ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೩೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆನೆಯು ಪ್ರಾಣಿಶಾಸ್ತ್ರದ ಪ್ರಕಾರ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು ಮೂರು ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ : ಆಫ್ರಿಕದ ಪೊದೆಗಳ ಆನೆ, ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ ( ದೈತ್ಯ ಆನೆ ) ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು. ಆನೆಯು ಇಂದು ಅಳಿವಿನತ್ತ ಸಾಗಿರುವ ಜೀವಿ. ಒಂದೊಮ್ಮೆ ಹಲವು ದಶಲಕ್ಷಗಳಷ್ಟಿದ್ದ ಆಫ್ರಿಕನ್ ಆನೆಗಳ ಸಂಖ್ಯೆ ಇಂದು ೪೭೦,೦೦೦ದಿಂದ ೬೯೦,೦೦೦ ಕ್ಕೆ ಇಳಿದಿದೆ. ವಿಶ್ವದೆಲ್ಲೆಡೆ ಇಂದು ಆನೆಯನ್ನು ಸಂರಕ್ಷಿತ ಜೀವಿಯನ್ನಾಗಿ ಕಾಪಾಡಿಕೊಳ್ಳಲಾಗುತ್ತಿದೆ.