ವಿರಳ ಭಸ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿರಳ ಭಸ್ಮ ಲೋಹ ಇಂದ ಪುನರ್ನಿರ್ದೇಶಿತ)
ವಿರಳ ಭಸ್ಮ ಅದಿರು

ವಿರಳ ಭಸ್ಮ(rare earth)ಎಂದರೆ ಆವರ್ತ ಕೋಷ್ಟಕದಲ್ಲಿ ೫೮ ರಿಂದ ೭೧ ನೇ ಸ್ಥಾನದವರೆಗೆ ಇರುವ ಲೋಹ ಮೂಲಧಾತುಗಳು.ಈ ವಿರಳ ಭಸ್ಮ ಎಂಬ ವರ್ಗೀಕರಣ ನಿಜವಾಗಿ ತಪ್ಪು ಕಲ್ಪನೆಯಿಂದ ಕೂಡಿದೆ.ಏಕೆಂದರೆ ಇವುಗಳು ವಿರಳವೂ ಅಲ್ಲ,ಭಸ್ಮಗಳೂ ಅಲ್ಲ. ಈ ಮೂಲಧಾತುಗಳನ್ನು ಅವುಗಳನ್ನು ಕಂಡುಹಿಡಿದವರು ಅಯಾಯ ಮೂಲಧಾತುಗಳ ಆಕ್ಸೈಡ್ (ಭಸ್ಮ)ಗಳಿಂದ ಬೇರ್ಪಡಿಸಿದರು. ಆ ಕಾಲದಲ್ಲಿ ಇವುಗಳ ಇರುವಿಕೆ ವಿರಳವಾಗಿದ್ದುದರಿಂದ ಇವುಗಳನ್ನು ವಿರಳ ಭಸ್ಮಗಳೆಂದು ಹೆಸರಿಸಿದರು. ಈ ಮೂಲಧಾತುಗಳ ಆಕ್ಸೈಡುಗಳು ಹೆಚ್ಚಾಗಿ ಅಲ್ಯುಮಿನಿಯಮ್, ಕ್ಯಾಲ್ಶಿಯಮ್,ಮ್ಯಗ್ನೀಶಿಯಮ್ ಮುಂತಾದ ಲೋಹಗಳ ಆಕ್ಸೈಡುಗಳನ್ನು ಹೋಲುತ್ತವೆ.

ಈ ವಿರಳ ಭಸ್ಮ ಲೋಹಗಳ ಪರಮಾಣುಗಳ ಹೊರ ಆವರಣದಲ್ಲಿ ಮೂರು ಎಲೆಕ್ಟ್ರಾನ್ ‌ಗಳಿದ್ದು ಇವುಗಳು ವೇಲೆನ್ಸೀಯ ಜೋಡಣೆಗಳಲ್ಲಿ ಪಾಲ್ಗೊಳ್ಳುತ್ತವೆ.ಈ ರೀತಿಯ ರಚನೆಯಿಂದಾಗಿ,ಎಲ್ಲಾ ವಿರಳ ಭಸ್ಮ ಮೂಲಧಾತುಗಳು ನೀರಿನಲ್ಲಿ ದ್ರಾವಣಗಳ ಸಮಾನ ಗುಣಲಕ್ಷಣಗಳನ್ನು ಹೊಂದಿದ್ದು,ಎಲ್ಲವೂ ತ್ರಿವೇಲೆನ್ಸೀಯ (Trivalent)ಸ್ಥಿತಿಯಲ್ಲಿರುತ್ತವೆ.ಇದರಿಂದಾಗಿ ಇವುಗಳನ್ನು ಬೇರ್ಪಡಿಸುವುದು ಸುಲಭವಲ್ಲ.ಸ್ಕಾಂಡಿಯಮ್,ಇಟ್ರಿಯಮ್,ಲ್ಯಾಂಥಾನಮ್ ಮತ್ತು ಆಕ್ಟಿನಿಯಮ್ ಕೂಡಾ ಮೂರು ವೇಲೆನ್ಸೀಯ ಎಲೆಕ್ಟ್ರಾನ್‌ಗಳನ್ನು ಹೊಂದಿರುವುದರಿಂದ ಇವುಗಳನ್ನು ಕೂಡಾ ವಿರಳ ಭಸ್ಮಗಳೊಂದಿಗೆ ಗುರುತಿಸುತ್ತಾರೆ.ಆದರೆ ಇವುಗಳ ಎಲೆಕ್ಟ್ರಾನ್ ರಚನೆಗಳು ಬೇರೆಯಾಗಿರುತ್ತದೆ. ವಿರಳ ಭಸ್ಮ ಮೂಲಧಾತುಗಳನ್ನು ಆವರ್ಥ ಕೋಷ್ಟಕ ದಲ್ಲಿ ಲ್ಯಾಂಥಾನಮ್ ಮೂಲಧಾತುವಿನ ನಂತರದ ಸ್ಥಾನಗಳಲ್ಲಿ ಬರುವ ಕಾರಣ ಲ್ಯಾಂಥನೈಡ್ಸ್ ಎಂದೂ ಕರೆಯುತ್ತಾರೆ.