ಯಮುನಾ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಮೊಟ್ಟ ಮೊದಲ ಹವ್ಯಾಸಿ ನಟಿ ಎಂಬ ಹೆಮ್ಮೆಗೆ ಪಾತ್ರರಾದವರು ಶ್ರೀಮತಿ ಯಮುನಾ ಮೂರ್ತಿಯವರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧ ಹೆಸರು. ಬೆಂಗಳೂರು ಆಕಾಶವಾಣಿಯಲ್ಲಿ ಹಿರಿಯ ಕಲಾವಿದೆಯಾಗಿ ರುವ ಜೊತೆಗೆ, ನಾಟ್ಯ ರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ, ಹೀಗೆ ಯುಮುನಾ ಮೂರ್ತಿ ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿಯದು.

ಚಿತ್ರ:Yamuna75.jpg
'ಯಮುನಾ ಮೂರ್ತಿ,' ಹಲವು ಕಲೆಗಳ ಗಣಿಯಾಗಿ'

ಜನನ, ವಿದ್ಯಾಭ್ಯಾಸ, ಕುಟುಂಬ[ಬದಲಾಯಿಸಿ]

೧೯೩೩, ಮಾರ್ಚ್ ೮ರಂದು ಬೆಂಗಳೂರಿನಲ್ಲಿ ಯಮುನಾ ಮೂರ್ತಿ ಜನಿಸಿದರು. ತಂದೆ ಶ್ರೀ ಸಾಂಗ್ಲಿ ಪಾಂಡುರಂಗರಾವ್, ತಾಯಿ ಶ್ರೀಮತಿ ಎಸ್ ಆರ್ ವೆಂಕಮ್ಮ (ಗಿರಿಮಾಜಿ ವಂಶದವರು). ನಾಲ್ಕು ಜನ ಮಕ್ಕಳಲ್ಲಿ ಮೂರನೆಯವರಾಗಿ ಹುಟ್ಟಿದ ಯಮುನಾ ಅವರು ತಮ್ಮ ೭ನೇ ವಯಸ್ಸಿನಲ್ಲೇ ಭರತನಾಟ್ಯವನ್ನೂ, ೧೦ನೇ ವಯಸ್ಸಿನಲ್ಲಿ ಕಥಕ್ಕಳಿಯನ್ನೂ ಅಭ್ಯಸಿಸತೊಡಗಿದವರು ಮುಂದೆ ಕರ್ನಾಟಕದಾದ್ಯಾಂತ ಹಲವಾರು ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಬಿ.ಎಸ್ಸಿ ಪದವಿಧರೆಯಾದ ಯಮುನಾಮೂರ್ತಿಯವರ ಪತಿ ಶ್ರೀ ಎನ್.ವಿ. ರಾಮಚಂದ್ರಮೂರ್ತಿ ದಂಪತಿಗಳಿಗೆ ಪೂರ್ಣಿಮಾ ಮತ್ತು ದೀಪಕ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಸಾಧನೆ[ಬದಲಾಯಿಸಿ]

  • ತಮ್ಮ ೧೨ನೇ ವಯಸ್ಸಿನಲ್ಲಿ "‘ಛಾಯಾ ಕಲಾವಿದರು’" ಎಂಬ ಹವ್ಯಾಸಿ ರಂಗತಂಡದ ಕಲಾವಿದೆಯಾಗಿ, ಹಾಗೂ ಕನ್ನಡ ಹವ್ಯಾಸಿ ರಂಗಭೂಮಿಯ ಮೊದಲ ನಟಿಯಾಗಿ ಪರ್ವತವಾಣಿ ವಿರಚಿತ "ಬಹದ್ದೂರ್ ಗಂಡು’" ನಾಟಕದ ನಾಯಕಿಯಾಗಿ ೧೫೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
  • ಯಮುನಾಮೂರ್ತಿಯವರು ೧೯೬೩ರಲ್ಲಿ ಬೆಂಗಳೂರು ಆಕಾಶವಾಣಿ ನಾಟಕ ಕಲಾವಿದೆಯಾಗಿ ೨೩ ವರ್ಷ ಧಾರವಾಡದಲ್ಲಿ, ೫ ವರ್ಷ ಬೆಂಗಳೂರು ಆಕಾಶವಾಣಿಯ ನಾಟಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿ, ೧೯೯೧ರಲ್ಲಿ ಆಕಾಶವಾಣಿ ಸಹಾಯಕ ಕೇಂದ್ರದ ನಿರ್ದೇಶಕಯಾಗಿ ನಿವೃತ್ತಿ ಹೊಂದಿದರು. ಈ ಅವಧಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ನಾಟಕಗಳನ್ನು ಪ್ರಸ್ತುತಪಡಿಸಿ, ಅರವತ್ತು ನಾಟಕಗಳನ್ನು ರಚಿಸಿ, ವೈವಿಧ್ಯಮಯ ಪಾತ್ರಗಳಲ್ಲಿಅಭಿನಯಿಸಿದ್ದಾರೆ.
  • ಆರು ಬಾರಿ "ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಸ್ಪರ್ಧೆ"ಯಲ್ಲಿ ಭಾಗವಹಿಸಿ, ಉತ್ತಮ ನಿರ್ದೇಶಕಿ ಎಂಬ ಪ್ರಶಸ್ತಿ ಪಡೆದಿದ್ದಾರೆ.
  • ನಿವೃತ್ತಿಯ ನಂತರ ರಂಗ ನಾಟಕ, ಬಾನುಲಿ ನಾಟಕಗಳಲ್ಲದೆ, "ಯಾಮಿನೀ ಕ್ರಿಯೇಶನ್ಸ್" ಎಂಬ ಸಂಸ್ಥೆ ಸ್ಥಾಪಿಸಿ, ದೂರದರ್ಶನಕ್ಕಾಗಿ ಹಲವು ನಾಟಕಗಳನ್ನು ಪ್ರಸ್ತುತಪಡಿಸಿದ್ದಾರೆ.
  • ೧೦ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಯಮುನಾ ಮೂರ್ತಿಯವರ "ಲಠ್ಠಣಿಗೆ ಪುರಾಣ" ಎಂಬ ಲಘುಬರಹ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ.
  • ಬಾನುಲಿ ಬರಹ, ಅಭಿನಯ ಮತ್ತು ನಿರೂಪಣಾ ಶಿಬಿರಗಳಲ್ಲಿ ಯಮುನಾ ಮೂರ್ತಿಯವರ ವಿದ್ವತ್‍ಪೂರ್ಣ ಭಾಷಣಗಳು ಎಲ್ಲರ ಮೆಚ್ಚುಗೆ ಪಡೆದಿವೆ.
  • ಮಕ್ಕಳಿಗೆ ಕಥೆ ಹೇಳುವುದು, ಟಿವಿಯ ಹಾಸ್ಯೋತ್ಸವ ಮತ್ತು ಹರಟೆಗಳಲ್ಲಿ ಭಾಗವಹಿಸುವುದು ಸಹ ಇವರ ಕಾರ್ಯಾಭಿರುಚಿಗಳಲ್ಲಿ ಒಂದು.

ಟಿವಿ ಧಾರಾವಾಹಿಗಳು[ಬದಲಾಯಿಸಿ]

  • ಮಾಯಾಮೃಗ
  • ಪ್ರತಿಬಿಂಬ
  • ಚಂದ್ರಬಿಂಬ
  • ಬೆಳ್ಳಿತೆರೆ
  • ಪ್ರೇಮದ ಕಾರಂಬರಿ
  • ಗಾಜಿನ ಗೊಂಬೆ
  • ಮನೆ ಮನೆ ಕತೆ
  • ಸಂಜೆ ಮಲ್ಲಿಗೆ
  • ಕಲ್ಯಾಣ ಭಾರತಿ
  • ಯಾವ ಜನ್ಮದ ಮೈತ್ರಿ
  • ಮೂಡಲ ಮನೆ
  • ಮುಗಿಲು
  • ಪ್ರೀತಿ ಇಲ್ಲದ ಮೇಲೆ
  • ಕಲ್ಯಾಣ ರೇಖೆ
  • ಮುತ್ತಿನ ತೋರಣ
  • ಸೂರ್ಯಕಾಂತಿ
  • ಮೇಘ ಮಂದಾರ
  • ಪುಣ್ಯಕೋಟಿ

ಅಭಿನಯಿಸಿದ ಚಲನಚಿತ್ರಗಳು[ಬದಲಾಯಿಸಿ]

  • ಕತ್ತೆಗಳು ಸಾರ್ ಕತ್ತೆಗಳು
  • ರಿಷಿ
  • ನರಸಿಂಹ
  • ಎದೆಗಾರಿಕೆ
  • ಅಣ್ಣಾ ಬಾಂಡ್

ಕೆ.ಚೈತನ್ಯ ಅವರ ನಿರ್ದೇಶನದ "ಓಂ ಣಮೋ", ವೈಶಾಲಿ ಕಾಸರವಳ್ಳಿಯವರ ನಿರ್ದೇಶನದ "ನೂರಾ ಒಂದು ಬಾಗಿಲು" ಎಂಬ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಸಂದ ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  • ೧೯೯೧ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.
  • ೨೦೦೦ರಲ್ಲಿ "ಹಂಸ ಪ್ರಶಸ್ತಿ".
  • ಪರಸ್ಪರ ಸಂಸ್ಥೆಯಿಂದ "ಅಭಿನಯ ಚತುರೆ" ಪ್ರಶಸ್ತಿ.
  • ಜೈನ್ ವಿಶ್ವವಿದ್ಯಾಲಯ, ಕರ್ನಾಟಕದ ಕೆಪಿಸಿಎ‍ಎಲ್ ಮುಂತಾದ ಹತ್ತಾರು ಸಂಘಸಂಸ್ಥೆಗಳಿಂದ ತಮ್ಮ ಕಲಾಸೇವೆಗಾಗಿ ಸನ್ಮಾನಿಸಲ್ಪಟ್ಟಿದ್ದಾರೆ.

ಯಮುನಾ ಮೂರ್ತಿಯವರು ಅಭಿನಯಿಸಿದ ನಾಟಕಗಳ ಹಾಗೂ ನೃತ್ಯಗಳ ಕೆಲವು ಚಿತ್ರಗಳು[ಬದಲಾಯಿಸಿ]