ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತ ಸಂವಿಧಾನದ ಪೀಠಿಕೆ

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ ೯, ೧೯೪೭ ರಿಂದ ನವೆಂಬರ್ ೨೬, ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ ೨೬, ೧೯೫೦ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ೪೪೪ ವಿಧಿಗಳನ್ನೂ, ೧೦ (ನಂತರ ೧೨) ಅನುಚ್ಛೇದಗಳನ್ನೂ, ಅನೇಕ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನವು ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರಬೇಕು.