ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೫೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಮನದಿ ಒಂದು ಬೃಹತ್ ಗಾತ್ರದ ನಿಧಾನವಾಗಿ ಚಲಿಸುವ ಹಿಮಗಡ್ಡೆಯ ರಾಶಿ. ಹಿಮನದಿಯ ರಚನೆಯು ಪದರ ಪದರವಾಗಿ ಸಂಗ್ರಹವಾಗುವ ಹಿಮಪಾತದ ಸಂಕೋಚನದಿಂದ ಉಂಟಾಗುತ್ತದೆ. ಕ್ರಮೇಣ ಈ ಹಿಮರಾಶಿಯು ಬಿರಿದು ಭೂಮಿಯ ಗುರುತ್ವಾಕರ್ಷಣೆ ಮತ್ತು ಅತಿ ಒತ್ತಡದ ಕಾರಣದಿಂದ ಸರಿದು ನೀರಾಗಿ ಹರಿಯತೊಡಗುತ್ತದೆ. ಹಿಮನದಿ ವಿಶ್ವದಲ್ಲಿ ಸಿಹಿನೀರಿನ ಅತಿ ದೊಡ್ಡ ಆಕರವಾಗಿದೆ. ಮಹಾಸಾಗರಗಳ ನಂತರ ಹಿಮನದಿಗಳು ಜಗತ್ತಿನ ಎರಡನೆಯ ಅತಿ ದೊಡ್ಡ ಜಲಸಮೂಹಗಳಾಗಿವೆ. ಧ್ರುವ ಪ್ರದೇಶಗಳ ಬಹುಪಾಲು ಪ್ರದೇಶವನ್ನು ಹಿಮನದಿಗಳು ಆವರಿಸಿವೆ. ಇದಲ್ಲದೆ ಜಗತ್ತಿನ ಎಲ್ಲಾ ಭೂಖಂಡಗಳ ಉನ್ನತ ಪರ್ವತಪ್ರಾಂತ್ಯಗಳಲ್ಲಿ ಸಹ ಹಿಮನದಿಗಳಿವೆ. ಹಿಮನದಿಗಳು ಜಗತ್ತಿನ ವಾತಾವರಣ ಮತ್ತು ಹವಾಮಾನದ ಅತಿ ಸೂಕ್ಷ್ಮ ಪರಿವೀಕ್ಷಕಗಳಾಗಿದ್ದು ಸಾಗರಗಳ ನೀರಿನ ಮಟ್ಟದಲ್ಲಿನ ಏರುಪೇರಿನ ನಿಖರ ಸೂಚಕಗಳು ಸಹ ಆಗಿವೆ. ಇಂದು ಜಾಗತಿಕ ತಾಪಮಾನದಲ್ಲಿ ಉಂಟಾಗಿರುವ ಹೆಚ್ಚಳದಿಂದಾಗಿ ಹಿಮನದಿಗಳು ಒಂದೇಸಮನೆ ಕುಗ್ಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಇನ್ನು ಕೆಲ ದಶಕಗಳಲ್ಲಿ ಹಿಮಾಲಯದ ಎಲ್ಲಾ ಹಿಮನದಿಗಳು ಮಾಯವಾಗಲಿವೆ. ಭಾರತದ ಹಿಮಾಲಯ ಪರ್ವತಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ. ಗಂಗೋತ್ರಿ ಹಿಮನದಿ, ಸಿಯಾಚೆನ್ ಹಿಮನದಿ, ಪಿಂಡಾರಿ ಹಿಮನದಿ ಇವುಗಳಲ್ಲಿ ಹೆಸರಾದವು.