ಸೂರ್ಯನಾಥ್ ಕಾಮತ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೂರ್ಯನಾಥ ಕಾಮತ್
ಡಾ. ಸೂರ್ಯನಾಥ ಕಾಮತ್
ಜನನ ಏಪ್ರಿಲ್ ೨೬, ೧೯೩೭
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ
ವೃತ್ತಿ ಪ್ರಾಧ್ಯಾಪಕರು, ಇತಿಹಾಸಕಾರರು, ಪತ್ರಕರ್ತರು
ವಿಷಯ ಇತಿಹಾಸ

ಡಾ. ಸೂರ್ಯನಾಥ ಕಾಮತರು ಕರ್ನಾಟಕದ ಪ್ರಮುಖ ಸಂಶೋಧಕರು ಮತ್ತು ಇತಿಹಾಸ ತಜ್ಞರು. ಕರ್ನಾಟಕದ ಇತಿಹಾಸದ ಸಂಶೋಧನೆಗೆ ಇವರ ಕೊಡುಗೆ ಅಪಾರವಾದುದು.

ಡಾ. ಸೂರ್ಯನಾಥ ಕಾಮತ್ ಎಂದರೆ ಕರ್ನಾಟಕದ ಇತಿಹಾಸಾಕ್ತರಿಗೆ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಬಲ್ಲ ಇತಿಹಾಸಕಾರ. ಅವರ ಶಿಷ್ಯರಿಗೆ ಅವರು ಒಳ್ಳೆಯ ಸರ್. ನಮಗೇನಾದರೂ ಕರ್ನಾಟಕದ ಬಗೆಗಿನ ಯಾವುದೇ ಊರು, ಹಳ್ಳಿ, ಕಲ್ಲು ಇತ್ಯಾದಿಗಳ ಯಾವುದೇ ವಿಚಾರದ ಬಗ್ಗೆ ತಿಳುವಳಿಕೆ ಬೇಕಿದ್ದರೂ ಸೂರ್ಯನಾಥ ಕಾಮತ್ ಅವರಲ್ಲಿ ಕೇಳಬೇಕು. ಅದೊಂದು ಸುಂದರ ಕಥೆಯಾಗಿ ಒಂದು ವಿಚಾರಕ್ಕೆ ಇಷ್ಟೊಂದು ಸೊಗಸಾದ ಹಿನ್ನೆಲೆಯ ಭಾವವಿದೆಯೇ ಎಂದು ಅಚ್ಚರಿ ಮೂಡುತ್ತದೆ. ಸೊಗಸಾದ ಕಥೆಯನ್ನು ಮಕ್ಕಳಾಗಿದ್ದಾಗ ಕೇಳುತ್ತಾ ಮೈಮರೆತು ಮತ್ತಷ್ಟು ಬೇಕು ಆ ಕಥೆ ಎಂದು ಹೇಳುತ್ತಿದ್ದಂತೆ, ನಿರಂತರವಾಗಿ ನಮ್ಮ ಮನದ ಕಿವಿಗಳಿಗೆ ಇನ್ನೂ ನಿನಾದವಾಗಿ ಹರಿಯುತ್ತಲೇ ಇರಬೇಕೆಂಬ ತೀರದ ಆಸೆ ಮೂಡತೊಡಗುತ್ತದೆ. ಶಿಸ್ತಿಗೆ ಆದ್ಯತೆ ನೀಡುವ ಅಧ್ಯಯನಶೀಲ ಇತಿಹಾಸಕಾರರವರು. ಸಂಘಟನೆಯಲ್ಲೂ ಕಾಮತರದು ವಿಶಿಷ್ಟ ಹೆಸರು. ಇತಿಹಾಸವನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಅವರದು ಬಹಳ ಮಹತ್ವದ ಸೇವೆ.

ಪರಿವಿಡಿ

ಶೈಕ್ಷಣಿಕ ವರ್ಷಗಳು [ಬದಲಾಯಿಸಿ]

೧೯೩೭ರ ಏಪ್ರಿಲ್‌ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಬೆಳ್ತಂಗಡಿಯಲ್ಲಿ ಜನಿಸಿದ ಕಾಮತ್‌, ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿಯನ್ನು (೧೯೫೯) ಪಡೆದು, ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿಯನ್ನು (೧೯೬೫) ಪಡೆದುಕೊಂಡರು. 'ವಿಜಯನಗರ ಕಾಲದ ತುಳುನಾಡು’ ಅವರ ಪಿ.ಎಚ್.ಡಿ ಪ್ರಬಂಧ.

ಸೂರ್ಯನಾಥ ಕಾಮತ್ ಬಾಲ್ಯದಲ್ಲಿ ಕಾಂಗ್ರೆಸ್ಸಿಗರೊಡನೆ ಹೆಚ್ಚು ಸಂಪರ್ಕ ಹೊಂದಿದ್ದರು. ನಾರಾಯಣಾಚಾರ್ಯ ನಾವೂರಕರರ ಪ್ರಭಾವದಿಂದ ಸಾಹಿತ್ಯ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು 1952ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವೈಕುಂಠ ಬಾಳಿಗ ಮತ್ತು ಬೆನಗಲ್ ಶಿವರಾಯರ ಪರವಾಗಿ ಶಾಲೆ ಬಿಟ್ಟು ಪ್ರಚಾರವನ್ನೂ ಮಾಡಿದ್ದರು. ಆಗಿನಿಂದಲೇ ಪತ್ರಿಕೆಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡ ಕಾಮತರು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯನ್ನೂ ಆರಂಭಿಸಿದರು. ಮಂಗಳೂರಿನಲ್ಲಿ ಓದುತ್ತಿದ್ದಾಗ ಸೋದರಮಾವನ ಮಕ್ಕಳ ಮೂಲಕ ಆರ್ ಎಸ್ ಎಸ್ ಶಾಖೆಯ ಸಂಪರ್ಕ ಪಡೆದು ಸ್ನೇಹಿತರು ಮತ್ತು ಸಾಹಿತ್ಯದಿಂದ ಪ್ರಭಾವಿತರಾಗಿ ನಿಷ್ಠಾವಂತ ಕಾರ್ಯಕರ್ತರಾದರು. ಓದುತ್ತಿದ್ದಾಗಲೇ ಐತಿಹಾಸಿಕ ಕಥೆಗಳನ್ನು ಬರೆಯತೊಡಗಿದ ಅವರು ಭಾಷಣಕಾರರಾಗಿಯೂ ರೂಪುಗೊಂಡರು.

ಧಾರವಾಡದಲ್ಲಿ ಇತಿಹಾಸದ ಸ್ನಾತಕೋತ್ತರ ವಿದಾರ್ಥಿಯಾದ ಸೂರ್ಯನಾಥ ಕಾಮತರು ಪ್ರೊ. ಬಿ.ವಿ. ಕಾಳೆ, ಪ್ರೊ. ಬಿ. ಎ. ಸಾಲೆತ್ತೂರ್, ಪ್ರೊ. ಜಿ. ಎಸ್.. ದೀಕ್ಷಿತ್ ಅವರಂತಹ ಪ್ರಾಧ್ಯಾಪಕರಿಂದ ಇತಿಹಾಸ ಕಲಿತರು. ಅವರ ಮಾರ್ಗದರ್ಶನ ಕಾಮತರ ಪಾಲಿಗೆ ಸಂಜೀವಿನಿ ಆಯಿತು. ಪ್ರೊ. ಬಿ. ಎ. ಸಾಲೆತ್ತೂರ್ ಅವರ ಪ್ರಭಾವದಿಂದ ಕಾಮತರು ಕರ್ನಾಟಕದ ಇತಿಹಾಸದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡರು. ಕಾಲೇಜಿಗೆ ರಜೆ ಇದ್ದ ಸಂದರ್ಭದಲ್ಲಿ ಆರ್. ಎಸ್. ಎಸ್ ಕೆಲಸಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಅನೇಕ ಸ್ಥಳಗಳ ಪರಿಚಯ ಮಾತ್ರವಲ್ಲದೆ ವಿಭಿನ್ನ ಮನೋಭಾವದ ಜನರ ಪರಿಚಯವಾಗಿ ಅನುಭವ ಶ್ರೀಮಂತವಾಯಿತು.

ಅಗಾಧ ಸ್ಮರಣ ಶಕ್ತಿ [ಬದಲಾಯಿಸಿ]

ಅವರ ನೆನಪಿನ ಶಕ್ತಿಯ ಬಗ್ಗೆ ಅಚ್ಚರಿ ಮೂಡುತ್ತದೆ. ತಾವು ಐದು ವರ್ಷದ ಮಗುವಾಗಿದ್ದಾಗಲೇ ತಮ್ಮ ಅಣ್ಣನ ಜೊತೆಗೆ ಸ್ವಾತಂತ್ರ್ಯ ಹೋರಾಟದ ಚಳುವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ಕಾಮತರ ನೆನಪಿನಲ್ಲಿದೆ. ಕೆಲವರಿಗೆ ವಯಸ್ಸಿಗೆ ತಕ್ಕ ಮರೆವು ಇರುತ್ತದೆ. ಸೂರ್ಯನಾಥ ಕಾಮತರಿಗೆ ಅದು ಇರಬಹುದಾದರೂ ಇತಿಹಾಸದ ಯಾವುದೇ ಪುಟದ ಯಾವುದೇ ಸಾಲು ಇಸವಿಯ ಸಮೇತ ಸದಾ ನೆನಪಿನಲ್ಲಿರುತ್ತದೆ. ಕರ್ನಾಟದ ಇತಿಹಾಸದ ಬಗ್ಗೆ ಪ್ರೀತಿ ಇರುವ ಎಲ್ಲರಿಗೂ ಕಾಮತ್ ವಿಶ್ವಾಸಾರ್ಹ ವ್ಯಕ್ತಿ.

ವೃತ್ತಿ [ಬದಲಾಯಿಸಿ]

ಆರಂಭದ ದಿನಗಳಲ್ಲಿ ಮುಂಬಯಿಯ ‘ಫ್ರೀ ಪ್ರೆಸ್‌ ಜರ್ನಲ್‌’ನಲ್ಲಿ ಕೆಲಸ ಮಾಡಿ ಅನುಭವ ಗಳಿಸಿಕೊಂಡ ನಂತರ ಬೆಂಗಳೂರಿನ ಪ್ರಸಿದ್ಧ ದೈನಿಕ ‘ಪ್ರಜಾವಾಣಿ’ ಹಾಗೂ ಮಾಸಪತ್ರಿಕೆ ‘ಉತ್ಥಾನ’ಗಳಲ್ಲಿ ದುಡಿದು ಪತ್ರಿಕಾರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ. ೧೯೬೮ರಿಂದ ೧೯೮೧ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರವಾಚಕರಾಗಿ ಸೇವೆ ಸಲ್ಲಿಸಿ, ನಂತರ ೧೯೯೫ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ಗೆಜೆಟಿಯರ್‍ನ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿ ಈಗ ಶಾಂತ ಆದರೆ ಬಿಡುವಿಲ್ಲದ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಮಿಥಿಕ್ ಸೊಸೈಟಿಇತಿಹಾಸ ದರ್ಶನ ನಿಯತಕಾಲಿಕೆಯ ಸಂಪಾದಕರಾಗಿದ್ದಾರೆ. ‍

ಇತಿಹಾಸ ತಜ್ಞರಾಗಿ [ಬದಲಾಯಿಸಿ]

‘ಪ್ರಜಾವಾಣಿ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅವರು ಕರ್ನಾಟಕದ ಸಂಕ್ಷಿಪ್ತ ಇತಿಹಾಸ ಪ್ರಕಟಿಸಿದರು.

ಕಾಮತ್ ಮೂರು ಸಂಪುಟಗಳಲ್ಲಿ ಸಂಪಾದಿಸಿದ ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು (ಸುಮಾರು ೩೨೦೦ಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಸುಮಾರು ೮00 ಹಿರಿಯ ಸ್ವಾತಂತ್ರ ಹೋರಾಟಗಾರರ ನೆನಪುಗಳಿವೆ). ಇಂಗ್ಲಿಷಿನಲ್ಲಿ ಬರೆದ ‘ಕ್ವಿಟ್ ಇಂಡಿಯಾ ಮೂವ್ಮೆಂಟ್ ಇನ್ ಕರ್ನಾಟಕ’ ಕೃತಿಗಳು ಅವರ ಅಧ್ಯಯನಶೀಲತೆಗೆ ಉದಾಹರಣೆಗಳಾಗಿವೆ.

೧೯೮೨ರಲ್ಲಿ ಕೆಲವು ತಿಂಗಳುಗಳ ಕಾಲ ಕರ್ನಾಟಕ ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಮತ್ತು ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕರಾಗಿ ಕಾಮತ್ ಸಲ್ಲಿಸಿರುವ ಸೇವೆ ವಿಶಿಷ್ಟವಾದುದು. ಸಮಗ್ರ ಕರ್ನಾಟಕಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗೆಜೆಟಿಯರಿನ ಎರಡು ಸಂಪುಟಗಳು (ಕನ್ನಡದಲ್ಲಿ ಮೂರು) ಮಾತ್ರವಲ್ಲದೆ, ಆರು ಜಿಲ್ಲೆಗಳ ಗೆಜೆಟಿಯರ್ಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಪ್ರಕಟಿಸಿರುವ ಕಾಮತ್ ಬಿಡುವಿನ ವಿರೋಧಿ. ಅವರ ಕರ್ನಾಟಕ ಕೈಪಿಡಿ ಕರ್ನಾಟಕದ ಬಗ್ಗೆ ತಿಳಿಯಬೇಕೆನ್ನುವವರಿಗೆ ನಿಜಕ್ಕೂ ಒಂದು ಕೈಪಿಡಿ.

ಹಲವು ವರ್ಷಗಳಿಂದ ಮಿಥಿಕ್ ಸೊಸೈಟಿಯ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವ ಕಾಮತ್, ಅದರ ಗೌರವ ಕಾರ್ಯದರ್ಶಿಗಳಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಮನ್ನಣೆ ಪಡೆದ ಮಿಥಿಕ್ ಸೊಸೈಟಿಯ ತ್ರೈಮಾಸಿಕ ವಿದ್ವತ್ ಪತ್ರಿಕೆಯನ್ನೂ ಹಲವು ವರ್ಷಗಳಿಂದ ಅವರು ಸಂಪಾದಿಸುತ್ತಿದ್ದಾರೆ.

ಸುವರ್ಣ ವರ್ಷವನ್ನು ಆಚರಿಸಿಕೊಂಡ ‘ಕರ್ನಾಟಕ ಇತಿಹಾಸ ಅಕಾಡೆಮಿ’ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅದರ ಅಧ್ಯಕ್ಷರಾಗಿ ಸಂಘಟನೆಯಲ್ಲೂ ತಮ್ಮ ಛಾಪನ್ನು ಒತ್ತಿರುವ ಕಾಮತ್ ಈಗಲೂ ಕರ್ನಾಟಕದ ಅಕಾಡೆಮಿಯ ಗೌರವಾಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಸೂರ್ಯನಾಥ ಕಾಮತರ ಹಿಂದುರುಗಿ ನೋಡಿದಾಗ ಪ್ರಬಂಧ ಅವರ ಅತ್ಮಚರಿತ್ರೆಯೂ ಹೌದು.

==ಪ್ರಶಸ್ತಿ ಗೌರವಗಳು==

ಡಾ. ಸೂರ್ಯನಾಥ ಕಾಮತ್ ಅವರ “ಕರ್ನಾಟಕದ ಸಂಕ್ಷಿಪ್ತ ಇತಿಹಾಸ” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗು “ಜಾನ್ ಫ್ಲೀಟ್” ಕೃತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಬಹುಮಾನ ಲಭಿಸಿವೆ.