ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆ ಆರ್ ಡಿ ಟಾಟಾ

ಜೆ.ಆರ್.ಡಿ. ಟಾಟಾ (ಜಹಾಂಗೀರ್ ರತನ್‍ಜಿ ದಾದಾಭಾಯಿ ಟಾಟಾ) (ಜುಲೈ ೨೯, ೧೯೦೪ - ನವೆಂಬರ್ ೨೯, ೧೯೯೩) ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಭಾರತೀಯ ವಾಯುಯಾನದ ಹರಿಕಾರರು. ಬೃಹತ್ ಟಾಟಾ ಸಂಸ್ಥೆಯನ್ನು ೫೩ ವರ್ಷಗಳ ಕಾಲ, ಕೈಹಿಡಿದು ನಡೆಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ತ್ರಿವಿಕ್ರಮ ಹೆಜ್ಜೆಗಳ ಛಾಪನ್ನು ಮೂಡಿಸಿದ ಭಾರತದ ಸುಪುತ್ರರು. ಟಾಟಾರವರ ಉತ್ಪಾದನೆ ಉಕ್ಕಿನಿಂದ ಪ್ರಾರಂಭಿಸಿ,ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಾಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಕಾಗದ, ಮಾಹಿತಿತಂತ್ರಜ್ಞಾನ, ಉಪ್ಪು, ಸಾಬೂನು, ಶ್ಯಾಂಪೂ, ಟೀ, ಕಾಫಿ, ಹೆಂಗೆಳೆಯರ ಸೌಂದರ್ಯವರ್ಧಕ ಪರಿಕರಗಳು ಇತ್ಯಾದಿಗಳವರೆಗೆ ಇದೆ. ಇನ್ನೂ ಬೆಳೆಯುತ್ತಲೇ ಇದೆ. ಸಂಪ್ರದಾಯಶೀಲ ಪಾರ್ಸಿ ಝೊರಾಸ್ಟ್ರಿಯನ್ ಕುಟುಂಬದಲ್ಲಿ ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ ೫ ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ ೨೯ ಜುಲೈ ೧೯೦೪ರಲ್ಲಿ ಪ್ಯಾರಿಸ್ ನಲ್ಲಿ ಹುಟ್ಟಿದರು. ಜೆಹಾಂಗೀರ್ (ಎಲ್ಲರೂ ಅವರನ್ನು ’ಜೆ’ ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಶಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವುದು ಹತ್ತಿರದ ಅರ್ಥ. ಅವರ ವಿಧ್ಯಾಭ್ಯಾಸ ಮೊದಲು ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಜೆ ರವರಿಗೆ ಫ್ರೆಂಚ್ ಭಾಷೆಬಿಟ್ಟರೆ ಬೇರೆಯೇನೂ ಬರುತ್ತಿರಲಿಲ್ಲ. ಜೆ ರವರ ಇಂಗ್ಲಿಷ್ ಭಾಷೆಯನ್ನು ಉತ್ತಮಪಡಿಸಲು, ಒಂದು ವರ್ಷ ಇಂಗ್ಲೆಂಡಿನಲ್ಲಿ ’ಕ್ರಾಮರ್’ ಶಾಲೆಯಲ್ಲಿ ಭರ್ತಿಮಾಡಲಾಗಿತ್ತು. ನಂತರ ಅವರಿಗೆ, ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ, ರೆಜಿಮೆಂಟ್ ಡಿ ಸ್ಪಾಹಿಸ್ ಗೆ ಸೇರಿದರು.