ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಟಸ್ ಅರಮನೆ
ಲೋಟಸ್ ಅರಮನೆ

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ.

ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ನಗರ ಹಂಪೆವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧುಅಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ.

ಈಗ ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ.

ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು.

ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.

  • ಚರಿತ್ರೆ

ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದುಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂಡಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.

ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂ ಅಲ್ಲಿ ಜನವಸತಿಯಿಲ್ಲ.

ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.