ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೩೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರೋರಾ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದೆ. ಉತ್ತರಧ್ರುವ ಪ್ರದೇಶದಲ್ಲಿ ಕಾಣುವ ಇಂತಹ ಬಣ್ಣದ ಬೆಳಕಿನಾಟವನ್ನು ಆರೋರಾ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಆರೋರಾ ಬೋರಿಯಾಲಿಸ್ ಹಸಿರು ಬಣ್ಣದ ಹೊಳಪಿನೊಂದಿಗೆ ಕೂಡಿರುತ್ತದೆ. ಕೆಲವೊಮ್ಮೆ ಕೆಂಪು ಬಣ್ಣವು ಸಹ ಇದರಲ್ಲಿರುವುದುಂಟು. ಮೊದಲನೋಟಕ್ಕೆ ಇದು ಬೇರಾವುದೋ ದಿಕ್ಕಿನಲ್ಲಿ ಜರಗುತ್ತಿರುವ ಸೂರ್ಯೋದಯದಂತೆ ಭಾಸವಾಗುವುದು. ಆರೋರಾ ಬೋರಿಯಾಲಿಸ್ ಅನ್ನು ನಾರ್ದರ್ನ್ ಲೈಟ್ಸ್ (ತೆಂಕಣ ಬೆಳಕು) ಎಂದು ಸಹ ಕರೆಯಲಾಗುತ್ತದೆ. ಆರೋರಾ ಬೋರಿಯಾಲಿಸ್ ಸೆಪ್ಟೆಂಬರ್ ಇಂದ ಅಕ್ಟೋಬರ್ ವರೆಗೆ ಮತ್ತು ಮಾರ್ಚ್ ಇಂದ ಏಪ್ರಿಲ್ ವರೆಗೆ ಘಟಿಸುತ್ತದೆ. ದಕ್ಷಿಣಧ್ರುವ ಪ್ರದೇಶದಲ್ಲಿ ಸಂಭವಿಸುವ ಇದೇ ರೀತಿಯ ವಿದ್ಯಮಾನವು ಆರೋರಾ ಆಸ್ಟ್ರಾಲಿಸ್ ಎಂದು ಹೆಸರಾಗಿದೆ. ಭೂಮಿವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲ (ಮ್ಯಾಗ್ನೆಟೋಸ್ಫಿಯರ್)ದಲ್ಲಿನ ವಿದ್ಯುತ್ಪ್ರೇರಿತ ಕಣಗಳು ( + ಅಥವಾ - ಅಯಾನು ಢಿಕ್ಕಿ ಹೊಡೆದಾಗ ಆರೋರಾ ಉಂಟಾಗುತ್ತದೆ. ಈ ಕಣಗಳು ಗಂಟೆಗೆ ೩೦೦ ರಿಂದ ೧೨೦೦ ಕಿ.ಮೀ. ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ವಿದ್ಯುತ್ಪ್ರೇರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೇಜಿತವಾಗುತ್ತವೆ. ಕೊಂಚ ಸಮಯದ ನಂತರ ಅನಿಲಗಳ ಪರಮಾಣುಗಳು ತಾವು ಸೌರ ಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಅಗಾಧ ಸಂಖ್ಯೆಯ ಪರಮಾಣುಗಳು ಒಮ್ಮೆಲೇ ಹೀಗೆ ಶಕ್ತಿಯನ್ನು ಬೆಳಕಾಗಿ ಹೊರಹಾಕಿದಾಗ ಆಗಸದಲ್ಲಿ ವರ್ಣರಂಜಿತ ಬೆಳಕಿನಾಟ ಕಾಣಿಸುವುದು. ಇದೇ ಆರೋರಾ.