ಸದಸ್ಯ:Akshay Padiyammanda

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ಲಲಿತಾ ಸಿದ್ಧಬಸವಯ್ಯ: (ಜನನ: ೨೭-೦೨-೧೯೫೫) ವರ್ತಮಾನದ ಸರಳ ಸಾಮಾನ್ಯ ಸಂಗತಿಗಳನ್ನು, ಅವುಗಳ ಒಳವಿವರಗಳೊಂದಿಗೆ ಕವಿತೆಯನ್ನಾಗಿ ಕಟ್ಟುವ ಕೌಶಲವನ್ನು ಕರಗತವಾಗಿಸಿಕೊಂಡಿರುವ ಅಪರೂಪದ ಕವಯಿತ್ರಿ ಇವರು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ಇವರ ತಂದೆ ಡಿ.ಎಸ್. ಸಿದ್ಧಲಿಂಗಯ್ಯ, ತಾಯಿ ಶ್ರೀಮತಿ ಆರ್. ಪುಟ್ಟಮ್ಮಣ್ಣಿ. ಕೊರಟಗೆರೆ- ತುಮಕೂರುಗಳಲ್ಲಿ ವ್ಯಾಸಂಗ ಮುಗಿಸಿ, ಬಿ.ಎಸ್ಸ್. ಪದವೀಧರೆಯಾದರು. ೨೮ ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲಸಿರಿ, ಇಹದಸ್ವರ, ಕೆಬ್ಬೆನ್ನೆಲ, ದಾರಿನೆಂಟ ಮತ್ತು ಬಿಡಿ ಹರಳು ಎಂಬ ಕವಿತಾ ಸಂಕಲನಗಳನ್ನೂ, ಆನೆಘಟ್ಟ ಎಂಬ ಕಥಾಸಂಕಲನವನ್ನೂ, ಇನ್ನೊಂದು ಸಭಾಪರ್ವ ಎಂಬ ನಾಟಕವನ್ನೂ, ಮಿ.ಛತ್ರಪತಿ ಎಂಬ ನಗೆಬರಹವನ್ನು ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ.