ಯಗಚಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಗಚಿ ಕರ್ನಾಟಕ ರಾಜ್ಯದ ಪಶ್ಚಿಮದ ಮಲೆನಾಡು ಜಿಲ್ಲೆಗಳಲ್ಲಿ ಹರಿಯುವ ಹೇಮಾವತಿ ನದಿಯ ಪ್ರಮುಖ ಉಪನದಿ. ಇದಕ್ಕೆ ಬದರಿ ಎಂಬ ಹೆಸರೂ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ. ಪಶ್ಚಿಮ ಭಾಗದಿಂದ ಹರಿದುಬರುವ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ಇದರ ಉಪನದಿಗಳು. ಪ್ರಖ್ಯಾತ ಬೇಲೂರು ಪಟ್ಟಣದ ಬಳಿ ಹಾದು ಹಾಸನ ತಾಲ್ಲೂಕಿನ ಗೊರೂರು ಬಳಿ ಹೇಮಾವತಿ ನದಿಯನ್ನು ಸೇರುತ್ತದೆ.

ಆಣೆಕಟ್ಟುಗಳು[ಬದಲಾಯಿಸಿ]

ಈ ನದಿಗೆ ಮೂರು ಸಣ್ಣ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಾಗಿದೆ. ಮೊದಲನೆಯದು ಬೇಲೂರು ತಾಲ್ಲೂಕಿನ ಬೊಮ್ಮಡಿ ಹಳ್ಳಿ ಬಳಿ ಇದೆ. ಇದರಿಂದ ಸುಮಾರು ೭ ಕಿಮೀ ಉದ್ದದ ಕಾಲುವೆ ತೆಗೆದು ಸುಮಾರು ೩೦೦ ಎಕರೆ ಭೂಮಿಗೆ ನೀರು ಒದಗಿಸಿಕೊಳ್ಳಲಾಗಿದೆ. ಎರಡನೆಯದು ಹಾಲವಾಗಿಲು ಅಣೆಕಟ್ಟು. ಇದು ಹಾಸನದಿಂದ ಪಶ್ಚಿಮಕ್ಕೆ ಸು, ೫ ಕಿಮೀ ದೂರದಲ್ಲಿದೆ. ಇದರಿಂದ ಸು. ೯ ಕಿಮೀ ಉದ್ದದ ಕಾಲುವೆ ತೆಗೆದು ಸುಮಾರು ೨೦೦ ಎಕರೆ ಜಮೀನಿಗೆ ಅನುಕೂಲ ಕಲ್ಪಿಸಲಾಗಿದೆ. ಮೂರನೆಯದು ಚಂದ್ರವಳ್ಳಿ ಅಣೆ. ಇದು ಹೇಮಾವತಿ ಸಂಗಮಕ್ಕೆ ಮೊದಲು ಸು. ೫ ಕಿಮೀ ದೂರದಲ್ಲಿದೆ. ಇದರಿಂದ ಸು ೧೪ ಕಿಮೀ ಉದ್ದದ ಕಾಲುವೆಗೆ ನೀರುಬಿಟ್ಟು ಸುಮಾರು ೩೦೦ ಎಕರೆ ಭೂಮಿಗೆ ನೀರು ಒದಗಿಸಲಾಗಿದೆ.ಯಗಚಿ ಜಲಾಶಯ ಹಾಸನ ಜಿಲ್ಲೆಯಲ್ಲಿ ಕಂಡುಬರುತ್ತದೆ

ಯಗಚಿ ಜಲಾಶಯ[ಬದಲಾಯಿಸಿ]

ಯಗಚಿ ಜಲಾಶಯವು ಹಾಸನ ಜಿಲ್ಲೆಯಿಂದ ೪೫ ಕಿ.ಮೀ ದೂರದಲ್ಲಿ ಬೇಲೂರು ಬಳಿಯಲ್ಲಿದೆ. ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಾನವಾಗಿದೆ. ಈ ಜಲಾಶಯವು ೨೦೦೪ ರಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಬೇಲೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ನೀರಾವರಿ ಸೌಲಭ್ಯವನ್ನು ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿತು. ಯಗಚಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಜಲಾಶಯವು ಸಮುದ್ರ ಮಟ್ಟದಿಂದ ೯೬೫ ಅಡಿ ಎತ್ತರದಲ್ಲಿದೆ. ಯಗಚಿ ಜಲಾಶಯದ ಹೊರಹರಿವು ೪೩೦೦ ಕ್ಯುಸೆಕ್ಸ್ ಮತ್ತು ಒಳ ಹರಿವು ೪೫೦೦ ಕ್ಯುಸೆಕ್ಸ್ ಇರುತ್ತದೆ. ಈ ಜಲಾಶಯವನ್ನು ನಕ್ಸಲ್ ಸಮಸ್ಯೆಯಿಂದಾಗಿ ಪೋಲಿಸರು ಕಾಯುತ್ತಿರುತ್ತಾರೆ.

ವಾಟರ್ ಆಡ್ವೇಂಚರ್ ಸ್ಪೋರ್ಟ್ಸ್[ಬದಲಾಯಿಸಿ]

ಇತ್ತೀಚೆಗೆ ಈ ಜಲಾಶಯದ ಹಿನ್ನೀರಿನಲ್ಲಿ ಯಗಚಿ ವಾಟರ್ ಆಡ್ವೇಂಚರ್ ಸ್ಪೋರ್ಟ್ಸ್ ಸೆಂಟರ್ ಎಂಬ ಸಾಹಸ ಕ್ರೀಡಾ ಕೇಂದ್ರವು ತಲೆ ಎತ್ತಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುತ್ತಿದೆ. ಹಾಗಾಗಿ ಇಲ್ಲಿ ಪ್ರವಾಸಿಗರು ಬನಾನ ಬೋಟ್ ರೈಡ್, ಕ್ರೂಸ್ ಬೋಟ್, ಸ್ಪೀಡ್ ಬೋಟ್, ಜೆಟ್ ಸ್ಕೈಯಿಂಗ್ ಮತ್ತು ಬಂಪರ್ ರೈಡ್ಸ್ ನಂತಹ ಸಾಹಸ ದೋಣಿ ಯಾನಗಳನ್ನು ಇಲ್ಲಿ ಮಾಡಬಹುದು. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಪ್ರವಾಸಿಗರು ಪ್ರಶಾಂತವಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

ಯಗಚಿ ನದಿಯ ಉಪಯೋಗಗಳು: ಕೃಷಿಗೆ ನೀರು ಪೂರೈಕೆ ಕುಡಿಯಲು ನೀರು ಪೂರೈಕೆ ಮನೋರಂಜನಾ ಜಲ ಕ್ರೀಡೆಗಳು ಮೀನು ಸಾಕಾಣಿಕೆ ಪ್ರವಾಸಿಗರಿಗೆ ಆಕರ್ಷಣೆಯಸ್ಥಳ ಅಂತರ್ಜಲ ವೃದ್ಧಿ

ಯಗಚಿ ನದಿಗೆ ಕಟ್ಟಲಾದ ಆಣೆಕಟ್ಟು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: