ವಿಶ್ವಾಮಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶ್ವಾಮಿತ್ರ
ರಾಜಾ ರವಿವರ್ಮ ಬಿಡಿಸಿದ ವಿಶ್ವಾಮಿತ್ರನ ಚಿತ್ರ
ಜನ್ಮ ನಾಮಕೌಶಿಕ


ವಿಶ್ವಾಮಿತ್ರ ಪ್ರಾಚೀನ ಭಾರತದಲ್ಲಿ ಬಹಳ ಪೂಜನೀಯರಾದ ಸನ್ಯಾಸಿಗಳಲ್ಲಿ ಒಬ್ಬರು. ಋಗ್ವೇದದ ೩ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ ಒಬ್ಬ ಮಹಾನ್ ಸಂತ. ಸನ್ಯಾಸಿಯಾಗುವ ಮುನ್ನಿನ ಜೀವನದಲ್ಲಿ ಒಬ್ಬ ಚಂದ್ರವಂಶದಲ್ಲಿ ವಿಶ್ವರಥ ಹೆಸರಿನ ಕ್ಷತ್ರಿಯ ರಾಜನಾಗಿದ್ದ.

ಬ್ರಹ್ಮಋಷಿ ವಿಶ್ವಾಮಿತ್ರರು ತನ್ನ ರಾಜ್ಯ ಮತ್ತು ರಾಜ ಸ್ಥಾನಮಾನವನ್ನು ತ್ಯಜಿಸುವ ಮೊದಲು, ರಾಜನಾಗಿದ್ದನು, ಹೀಗಾಗಿ ಅವರು ರಾಜರ್ಷಿ ಅಥವಾ 'ರಾಜ ಋಷಿ' ಎಂಬ ಬಿರುದನ್ನು ಉಳಿಸಿಕೊಂಡರು.

ಹಿನ್ನೆಲೆ[ಬದಲಾಯಿಸಿ]

ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬನು ಕುಶ(ಈತ ರಾಮನ ಮಗ ಕುಶ ಅಲ್ಲ, ಗಮನಿಸಿ.). ಈತನ ಪತ್ನಿಯ ಹೆಸರು ವೈದರ್ಭಿ. ಈತನಿಗೆ ನಾಲ್ಕು ಮಂದಿ ಮಕ್ಕಳು- ಕುಶಾಂಭ, ಕುಶನಾಭ, ಅಧೂರ್ಥರಜಸ್ ಮತ್ತು ವಸು. ಈ ನಾಲ್ವರು ನಾಲ್ಕು ರಾಜ್ಯಗಳನ್ನು- ಕುಶಾಂಭ ಕೌಶಾಂಬಿಯನ್ನೂ, ಕುಶನಾಭ ಮಹೋದಯವನ್ನೂ, ಅಧೂರ್ಥರಜಸ್ ಧರ್ಮಾರಣ್ಯವನ್ನೂ ಮತ್ತು ವಸು ಗಿರಿವಜ್ರ(ವಸುಮತಿ ಎಂಬ ಇನ್ನೊಂದು ಹೆಸರೂ ಇದೆ.)ವನ್ನು ಆಳಿಕೊಂಡಿದ್ದರು. ಈ ನಾಲ್ವರಲ್ಲಿ ಒಬ್ಬನಾದ ಕುಶನಾಭನ ಪತ್ನಿಯ ಹೆಸರು ಘೃತಾಚಿ. ಈ ದಂಪತಿಗಳಿಗೆ ೧೦೦ ಮಂದಿ ಹೆಣ್ಣುಮಕ್ಕಳು ಇದ್ದರು. ಯೌವ್ವನಸ್ಥರಾದ ಈ ಹೆಣ್ಣುಮಕ್ಕಳನ್ನು ಸೋಮದೆಯ ಮಗನಾದ ಬ್ರಹ್ಮದತ್ತನಿಗೆ ಕೊಟ್ಟು ಮದುವೆ ಮಾಡಿದರು. ಕುಶನಾಭನಿಗೆ ಗಂಡು ಸಂತಾನವಿರಲಿಲ್ಲ. ಗಂಡುಮಗುವನ್ನು ಪಡೆಯಲು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದನು. ಕಾಲಾನಂತರ, ಕುಶನಾಭನಿಗೆ ಗಂಡುಮಗು ಜನಿಸುತ್ತದೆ. ಆ ಮಗುವಿಗೆ ಕುಶನಾಭನು ಗಾಧಿ ಎಂದು ಹೆಸರನ್ನು ಇಡುತ್ತಾನೆ[೧].

ಜನನ[ಬದಲಾಯಿಸಿ]

ಗಾದಿ ರಾಜನ ಮಗಳು ಸತ್ಯವತಿ, ಋಚೀಕನೆಂಬ ಮುನಿಯನ್ನು ಮದುವೆ ಆಗುತ್ತಾಳೆ. ಸತ್ಯವತಿಯು ವಯಸಿನಲ್ಲಿ ಚಿಕ್ಕವಳಾದ ಕಾರಣ, ಸತ್ಯವತಿಯನ್ನು ನೋಡಿಕೊಳ್ಳಲು, ಜೊತೆಗೆ ಅವಳ ತಾಯಿಯೂ ಋಚಿಕನ ಆಶ್ರಮಕ್ಕೆ ತೆರಳುತ್ತಾಳೆ. ಒಮ್ಮೆ, ಗಂಡನೊಂದಿಗೆ ಈಶ್ವರನ ಕುರಿತಾದ ಹೋಮವೊಂದನ್ನು ಕೈಗೊಂಡ ಸಂದರ್ಭದಲ್ಲಿ ಸತ್ಯವತಿ, ತನಗೊಂದು ಗಂಡುಮಗು ಬೇಕೆಂಬ ಬೇಡಿಕೆಯನ್ನಿಡುತ್ತಾಳೆ. ಹೋಮ ಮಾಡುತ್ತಿರುವ ಕಾಲದಲ್ಲಿ ಅಗ್ನಿಧಾತಳಾದ ಪತ್ನಿಯು ಕೇಳಿದ್ದನ್ನು ನಿರಾಕರಿಸುವಂತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿದ ಋಚೀಕನು ದೇವರಿಗೆ ಅರ್ಪಿಸಬೇಕಿದ್ದ ಹವಿಸ್ಸನ್ನೇ ಮಂತ್ರಿಸಿ, ಪಿಂಡ ರೂಪದಲ್ಲಿ ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಕೊಡುವಾಗ ಮೊದಲ ಪಿಂಡವನ್ನು ನೀನೇ ತಿನ್ನು, ಈ ಎರಡನೆಯ ಪಿಂಡವನ್ನು ನಿನ್ನ ತಾಯಿಗೆ ಕೊಡು ಎಂದು ಆದೇಶಿಸುತ್ತಾನೆ. ಯಾಗವನ್ನು ಮುಗಿಸಿ ಮನಃಶಾಂತಿಗಾಗಿ ತಪಸ್ಸಿಗೆ ತೆರಳುತ್ತಾನೆ[೨].

ಋಚೀಕನು ಮಂತ್ರಿಸಿ ಕೊಟ್ಟ ಪಿಂಡಗಳನ್ನು ಸೇವಿಸುವಾಗ ಕಾರಣಾಂತರದಿಂದ ಪಿಂಡಗಳು ಅದಲುಬದಲಾಗುತ್ತದೆ. ಅಂದರೆ, ಸತ್ಯವತಿಯು ಸೇವಿಸಬೇಕಾದ ಪಿಂಡವನ್ನು ಅವಳ ತಾಯಿಯೂ, ತಾಯಿ ಸೇವಿಸಬೇಕಾದ ಪಿಂಡವನ್ನು ಮಗಳು ಸತ್ಯವತಿಯೂ ಸೇವಿಸುತ್ತಾಳೆ. ಸಕಾಲದಲ್ಲಿ ಸತ್ಯವತಿ ಮತ್ತು ಅವಳ ತಾಯಿ ಗರ್ಭ ಧರಿಸಿ ಇಬ್ಬರೂ ಸಹ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಋಚೀಕನು ಮಂತ್ರಿಸಿ ಕೊಟ್ಟ ಪಿಂಡಗಳನ್ನು ಸೇವಿಸುವಾಗ ಅದಲುಬದಲಾದ ಕಾರಣದಿಂದ, ಸತ್ಯವತಿಯ ಗರ್ಭದಲ್ಲಿ ಪರಶುರಾಮನ ತಂದೆಯಾಗಲಿರುವ ಜಮಾಗ್ನಿಯೂ, ಸತ್ಯವತಿಯ ತಾಯಿಯ ಗರ್ಭದಲ್ಲಿ ವಿಶ್ವರಥನೂ ಜನ್ಮ ಪಡೆಯುತ್ತಾರೆ[೩].

ಇವನಿಗೆ ಹೈಮವತಿ, ಶಾಲಾವತಿ, ದೃಷದ್ವತಿ, ರೇಣು, ಮಾಧವಿ ಮುಂತಾದ ಹೆಂಡತಿಯರಿದ್ದರು. ಇವನಿಗೆ ಮಧುಚ್ಛಂದ, ಕತಿ, ಯಾಜ್ಞವಲ್ಕ್ಯ, ಪಾಣಿನ, ಗಾಲವ, ಮುದ್ಗಲ, ಸಾಂಕೃತಿ, ದೇವಲ, ಅಷ್ಟಕರೆಂಬ ಮಕ್ಕಳಲ್ಲದೆ ಇವನ ವಂಶಕ್ಕೆ ಸೇರಿದ ಶುನಶ್ಯೇಪ ಎಂಬ ಹುಡುಗನೂ ಪ್ರಖ್ಯಾತರಾದವರು. ಕುಶನ ವಂಶದಲ್ಲಿ ಹುಟ್ಟಿದ್ದರಿಂದ, ವಿಶ್ವರಥನಿಗೆ ಕೌಶಿಕನೆಂಬ ಹೆಸರೂ ಇದೆ[೪].

ವಿಶ್ವಾಮಿತ್ರನಾದುದು[ಬದಲಾಯಿಸಿ]

ವಿಶ್ವರಥ ಒಮ್ಮೆ ತನ್ನ ಬೃಹತ್ ಸೈನ್ಯದೊಂದಿಗೆ ಭೂಪ್ರದಕ್ಷಿಣೆ ಮಾಡುವ ಸಂದರ್ಭ, ಬರುತ್ತಾ ದಾರಿಯಲ್ಲಿ ಮಹರ್ಷಿ ವಸಿಷ್ಠರ ಆಶ್ರಮ ಇರುವ ಪ್ರದೇಶಕ್ಕೆ ಬಂದನು. ಉಚಿತ ಗೌರವವನ್ನು ಸಲ್ಲಿಸಿದ ವಸಿಷ್ಠರು, ತಮ್ಮ ಸತ್ಕಾರವನ್ನು ಸ್ವೀಕರಿಸಲು ವಿನಂತಿಸಿದರು. ಆದರೆ ವಿಶ್ವರಥ, ತನ್ನ ಬೃಹತ್ ಗಾತ್ರದ ಸೈನ್ಯಕ್ಕೆ ಹೇಗೆ ವ್ಯವಸ್ಥೆ ಮಾಡುವುದೆಂದು ಚಿಂತೆ ಆಯಿತು. ಮಹರ್ಷಿ ವಸಿಷ್ಠರು ಆ ಬಗ್ಗೆ ಚಿಂತಿಸಬೇಕಾದ್ದಿಲ್ಲ, ತಾನು ಎಲ್ಲವನ್ನೂ ವ್ಯವಸ್ಥೆ ಮಾಡುತ್ತೇನೆ ಎಂದು ಅಭಯ ನುಡಿದು, ತಮ್ಮ ಆಶ್ರಮದಲ್ಲಿದ್ದ ಕಾಮಧೇನುವಾದ ನಂದಿನಿಯನ್ನು ಕರೆದು, ವಿಶ್ವರಥ ಮತ್ತು ಆತನ ಸೈನ್ಯಕ್ಕೆ ಔತಣವನ್ನು ಸಿದ್ಧ ಮಾಡುವಂತೆ ತಿಳಿಸಿದರು[೫].

ರುಚಿಯಾದ ಬಗೆಬಗೆಯ ಆಹಾರವಸ್ತುಗಳನ್ನು ಕ್ಷಣಮಾತ್ರದಲ್ಲಿ ತಯಾರಾದುದನ್ನು ಕಂಡು ರಾಜ ಕೌಶಿಕ ಆಶ್ಚರ್ಯಪಟ್ಟನು. ಇಷ್ಟೆಲ್ಲಾ ಲೀಲೆಗಳಿಗೆ ನಂದಿನಿಯೇ ಕಾರಣ ಎಂದು ತಿಳಿದ ಕೌಶಿಕ, ದುರಾಸೆಯಿಂದ ವಸಿಷ್ಠ ಮಹರ್ಷಿಗಳ ಬಳಿ ಸಾರಿ ನಂದಿನಿಯನ್ನು ತನಗೆ ಕೊಡಿರೆಂದು ಕೇಳಿದನು. ನಂದಿನಿಯ ಬದಲಾಗಿ, ಆಶ್ರಮದ ಖರ್ಚಿಗಾಗಿ ಸಾಕಷ್ಟು ಹಣವನ್ನೂ, ಗೋವುಗಳನ್ನೂ ಕೊಡುತ್ತೇನೆ ಎಂದು ಹೇಳಿದನು. ಇದನ್ನು ನಿರಾಕರಿಸಿದ ವಸಿಷ್ಠರು, ನಂದಿನಿ ದೇವಲೋಕದಿಂದ ಬಂದವಳು, ಅವಳು ಈ ಆಶ್ರಮವನ್ನು ಬಿಟ್ಟು ಬೇರೆಲ್ಲಿಗೂ ಹೋಗಲಾರಳು. ಅಲ್ಲದೇ ಅವಳನ್ನು ನಿಮಗೆ ಕೊಡುವ ಹಕ್ಕೂ ನನಗಿಲ್ಲ ಎಂದು ಹೇಳಿದರು. ವಸಿಷ್ಠರ ಮಾತಿನಿಂದ ಕೆರಳಿದ ವಿಶ್ವರಥ, ತನ್ನ ಸೈನಿಕರಿಗೆ ಶಭಲೆಯನ್ನು ಹಿಡಿದು ತರಲು ಆದೇಶಿಸಿದನು[೬].

ವಿಶ್ವರಥನ ಸೈನಿಕರ ದಾಳಿಯಿಂದ ಕೆರಳಿದ ನಂದಿನಿ ಸಿಟ್ಟಿನಿಂದ ಹೂಂಕರಿಸಿದಳು. ನಂದಿನಿಯ ಮೈಯಿಂದ ಸಾವಿರಾರು ಸೈನಿಕರು ಜಿಗಿದು ಬಂದರು. ವಿಶ್ವರಥನ ಸೈನಿಕರ ಮೇಲೆ ದಾಳಿ ಮಾಡಿ, ಕ್ಷಣಾರ್ಧದಲ್ಲಿ ಸೈನ್ಯವನ್ನು ನಾಶ ಮಾಡಿದರು. ವಿಶ್ವರಥ ತನ್ನ ಮಕ್ಕಳನ್ನೂ ಯುದ್ಧಕ್ಕೆ ಕಳಿಸಿದನು. ಅವನ ಮಕ್ಕಳೆಲ್ಲರೂ ನಾಶವಾದರು[೭].

ಇದೆಲ್ಲವನ್ನು ಕಂಡ ವಿಶ್ವರಥ, ತಾನೂ ಸಹ ವಸಿಷ್ಠರಂತೆಯೇ ಶಕ್ತಿ ಗಳಿಸಬೇಕು ಎಂದು ನಿರ್ಧರಿಸಿ ಹಿಮಾಲಯಕ್ಕೆ ತೆರಳಿ ತಪಸ್ಸಿನಲ್ಲಿ ನಿರತನಾದನು. ಸಾವಿರಾರು ವರ್ಷಗಳ ಉಗ್ರ ತಪಸ್ಸಿನ ನಂತರ, ಈಶ್ವರನು ಪ್ರತ್ಯಕ್ಷನಾಗಿ ಬೇಕುಬೇಕಾದ ಮಂತ್ರಾಸ್ತ್ರಗಳನ್ನು ವಿಶ್ವರಥನ ಬೇಡಿಕೆಯಂತೆ ಅನುಗ್ರಹಿಸಿದನು.

ಮಂತ್ರಾಸ್ತ್ರಗಳೊಂದಿಗೆ ವಸಿಷ್ಠರ ಆಶ್ರಮಕ್ಕೆ ಹಿಂತಿರುಗಿದ ವಿಶ್ವರಥನು ತಾನು ಸಿದ್ಧಿಸಿಕೊಂಡಿದ್ದ ಮಂತ್ರಾಸ್ತ್ರಗಳನ್ನು ವಸಿಷ್ಠರ ಮೇಲೆ ಪ್ರಯೋಗಿಸಲು ಆರಂಭಿಸಿದನು. ಆದರೆ ವಸಿಷ್ಠರ ಸಾತ್ವಿಕ ತಪೋಬಲದ ಮುಂದೆ ಅವೆಲ್ಲಾ ವಿಫಲವಾದವು!

ಕೊನೆಗೆ, ಬ್ರಹ್ಮತೇಜಸ್ಸಿನ ಮುಂದೆ ಕ್ಷತ್ರೀಯ ಬಲ ನಿಲ್ಲದು ಎಂದು ಅರಿತುಕೊಂಡ ವಿಶ್ವರಥ, ಮತ್ತೆ ಪುನಃ ಘೋರ ತಪಸ್ಸು ಮಾಡಲು ಕಾಡಿಗೆ ತೆರಳಿದನು. ಬ್ರಹ್ಮನ ಧ್ಯಾನಿಸಿ ತಪಸ್ಸಿನಲ್ಲಿ ನಿರತನಾದನು. ಸಾವಿರಾರು ವರ್ಷಗಳು ಮುಗಿದವು. ವಿಶ್ವರಥನ ದೃಢ ಸಂಕಲ್ಪಕ್ಕೆ, ತಪಸ್ಸಿಗೆ ಮೆಚ್ಚಿ ಬ್ರಹ್ಮನು ಪ್ರತ್ಯಕ್ಷನಾಗಿ ಬ್ರಹ್ಮರ್ಷಿ ಪಟ್ಟವನ್ನು ಕೊಟ್ಟ. ಆದರೆ ಅಲ್ಲಿಯವರೆಗೆ ವಸಿಷ್ಠರಂತಹಾ ಪರಮ ಸಾತ್ವಿಕರೊಂದಿಗೇ ಸೆಣಸಾಡಿದ ಕಾರಣ, ಅವರು ಬ್ರಹ್ಮರ್ಷಿ ಎಂದು ಘೋಷಿಸಿದರೆ ಮಾತ್ರ ಆ ಪಟ್ಟವು ತನಗೆ ಭೂಷಣ ಎಂದು ನುಡಿದನು. ಅದಕ್ಕೊಪ್ಪಿದ ಮಹರ್ಷಿ ವಸಿಷ್ಠರು, ವಿಶ್ವರಥನನ್ನು ಬ್ರಹ್ಮರ್ಷಿ ಎಂದು ಘೋಷಿಸಿದರಲ್ಲದೆ, ವಿಶ್ವರಥನಿಗೆ ವಿಶ್ವಾಮಿತ್ರ ಎಂದು ನಾಮಕರಣ ಮಾಡಿದರು[೮].

ಉಲ್ಲೇಖಗಳು[ಬದಲಾಯಿಸಿ]

  1. "ಶ್ರೀಮದ್ವಾಲ್ಮೀಕಿ ರಾಮಾಯಣಮ್ ಬಾಲಕಾಂಡಃ" (PDF). vidwannrs.in. ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮಾ ಅಂತರ್ಜಾಲತಾಣ ನಿರ್ಮಾಣ ಸಮಿತಿ, ಬೆಂಗಳೂರು. Retrieved 6 June 2021.
  2. "ಶ್ರೀವಿಶ್ವಾಮಿತ್ರ ಗಾಯತ್ರಿ ಚರಿತ್ರೆ". veda-vijnana.blogspot.com/. Vedic Science. Retrieved 6 June 2021.
  3. "ಶ್ರೀವಿಶ್ವಾಮಿತ್ರ ಗಾಯತ್ರಿ ಚರಿತ್ರೆ". veda-vijnana.blogspot.com/. Vedic Science. Retrieved 6 June 2021.
  4. "ವಿಶ್ವಾಮಿತ್ರ". kanaja.karnataka.gov.in/. ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ. Retrieved 6 June 2021.
  5. "ವಿಶ್ವಾಮಿತ್ರ". kanaja.karnataka.gov.in. ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ. Retrieved 6 June 2021.
  6. "ವಿಶ್ವಾಮಿತ್ರ". kanaja.karnataka.gov.in. ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ. Retrieved 6 June 2021.
  7. "ವಿಶ್ವಾಮಿತ್ರ". kanaja.karnataka.gov.in. ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ. Retrieved 6 June 2021.
  8. "ವಿಶ್ವಾಮಿತ್ರ". kanaja.karnataka.gov.in. ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಸರ್ಕಾರ. Retrieved 6 June 2021.


ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |