಗ್ನದ ಮನೆಗೆ ಹೋದಾಗ ಪಾಪ ಯಜಮಾನರು ಉಪಚಾರಕ್ಕೆ, ಒಬ್ಬರೇ ಬಂದಿರಾ? ಮನೆಯವರೂ ಬರಬಹುದಿತ್ತು, ಎಂದಾಗ, ಬಂದೆ, ಎಂದವರೇ ಬೈಕನ್ನು ಪಟ್ರೋಲ್ ಬಂಕಿಗೆ ಓಡಿಸಿದರು. ಅಲ್ಲಿ ಅಮ್ಮನವರು ಮುಖ ದಪ್ಪಗೆ ಮಾಡಿಕೊಂಡು, ಎಲ್ಲಿಗೆ ಹೋಗುತ್ತಾರೆ ಬಂದೇ ಬರುತ್ತಾರೆ, ಎಂದು ನಿಂತಲ್ಲಿಯೇ ನಿಂತಿದ್ದರು. ಲಗ್ನದ ಮನೆಯಲ್ಲಿ ಗಾಬರಿ! (ಬಂದವರನ್ನು ಸಂತಸದಿಂದ ಸ್ವಾಗತಿಸದೆ, ಬರದವರನ್ನು ವಿಚಾರಿಸಿದರೆ, ತಾವು ಬಂದಿದ್ದು ಇಷ್ಟವಾಗಲಿಲ್ಲವೇ? ಎಂದು ಸೂಕ್ಷ್ಮ ಮನಸ್ಸಿನವರಿಗೆ ಸಿಟ್ಟು ಬರುವುದು ಸಹಜ). ತಾವು ಅವನ ಹೆಂಡತಿಯ ವಿಷಯ ಕೇಳಿದ್ದರಿಂದ ಸಿಟ್ಟಾಗಿ ವಾಪಾಸುಹೋದರು ಎಂದು ಭಯ. ಆದರೆ ಅರ್ಧ ಗಂಟೆಯಲ್ಲಿ ಪತ್ನಿ ಸಮೇತ ಬಂದಾಗ ಆಶ್ಚರ್ಯ. ಆ ಮುತ್ತೈದೆ ತನ್ನ ಕಥೆ ಹೇಳಿದಾಗ ಸಮಾರಂಭದಲ್ಲಿ ಎಲ್ಲರಿಗೂ ಅದೊಂದು ಮೋಜಿನ ಸುದ್ದಿ.

  • ಪತಿ ಪತ್ನಿಯರಿಬ್ಬರೂ ಮನೆಗೆ ಮರಳಿದ ನಂತರ ಅವರಿಬ್ಬರಲ್ಲಿ ನಡೆದ ಘಟನೆ ತಮ್ಮ ಊಹೆಗೆ ಬಿಟ್ಟದ್ದು !
  • ನನ್ನ ಸ್ನೇಹಿತರೊಬ್ಬರು ಅಂಗಡಿಯಲ್ಲಿ ಸಾಮಾನು ಕೊಂಡು ಛತ್ರಿಯನ್ನು ಬಿಟ್ಟು ಕೊಂಡ ದಿನಸಿಯನ್ನು ಮಾತ್ರಾ ಮೆನೆಗೆ ತರುವರು. ನನಗೂ ಆ ರೂಢಿ ಇದೆ . ಆದ್ದರಿಂದ ನನಗೆ ಯಾವಾಗಲೂ ಮನೆಯಲ್ಲಿ ಹಳೇ ಛತ್ರಿಯನ್ನೇ ಕೊಡುತ್ತಾರೆ. ಕೈಚೀಲ ಕೊಡೆ ವಯಿದರಂತೂ, ಕೈಚೀಲ ನೆನಪಾದರೆ ಕೊಡೆ ಮರೆತಿರುತ್ತೆ ; ಕೊಡೆ ನೆನಪಾದರೆ ಕೈಚೀಲ ಮರೆತಿರುತ್ತೆ. ಎರಡನ್ನೂ ನೆನಪು ಮಾಡಿ ತಂದರೆ ಕನ್ನಡಕವೋ ಪೆನ್ನೋ ಮರತಿರುತ್ತೆ.
  • ನನ್ನ ಸ್ನೇಹಿತರೊಬ್ಬರು ನನ್ನೊಡನೆ ಪ್ರವಾಸಿ ಹೋಟಲಿನಲ್ಲಿ ಕಾಫೀ ಕುಡಿದು, ಹೋಟೇಲ್ ಬಾಗಿಲಲ್ಲಿ ಬೀಗ ಹಾಕಿಟ್ಟ ತಮ್ಮ ಸೈಕಲ್ಲನ್ನೇ ಮರೆತು ಬಿಟ್ಟು ಹರಟೆ ಹೊಡೆಯುತ್ತಾ ಮನೆಗೆ ನಡೆದುಕೊಂಡು ಬಂದರು. ಮಾರನೆ ದಿನ ಆಫೀಸಿಗೆ ಹೋಗಲು ಸೈಕಲ್ ಇಲ್ಲ. ಎಲ್ಲಿ ಬಿಟ್ಟಿರುವುದೆಂದು ನೆನಪಾಗದು. ಎರಡು ದಿನ ಬಿಟ್ಟು ಪೊಲೀಸ್ ಸ್ಟೇಶನ್ನಿಗೆ ದೂರು ಕೊಡಲು ಹೋದಾಗ ಸೈಕಲ್ ಅಲ್ಲೇ ಇದೆ.! ಪಾಪ ಹೋಟೇಲಿನವರು ಸೈಕಲ್ಲನ್ನು ಅಲ್ಲಿ ಗೆ ತಲುಪಿಸಿದ್ದಾರೆ.
  • ಎಲ್ಲಕ್ಕಿಂತ ಸ್ವಾರಸ್ಯ ಪ್ರಸಂಗ ಸೊಗಸಾಗಿ ಸಿನೇಮಾ ನೋಡಿ, ಅದೇ ಗುಂಗಿನಲ್ಲಿ ಪಕ್ಕದ ಸೀಟಿನಲ್ಲಿ ಮಲಗಿಸಿದ ಮಗುವನ್ನೇ ಬಿಟ್ಟು ಬಂದು, ಸೊಗಸಾಗಿ ರಾತ್ರಿ ಕಳೆದು ಬೆಳಿಗ್ಗೆ ಮಗುವಿಗಾಗಿ ಹುಡುಕುವ ದಂಪತಿಗಳು (ಪತ್ರಿಕೆಯಲ್ಲಿ ವಿಶೇಷ ಸುದ್ದಿ ಓದಿದ್ದು); ಬಸ್ಸಿನಲ್ಲಿ ಪ್ರಯಾಣಿಸುವ ನವ ದಂಪತಿಗಳುತಮ್ಮ ಆರೆಂಟು ಬ್ಯಾಗುಗಳ ಬಗ್ಗೆ ನಿಗಾವಹಿಸಿ, ಪಕ್ಕದವರು ಎತ್ತಿಕೊಂಡ ತಮ್ಮ ಮಗುವನ್ನೇ ಬಿಟ್ಟು ಇಳಿದವರಿದ್ದಾರೆ. "ಇಗೋರೀ ನಿಮ್ಮ ಮಗು. ಬಿಟ್ರೆಲಾ", ಎಂದು ಎತ್ತಿಕೊಂಡವರು ಕೂಗಿ ಕೊಡಬೇಕು. ಇವರು ಮರೆಗುಳಿತನದಲ್ಲಿ ಎಲ್ಲರನ್ನೂ ಮೀರಿಸಿದವರು. ಕಂಕುಳಲ್ಲಿ ಮಗುವನ್ನು ಇಟ್ಟುಕೊಂಡು ಊರೆಲ್ಲಾ ಹುಡುಕಿದರು, ಎಂಬುದು ಇಂಥವರ ಬಗ್ಗೆ ಇರುವ ಗಾದೆ.
  • ಈ ಮರೆಗುಳಿತನಕ್ಕೆ ಮದ್ದಿಲ್ಲ ; ಅನಭವಿಸುವುದು ಕಷ್ಟ; ಆದರೆ (ಅನಾಹುತವಾಗಿರದಿದ್ದರೆ) ಅದರ ನೆನಪು ಸುಖ.

ನೋಡಿ:[ಬದಲಾಯಿಸಿ]