ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹವಾಯ್‌ನ ಜ್ವಾಲಾಮುಖಿ ಒಂದರಿಂದ ೧೦ ಮೀ. ಎತ್ತರದ ಲಾವಾದ ಚಿಲುಮೆ

ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ. ಜ್ವಾಲಾಮುಖಿಗಳು ನೆಲದಾಳದ ಟೆಕ್ಟಾನಿಕ್ ತಟ್ಟೆಗಳು ಒಂದಿನ್ನೊಂದರ ಬಳಿ ಸಾರಿದಾಗ ಇಲ್ಲವೇ ಪರಸ್ಪರರಿಂದ ದೂರ ಸರಿದಾಗ ಉಂಟಾಗುತ್ತವೆ. ಮಿಡ್-ಅಟ್ಲಾಂಟಿಕ್ ರಿಡ್ಜ್ ನಲ್ಲಿ ಟೆಕ್ಟಾನಿಕ್ ತಟ್ಟೆಗಳು ಪರಸ್ಪರರಿಂದ ದೂರ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಹಾಗೆಯೇ ಪೆಸಿಫಿಕ್ ಅಗ್ನಿ ವರ್ತುಲ (ಪೆಸಿಫಿಕ್ ರಿಂಗ್ ಆಫ್ ಫಯರ್) ದಲ್ಲಿ ತಟ್ಟೆಗಳು ಪರಸ್ಪರರ ಬಳಿ ಸಾರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಭೂಮಿಯ ಚಿಪ್ಪು ಸೆಳೆಯಲ್ಪಟ್ಟಾಗ ಅಥವಾ ತೆಳುವಾದಾಗ ಸಹ ಜ್ವಾಲಾಮುಖಿಗಳು ರೂಪುಗೊಳ್ಳುವುದುಂಟು. ಇಂತಹ ಜ್ವಾಲಾಮುಖಿಗಳು ಆಫ್ರಿಕದ ಬಿರುಕು ಕಣಿವೆ ಮತ್ತು ಅಮೆರಿಕದ ರಿಯೊ ಗ್ರಾಂಡ್ ಬಿರುಕಿನಲ್ಲಿ ಕಾಣಬರುತ್ತವೆ. ಇನ್ನು ಕೆಲವೇಳೆ ಟೆಕ್ಟಾನಿಕ್ ತಟ್ಟೆಗಳ ಅಂಚಿನಿಂದ ಬಲುದೂರದಲ್ಲಿ ಸಹ ಜ್ವಾಲಾಮುಖಿಗಳು ಇರುತ್ತವೆ. ಹವಾಯ್ ದ್ವೀಪದ ಜ್ವಾಲಾಮುಖಿಗಳು ಇದಕ್ಕೆ ಉದಾಹರಣೆ. ಇಂತಹವನ್ನು ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಇಂತಹ ಬಿಸಿ ಸ್ಥಾನಗಳು ಭೂಮಿ ಮಾತ್ರವಲ್ಲದೆ ಸೌರಮಂಡಲದ ಇತರ ಗ್ರಹಗಳಲ್ಲಿ ಮತ್ತು ಉಪಗ್ರಹಗಳಲ್ಲಿ ಸಹ ಇರುವುವು.