ಹವ್ಯಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹವ್ಯಕರು, ಬ್ರಾಹ್ಮಣರ ಉಪಪಂಗಡ. ಇವರು ಭಾರತ ದೇಶದ ಕರ್ನಾಟಕ ಹಾಗೂ ಉತ್ತರ ಕೇರಳ ರಾಜ್ಯದವರು. ಹವ್ಯಕರು ಪ್ರಮುಖವಾಗಿ ಕಾಣಸಿಗುವದು ಕರ್ನಾಟಕದ ಮಲೆನಾಡು ಹಾಗೂ ಸಮುದ್ರ ತೀರದ ಜಿಲ್ಲೆಗಳಲ್ಲಿ. ಬಹುತೇಕ ಹವ್ಯಕರ ಪೂರ್ವಜರು ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯವರು. ಕಾರಣಗಿರಿ (ಹೊಸನಗರ, ಶಿವಮೊಗ್ಗ ಜಿಲ್ಲೆ)ಯ ಶ್ರೀ ರಾಮಚಂದ್ರಾಪುರ ಮಠ ಮತ್ತು ಸೋಂದೆ (ಶಿರಸಿ, ಉತ್ತರ ಕನ್ನಡ ಜಿಲ್ಲೆ) ಯ ಸ್ವರ್ಣವಲ್ಲೀ ಮಠ ಇವರ ಪ್ರಮುಖ ಮಠಗಳು. ಹವ್ಯಕರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಅನುಯಾಯಿಗಳು. ಮೊದಲಿನಿಂದ ಮುಖ್ಯವಾಗಿ ಅಡಿಕೆ ಕೃಷಿಕರಾಗಿದ್ದು ಇತ್ತೀಚಿನ ದಶಕಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದಲ್ಲಿ ಹವ್ಯಕರ ಪಾತ್ರ ಗಣನೀಯವಾಗಿದೆ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಗಳಲ್ಲಿ ಭಾಗವಹಿಸಿದ್ದರು.

ಪರಿವಿಡಿ

[ಬದಲಾಯಿಸಿ] ಹವ್ಯಕ ಎಂದರೇನು?

ಹವ್ಯಕ ಎಂಬ ಪದವು ಹವೀಗ (ಹವೀಕ) ಅಥವಾ ಹವ್ಯಗ ಎಂಬ ಪದದಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇದರ ಅರ್ಥ ಹವ್ಯ-ಕವ್ಯ, ಅಂದರೆ ದೇವತೆ ಮತ್ತು ಪಿತೃಗಳಿಗಾಗಿ ಹವನ ಹೋಮಗಳನ್ನು ಮಾಡುವವನು ಎಂದು. ಹಿಂದಿನ ಕಾಲದಿಂದಲೂ ರಾಜರಿಗೆ ಹವನ-ಹೋಮಗಳನ್ನು ಮಾಡಿಕೊಡುವುದು ಹವ್ಯಕರು ಕೆಲಸವಾಗಿತ್ತು. ಮೇಲೆ ಕೊಂಕಣ ಮತ್ತು ಕೆಳಗೆ ತುಳುವ ಗಡಿಯವರೆಗೆ ಈಗಿನ ಉತ್ತರ ಕನ್ನಡ ಜಿಲ್ಲೆ ಇರುವ ಪ್ರದೇಶಕ್ಕೆ ಹಿಂದೆ 'ಹೈವ'ಎಂಬ ಹೆಸರಿತ್ತು. ಇದರಿಂದ 'ಹೈಗ' ಎಂಬ ಪದ ಬಳಕೆಗೆ ಬಂದಿರಬಹುದು. ಈಗಲೂ ಹವ್ಯಕರನ್ನು ಹೈಗರು ಎಂದು ಕರೆಯುವ ರೂಢಿ ಇದೆ. ಹೈಗುಂದ ಎಂಬ ಊರಿನಿಂದ ಹವ್ಯಕರಿಗೆ ಈ ಹೆಸರು ಬಂದಿರಬಹುದು ಎಂಬ ವಿಚಾರವೂ ಇದೆ. ಹವ್ಯಕ ಅಥವಾ ಹವ್ಯಕ ಕನ್ನಡ ಎಂದರೆ ಹವ್ಯಕರು ಮಾತನಾಡುವ ಭಾಷೆ. ಇದು ಕನ್ನಡದ ಒಂದು ಉಪಭಾಷೆ.

[ಬದಲಾಯಿಸಿ] ಹವ್ಯಕರ ಮೂಲ

ಹವ್ಯಕರ ಮೂಲ ಯಾವುದೆಂದು ಇದುವರೆಗೂ ನಿಖರವಾಗಿ ಎಲ್ಲೂ ನಿರೂಪಿಸಲು ಆಗಿಲ್ಲ. ಕೆಲವು ಸಂಶೋಧನೆಗಳ ಪ್ರಕಾರ ಕರ್ನಾಟಕಕ್ಕೆ ಸುಮಾರು ೩ನೇ ಶತಮಾನದಲ್ಲಿ ಬಂದ ಬ್ರಾಹ್ಮಣ ಪಂಗಡ ಇದು. ಕನ್ನಡದ ಮೊದಲ ರಾಜಮನೆತನ ಸ್ಥಾಪಿಸಿದ ಕದಂಬರ ಮಯೂರವರ್ಮನಿಗೆ ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ, ಆತ ಹೋಮಹವನಗಳನ್ನು ಮಾಡಿಸಲು ಕೆಲವು ಹವ್ಯಕ ಕುಟುಂಬಗಳನ್ನು ಅಹಿಚ್ಛತ್ರ (ಈಗಿನ ಉತ್ತರ ಪ್ರದೇಶ ರಾಜ್ಯದ ಸ್ಥಳ) ಎಂಬ ಪ್ರದೇಶದಿಂದ ಆಹ್ವಾನಿಸಿ ಕರೆತಂದು ರಾಜ್ಯದಲ್ಲಿನ ಸುಮಾರು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟನಂತೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಶಿಲಾಶಾಸನದಲ್ಲಿ ಮಯೂರವರ್ಮನು ಹವ್ಯಕರನ್ನು ಕರೆತಂದ ಬಗ್ಗೆ ಉಲ್ಲೇಖವಿದೆ. ಕದಂಬರು ಕರೆತಂದ ಕುಟುಂಬಗಳು ಬನವಾಸಿಯಲ್ಲಿ ನೆಲೆಯೂರಿ ಅನಂತರ ಹರಡಿದರು.

[ಬದಲಾಯಿಸಿ] ಹವ್ಯಕರು ಇಂದು

ಹವ್ಯಕರ ಜೀವನಾಧಾರ ಮೊದಲಿನಿಂದಲೂ ಕೃಷಿ ಚಟುವಟಿಕೆಗಳು. ಅಡಿಕೆ, ತೆಂಗು, ಭತ್ತ, ಏಲಕ್ಕಿ, ಕಾಳುಮೆಣಸು, ವೀಳ್ಯದೆಲೆ ಮುಂತಾದವುಗಳನ್ನು ಬೆಳೆಯುತ್ತಿದ್ದರು. ಇದರ ಜೊತೆ ಅನೇಕ ಕುಟುಂಬಗಳು ಪೌರೋಹಿತ್ಯವನ್ನು ಕೂಡ ವೃತ್ತಿಯಾಗಿರಿಸಿಕೊಂಡಿದ್ದವು. ಇವತ್ತಿಗೂ ಕೃಷಿಯೇ ಹವ್ಯಕರ ಮುಖ್ಯ ಉದ್ಯೋಗವಾಗಿದ್ದರೂ ಕೂಡ ಇತ್ತೀಚಿನ ಕೆಲದಶಕಗಳಿಂದ ಹವ್ಯಕರು ಬೇರೆ ಬೇರೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಕೊಂಡಿದ್ದಾರೆ. ಧಾರ್ಮಿಕವಾಗಿ ಹವ್ಯಕರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಸ್ವರ್ಣವಲ್ಲಿ ಮಠ ಮತ್ತು ರಾಮಚಂದ್ರಾಪುರ ಮಠಗಳ ಅನುಯಾಯಿಗಳಾಗಿದ್ದಾರೆ.

[ಬದಲಾಯಿಸಿ] ಭೌಗೋಳಿಕತೆ

ಹವ್ಯಕರು ಭಾರತದಲ್ಲಿ ಮುಖ್ಯವಾಗಿ ನೆಲೆಗೊಂಡಿರುವುದು ಕರ್ನಾಟಕ ರಾಜ್ಯದಲ್ಲಿ. ಕರ್ನಾಟಕದ ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದ ಕಾಸರಗೋಡು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಶತಮಾನಗಳಿಂದ ವಾಸವಾಗಿದ್ದಾರೆ. ಧಾರವಾಡ, ಹುಬ್ಬಳ್ಳಿ, ಮುಂಬೈ, ಬೆಂಗಳೂರು ಕಡೆಗೆ ಬೇರೆ ಬೇರೆ ಕಾರಣಗಳಿಂದ ವಲಸೆ ಹೋಗಿದ್ದಾರೆ. ಈಗಿನ ತಲೆಮಾರಿನಲ್ಲಿ ಬೆಂಗಳೂರಿಗೆ ವಲಸೆ ಬಂದವರ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೇ ಭಾರತದ ಬೇರೆ ಬೇರೆ ನಗರಗಳಲ್ಲಿ ಉದ್ಯೋಗದ ಕಾರಣಕ್ಕಾಗಿ ಹವ್ಯಕರು ವಲಸೆ ಹೋಗಿ ನೆಲೆಗೊಂಡಿದ್ದಾರೆ. ಯು.ಎಸ್.ಎ., ಯು.ಕೆ, ಅರಬ್ ದೇಶಗಳು ಮೊದಲಾದ ಹೊರದೇಶಗಳಲ್ಲೂ ಸಹ ಹವ್ಯಕರು ಹೋಗಿ ನೆಲೆಸಿದ್ದಾರೆ. ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಹವ್ಯಕರ ಸಂಖ್ಯೆ ಗಣನೀಯವಾಗಿದೆ. ವಲಸೆ ಬಂದ ಹವ್ಯಕರ ಬೇರುಗಳು ಮೇಲೆ ಹೇಳಿದ ಜಿಲ್ಲೆಗಳಲ್ಲಿದೆ.

[ಬದಲಾಯಿಸಿ] ಜನಸಂಖ್ಯೆ

ವಿಶ್ವದಲ್ಲಿನ ಹವ್ಯಕರ ಜನಸಂಖ್ಯೆ ಸುಮಾರು ೬,೦೦,೦೦೦ (ಆರು ಲಕ್ಷ) ಎಂದು ಅಂದಾಜಿಸಲಾಗಿದೆ. ಹಳ್ಳಿಗಳಲ್ಲೇ ಹವ್ಯಕರ ಹೆಚ್ಚಿನ ಜನಸಂಖ್ಯೆ ಇದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಹಳ್ಳಿಯಲ್ಲಿ ಹವ್ಯಕರ ಜನಸಂಖ್ಯೆ ಪ್ರಮಾಣ ಕುಸಿಯುತ್ತಿದೆ.

[ಬದಲಾಯಿಸಿ] ಅಡ್ಡಹೆಸರು/ಕುಟುಂಬದ ಹೆಸರು

ಹವ್ಯಕರಲ್ಲಿ ಅತಿ ಹೆಚ್ಚು ಕಂಡುಬರುವುದು ಭಟ್ಟ ಮತ್ತು ಹೆಗಡೆ ಎಂಬ ಅಡ್ಡ ಹೆಸರುಗಳು. ಇವಲ್ಲದೇ ಉಪಾಧ್ಯಾಯ, ಉಪಾಧ್ಯ, ಹೆಬ್ಬಾರ, ಶಾಸ್ತ್ರಿ, ಶರ್ಮಾ, ಭಾಗವತ, ರಾವ್, ಪಂಡಿತ, ಸಭಾಹಿತ, ಜೋಯ್ಸ, ಗಾಂವ್ಕರ್, ಪುರೋಹಿತ, ಪುರಾಣಿಕ, ಜೋಶಿ ಮುಂತಾದ ಅಡ್ಡ ಹೆಸರುಗಳು ಕೂಡ ಇವೆ. ಎಲ್ಲವೂ ಅವರು ಮಾಡುತ್ತಿದ್ದ ಉದ್ಯೋಗ ಮತ್ತು ಸಾಮಾಜಿಕ ಸ್ಥಾನದಿಂದ ಬಂದಿರುವಂತವು. ಕರ್ಕಿ, ದೊಡ್ಡೇರಿ, ನಡಹಳ್ಳಿ ಮುಂತಾದ ಮೂಲ ಊರಿನ ಹೆಸರಿನಿಂದ ಬಂದಿರುವ ಇನ್ನೂ ಕೆಲವು ಅಡ್ಡಹೆಸರುಗಳು ಕೂಡ ಇವೆ.

[ಬದಲಾಯಿಸಿ] ಭಾಷೆ

ಹವ್ಯಕರು ಮಾತನಾಡುವ ಭಾಷೆ ಹವ್ಯಕ ಕನ್ನಡ ಅಥವಾ ಹವಿಗನ್ನಡ. ಇದು ಕನ್ನಡದ ಉಪಭಾಷೆಯಾಗಿದ್ದು ೬೦ -೭೦ % ಸಾಮಾನ್ಯ ಕನ್ನಡದಂತೆಯೇ ಇದ್ದು ಹಳೆಗನ್ನಡದ ಕೆಲವು ಪದಗಳನ್ನು ಒಳಗೊಂಡಿದೆ. ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳು ಬೇರೆ ರೀತಿ ಇರುತ್ತವೆ. ಶಿರಸಿ, ಸಾಗರ, ಸೊರಬ, ಕುಮಟಾ-ಹೊನ್ನಾವರ, ಗೋಕರ್ಣ, ದಕ್ಷಿಣ ಕನ್ನಡ, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿನ ಹವ್ಯಕ ಭಾಷೆಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹವ್ಯಕ ಕನ್ನಡದ ಲಿಪಿ ಕನ್ನಡ. ಹವ್ಯಕ ಭಾಷೆಯ ಹುಟ್ಟಿನ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ.

[ಬದಲಾಯಿಸಿ] ಹವ್ಯಕ ಹಬ್ಬಗಳು

ಸಾಮಾನ್ಯವಾಗಿ ಹವ್ಯಕರು ನೆಲೆಗೊಂಡಿರುವ ಪ್ರದೇಶಗಳಲ್ಲಿನ ಹಿಂದೂಧರ್ಮದಲ್ಲಿ ಆಚರಣೆಯಲ್ಲಿರುವ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಹಬ್ಬಗಳು ಪ್ರಮುಖವಾದವು. ದೀಪಾವಳಿ ಹಬ್ಬ ಹವ್ಯಕರಲ್ಲಿ 'ದೊಡ್ಡಹಬ್ಬ'ವೆಂದು ಆಚರಿಸಲ್ಪಡುತ್ತದೆ.

[ಬದಲಾಯಿಸಿ] ಕಲೆ, ಸಾಹಿತ್ಯ, ಸಂಸ್ಕೃತಿ

ಹವ್ಯಕರ ಜೀವನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದೆ. ಸಂಗೀತ, ವಾದ್ಯ, ನೃತ್ಯ, ಬರವಣಿಗೆಗಳು ಹವ್ಯಕರಿಗೆ ಕರಗತವಾಗಿದೆ. ಪ್ರಸಿದ್ಧ ಯಕ್ಷಗಾನ ಕಲೆಯು ಹವ್ಯಕರಿಂದಲೇ ಹುಟ್ಟುಹಾಕಲ್ಪಟ್ಟು ಅಭಿವೃದ್ಧಿಗೊಂಡಿದೆ. ೧೮೮೭ರಲ್ಲಿ ಸೂರಿ ವೆಂಕಟರಮಣ ಶಾಸ್ತ್ರಿಗಳಿಂದ ರಚಿತವಾದ 'ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ' ಎಂಬ ನಾಟಕವು ಕನ್ನಡದ ಮೊದಲ ಸಾಮಾಜಿಕ ನಾಟಕವಾಗಿದೆ. ೧೯ನೇ ಶತಮಾನದ ಮಧ್ಯದಲ್ಲಿ ಕರ್ಕಿ ಯಕ್ಷಗಾನ ತಂಡದ ಮಹಾರಾಷ್ಟ್ರ ಪ್ರವಾಸ ಮತ್ತು ಪ್ರದರ್ಶನಗಳು ಮರಾಠಿ ನಾಟಕರಂಗಕ್ಕೆ ನಾಂದಿ ಹಾಡಿದವು. ಹವ್ಯಕ ಸಮುದಾಯದಲ್ಲಿ ಬಹಳಷ್ಟು ಜನ ಬರಹಗಾರರು, ಕಲಾವಿದರು ವಿವಿಧ ರಂಗಗಳಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕದ ಪತ್ರಿಕೆಗಳಲ್ಲಿ, ಟೀವಿ ಮಾಧ್ಯಮದಲ್ಲಿ ಹವ್ಯಕರು ಗಣನೀಯ ಸಂಖ್ಯೆಯಲ್ಲಿದ್ದಾರೆ.

[ಬದಲಾಯಿಸಿ] ಹವ್ಯಕ ಆಹಾರ/ಅಡುಗೆ

ಹವ್ಯಕರು ಶಾಕಾಹಾರಿಗಳು. ಹವ್ಯಕರ ಆಹಾರ-ಅಡುಗೆಗಳು ಅವುಗಳ ರುಚಿ ಮತ್ತು ಔಷಧೀಯ ಗುಣಗಳಿಂದ ವಿಶಿಷ್ಟವಾಗಿವೆ. ಅಕ್ಕಿ ಮತ್ತು ಗೋಧಿ ಮುಖ್ಯವಾಗಿ ಬಳಸಲ್ಪಡುತ್ತವೆ. ಹವ್ಯಕರ ಮೂಲ ನೆಲೆ ಹಳ್ಳಿಗಳಾಗಿದ್ದರಿಂದ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ಹಲವು ಬಗೆಯ ಚಿಗುರು, ಎಲೆ, ಬೇರು, ಗಡ್ಡೆ, ಕಾಯಿ, ತೊಗಟೆ, ತರಕಾರಿ ಮುಂತಾದವುಗಳು ಅಡುಗೆಯಲ್ಲಿ ಬಳಸಲ್ಪಡುತ್ತವೆ. ಹಾಲು , ಮಜ್ಜಿಗೆ, ತುಪ್ಪ ಯಥೇಚ್ಛವಾಗಿ ಬಳಕೆಯಾಗುತ್ತವೆ. ಅನ್ನ ಮತ್ತು ಚಪಾತಿ, ಅಪ್ಪೆ ಹುಳಿ, ವಿವಿಧ ರೀತಿಯ ತಂಬುಳಿಗಳು, ಗೊಜ್ಜು, ಸಾಸ್ಮೆ, ಚಟ್ನಿ, ಕಾಯ್ರಸ, ಹಶಿ, ಕರ್ಕ್ಲಿ, ಮಜ್ಜಿಗೆ ಹುಳಿ, ಪೊಳದ್ಯ, ಹುಳಿ(ಸಾಂಬಾರು), ಸಾರು, ಪಲ್ಯ ಮುಂತಾದವು ಹವ್ಯಕರ ಅಡುಗೆ ಪದಾರ್ಥಗಳು. ತೊಡದೇವು, ವಡಪ್ಪೆ, ಹಲಸಿನಕಾಯಿ ಹುಳಿ, ಹಪ್ಪಳ, ಹೋಳಿಗೆ, ಸಂಡಿಗೆ, ಸುಟ್ಟೇವು, ಕೇಸರಿಅನ್ನ, ಚಟ್ನಿ ಪುಡಿಗಳು, ಉಪ್ಪಿನಕಾಯಿಗಳು ಇನ್ನೂ ಹತ್ತು ಹಲವು ಬಗೆಯ ಅಡುಗೆ/ಸಿಹಿತಿನಿಸುಗಳ ತಯಾರಿಕೆ ಕೂಡ ಹವ್ಯಕರ ವಿಶಿಷ್ಟತೆ.

[ಬದಲಾಯಿಸಿ] ಹವ್ಯಕ ವೇದ, ಗೋತ್ರಗಳು

ಬಹುಸಂಖ್ಯೆಯ ಹವ್ಯಕರು ಯಜುರ್ವೇದಿಗಳು. ಜೊತೆಗೆ ಕಡಿಮೆ ಸಂಖ್ಯೆಯಲ್ಲಿ ಋಗ್ವೇದಿಗಳೂ, ಸಾಮವೇದಿಗಳೂ ಇದ್ದಾರೆ. ಎಲ್ಲಾ ಹವ್ಯಕರೂ ಒಂದೊಂದು ನಿರ್ದಿಷ್ಟ ಗೋತ್ರಕ್ಕೆ ಸೇರಿದವರಾಗಿದ್ದಾರೆ. ಗೋತ್ರವೆಂದರೆ ಆ ಋಷಿಗಳ ವಂಶದವರು ಎಂಬುದು ಸಾಮಾನ್ಯ ನಂಬಿಕೆಯಾದರೂ ಅದಕ್ಕೆ ಆಧಾರವಿಲ್ಲ. ಯಾರು ಯಾವ ಋಷಿಯ ಬಳಿ ಗೋವುಗಳನ್ನು ಬಿಡುತ್ತಿದ್ದರೋ ಅಥವಾ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅವರ ಬಳಿ ಕಳುಹಿಸುತ್ತಿದ್ದರೋ ಅದೇ ಋಷಿಯ ಪಂಗಡ ಅಥವಾ ಗೋತ್ರ ಎಂದು ಗುರುತಿಸಲ್ಪಡುತ್ತಿದ್ದರು. ಇದು ಒಂದು ನಂಬಿಕೆ ಅಥವಾ ಊಹೆಯಾಗಿರಬಹುದು. ಇದಕ್ಕೂ ಸಾಕ್ಷಿ ಆಧಾರವಿಲ್ಲ. ಒಂದೇ ಗೋತ್ರದಲ್ಲಿ ಮದುವೆ ನಿಷಿದ್ಧವಾಗಿದೆ. ಈ ಕೆಳಗಿನವು ಹವ್ಯಕರ ಗೋತ್ರಗಳು

[ಬದಲಾಯಿಸಿ] ಪ್ರಮುಖ/ಪ್ರಸಿದ್ಧ ವ್ಯಕ್ತಿಗಳು

[ಬದಲಾಯಿಸಿ] ಧಾರ್ಮಿಕ/ಆಧ್ಯಾತ್ಮಿಕ

[ಬದಲಾಯಿಸಿ] ರಾಜಕಾರಣ/ಸಮಾಜ

[ಬದಲಾಯಿಸಿ] ಶಿಕ್ಷಣ/ಸಾಹಿತ್ಯ/ಭಾಷೆ/ವಿಜ್ಞಾನ

[ಬದಲಾಯಿಸಿ] ಚಲನಚಿತ್ರ/ದೂರದರ್ಶನ

[ಬದಲಾಯಿಸಿ] ಕಲೆ/ಸಂಗೀತ/ಸಂಸ್ಕೃತಿ

[ಬದಲಾಯಿಸಿ] ಕ್ರೀಡೆ

[ಬದಲಾಯಿಸಿ] ಇವುಗಳನ್ನೂ ನೋಡಿ

[ಬದಲಾಯಿಸಿ] ಆಧಾರಗಳು

  1. http://www.hindu.com/2007/07/10/stories/2007071051220300.htm
  2. http://www.gulfkannadiga.com/news-26676.html
  3. http://krvp.org/founders.html
  4. http://www.niu.edu/Hosmane/aboutme/index.shtml

[ಬದಲಾಯಿಸಿ] ಹೊರಗಿನ ಕೊಂಡಿಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು