ಸರ್ ದೊರಾಬ್ ಟಾಟ
| Dorabji Tata | |
|---|---|
| ಜನನ | ಆಗಸ್ಟ್ ೨೭, ೧೮೫೯ |
| ನಿಧನ | ಜೂನ್ ೩, ೧೯೩೨ (ತೀರಿದಾಗ ವಯಸ್ಸು ೭೨) Bad Kissingen, Germany |
| ರಾಷ್ಟ್ರೀಯತೆ | Indian |
| ಜನಾಂಗ | Parsi |
| 'ಶಿಕ್ಷಣ | Gonville and Caius College, Cambridge |
| ವೃತ್ತಿ | Entreprenuer |
| ಒಟ್ಟು ಮೌಲ್ಯ | $150 million |
| ಪ್ರಸಿದ್ಧಿ | Founder of Tata Steel Founder of Tata Power Founder of Tata Chemicals |
| ಸಂಗಾತಿ(ಗಳು) | Meherbai |
| ಮಕ್ಕಳು | none |
| ಪೋಷಕರು | Jamsetji and Hirabai |
(ಆಗಸ್ಟ್, ೨೭, ೧೮೫೯-ಜೂನ್ ೩, ೧೯೩೨)
ಇವರು ಟಾಟಾ ಬೃಹದ್ ಸಂಸ್ಥೆಯ ಮೂಲ ಸ್ಥಾಪಕರಾದ ಶ್ರೀ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ರವರ ಹಿರಿಯ ಮಗ. ಜೆ. ಎನ್.ಟಾಟಾ, ದೊರಾಬ್ ಟಾಟಾ ಹಾಗೂ ರತನ್ ದಾಧಾಭಾಯಿ ಟಾಟಾ, ಒಟ್ಟಾಗಿ ಟಾಟಾ ಅಂಡ್ ಸನ್ಸ್ ಕಂಪೆನಿಯ ಡೈರೆಕ್ಟರ್ಸ್ ಆಗಿ ಕೆಲಸಮಾಡುತ್ತಿದ್ದರು. ತಂದೆಯವರಾದ ಶ್ರೀ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ರವರ ಕನಸುಗಳನ್ನು ನನಸುಮಾಡಲು ಶ್ರಮಿಸಿ ಅದರಲ್ಲಿ ಯಶಸ್ಸು ಕಂಡರು. ಟಾಟಾ ಸ್ಟೀಲ್, ಟಾಟಾ ಪವರ್ ಮತ್ತು ಟಾಟಾ ಇಸನ್ಸ್ಟಿಟ್ಯೂಟ್ , ಬೆಂಗಳೂರು ಮತ್ತು ಹಲವು ಉದ್ಯಮಗಳನ್ನು ಜಮ್ ಶೆಟ್ ಜಿ ರವರು ಬಹಳವಾಗಿ ಹಚ್ಚಿಕೊಂಡಿದ್ದರು.
ದೊರಾಬ್ ಟಾಟಾ ರವರ ಬಾಲ್ಯ, ವಿದ್ಯಾಭ್ಯಾಸ, ಹಾಗೂ ಟಾಟ ಸಾಮ್ರಾಜ್ಯದ ಗುರುತರ ಜವಾಬ್ದಾರಿ [ಬದಲಾಯಿಸಿ]
ದೊರಾಬ್ ಟಾಟಾ ರವರು ಭಾರತದ ಪ್ರಪ್ರಥಮ ಬೃಹತ್ ಕೈಗಾರಿಕಾ ಔದ್ಯೋಗಿಕ ಮಹಾಶಿಲ್ಪಿಯಾದ ಜಮ್ ಸೆಟ್ ಜಿ ನುಝುರ್ ವಾನ್ ಜಿ ಟಾಟಾ ಹಾಗೂ ಅವರ ಪತ್ನಿ ಲೇಡಿ ಹೀರಬಾಯಿ ಯವರ ಚೊಚ್ಚಲ ಮಗನಾಗಿ ೧೮೫೯ ರಲ್ಲಿ ಜನಿಸಿದರು. ಅವರ ಪ್ರಾಧಮಿಕ ವಿದ್ಯಾಭ್ಯಾಸ ಬೊಂಬಾಯಿನ ಪ್ರೊಪ್ರೈಟರಿ ಶಾಲೆಯಲ್ಲಿ ಜರುಗಿತು. ೧೮೭೫ ರಲ್ಲಿ ಅವರು ಇಂಗ್ಲೆಂಡ್ ಗೆ ಹೋಗಿ ಅಲ್ಲಿ, ಖಾಸಗಿ ಶಿಕ್ಷಕರ ಸಹಾಯದಿಂದ ವಿದ್ಯಾಜ್ಞಾನವನ್ನು ಹೊಂದಿದರು. ೧೮೭೯ ರಲ್ಲಿ ಕೆಂಬ್ರಿಡ್ಜ್ ನ ಗೊನ್ವಿಲ್ಲೆ ಕೆಯಸ್ ಕಾಲೇಜ್ನಲ್ಲಿ ೨ ವರ್ಷ ಶಿಕ್ಷಣ ಮುಂದುವರೆಸಿದರು. ಅಲ್ಲಿಂದ ಅವರು ಭಾರತಕ್ಕೆ ಬಂದು ಬೊಂಬಾಯಿನ ಸೇಂಟ್ ವ್ಝೇವಿಯರ್ಸ್ ಕಾಲೇಜ್ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ೧೮೮೨ ರಲ್ಲಿ, ಬಿ.ಎ. ಪದವಿಯನ್ನು ಸಂಪಾದಿಸಿದರು. ಪದವಿಯನಂತರ ಅವರು ೨ ವರ್ಷಗಳ ಕಾಲ. ಆಗಿನ ಕಾಲದ ಹೆಸರುವಾಸಿಯಾಗಿದ್ದ, "ಬಾಂಬೆ ಗೆಝೆಟ್ " ಪತ್ರಿಕೆಯಲ್ಲಿ ದುಡಿದರು. ೧೮೮೪ ರಲ್ಲಿ ಅವರ ತಂದೆಯವರ ಆಶೆಯಂತೆ ದಕ್ಷಿಣ ಭಾರತದ ಪಾಂಡುಚೆರಿ ಗೆ ಹೋಗಿ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಸಾಧ್ಯತೆಗಳಬಗ್ಗೆ ಅಧ್ಯಯನ ನಡೆಸಿದರು. ಅಲ್ಲಿಂದ ನಾಗ್ ಪುರ್ ಗೆ ಬಂದು ಜಮ್ ಶೆಟ್ ಜಿ ರವರು ೧೮೭೭ ರಲ್ಲಿ ಪ್ರಾರಂಭಿಸಿದ್ದ ಎಂಪ್ರೆಸ್ ಮಿಲ್ಸ್ನಲ್ಲಿ ಕೆಲಸ ನೋಡಿಕೊಂಡರು. ಹತ್ತಿ ಉದ್ಯಮದ ಹಲವು ಮಜಲುಗಳನ್ನು ಕಣ್ಣಾರೆ ಕಾಣುವ ಅವಕಾಶ ಅವರಿಗೆ ಅಲ್ಲಿ ದೊರೆಯಿತು. ಸೆಟ್ ಜಿ ಅವರನ್ನು ಮೈಸೂರಿಗೆ ಕಳಿಸಿಕೊಟ್ಟರು. ಅಲ್ಲಿ, ಪ್ರಥಮ ಇನ್ ಸ್ಪೆಕ್ಟರ್ ಜನರಲ್ ಆಫ್ ಎಜುಕೇಷನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀ. ಹೆಚ್. ಜೆ. ಭಾಭರ ಸಂಪರ್ಕಬೆಳೆಯಿತು. ಅಲ್ಲಿದ್ದಾಗ ಅವರ ೧೮ ವರ್ಷದ ಮಗಳು, ಮೆಹರ್ ಬಾಯಿಯವರ ಜೊತೆ ಸ್ನೇಹಬೆಳೆದು ೧೮೯೭ ರಲ್ಲಿ, ಅವರನ್ನು ವಿವಾಹವಾದರು. ಆಗ ದೊರಾಬ್ ಗೆ ೩೮ ವರ್ಷವಯಸ್ಸು. ೧೮೯೬ ರಲ್ಲಿ ಜಮ್ ಸೆಟ್ ಜಿ ರವರ ಜೊತೆಗೆ ರತನ್ ದಾದಾಭಾಯ್ ಟಾಟಾ ಸೇರಿದಂತೆ ದೊರಾಬ್ ಅವರೂ "ಟಾಟಾ ಮತ್ತು ಮಕ್ಕಳು ಕಂ"ಕಂಪನಿಯ ಪಾಲುದಾರರಾಗಿ ತಮ್ಮನ್ನು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
" ಸರ್ ದೊರಾಬ್ ಟಾಟಾ, ಟ್ರಸ್ಟ್ " ನ ವತಿಯಿಂದ ಧನ-ಸಹಾಯಗಳಿಸಿದ ಸಂಸ್ಥೆಗಳು [ಬದಲಾಯಿಸಿ]
೧. Indian Institute of Science, Bangalore.
೨. TATA Cancer Research Centre, Bombay.
೩. TATA Institute of Social Sciences (TISS), Bombay.
೪. TATA Blood Bank, Bombay.
೫. National Centre for Porforming Arts (NCPA),Bombay.
೬. Institute of Population Study, Bombay.
ಸರ್ ದೊರಾಬ್ ಟಾಟಾ, ಮತ್ತು ಸರ್ ರತನ್ ಟಾಟಾ ಹಾಗೂ ಆರ್.ಡಿ. ಟಾಟಾ, ಜಮ್ ಸೆಟ್ ಜಿಯವರ ಕನಸನ್ನು ನನಸುಮಾಡಿದರು [ಬದಲಾಯಿಸಿ]
೧೯೦೪ ರಲ್ಲಿ ಜಮ್ ಶೆಟ್ ಜಿ ಮರಣ ಹೊಂದಿದಾಗ ದೊರಾಬ್ ಟಾಟಾ ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯನ್ನು ನಿಭಾಯಿಸಬೇಕಾಯಿತು. ಅವರ ತಮ್ಮ ರತನ್ ೧೨ ವರ್ಷ ಚಿಕ್ಕವರು. ಟಾಟಾ ಸಾಮ್ರಾಜ್ಯದ ಕಾರ್ಯಭಾರವೆಲ್ಲಾ ಹಿರಿಯಮಗಾದ ದೊರಬ್ ಅವರಮೇಲೆ ಬಿತ್ತು. ದೊರಾಬ್ ರಿಗೆ ಭುಜಕ್ಕೆ ಭುಜಕೊಟ್ಟು ಸಹಾಯಮಾಡಿದ ದಾದಾಭಾಯ್ ಭಾಯಿರತನ್ ಭಾಯಿ ಯವರು ನಿಜಕ್ಕೂ ಅಭಿನಂದನಾರ್ಹರು. ಸಾಯುವ ಮೊದಲು ಜಮ್ ಸೆಟ್ ಜಿ ಯವರು ಮಗನನ್ನು ಮತ್ತು ರತನ್ ರವರನ್ನೂ ಒಟ್ಟಿಗೆ ಕೂಡಿಸಿಕೊಂಡು ಟಾಟ ಸಾಮ್ರಜ್ಯವನ್ನು ಚೆನ್ನಾಗಿ ವೃದ್ಧಿಪಡಿಸಿ, ಇನ್ನೂ ಹೆಚ್ಚು ಹೆಚ್ಚು ಪ್ರಗತಿಪರ, ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮತ್ತು ಭಾರತದ ಸಂಪತ್ತನ್ನು ಹೆಚ್ಚಿಸಲು ಸಹಾಯಕವಾಗುವ ಮೂಲಭೂತ ಸೌಕರ್ಯಗಳನ್ನೊದಗಿಸುವ ಸ್ಟೀಲ್, ವಿದ್ಯುಚ್ಛಕ್ತಿ, ಮುಂತದವುಗಳ ಬಗ್ಗೆ ತಿಳಿಹೇಳಿದ್ದರು. ಇಂಟೆಗ್ರೇಟೆಡ್ ಸ್ಟೀಲ್ ಪ್ಲಾಂಟ್, ೩ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಂಪೆನಿಗಳು, ೨ ಸಿಮೆಂಟ್ ಕಂಪೆನಿಗಳು, ದೊಡ್ಡ ಅಡುಗೆ ಎಣ್ಣೆತಯಾರಿಸುವ ಕಾರ್ಖಾನೆಗಳು, ಸಾಬೂನು ತಯಾರಿಸುವ ಕಾರ್ಖಾನೆಗಳು, ಮತ್ತು ಭಾರಿ ಇನ್ಶೂರೆನ್ಸ್ ಕಂಪೆನಿ. "ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್," ಇತ್ಯಾದಿ.
ದೊರಾಬ್ ಟಾಟಾರವರ ವ್ಯಕ್ತಿತ್ವ ; ಭಾರತದ ಅರ್ಥಿಕ ಪ್ರಗತಿಗೆ ಬೇಕಾದದ್ದೇ Tata Sons Co. Ltd; ಗೂ ಸಹಿತ [ಬದಲಾಯಿಸಿ]
ದೊರಾಬ್ ಒಳ್ಳೆಯ ಧೃಢಕಾಯದ ಆರೋಗ್ಯವಂತ ಆಟಗಾರ. ಕುದುರೆಸವಾರಿ ಅವರಿಗೆ ಬಲು ಪ್ರಿಯ. ಬಾಂಬೆಯಿಂದ ೧೧೦ ಮೈಲಿದೂರದಲ್ಲಿದ ಖಿರ್ಕಿ ಗೆ ತಮ್ಮ ಕುದುರೆಯಮೇಲೆ ಕುಳಿತು ಒಂಬತ್ತೂವರೆ ಗಂಟೆಗಳಲ್ಲಿ ತಲುಪುತ್ತಿದ್ದರು. ಭಾರತದ ಉತ್ತಮ ಕ್ರೀಡಾ ಪಟುಗಳು ಒಲಂಪಿಕ್ ಆಟಗಳಲ್ಲಿ ಭಾಗವಹಿಸುವ ಏರ್ಪಾಡನ್ನು ಮಾಡಿದರು. ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ನ ಅಧ್ಯಕ್ಷರಾಗಿದ್ದ ಅವರು ೧೯೨೪ ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಒಲಂಪಿಯನಲ್ಲಿ ಭಾಗವಹಿಸಲು ಭಾರತದಿಂದ ಕೆಲವು ಆಟಗಾರರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕಳಿಸಿಕೊಟ್ಟಿದ್ದರು. ಅವರ ಪತ್ನಿ, ಲೇಡಿ ಮೆಹರ್ ಬಾಯಿ ೧೯೩೧ ರಲ್ಲಿ ತಮ್ಮ ೫೨ ನೆಯ ವಯಸ್ಸಿನಲ್ಲಿ ಲ್ಯುಕೊಮಿಯದಿಂದ ನರಳಿ ಮೃತರಾದರು. ಪತ್ನಿಯನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಿದ್ದ ದೊರಾಬ್ ಆಕೆಯ ನೆನಪಿನಲ್ಲಿ ೧೧ನೇ ಮಾರ್ಚ್ ೧೯೩೧ ರಲ್ಲಿ ಲೇಡಿ ಟಾಟಾಟ್ರಸ್ಟ್ಟನ್ನು ಸ್ಥಾಪಿಸಿದರು. ಕ್ಯಾನ್ಸರ್ ಕಾಯಿಲೆಯ ಇಲಾಜುಮಾಡಲು ರೆಡಿಯಮ್ ಬಳಕೆ ಅನಿವಾರ್ಯವಾಗಿತ್ತು. ಅದಕ್ಕಾಗಿ " ರೇಡಿಯಮ್ ಇನ್ಸ್ಟಿಟ್ಯೂಟ್ ಸ್ಥಾಪನೆ ಅವರ ಗುರಿಯಾಗಿತ್ತು. ಅಂತಹ ಟ್ರಸ್ಟ್ ಶುರುಮಾಡಲು ಹಣದ ಆವಶ್ಯಕತೆ ಇತ್ತು. ತಮ್ಮ ಆಸ್ತಿಯನ್ನೆಲ್ಲಾ ಒಟ್ಟುಗೂಡಿಸಿದರು. ತಮ್ಮ ಬಳಿಯಿದ್ದ ಅತ್ಯಂತ ಬೆಲೆಬಾಳುವ ೨೪೫ ಕ್ಯಾರೆಟ್ ವಜ್ರವನ್ನು ಮಾರಿದರು. ತಮ್ಮ ಬಳಿಯಲ್ಲಿದ್ದ ಸಂಪತ್ತನ್ನೆಲ್ಲಾ ಸಂಗ್ರಹಿಸಿದ ಹಣದ ಒಟ್ಟು ಮೊತ್ತ ೧.೧ ಮಿಲಿಯ ರೂಪಾಯಿಗಳು. ಅಷ್ಟನ್ನೂ ಬಡಬಗ್ಗರಿಗೆ, ದೀನ ದಲಿತರಿಗೆ, ಆಸ್ಪತ್ರೆಯ ಖರ್ಚನ್ನು ನಿಭಾಯಿಸಲುಆಗದ ಬಡವರಿಗೆ, ವಿಜ್ಞಾನ ಸಂಶೋಧನೆ, ವಿದ್ಯಾಭ್ಯಾಸಕ್ಕೆ, ಮತ್ತು ಸಾಮಾಜಿಕ ಸಂಸ್ಥೆಗಳಿಗೆ ತಮ್ಮ ಸಮಾಜಸೇವೆಯನ್ನು ಮಾಡಲು ಅನುವಾಗುವಂತೆ ಧನಸಹಾಯಮಾಡಲು ವಿನಿಯೋಗಿಸಬೇಕೆಂದು ತಮ್ಮ ಉಯಿಲಿನಲ್ಲಿ ನಮೂದಿಸಿದರು. ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣದ ರಾಶಿಯನ್ನು ಭಾರತದ ಜನತೆಯ ಏಳಿಗೆಗಾಗಿ ಸಮರ್ಪಿಸಿದ ಟಾಟಾ ಪರಿವಾರದವರಿಗೆ ನಮ್ಮ ನಮನಗಳನ್ನು ಸಲ್ಲಿಸಲೇಬೇಕು. ಜಮ್ ಸೆಟ್ ಜಿ ಯವರಿಂದ ಮೊದಲುಗೊಂಡು ಪರಿವಾರದ ಎಲ್ಲಾ ಸದಸ್ಯರೂ ಇದನ್ನೇ ತಮ್ಮ ಜೀವನದ ಟಾಟಾಪರಿವಾರದ ಮೂಲಮಂತ್ರವನ್ನಾಗಿ ಆರಿಸಿಕೊಂಡರು. ಹೆಚ್ಚಿನ ಪಾಲು ಜನ ಭಾರತದಲ್ಲಿ ತಮ್ಮ ಅಮೋಘ ಸೇವೆಸಲ್ಲಿಸಿ, ಭಾರತದ ಸಂಪನ್ನು ಹೆಚ್ಚಿಸಿ, ಭಾರತೀಯರ ಜೀವನದಲ್ಲಿ ಆಶಾಕಿರಣಗಳನ್ನು ಬೆಳಗಿ, ಯೂರೋಪ್ ನಲ್ಲಿ ಮೃತರಾಗಿರುವುದನ್ನು ನಾವು ಗಮನಿಸಬಹುದಾಗಿದೆ.
'ಹುಮತ', 'ಹುಕ್ತ', 'ಹ್ವರ್ ಶ್ತ'-’ದೊರಾಬ್,’ ಮತ್ತು ’ಮೆಹ್ರಿ,’ [ಬದಲಾಯಿಸಿ]
ಮುಂದಿನ ವರ್ಷಗಳಲ್ಲಿ ಸಹಾಯಧನದಮೊತ್ತವನ್ನು ಹೆಚ್ಚಿಸಿ ಸರ್ ದೊರಾಬ್ ಟಾಟಾ ಟ್ರಸ್ಟ್ ಪ್ರಾರಂಭಿಸಿದರು. ೩ನೇ ಜೂನ್ ೧೯೩೨ ರಂದು ತಮ್ಮ ೭೩ ನೆಯ ವಯಸ್ಸಿನಲ್ಲಿ ಜರ್ಮನಿಯ ಬ್ಯಾಡ್ ಕಿಸೆಂಗಿನ್ ಎಂಬಲ್ಲಿ ಮರಣಹೊಂದಿದರು. ಅವರ ಪಾರ್ಥಿವ ಶರೀರವನ್ನು ತಮ್ಮ ಪ್ರೀತಿಯಮಡದಿಯವರ ಸಮಾಧಿಯ ಪಕ್ಕದಲ್ಲಿ, ಬ್ರೂಕ್ ವುಡ್ ಸಿಮೆಟ್ರಿನಲ್ಲಿ ದಫನಾಯಿಸಲಾಯಿತು. ಅವರಿಗೆ ಮಕ್ಕಳಿರಲಿಲ್ಲ. ಸಮಾಧಿಯ ಮೇಲೆ ಕೆತ್ತಿರುವ ಸಾಲುಗಳು, ಹುಮತ, ಹುಕ್ತ, ಹ್ವರ್ ಶ್ತ-ದೊರಾಬ್, ಮೆಹ್ರಿ. ಅಂದರೆ, ಸದ್ವಿಚಾರ, ಸದ್ವಾಣಿ ಮತ್ತು ಸತ್ಕಾರ್ಯ (Good Thoughts, Good Words, ಹಾಗೂ Good Deeds). ಇವು ಪಾರ್ಸಿ ಸಂತ ಝರತುಷ್ಟ್ರರ ಹಿತೋಕ್ತಿಗಳು. ಇವೇ ಸಮಸ್ತ ಟಾಟ ಪರಿವಾರದ ದಿವ್ಯ ಧ್ಯೇಯಗಳು. ಜೆ. ಆರ್. ಡಿ ಒಮ್ಮೆ ಹೇಳಿದಂತೆ, " ಭಾರತದ ಬೆಳವಣಿಗೆಗೆ ಬೇಕಾದ ಉದ್ಯೋಗಗಳೆ ನಮಗೂ ಬೇಕಾದವುಗಳು. ಹಣಮಾಡುವುದು ಮುಖ್ಯವಲ್ಲ. ಆ ಉದ್ಯೋಗಗಳು ಭಾರತದ ಸಾಮಾನ್ಯರಲ್ಲಿ, ಸಾಮಾನ್ಯರಿಗೂ ಸಾಧ್ಯವಾದಷ್ಟು ಔದ್ಯೋಗಾವಕಾಶ ಸಿಕ್ಕು, ಅವರ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು. ನಮಗೆ ಮುಖ್ಯವಾಗಿ ಬೇಕಾದದ್ದು ಅದು ". ಸರ್ ರತನ್ ಟಾಟಾ ರಂತೆ ಈಗಿನ, ರತನ್ ನಾವಲ್ ಟಾಟಾ ಕೂಡ ಇದೇ ಆದರ್ಶಮಾರ್ಗದಲ್ಲಿ ಮುಂದುವರೆದಿದ್ದಾರೆ.
