ವೀರಗಾಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಿಳಾ ವೀರಗಾಸೆ

ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ಪೌರಾಣಿಕ ಹಿನ್ನೆಲೆ[ಬದಲಾಯಿಸಿ]

ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.

ವೀರಗಾಸೆ

ಆಚರಣೆ[ಬದಲಾಯಿಸಿ]

ಸಾಮಾನ್ಯವಾಗಿ ಜಾತ್ರೆ, ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, [[ಹಾಲುಮತಸ್ಥರ] ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಈಗ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.

ವೇಷಭೂಷಣ[ಬದಲಾಯಿಸಿ]

ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.

ವೀರಗಾಸೆಯ ಒಂದು ದೃಶ್ಯ

ಪ್ರದರ್ಶನ[ಬದಲಾಯಿಸಿ]

ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ........... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ: "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. `ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.
"https://kn.wikipedia.org/w/index.php?title=ವೀರಗಾಸೆ&oldid=1197774" ಇಂದ ಪಡೆಯಲ್ಪಟ್ಟಿದೆ