ವಿಠ್ಠಲ ದೇವಸ್ಥಾನ, ಪಂಢರಪುರ

Coordinates: 17°40′N 75°20′E / 17.67°N 75.33°E / 17.67; 75.33
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ

ದೇವಸ್ಥಾನದ ಮುಖ್ಯ(ಪೂರ್ವ) ದ್ವಾರದಲ್ಲಿ "ನಾಮದೇವನ ಮೆಟ್ಟಿಲು" ಇದೆ. ದ್ವಾರದ ಮುಂದೆ ಇರುವ ಚಿಕ್ಕ ದೇವಸ್ಥಾನ ಸಂತ ಚೋಖಮೆಲನ ಸಮಾಧಿ.
ಹೆಸರು: ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ
ಕಟ್ಟಿದ ದಿನ/ವರ್ಷ: ೧೩ನೆಯ ಶತಮಾನದ ಮುಂಚೆ
ಪ್ರಮುಖ ದೇವತೆ: ವಿಠೋಬ ಅಥವಾ ವಿಠ್ಠಲ
ವಾಸ್ತುಶಿಲ್ಪ: ಹೆಮದ್ಪನ್ತಿ
ಸ್ಥಳ: ಪಂಢರಪುರ, ಮಹಾರಾಷ್ಟ್ರ, ಭಾರತ
ರೇಖಾಂಶ: 17°40′N 75°20′E / 17.67°N 75.33°E / 17.67; 75.33

ವಿಠ್ಠಲ ದೇವಸ್ಥಾನ, ಪಂಢರಪುರ ಇದು ಹಿಂದೂ ದೇವರಾದ ವಿಠ್ಠಲನ ಪೂಜಿಸುವ ಮುಖ್ಯ ಶ್ರದ್ಧಾ-ಭಕ್ತಿ ಕೇಂದ್ರ ಹಾಗು ಭಾರತದ ಸುಪ್ರಸಿದ್ಧ ತೀರ್ಥಕ್ಷೇತ್ರ.ಇಲ್ಲಿ ಶ್ರೀ ಕೃಷ್ಣ ಹಾಗು ಆತನ ಪತ್ನಿಯಾದ ರುಕ್ಮಿಣಿ ಶಿಲಾ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಭಕ್ತ ಸಮೂಹದ್ದು. ಇದು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಮುಖ ದೇವಸ್ಥಾನಗಳಲ್ಲೊಂದು. ಭಕ್ತಾದಿಗಳು ತಮ್ಮ ಮನೆಗಳಿಂದ ಗುಂಪು ಗುಂಪಾಗಿ ಪಾದಯಾತ್ರೆ(ದಿಂಡಿಯಾತ್ರೆ) ಮಾಡಿ ಆಷಾಢ ಏಕಾದಶಿ ಹಾಗು ಕಾರ್ತಿಕ ಏಕಾದಶಿಗಳಂದು ವಿಶೇಷ ಪೂಜೆಗಳಿಗೆ ಹಾಗು ಹರಕೆಗಳಿಗೆ ಸೇರುತ್ತಾರೆ. ಫಂಢರಪುರ ದಲ್ಲಿ ಹರಿಯುವ ಪಾವನ ನದಿ ಚಂದ್ರಭಾಗಾ ದಲ್ಲಿ ಸ್ನಾನ ಮಾಡಿದರೆ ಎಲ್ಲ ಪಾಪಗಳು ನಾಶವಾಗುವುದಾಗಿ ಭಾವಿಸುತ್ತಾರೆ .

ಪುಂಡಲೀಕನ ಪುರಾಣ ಕಥೆ[ಬದಲಾಯಿಸಿ]

ವಿಠ್ಠಲನ ಕೇಂದ್ರ ಪ್ರತೀಕ
ವಿಠ್ಠಲ ದೇವಸ್ಥಾನದ ಪಶ್ಚಿಮದ ದ್ವಾರ ಹಾಗು ಶಿಖರ
ರುಕ್ಮಿಣಿಯ ಶಿಖರ
ಭೀಮಾ ನದಿ ಹಾಗು ಇತರ ಭಕ್ತ-ಸಂತರ ಸಮಾಧಿಗಳಿಂದ ದೇವಸ್ಥಾನ ನೋಟ

ಪುಂಡಲೀಕನ ವೀರ ಚರಿತೆ, ವಿಠ್ಠಲಮಹಿಮಾ ದಂತಕಥೆಗಳ ಒಂದು ಮುಖ್ಯ ಅಂಗ . ವಿಠ್ಠಲ ಪಂಢರಪುರಕ್ಕೆ ಬರುವಲ್ಲಿ ಪುಂಡಲೀಕ ಮುಖ್ಯ ಪಾತ್ರ ವಹಿಸುತ್ತಾನೆ. ಪುಂಡಲೀಕನ ತಂದೆ ಜನುದೇವ ಹಾಗು ತಾಯಿ ಸತ್ಯವತಿ. ಅವರು ದಂಡಿರ್ವನ ಎಂಬ ಕಾಡಿನಲ್ಲಿ ವಾಸವಾಗಿದ್ದರು. ಪುಂಡಲೀಕನ ವಿವಾಹದ ನಂತರ ತನ್ನ ಮಾತಾ ಪಿತೃಗಳನ್ನು ತುಚ್ಚವಾಗಿ ಕಾಣಲು ಆರಂಭಿಸುತ್ತಾನೆ. ತಮ್ಮ ಪುತ್ರನ ದುರ್ವರ್ತನೆಗಳನ್ನು ಕಂಡು ಕರಗಿದ ಆ ಸಾಧು ದಂಪತಿಗಳು ಕಾಶಿ ಯಾತ್ರೆ ಮಾಡುವ ತೀರ್ಮಾನ ಮಾಡುತ್ತಾರೆ. ಕಾಶಿಯಲ್ಲಿ ಮರಣ ಹೊಂದಿದರೆ ಮುಕ್ತಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಆ ಕಾಲದಲ್ಲಿ ಬಹುತೇಕ ಹಿಂದೂಗಳು ಕೊನೆಗಾಲದಲ್ಲಿ ಕಾಶಿ ನಗರದಲ್ಲಿ ನೆಲೆಸುತ್ತಿದ್ದರು, ಹಾಗೆಯೇ ಈ ಸಾಧು ದಂಪತಿಗಳು ಕಾಶಿ ನಗರಿಗೆ ಯಾತ್ರೆ ಕೈಗೊಳ್ಳುತ್ತಾರೆ. ಈ ವಿಷಯ ತಿಳಿದ ಪುಂಡಲೀಕ ತಾನೂ ತನ್ನ ಹೆಂಡತಿಯೊಡನೆ ಯಾತ್ರೆಗೆ ಹೊರಟು ನಿಲ್ಲುತ್ತಾನೆ. ತಾನು ತನ್ನ ಹೆಂಡತಿಯೊಂದಿ ಗೆ ಕುದುರೆ ಏರಿ, ವಯಸ್ಸಾದ ತಂದೆ ತಾಯಿಯನ್ನು ನಿಷ್ಕಾರುಣವಾಗಿ ವಿಪರೀತವಾಗಿರುವ ಹವಾಮಾನಗಳಲ್ಲೂ ಬರಿಗಾಲಲ್ಲಿ ನಡೆಸುತ್ತಾನೆ. ಒಟ್ಟಿನಲ್ಲಿ ತನ್ನ ಸೌಖ್ಯಕ್ಕೆ ಯಾವುದೇ ಭಂಗ ಬರದಂತೆ, ಹೆತ್ತವರನ್ನು ಅಗೌರವದಿಂದ ಕಾಣುತ್ತಾ ಕಾಶಿಯಾತ್ರೆ ಮಾಡುತ್ತಿರುತ್ತಾನೆ.ಪ್ರಯಾಣ ಮಧ್ಯೆ ರಾತ್ರಿ ವಿಶ್ರಾಂತಿಯ ಸಮಯದಲ್ಲೂ ಪುಂಡಲೀಕ ತನ್ನ ತಂದೆ ತಾಯಿಗಳಿಗೆ ಕುದುರೆಗಳನ್ನು ಸಲಹುವ ಹಾಗು ಮತ್ತಿತರ ಕೆಲಸಗಳನ್ನು ವಹಿಸಿ, ತೊಂದರೆ ಕೊಡುತ್ತಿರುತ್ತಾನೆ.

ಕಾಶಿಗೆ ಪ್ರಯಾಣ ಮಾಡುತ್ತಿರುವಾಗ ಯಾತ್ರೆಯ ಆ ಗುಂಪಿಗೆ ಕಕುತ್ಸಮಿ ಆಶ್ರಮ ಎದುರಾಯಿತು. ಪ್ರಶಾಂತವಾಗಿಯೂ ಮನಸ್ಸಿಗೆ ಹಿತವೆನಿಸುವ ವಾತಾವರಣದಿಂದ ಕೂಡಿದ ಅಲ್ಲಿನ ಪರಿಸರಕ್ಕೆ ಎಲ್ಲರೂ ಮಾರುಹೋದರು. ಮಾರ್ಗದುದ್ದಕ್ಕೂ ದಣಿದಿದ್ದ ತಂಡಕ್ಕೆ ಇಲ್ಲಿಯೇ ಕೆಲವು ಕಾಲ ವಿಶ್ರಮಿಸಬೇಕೆನ್ನಿಸಿತು. ಹೀಗಾಗಿ ಕೆಲವು ದಿನಗಳ ಕಾಲ ಆಶ್ರಮದಲ್ಲಿಯೇ ತಂಡ ಬೀಡು ಬಿಟ್ಟಿತು. ಹೀಗಿರುವಾಗ ಒಂದು ದಿನ ರಾತ್ರಿ ಆಶ್ರಮದಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿರಲು, ಪುಂಡಲೀಕನೊಬ್ಬನಿಗೆ ನಿದ್ರೆ ಹತ್ತಲಿಲ್ಲ ಆ ಹೊತ್ತಿನಲ್ಲಿ ವಿಶೇಷವಾದ ದಿವ್ಯ ಗೋಚರವೊಂದು ಪುಂಡಲೀಕನಿಗೆ ಆಯಿತು. ಅದೇನೆಂದರೆ ಮಾಸಿದ ಬಟ್ಟೆಗಳನ್ನು ಧರಿಸಿದ ಸುಂದರ ಕನ್ಯೆಯರ ಗುಂಪೊಂದು ಆಶ್ರಮ ಹೊಕ್ಕಿತು. ನಂತರ ಅಲ್ಲಿ ನೀರು ತರುವುದು, ನೆಲ ಅಚ್ಚುಕಟ್ಟು ಮಾಡುವುದು, ಸಾಧುಗಳ ವಸ್ತ್ರಗಳನ್ನು ಸ್ವಚ್ಛಗೊಳಿಸುವುದು ಈ ರೀತಿಯಾಗಿ ಹಲವಾರು ಕೆಲಸಗಳನ್ನು ಮಾಡಿದರು. ಅದಾದ ನಂತರ ಅವರೆಲ್ಲರೂ ಅದೇ ಬಟ್ಟೆಗಳಲ್ಲಿ ಪ್ರಾರ್ಥನಾ ಗೃಹವನ್ನು ಹೊಕ್ಕರು. ಏನಾಶ್ಚರ್ಯ!! ಪ್ರಾರ್ಥನೆ ಮುಗಿಸಿ ಹೊರ ಬಂದಾಗ ಅವರೆಲ್ಲರೂ ಶುಭ್ರ ವಸ್ತ್ರಗಳಿಂದ ಕಂಗೊಳಿಸುತ್ತಿದ್ದರು. ಹೀಗೆ ಮುಂದುವರೆದಿರಲು, ನೋಡ ನೋಡುತ್ತಿದ್ದ ಹಾಗೆ ಅವರೆಲ್ಲರೂ ಅಲ್ಲಿಗೆ ಬಂದಿದ್ದ ಸುಳಿವೂ ಸಿಗದಂತೆ ಅದೃಶ್ಯವಾಗಿ ಹೋದರು.

ಇದನ್ನೆಲ್ಲಾ ಕಂಡ ಪುಂಡಲೀಕ ಭಯ ಭೀತನಾಗಲಿಲ್ಲ, ಬದಲಾಗಿ ಅವನ ಮನಸ್ಸಿಗೆ ಒಂದು ಸುಧೀರ್ಘ ನೆಮ್ಮದಿ ಸಿಕ್ಕಂತೆ ಆಯಿತು. ಇದು ಸ್ವಪ್ನವಲ್ಲ ನಿಜ ಎಂದು ಖಾತ್ರಿ ಮಾಡಿಕೊಳ್ಳಲು ಅವನು ಮರುದಿನವೂ ಎಚ್ಚರದಿಂದಲೇ ಇದ್ದು ಕನ್ಯೆಯರ ಗುಂಪಿನ ಬರುವಿಕೆಗೆ ಕಾಯುತ್ತಿದ್ದ. ಈ ಬಾರಿ ಪುಂಡಲೀಕ ಕನ್ಯೆಯರನ್ನು 'ನೀವು ಯಾರು?' ಎಂದು ಪ್ರಶ್ನಿಸಿದ. ಅದಕ್ಕೆ ಅವರು ಹೇಳಿದರು, ನಾವು ಗಂಗಾ, ಯಮುನಾ ಹಾಗೂ ಭಾರತದ ಪವಿತ್ರ ನದಿಗಳು. ನಮ್ಮಲ್ಲಿ ಸ್ನಾನ ಮಾಡಿದವರ ಪಾಪಗಳನ್ನು ತೊಳೆಯುವ ಸಾಮರ್ಥ್ಯವುಳ್ಳ ನದಿಗಳು. ಭಕ್ತಾದಿಗಳು ನದಿಯಲ್ಲಿ ಸ್ನಾನಮಾಡಿ ಅವರ ಪಾಪವನ್ನು ತೊಳೆದು ಕೊಂಡಿರುವುದರಿಂದ ನಮ್ಮ ಬಟ್ಟೆ ಕೊಳೆಯಾಗಿವೆ ಎಂದು ಅವನಿಗೆ ವಿವರಿಸಿದರು. "ಆದರೆ ಪುಂಡಲೀಕ, ನೀನು, ನಿನ್ನ ತಂದೆ ತಾಯಿಗೆ ಕೊಟ್ಟ ಹಿಂಸೆ ಇಂದ ಎಲ್ಲರಿಗಿಂತ ದೊಡ್ಡ ಪಾಪಿ ಎಂದರು! " ಇದರಿಂದ ಪುಂಡಲೀಕ ಆಘಾತಕ್ಕೊಳಗಾಗಿ ಸಂಪೂರ್ಣವಾಗಿ ಬದಲಾದ. ಅವನಿಗೆ ತನ್ನ ತಪ್ಪುಗಳು ಅರಿವಾಗಿ ತನ್ನ ತಂದೆ ತಾಯಿಯ ಸೇವೆಯಲ್ಲಿ ತೊಡಗಿದ. ಅವರ ಸುಖಕ್ಕಾಗಿ ಎಲ್ಲ ಯತ್ನಗಳನ್ನು ಮಾಡತೊಡಗಿದ. ತನಗೆ ಕಷ್ಟವಾದರೂ ಚಿಂತೆ ಇಲ್ಲದೆ ಅವರಿಗಾಗಿ ದುಡಿದ.

ಯಾವುದೇ ರೀತಿಯ ಭಕ್ತಿಯಾದರೂ ದೇವರನ್ನು ಕೂಡಲೇ ಸ್ಪರ್ಶಿಸುತ್ತದೆ. ಪುಂಡಲೀಕನ ಭಕ್ತಿ ಕಂಡು ವಿಷ್ಣುವಿಗೆ ಸಂತಸವಾಯಿತು. ಪುಂಡಲೀಕನನ್ನು ಆಶೀರ್ವದಿಸಲು ಕೂಡಲೇ ವೈಕುಂಠದಿಂದ ಪುಂಡಲೀಕನ ಆಶ್ರಮಕ್ಕೆ ಹೊರಟ. ವಿಷ್ಣು, ಪುಂಡಲೀಕನ ಕುಟೀರದ ಬಾಗಿಲನ್ನು ತಟ್ಟಿದ. ಆ ಸಮಯದಲ್ಲಿ ಪುಂಡಲೀಕನ ತನ್ನ ತಂದೆ ತಾಯಿಯರಿಗೆ ಊಟ ಬಡಿಸುತಿದ್ದ. ಪುಂಡಲೀಕನಿಗೆ ಬಾಗಿಲ ಶಬ್ದ ಕೇಳಿತು, ಅದು ಸಾಕ್ಷಾತ್ ಮಹಾ ವಿಷ್ಣುವೇ ಎಂದು ತಿಳಿದರೂ ಆತ ಅವನ ಸೇವೆಗೆ ನಿರಾಕರಿಸುತ್ತಾನೆ. ಹಾಗು ಮಾತಾ ಪಿತೃಗಳ ಸೇವೆಯಲ್ಲಿ ನಿರತವಾಗಿರುವಾಗ ಯಾವ ಅತಿಥಿಗಳಿಗೂ ಮೊದಲ ಆದ್ಯತೆ ಇಲ್ಲ. ಅತಿಥಿ ಯಾವ ದೇವನೇ ಆಗಿದ್ದರು ಇದೇ ನಿಯಮ ಎನ್ನುತ್ತಾನೆ. ಅವನು ಸೇವೆ, ಭಕ್ತಿಯಲ್ಲಿ ಎಷ್ಟು ನಿರತನಾಗಿದ್ದನೆಂದರೆ ವಿಷ್ಣುವಿಗೆ ಒಂದು ಇಟ್ಟಿಗೆ ಎಸೆದು ನನ್ನ ಸೇವೆಸಂಪೂರ್ಣ ಆಗುವವರೆಗೂ ನೀನು ಹೊರಗೆ ನಿಂತಿರು ಎಂದುಬಿಡುತ್ತಾನೆ.

ಪುಂಡಲೀಕನು ಅವನ ತಂದೆ ತಾಯಿಗಳಿಗೆ ಸಮರ್ಪಿಸುತ್ತಿದ್ದ ಭಕ್ತಿ ಸೇವೆಯನ್ನು ಕಂಡು ಮಹಾವಿಷ್ಣು ಪ್ರಸನ್ನನಾದನು. ಹಾಗು ತನ್ನ ಭಕ್ತನಿಗಾಗಿ ಅವನು ಕೊಟ್ಟ ಇಟ್ಟಿಗೆಯ ಮೇಲೆಯೇ ಕಾದು ನಿಂತನು. ಪುಂಡಲೀಕ ಆನಂತರ ಹೊರ ಬಂದು ಭಗವಂತನಲ್ಲಿ ಕ್ಷಮೆ ಯಾಚಿಸಿದ. ಆಗ ಭಗವಾನ್ ಮಹಾ ವಿಷ್ಣು ನಿನ್ನ ನಡೆಯಲ್ಲಿ ಭಕ್ತಿ - ಸೇವೆಗಳೇ ತುಂಬಿ ಹೋಗಿರುವುದರಿಂದ ನಿನ್ನಲ್ಲಿ ದೋಷದ ಗುಣಕ್ಕೆ ಅವಕಾಶವಿಲ್ಲ. ಹಾಗಾಗಿ ನೀನು ನನ್ನ ಹೃದಯಕ್ಕೆ ಹತ್ತಿರ ಎಂದನು. ಆಗ ಪುಂಡಲೀಕನು ವಿಷ್ಣುವನ್ನು ಇಲ್ಲಿಯೇ ನೆಲೆ ನಿಂತು ಭಕ್ತರನ್ನು ಆಶೀರ್ವದಿಸಲು ಕೇಳಿಕೊಂಡನು. ತಥಾಸ್ತು ಎಂದ ವಿಷ್ಣುವು ಹಾಗೆಯೇ ಇಟ್ಟಿಗೆಯ ಮೇಲೆ ನಿಂತನು. ಈಗ ಇಲ್ಲಿ ವಿಠ್ಠಲನ ಜೊತೆ ರುಕ್ಮಿಣಿಯನ್ನು ಪೂಜಿಸಲಾಗುತ್ತಿದೆ.

ನಾಮದೇವನ ಮೆಟ್ಟಿಲು[ಬದಲಾಯಿಸಿ]

ಫಂಢರಪುರದ ದೇವಸ್ಥಾನದ ಮೊದಲ ಮೆಟ್ಟಿಲ ಬಗ್ಗೆ ಒಂದು ಇತಿಹಾಸವಿದೆ. ಈ ಮೆಟ್ಟಿಲನ್ನು ನಾಮದೇವನ ಮೆಟ್ಟಿಲು(ಸ್ಥಳೀಯ ಭಾಷೆ ಮರಾಠಿಯಲ್ಲಿ 'ನಾಮ್ ದೇವ್ ಚಿ ಪಯರಿ') ಎಂದೇ ಕರೆಯಲಾಗುತ್ತದೆ. ಮಗು ನಾಮದೇವ ವಿಠ್ಠಲನ ಪರಮ ಭಕ್ತ. ಒಂದು ದಿನ ಆತನ ತಾಯಿ ಅವನಿಗೆ ದೇವರಿಗೆ ನೈವೇದ್ಯ ಅರ್ಪಿಸುವಂತೆ ಹೇಳುತ್ತಾಳೆ. ನಾಮದೇವನೂ ಕೂಡ ಉತ್ಸಾಹದಿಂದ ನೈವೇದ್ಯ ಮಾಡಲು ಮೊದಲಾಗುತ್ತಾನೆ. ದೇವರ ವಿಗ್ರಹದ ಮುಂದೆ ನೈವೇದ್ಯವನ್ನಿಟ್ಟ ನಾಮದೇವ ದೇವರು ನಿಜವಾಗಿಯೂ ಬಂದು ನೈವೇದ್ಯವನ್ನು ತಿಂದು ಹೋಗಬಹುದು ಎಂದೇ ಭಾವಿಸಿರುತ್ತಾನೆ. ಆದರೆ ಬಹಳ ಹೊತ್ತು ಕಾದರೂ ಯಾರು ಬರದಿದ್ದಾಗ ಎದೆಗುಂದಿದ ಅವನು ದೇವರಲ್ಲಿ ದೀನನಾಗಿ ನೈವೇದ್ಯವನ್ನು ಸ್ವೀಕರಿಸಿ ಹೋಗುವಂತೆ ಬೇಡಿಕೊಳ್ಳುತ್ತಾನೆ. ಎಷ್ಟು ಪ್ರಾರ್ಥಿಸಿದರೂ ದೇವರು ಬರದಿದ್ದನ್ನು ಕಂಡು ತಲೆ ಚಚ್ಚಿ ಕೊಳ್ಳಲು ಶುರು ಮಾಡುತ್ತಾನೆ. ಚಿಕ್ಕ ಮಗುವಿನ ಮುಗ್ದ ಭಕ್ತಿಯನ್ನು ಕಂಡು ದೇವರು ಕೂಡಲೇ ಪ್ರತ್ಯಕ್ಷನಾಗಿ ನಾಮದೇವನ ನೈವೇದ್ಯವನ್ನು ಸ್ವೀಕರಿಸುತ್ತಾನೆ. ಹಾಗೂ ದೇವರಲ್ಲಿ ತನ್ನ ಕಾಲಾನಂತರ ತಾನು ದೇವಸ್ಥಾನದ ಮೊದಲ ಮೆಟ್ಟಿಲಾಗಿರುವಂತೆಯೂ, ಬಂದ ಭಕ್ತರ ಪಾದ ಸ್ಪರ್ಶವಾಗುವಂತೆಯೂ ವರ ಕೇಳಿದ. ಈಗಲೂ ಫಂಢರಪುರದ ದೇವಸ್ಥಾನದ ಮೊದಲ ಮೆಟ್ಟಿಲನ್ನು ನಾಮದೇವನ ಸ್ವರೂಪವಾಗಿ ಭಕ್ತಿ ಗೌರವಗಳಿಂದ ಪೂಜಿಸಲಾಗುತ್ತಿದೆ.

ಅಸ್ಪೃಷ್ಯತೆ ವಿರುದ್ಧ ಚಳುವಳಿ[ಬದಲಾಯಿಸಿ]

1947ಕ್ಕೂ ಮುಂಚೆ ಅಸ್ಪೃಶ್ಯರನ್ನು ದೇವಸ್ಥಾನದೊಳಗೆ ಬಿಡುತ್ತಿರಲಿಲ್ಲ. ಇದರಿಂದ ತೀವ್ರ ನೊಂದಿದ್ದ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಸಾನೆ ಗುರೂಜಿ ಅಮರಣಾಂತ ಉಪವಾಸ ಶುರು ಮಾಡಿದ್ದರು. ದೇಶದ ಇತರ ಗಾಂಧಿವಾದಿಗಳ ಬೆಂಬಲವೂ ಇದಕ್ಕೆ ಸಿಕ್ಕಾಗ ದೇವಸ್ಥಾನ ಎಲ್ಲರ ಪ್ರವೇಶಕ್ಕೂ ಮುಕ್ತವಾಯಿತು