ವೈಶಾಲಿ ಕಾಸರವಳ್ಳಿ
(ಏಪ್ರಿಲ್ ೧೨, ೧೯೫೨-ಸೆಪ್ಟೆಂಬರ್, ೨೭, ೨೦೧೦)
[ಬದಲಾಯಿಸಿ] ಜನನ ಹಾಗೂ ಬಾಲ್ಯ
ವೈಶಾಲಿಯವರು ೧೯೫೨. ಏಪ್ರಿಲ್ ೧೨ರಂದು ಜನಿಸಿದರು. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ತಂದೆ 'ವೆಂಕಟರಾವ್ ಚಿಟ್ಟಿಗೋಪಿಕರ್' ಮಹಾರಾಷ್ಟ್ರದವರು.'ಉರ್ದು ಶಾಯಿರಿಪ್ರಿಯರು'. ಹುಟ್ಟಿದ್ದು 'ಕೊಲ್ಲಾಪುರ'ದಲ್ಲಿ. ತಾಯಿ 'ನಿರ್ಮಲ', ಕರ್ನಾಟಕದವರು. 'ಹಿಂದೂಸ್ತಾನಿ ಕರ್ನಾಟಕ ಸಂಗೀತ' ಕಲಿತಿದ್ದರು. ಹೀಗಾಗಿ ಬೆಳೆದದ್ದು ಓದಿದ್ದೆಲ್ಲಾ ಗುಲ್ಬರ್ಗದಲ್ಲಿನ 'ಬ್ರಹ್ಮ ಪುರ'ದ 'ತವರು ಮನೆ'ಯಲ್ಲಿ. ಬಡತನದಲ್ಲಿಯೇ ಅವರ ಜೀವನ ಸಾಗಿತ್ತು. ಕೆಲ ಕಾಲ 'ಗುಬ್ಬಿ ಕಂಪನಿ'ಯಲ್ಲಿ ತಂದೆಯವರು 'ಮ್ಯಾನೇಜರ್' ಆಗಿದ್ದರು. ಬಾಲ್ಯದಲ್ಲಿ 'ಗುಬ್ಬಿ ಕಂಪನಿ'ಯಿಂದ ಅವರಿಗೆ ನಾಟಕದ ಪರಿಚಯವಾಗಿದ್ದು. 'ದಶಾವತಾರ' ನಾಟಕದಲ್ಲಿ ಬರುವ ನಾಲ್ಕು 'ವೇದ ಶಿಶು'ಗಳ ಪೈಕಿ ಅವರೂ ಒಂದು ಶಿಶುವಾಗಿ ಪಾತ್ರ ಮಾಡಿದ್ದು ಉಂಟು. 'ಸಂತ ತುಕಾರಾಂ' ನಂತ ಭಕ್ತಿ ಪ್ರಧಾನ ಚಿತ್ರಗಳನ್ನೇ ಆಗಿನ ಕಾಲದಲ್ಲಿ ನೋಡಬೇಕಿತ್ತು. "ನಿಜ ಹೇಳಬೇಕೆಂದರೆ, ಶಾಲಾ ಕಾಲೇಜು ದಿನಗಳಲ್ಲಿ ನಾಟಕ ಮಾಡಿದ್ದು ಬಿಟ್ಟರೆ ಅಭಿನಯದ ಬಗ್ಗೆ ನನಗೆ ಗೊತ್ತಿರಲಿಲ್ಲ" ಎನ್ನುತ್ತಾರೆ, ವೈಶಾಲಿಯವರು. 'ಬಿಎಸ್ಸಿ ಪದವಿ' ಮುಗಿಸಿದ್ದ ಅವರು, "ನಟಿಯಾಗುವ ವಿಷಯ ಕನಸಿನಂತಿತ್ತೆಂದು" ಅವರು ನೆನೆಯುತ್ತಾರೆ.
[ಬದಲಾಯಿಸಿ] ಕಾರಂತರ ಶಿಷ್ಯೆ
೧೯೭೨ ರಲ್ಲಿ 'ವೈಶಾಲಿಯವರ ಇಡೀ ಕುಟುಂಬ ಗುಲ್ಬರ್ಗ ದಿಂದ ಬೆಂಗಳೂರಿಗೆ ವರ್ಗವಾಯಿತು. 'ಬಿ.ವಿ.ಕಾರಂತ'ರು ಸ್ನೇಹಿತರಾಗಿದ್ದರು. ಹಾಗಾಗಿ ಅವರು 'ಹವ್ಯಾಸಿ ರಂಗಭೂಮಿ'ಗೆ ಸೇರ್ಪಡೆಯಾದರು. ಆಗ ಬೆಂಗಳೂರಿನಲ್ಲಿ ಕಾರಂತರ ನಾಟಕದ ಅಲೆ ಶುರುವಾಗಿತ್ತು. 'ಟಿ.ಎಸ್.ನಾಗಾಭರಣ', 'ಕೋಕಿಲ ಮೋಹನ್', 'ಸುಂದರರಾಜ್', 'ರತ್ನಮಾಲಾ', 'ಟಿ.ಎಸ್.ರಂಗಾ' ಸೇರಿದಂತೆ 'ಬೆನಕ' (ಬೆಂಗಳೂರು ನಗರ ಕಲಾವಿದರ) ನಾಟಕ ತಂಡ'ವನ್ನು ಬಿ.ವಿ.ಕಾರಂತರು ಕಟ್ಟಿದರು. 'ಜೋಕುಮಾರಸ್ವಾಮಿ', 'ಹಯವದನ', 'ಸಂಕ್ರಾಂತಿ' ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದರು. "ನನಗೆ ಅಭಿನಯ ಕಲೆ ಅಂದ್ರೆ ಏನು ಎಂಬುದನ್ನು ಹೇಳಿಕೊಟ್ಟವರು ಕಾರಂತರು". "ಶಿಸ್ತು, ಶ್ರದ್ಧೆ, ಏಕಾಗ್ರತೆ, ಕ್ರಿಯಾಶೀಲತೆ, ಸಾಮಾಜಿಕ ಬದ್ಧತೆ ಗುಣಗಳನ್ನು ನಾನು ಕಲಿತದ್ದೇ ಇವರಿಂದ", ಇದು ವೈಶಾಲಿ ಕಾಸರವಳ್ಳಿಯವರ ಪ್ರತಿಕ್ರಿಯೆ.
[ಬದಲಾಯಿಸಿ] ಕಾರಂತರ ಗರಡಿಯಲ್ಲಿ ಕಲಿತ ಪಾಠ
'ಇವನ್ನು ವೈಶಾಲಿ ಕಾಸರವಳ್ಳಿಯವರ ಮಾತಿನಲ್ಲೇ ಕೇಳಿಸಿಕೊಂಡರೆ ರಸಾನುಭವದ ಸ್ವಾದ ಇನ್ನೂ ಹೆಚ್ಚು'. 'ಕಾರಂತರು ಮೊದಲು ನಮಗೆ ಹೇಳಿಕೊಟ್ಟ ಪಾಠ ಅಂದ್ರೆ ಸುತ್ತಮುತ್ತಲ ಪರಿಸರವನ್ನು ಅವಲೋಕನ ಮಾಡಿ ಎಂದು'. ನಮ್ಮ ಅಕ್ಕಪಕ್ಕವೇ ವೈವಿಧ್ಯಮಯ ಪಾತ್ರಗಳು ಇರುತ್ತವೆ. ಬದುಕಿನ ರಂಗ ಮಂದಿರದಲ್ಲಿ ಸಿಗುವವರೇ ನಿಜವಾದ ಕಲಾವಿದರು. ಅವರನ್ನು ನಾವು ನೋಡಿ ಅನುಕರಿಸಿದರೆ ಸಾಕು ಉತ್ತಮ ಕಲಾವಿದರಾಗಬಹುದು. ಪರಿಸರದ ಪಾಠಕ್ಕಿಂತ ಮತ್ತೊಂದು ಪಾಠಶಾಲೆ ಇಲ್ಲ" ಎನ್ನುತ್ತಿದ್ದರು ಕಾರಂತರು. ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪದ್ಮಿನಿ ಪಾತ್ರವೈಶಾಲಿಯವರದು. ಇದು ೧೪ ಭಾಷೆಗಳಲ್ಲಿ ಅನುವಾದಗೊಂಡ ನಾಟಕವಾಗಿತ್ತು. ಅರ್ಧಭಾಗ ಚೆನ್ನಾಗಿ ಅಭಿನಯಿಸಿದರೂ, ಉಳಿದರ್ಧ ಅಭಿನಯಿಸಲು ಕಷ್ಟವಾಗುತ್ತಿತ್ತು. ತುಂಬಾ ಸವಾಲಿನ ಪಾತ್ರವಾಗಿತ್ತು. ಇದರಲ್ಲಿನ ಉತ್ತಮ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಹಾಗೆಯೇ ಪಿ.ಲಂಕೇಶರ 'ಸಂಕ್ರಾಂತಿ' ನಾಟಕದಲ್ಲಿ ವಿಭಿನ್ನ 'ಗೌಡ್ತಿ 'ಪಾತ್ರವನ್ನು ಆಯ್ದುಕೊಂಡಿದ್ದರು. ಇದರಲ್ಲಿ 'ಸುಂದರ ರಾಜ'ನದು 'ಶೂದ್ರ'ನ ಪಾತ್ರ. ನಾನು ಒಂದು ಸುಳ್ಳು ಹೇಳಿರುತ್ತೇನೆ. ಏನೇ ಸುಳ್ಳು ಹೇಳುತ್ತೀಯ ಎಂದು ನನ್ನ ಕೈ ಹಿಡಿದು ಜಗ್ಗಾಡಿದಾಗ ಬಳೆಗಳೆಲ್ಲ ಚೂರು ಚೂರಾಗಿ ರಕ್ತದ ಕಲೆಗಳಾಗುತ್ತಿತ್ತು". ಆದ್ರೂ ಆ ಪಾತ್ರದೊಳಗಿನ ಪರಕಾಯ ಪ್ರವೇಶದಿಂದಾಗಿ ನನಗೆ ಒಳ್ಳೆಯ ಹೆಸರು ತಂದಿತ್ತು. 'ಬೆನಕ ತಂಡ'ದಿಂದ ಒಂದು ತಿಂಗಳು ಡೆಲ್ಲಿ, ಬಾಂಬೆ, ಪೂನಾ, ಲಕ್ನೋ, ಗದಗ, ಧಾರವಾಡ, ಉಡುಪಿ ಮುಂತಾದೆಡೆ' ಆಲ್ ಇಂಡಿಯಾ ನಾಟಕದ ಟೂರ್' ಮಾಡಿದೆವು. ಟ್ರೈನ್‌ನಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದೆವು. ಇಡೀ ತಂಡವೆ ಒಂದು ಕುಟುಂಬ. ನಾವೆಲ್ಲ ಕುಟುಂಬದ ಸದಸ್ಯರಂತೆ ಇರುತ್ತಿದ್ದೆವು. ಇವತ್ತೇನು ಸೆಲಬ್ರೆಟಿಸ್ ಅನಿಸಿಕೊಂಡಿದ್ದಾರೋ ಅವರೆಲ್ಲ ಬೆನಕ ತಂಡದಲ್ಲಿ ಇದ್ದವರೇ. . ನಾವು ಆಗ ಹಣಕ್ಕಾಗಿ ನಾಟಕ ಮಾಡುತ್ತಿರಲಿಲ್ಲ. ಎಲ್ಲೋ ಓಡಾಟದ ಖರ್ಚಿಗೆಂದು ಸ್ವಲ್ಪ ಹಣ ಕೊಡುತ್ತಿದ್ದರು. ವೃತ್ತಿ ಕಲಾವಿದೆಯಾದವಳಲ್ಲ, ಹವ್ಯಾಸಿ ರಂಗಭೂಮಿ ಕಲಾವಿದೆಯಾಗಿಯೇ . ಆಗ ಅಪ್ಪ ರಾತ್ರಿ ೯ ಗಂಟೆ ಒಳಗೆ ಮನೆ ಸೇರ್ಕೋಬೇಕು ಎಂಬ ತಾಕೀತು ಮಾಡಿದ್ದರು.
[ಬದಲಾಯಿಸಿ] ಅಂದಿನ ದಿನದ ನಾಟಕ ಪ್ರಿಯ-ರಸಿಕರು
ಆಗಿನ ಹೊಸ ಅಲೆಯ ನಾಟಕಗಳನ್ನು ನೋಡಲು ಮೈಸೂರಿನಿಂದ ಬೆಂಗಳೂರಿಗೆ ಸೈಕಲ್‌ನಲ್ಲಿ ಬಂದು ಹೋಗುವಂಥ ಪ್ರೇಕ್ಷಕರು ಇದ್ರು. ನಾಟಕ ಪ್ರೇಮಿಯಾಗಿದ್ದ ರಜನಿಕಾಂತ್ ಕೂಡ ನಿಮ್ಮ ಸಾಕಷ್ಟು ನಾಟಕಗಳನ್ನು ನೋಡಿದ್ದೇನೆ, ಉತ್ತಮ ಅಭಿನಯ ನಿಮ್ಮದು ಎಂದದ್ದು ಉಂಟು. ವಿಷ್ಣುವರ್ಧನ್ ಸಹ ಹಯವದನ ನಾಟಕದಲ್ಲಿ ನನ್ನ ಜೊತೆ ಅಭಿನಯಿಸಲು ನಿಗದಿಯಾಗಿತ್ತು. ಆದರೆ ಅವರಿಗೆ ನಾಗರಹಾವು ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ನಾಯಕನಾಗಿ ಅಭಿನಯಿಸಲು ಅವಕಾಶ ನೀಡಿದ್ದರಿಂದ ವಿಷ್ಣು ಆ ಕಡೆ ಹೋದರು.
[ಬದಲಾಯಿಸಿ] ಕಂಠದಾನ ಪ್ರಕ್ರಿಯೆಯ ಬಗ್ಗೆ ವೈಶಾಲಿ ಕಾಸರವಳ್ಳಿಯವರ ಪ್ರತಿಕ್ರಿಯೆಗಳು
- ಒಂದು ಪಾತ್ರದ ಉಸಿರಿನ ಏರಿಳಿತಗಳನ್ನು ಗ್ರಹಿಸಿ, ಅದರ ತುಟಿಯ ಚಲನವಲನಕ್ಕೆ ಹೊಂದುವಂತೆ ಕಂಠದಾನ ಮಾಡುವುದು ಕಷ್ಟದ ಮತ್ತು ಸವಾಲಿನ ಕೆಲಸವಾಗಿರುತ್ತದೆ. ಭಾಷಾ ಶುದ್ಧಿ ಇಲ್ಲಿ ಮುಖ್ಯ, ಅಲ್ಪಪ್ರಾಣ, ಮಹಾಪ್ರಾಣಗಳ ಉಚ್ಚಾರಣೆ ಸ್ಪಷ್ಟವಾಗಿರಬೇಕು. ಆಗ ಮಾತ್ರ ಉತ್ತಮ ಕಂಠದಾನ ಕಲಾವಿದೆಯಾಗಲು ಸಾಧ್ಯ.
- ಕಾಸರವಳ್ಳಿಯವರ ಪ್ರಕಾರ ನಾಟಕ-ಸಿನಿಮಾಕ್ಕೆ ಇರುವ ವ್ಯತ್ಯಾಸ ಅಂದ್ರೆ, ನಾಟಕ ನಟನ ಮಾಧ್ಯಮ. ಸಿನಿಮಾ ನಿರ್ದೇಶಕನ ಮಾಧ್ಯಮ.
- ಆದ್ದರಿಂದ ನಿರ್ದೇಶಕನ ನಿರೀಕ್ಷೆಗೆ ತಕ್ಕಂತೆ ಅಭಿನಯಿಸಬೇಕಿರುವುದು ನಟನ ಕರ್ತವ್ಯ.
- ಸಿನಿಮಾದಲ್ಲಿ ಟೇಕ್‌ಗಳಿಗೆ ಅವಕಾಶವಿರುತ್ತದೆ. ನಾಟಕದಲ್ಲಿ ಅದಕ್ಕೆ ಆಸ್ಪದವೇ ಇಲ್ಲ. ಸ್ಥಳದಲ್ಲಿಯೇ ಪ್ರತಿಕ್ರಿಯೆ ಸಿಕ್ಕುತ್ತದೆ. ಆದ್ದರಿಂದ ನಾಟಕ ಜೀವಂತ. ಸಿನಿಮಾ ಕಲ್ಪನೆಯ ಮಾಯಾಲೋಕ,
- ಇಲ್ಲಿ ಯಾವುದೇ ಪಾತ್ರವನ್ನು ನಟ ಕಲ್ಪಿಸಿಕೊಂಡೇ ಅಭಿನಯಿಸಬೇಕಿರುತ್ತದೆ. ಈ ಪಾತ್ರಕ್ಕೆ ಪ್ರೇಕ್ಷಕರ ಚಪ್ಪಾಳೆ ಗ್ಯಾರಂಟಿ ಎಂದುಕೊಂಡ ಸಂದರ್ಭದಲ್ಲಿ ಚಪ್ಪಾಳೆ ಬರದಿದ್ದಾಗ ಏಕೆ ಬರಲಿಲ್ಲ, ಏನು ತಪ್ಪು ಮಾಡಿದೆ ಎಂಬಷ್ಟರಮಟ್ಟಿಗೆ ನಾಟಕದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆದರೆ ಇದು ಸಿನಿಮಾದಲ್ಲಿ ಸಾಧ್ಯವಿಲ್ಲ. ರಂಗಭೂಮಿ ಅಭಿನಯದ ಖುಷಿ ಸಿನಿಮಾದಲ್ಲಿ ಸಿಗುವುದು ಕಠಿಣ.
[ಬದಲಾಯಿಸಿ] ಗಿರೀಶ ಕಾಸರವಳ್ಳಿಯವರ ಚಿತ್ರನಿರ್ಮಾಣದಲ್ಲಿ ವೈಶಾಲಿಯವರ 'ಶ್ರಮದ ಪರಿಛಾಯೆ' ಇರುತ್ತಿತ್ತು
ಬಣ್ಣದ ಬದುಕಿನ ಅನುಭವಗಳನ್ನು ಮೆಲುಕು ಹಾಕಿದ 'ವೈಶಾಲಿ ಕಾಸರವಳ್ಳಿ' ಯವರು 'ಗೂಡಿನಿಂದ ಗಗನಕ್ಕೆ' ಎಂಬ ಧಾರಾವಾಹಿಯನ್ನು 'ದೂರದರ್ಶನ'ಕ್ಕಾಗಿ ನಿರ್ದೇಶಿಸಿದವರು. 'ಶಂಕರ್‌ನಾಗ್' ನಿರ್ದೇಶನದ 'ಮಾಲ್ಗುಡಿ ಡೇಸ್' 'ಹಿಂದಿ ಧಾರಾವಾಹಿ'ಯಲ್ಲೂ ವಿಭಿನ್ನ ಪಾತ್ರ ಮಾಡಿದವರು. ಎಪ್ಪತ್ತರ ದಶಕದಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ಪ್ರತಿಭೆಯೇ 'ವೈಶಾಲಿ ಕಾಸರವಳ್ಳಿ'. 'ಹವ್ಯಾಸಿ ರಂಗಭೂಮಿ' ಮತ್ತು 'ಸಿನಿಮಾ ನಟಿ'ಯಾಗಿ, 'ವಸ್ತ್ರವಿನ್ಯಾಸಕಿ'ಯಾಗಿ, 'ಕಂಠದಾನ ಕಲಾವಿದೆ'ಯಾಗಿ, 'ನಿರ್ದೇಶಕಿ'ಯಾಗಿ ತಮ್ಮ ಬಹುಮುಖ ಪ್ರತಿಭೆ ಮೆರೆದವರು. ರಾಷ್ಟ್ರಮಟ್ಟದಲ್ಲಿ ಕನ್ನಡಕ್ಕೆ ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಟ್ಟಿರುವ ಪ್ರಸಿದ್ಧ ನಿರ್ದೇಶಕ 'ಗಿರೀಶ್ ಕಾಸರವ'ಳ್ಳಿಯವರ ಬಾಳಸಂಗಾತಿಯಾಗಿದ್ದರೂ 'ತಮ್ಮದೆ ಸ್ವಂತಿಕೆ'ಯನ್ನು ಉಳಿಸಿಕೊಂಡು ಬಂದವರು. 'ಸತತ ಮೂರು ವರ್ಷಗಳ ಕಾಲ' ಗಿರೀಶ್ ಒಂದು ಚಿತ್ರಕ್ಕಾಗಿ ಚಿತ್ರಕಥೆ ಸಿದ್ಧಗೊಳಿಸಿದ ಬಳಿಕ ಸರಿತಪ್ಪುಗಳನ್ನು ಹೇಳುವ ಮೊದಲ 'ವಿಮರ್ಶಕಿ' ವೈಶಾಲಿಯವರೇ. ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಚಲನಚಿತ್ರಗಳು.
- 'ಆಕ್ರಮಣ',
- 'ಘಟಶ್ರಾದ್ಧ',
- 'ಕ್ರೌರ್ಯ',
- 'ದ್ವೀಪ',
- 'ತಾಯಿ ಸಾಹೇಬ',
- 'ನಾಯಿನೆರಳು',
- 'ಗುಲಾಬಿ ಟಾಕೀಸ್'
ಮುಂತಾದ ಚಿತ್ರಗಳ ಯಶಸ್ಸಿನ ಹಿಂದೆ ವೈಶಾಲಿ ಕಾಸರವಳ್ಳಿ ಇದ್ದಾರೆ ಯೆಂಬುದು ನಿಜಸ್ಥಿತಿ.
[ಬದಲಾಯಿಸಿ] ವೈಶಾಲಿಯವರು ನಿರ್ಮಿಸಿದ 'ಕಿರುತೆರೆ ಧಾರಾವಾಹಿಗಳು' ಹೀಗಿವೆ
- 'ಮೂಡಲ ಮನೆ',
- 'ಮುತ್ತಿನ ತೋರಣ',
- 'ಮೌನರಾಗ' ಬಹಳಷ್ಟು ಜನಮನ್ನಣೆಗೆ ಪಾತ್ರವಾಗಿದ್ದವು.
[ಬದಲಾಯಿಸಿ] ವಸ್ತ್ರವಿನ್ಯಾಸಕ್ಕೆ ರಾಷ್ಟ್ರ ಪ್ರಶಸ್ತಿ
'ಪ್ರೇಮಾ ಕಾರಂತ್' ಅವರಿಂದ ವಸ್ತ್ರ ವಿನ್ಯಾಸ ಕಲೆಯನ್ನು ಪಾತ್ರದ ಹಿನ್ನೆಲೆ ಅರ್ಥೈಸಿಕೊಂಡು ಅದಕ್ಕೆ ಎಂಥ 'ವೇಷಭೂಷಣ ಬೇಕು' ಎಂದು ಊಹಿಸಿ ನಿರ್ಧರಿಸುವ ಸಾಮರ್ಥ್ಯ ವಸ್ತ್ರವಿನ್ಯಾಸಕರಿಗೆ ಇರಬೇಕು. ಇದೊಂದು ರೀತಿ ಪಾತ್ರಗಳ ಮರುಸೃಷ್ಟಿಯಾಗಿರುತ್ತದೆ. ತಾಯಿ ಸಾಹೇಬ ಚಿತ್ರಕ್ಕೆ ವಸ್ತ್ರವಿನ್ಯಾಸ ಮಾಡಿದಾಗ ನಾನು ಅನುಸರಿಸಿದ ಮಾರ್ಗ ಇದೆಯಾಗಿತ್ತು. ಸ್ವತಂತ್ರಪೂರ್ವ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ನಾನು ಆಗಿನ ಕಾಲದಲ್ಲಿ ರವಿಕೆ ಹೇಗೆ ತೊಡುತ್ತಿದ್ದರು, ಬೆಂಡೋಲೆ ಹೇಗಿರುತ್ತಿತ್ತು, ಮೂಗುತಿ ಯಾವ ಆಕಾರದ್ದು, ತಲೆ ಯಾವ ರೀತಿ ಬಾಚುತ್ತಿದ್ದರು ಎಂಬುದನ್ನೆಲ್ಲ ಉತ್ತರ ಕರ್ನಾಟಕದವರ ಹಳೆಯ ಫೋಟೋಗಳನ್ನು ನೋಡಿ, ನನ್ನದೆ ಕಲ್ಪನೆಯ ಮೂಸೆಯಲ್ಲಿ ಪಕ್ವಗೊಳಿಸಿ ಜಯಮಾಲಾಗೆ ವಸ್ತ್ರವಿನ್ಯಾಸ ಮಾಡಿದೆ. ನಾಯಕಿ ಪಾತ್ರಕ್ಕಷ್ಟೆ ಅಲ್ಲ ಆಗ ಜಟಕ ಹೊಡೆಯುವವ ಹೇಗಿದ್ದ, ಆಗಿನ ಪರಿಸರಕ್ಕೆ ಹೊಂದಿಕೊಳ್ಳುವಂತ, ಅದೇ ಇತಿಹಾಸವನ್ನು ಮರುಕಳಿಸುವಂತೆ ನನ್ನದೆ ಪರಿಕಲ್ಪನೆಯಲ್ಲಿ ಇಡೀ ಚಿತ್ರದ ಕಲಾವಿದರಿಗೆ ವಸ್ತ್ರವಿನ್ಯಾಸ ಮಾಡಿದೆ. 'ಗಿರೀಶ್ ಕಾಸರವಳ್ಳಿ' ನಿರ್ದೇಶನದ 'ತಾಯಿ ಸಾಹೇಬ' ಚಿತ್ರದಲ್ಲಿನ 'ವಸ್ತ್ರ ವಿನ್ಯಾಸ'ಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು.
- ರಾಜ್ಯೋತ್ಸವ ಪ್ರಶಸ್ತಿ,
- ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೂ ವೈಶಾಲಿ ಅವರು ಭಾಜನರಾಗಿದ್ದರು.
[ಬದಲಾಯಿಸಿ] ಸಿನಿಮಾದ ನಂಟು
ನರಸಿಂಹರಾಜು ನಿರ್ಮಾಣದ, ಅಭಿನಯದ ಮೊದಲ ಚಿತ್ರ ಪ್ರೊ.ಹುಚ್ಚುರಾಯ. ವಿಷ್ಣು-ಮಂಜುಳ ಜೋಡಿಯ, ನರಸಿಂಹರಾಜು ತಂಗಿಯಾಗಿ ಭಾರ್ಗವಿ ನಾರಾಯಣ್ ಅಭಿನಯಿಸಿದ ಈ ಚಿತ್ರದಲ್ಲಿ ನನ್ನದು ಕತ್ರಿ ಕಮಲೆ ಎಂಬ ಕಾಮಿಡಿ ಪಾತ್ರ. ಕೇವಲ ನಾಯಕಿಯಾಗಿ ಅಭಿನಯಿಸೋದು ಅಷ್ಟೇ ಅಲ್ಲ, ಅಭಿನೇತ್ರಿಯಾದವಳಿಗೆ ಎಲ್ಲ ಪಾತ್ರವೂ ಮುಖ್ಯ ಎಂಬ ಕಾರಂತರ ಮಾತಿನಂತೆ ಸಿಕ್ಕ ಕಾಮಿಡಿ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ. ಇದಕ್ಕೆ ಪ್ರಶಸ್ತಿ ಕೂಡ ಬಂತು.
- 'ಯಾವ ಜನ್ಮದ ಮೈತ್ರಿ' ವೈಶಾಲಿ ಅವರು ನಟಿಸಿದ ಮೊದಲ ಚಿತ್ರ
- ಪ್ರೊಫೆಸರ್ ಹುಚ್ಚುರಾಯ,
- ಮಾನಸ ಸರೋವರ,
- ಮಮತೆಯ ಮಡಿಲು,
- ಭೂತಯ್ಯನ ಮಗ ಅಯ್ಯು ಸೇರಿದಂತೆ ೭೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪ್ರೇಕ್ಷಕರು ಇವತ್ತಿಗೂ ನನ್ನ ಗುರುತಿಸೋದು ನನ್ನ ವಾಯ್ಸ್‌ನಿಂದ. ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ಮೇಲೆ, ಫಲಿತಾಂಶ, ಗೀಜಗನಗೂಡು, ಆಸೆಗೊಬ್ಬ ಮೀಸೆಗೊಬ್ಬ, ಬಂಗಾರದ ಪಂಜರ, ದಾರಿ ತಪ್ಪಿದ ಮಗ, ಚಿರಂಜೀವಿ ಸುಧಾರಕ, ಹೊಂಬಿಸಿಲು, ಮಮತೆಯ ಮಡಿಲು, ಕಿಟ್ಟು ಪುಟ್ಟು ಸೇರಿದಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವೆ. 'ಅನ್ವೇಷಣೆ' ಯಲ್ಲಿ 'ಸ್ಮಿತಾ ಪಾಟೀಲ್' ಗೆ, 'ಬರಗೂರರ, 'ಸೂರ್ಯ'ದಲ್ಲಿ 'ರೋಹಿಣಿ ಹಟ್ಟಂಗಡಿ' ಗೆ, 'ಗಿರೀಶ್ ರ 'ಮನೆ' ಚಿತ್ರದಲ್ಲಿ 'ದೀಪ್ತಿ ನಾವಲ್‌ಗೆ 'ಕಂಠದಾನ' ಮಾಡಿದ್ದಾರೆ.
[ಬದಲಾಯಿಸಿ] ಚಲನ ಚಿತ್ರವೊಂದನ್ನು ನಿರ್ದೇಶಿಸುವ ಆಶೆಯಿತ್ತು
ಮೂಲತಃ ರಂಗಭೂಮಿ ಕಲಾವಿದೆಯಾದ ವೈಶಾಲಿ ಅವರು ಸಿನಿಮಾವೊಂದನ್ನು ನಿರ್ದೇಶಿಸಬೇಕೆಂದು ಎಂದು ಕನಸು ಕಂಡಿದ್ದರು. ಆದರೆ ಚಿತ್ರವನ್ನು ನಿರ್ದೇಶಿಸಬೇಕು ಎಂಬ ಅವರ ಆಸೆ ಕಡೆಗೂ ನೆರವೇರದ್ದು ವಿಧಿ ವೈಚಿತ್ರ್ಯ. ಹಿಂದಿ ಮತ್ತು ಮರಾಠಿಯ ಕೆಲವು ನಾಟಕಗಳನ್ನು ವೈಶಾಲಿ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.
[ಬದಲಾಯಿಸಿ] ವೈಶಾಲಿ, ಗಿರೀಶ್ ಮದುವೆಯಾದ ಬಗೆ
" ಗಿರೀಶ್ ಮೊದಲು ಪರಿಚಯವಾಗಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿಯೇ. ಬಿ.ವಿ. ಕಾರಂತರ ನಾಟಕಗಳ ಮೂಲಕ. ಕಾರಂತರ 'ಚೋಮನದುಡಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು 'ಗಿರೀಶ್'. ನನಗಾಗ ಇವರು ಕಂಡಿದ್ದು ನಾಚಿಕೆ ಸಂಕೋಚದ ಮುದ್ದೆಯ ಚಿಕ್ಕ ಹುಡುಗನ ತರಹ". "ಬಹುಶಃ ನಮ್ಮಿಬರ ತದ್ವರುದ್ಧದ ಸ್ವಭಾವಗಳೇ ಪರಸ್ಪರ ಆಕರ್ಷಣೆಗೆ ಕಾರಣ ಅಂತ ತೋರುತ್ತದೆ. ಅವರೊಬ್ಬ ಬುದ್ಧಿವಂತ, ಡೀಸೆಂಟ್‌ಬಾಯ್". "ನಾಟಕ, ಸಿನಿಮಾ ಅಂತ ಗೀಳಿರುವ ಈ ಹುಡುಗನಿಗೆ ನನ್ನ ಮಗಳು ಕೊಟ್ಟರೆ, ಜೀವನ ನಿರ್ವಹಣೆ ಹೇಗೆ ಎಂಬ ಭಯ, ಆತಂಕ ತಂದೆಗೆ ಇತ್ತು". "ಕಾರಂತರು ಗಿರೀಶ್ ಪ್ರತಿಭೆ ಬಗ್ಗೆ ಹೇಳಿದಾಗ ತಂದೆಗೆ ಧೈರ್ಯ ಬಂತು". "ಹಾಗಾಗಿ ೧೯೭೮ ರಲ್ಲಿ ನಮ್ಮ ಮದುವೆಯಾಯಿತು". "ಮಗ 'ಅಪೂರ್ವ', ಮಗಳು 'ಅನನ್ಯ' ಹುಟ್ಟಿದರು. ಮಗನಿಗೆ ನಿರ್ದೇಶನದ ಕಡೆ ಒಲವಿದ್ದರೆ, ಮಗಳಿಗೆ ನಟನೆಯಲ್ಲಿ ಆಸಕ್ತಿ".
[ಬದಲಾಯಿಸಿ] ಆರೋಗ್ಯದಲ್ಲಿ ಏರು-ಪೇರು
ದೊಡ್ಡ ಕಹಿಘಟನೆ ಅಂದ್ರೆ ೨೦೦೪ರಿಂದ ನನ್ನ ಆರೋಗ್ಯ ಕೈ ಕೊಟ್ಟಿದ್ದು. ಮೂರು ಸಲ 'ಕೋಮ ಸ್ಥಿತಿ' ತಲುಪಿದೆ. ಇನ್ನೇನೂ ಮುಗಿದೆ ಹೋಯಿತು ಎಂಬ ಹಂತದಿಂದಲೂ 'ಫೀನಿಕ್ಸ್ ಪಕ್ಷಿ' ತರಹ ಸಾವೆಂಬ ಬೂದಿಯಿಂದ ಎದ್ದು ಬಂದಿರುವೆ. ಹೀಗೆ ನನಗೆ ಮೂರು ಬಾರಿ ಪುನರ್‌ಜನ್ಮ ಸಿಕ್ಕಿದೆ. ಮಗನ, ಮಗಳ ಮದುವೆ ನೋಡಿ ಬಿಟ್ಟರೆ ನನಗೆ ನಿಶ್ಚಿಂತೆ. ಲಿವರ್ ಸಮಸ್ಯೆಯಿಂದ ನಿತ್ಯವು ಬಳಲುತ್ತಿದ್ದೇನೆ. ಇದಕ್ಕೆ ಪರಿಹಾರ ಎಂಬಂತೆ ಸಿನಿಮಾ ನಾಟಕಗಳಿಗಷ್ಟೆ ಹಾಸ್ಯವನ್ನು ನಾನು ಸಿಮೀತ ಮಾಡಿಕೊಂಡವಳಲ್ಲ. ಮನೆಯಲ್ಲಿ 'ಮಿಮಿಕ್ರಿ' ಮಾಡಿ ನಗಿಸುತ್ತಾ ನಗುವುದನ್ನು ಚಿಕ್ಕ ವಯಸ್ಸಿನಿಂದಲು ನಾನು ರೂಢಿಸಿಕೊಂಡು ಬಂದವಳು. ಹಾಗಾಗಿ 'ಹಾಸ್ಯ' ನನ್ನ ಜೀವನದ ಅವಿಭಾಜ್ಯ ಅಂಗ. ಹಾಸ್ಯ ಪ್ರಜ್ಞೆಯಿಂದಲೆ ಈ ತರಹದ ಎಲ್ಲಾ ನೋವುಗಳನ್ನು ಮರೆಯುತ್ತಿದ್ದರು.
[ಬದಲಾಯಿಸಿ] ನಿಧನ
ಮೂರೂವರೆ ದಶಕಗಳಿಂದ ಕಲೆಯ ನಂಟನ್ನು ಉಳಿಸಿಕೊಂಡೆ ಬಂದಿರುವ ಇವರಿಗೆ ಕಳೆದ ಐದು ವರ್ಷಗಳಿಂದ ತೀವ್ರ ಅನಾರೋಗ್ಯ ಕಾಡಿದ್ದು ಉಂಟು. ನಾಲ್ಕು ವರ್ಷಗಳ ಹಿಂದೆಯೇ ಶ್ರೀಮತಿ, ಕಾಸರವಳ್ಳಿಯವರ ಅವರ 'ಕಿಡ್ನಿ' ವೈಫಲ್ಯವಾಗಿತ್ತು. ಮೂರುಬಾರಿ ಪುನರ್‌ಜನ್ಮ ಸಿಕ್ಕಿದೆ. ನಾಲ್ಕನೆ ಬಾರಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಅವರನ್ನು ಚಿಕಿತ್ಸೆಗಾಗಿ ಒಂದು ವಾರದ ಹಿಂದಷ್ಟೆ ಜಯನಗರದ "ಮಣಿಪಾಲ್ ಆಸ್ಪತ್ರೆ" ಗೆ ದಾಖಲಿಸಲಾಗಿತ್ತು. ಆದರೆ ಈಬಾರಿ ಅವರು ಗುಣಮುಖರಾಗಿ ಮನೆಗೆ ಬರಲೇಯಿಲ್ಲ. ಸೋಮವಾರ (ಸೆಪ್ಟೆಂಬರ್, ೨೭) ೨೦೧೦ ಸಂಜೆ ಸುಮಾರು ೫-೩೦ ರ ಸಮಯದಲ್ಲಿ ಸಂಜೆ ವಿಧಿವಶರಾಗಿದ್ದಾರೆ. ಮೃತರು, ಇಬ್ಬರು ಮಕ್ಕಳಾದ ಅನನ್ಯ ಕಾಸರವಳ್ಳಿ, ಅಪೂರ್ವ ಕಾಸರವಳ್ಳಿ ಹಾಗೂ ಪತಿ, ಗಿರೀಶ್ ಕಾಸರವಳ್ಳಿ ಯವರನ್ನು ಅಗಲಿದ್ದಾರೆ .
