ಮೂಡುಬಿದಿರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೂಡುಬಿದಿರೆ (ತುಳು: ಬೆದ್ರ ,ಕೊಂಕಣಿ :ಬಿದ್ರ್ಯಾಂ) ದಕ್ಷಿಣಕನ್ನಡ ಜಿಲ್ಲೆಯ ಒಂದು ಮುಖ್ಯ ಪಟ್ಟಣ. ಮಂಗಳೂರಿನಿಂದ ಪೂರ್ವಕ್ಕೆ ೩೬ ಕಿಲೋ ಮೀಟರುಗಳ ದೂರದಲ್ಲಿರುವ ಮೂಡುಬಿದಿರೆಯು ಕಾರ್ಕಳ-ಮಂಗಳೂರು, ಕಾರ್ಕಳ-ಬಂಟ್ವಾಳ ಮತ್ತು ಧರ್ಮಸ್ಥಳ-ಮಂಗಳೂರು ರಸ್ತೆಗಳನ್ನು ಹೊಂದಿದೆ. ೧೯೯೭ರಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ವಿಭಾಗಿಸುವ ಮುನ್ನ ಕಾರ್ಕಳ ತಾಲೂಕಿಗೆ ಸೇರಿದ್ದ ಮೂಡುಬಿದಿರೆಯು ಈಗ ಮಂಗಳೂರಿನ ಭಾಗವಾಗಿದೆ.


ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಮೂಡುಬಿದಿರೆಯು ಶ್ರೀಮಂತವಾದ ಇತಿಹಾಸವನ್ನು ಹೊಂದಿದೆ. ಜೈನಕಾಶಿ ಎಂದು ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ೧೮ ದೇವಸ್ಥಾನಗಳು, ೧೮ ಜೈನ ಬಸದಿಗಳು ಮತ್ತು ೧೮ ಕೆರೆಗಳು ಇವೆ. ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಭದ ಬಸದಿಯು ವಿಶ್ವಪ್ರಸಿದ್ಧವಾದುದು. ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾ ಧವಳಗಳ ಹಸ್ತಪ್ರತಿಗಳನ್ನು ಹೊಂದಿದ್ದು, ಆ ಕಾರಣದಿಂದ ಸಿದ್ಧಾಂತ ಬಸದಿ ಎಂದೂ ಕರೆಯಲ್ಪಡುತ್ತದೆ.

ಮೂಡುಬಿದಿರೆ ಸಾವಿರ ಕಂಭದ ಬಸದಿ

ಮೂಡುಬಿದಿರೆ ಹೆಸರಿನ ಮೂಲ[ಬದಲಾಯಿಸಿ]

ಮೂಡುಬಿದಿರೆಯು ಹಲವು ನೂರು ವರ್ಷಗಳ ಹಿಂದೆ ಬಿದಿರು ಬೆಳೆಗೆ ಪ್ರಸಿದ್ಧವಾಗಿತ್ತು. ಪೂರ್ವದಿಕ್ಕಿನಲ್ಲಿ ಬಿದಿರು ಬೆಳೆಯುವ ಪಟ್ಟಣವಾದ್ದರಿಂದ ಮೂಡು (= ಪೂರ್ವ) ಬಿದಿರೆ ಎಂಬ ಹೆಸರು ಬಂತು. ಈ ಹೆಸರಿಗೂ ಮುನ್ನ ಈ ಪಟ್ಟಣವನ್ನು ವೇಣುಪುರ ಎಂದು ಕರೆಯುತ್ತಿದ್ದರು. ವೇಣು ಅಂದರೆ ಸಂಸ್ಕೃತದಲ್ಲಿ ಬಿದಿರು ಎಂದೇ ಅರ್ಥವಿರುವುದರಿಂದ ಹಿಂದಿನ ಕಾಲದಿಂದಲೂ ಬಿದಿರು ಮತ್ತು ಈ ಪಟ್ಟಣದ ಹೆಸರು ಜೊತೆಯಾಗಿವೆ. ಇಲ್ಲಿಗೆ ಸಮೀಪದ ವೇಣೂರು ಪಟ್ಟಣವೂ ಕೂಡಾ ತನ್ನ ಹೆಸರಿನಲ್ಲಿ ಬಿದಿರಿನ ನಂಟು ಹೊಂದಿರುವುದು ಹಿಂದೆ ಈ ಪ್ರದೇಶದಲ್ಲಿ ಬಿದಿರು ಸಮೃದ್ಧವಾಗಿ ಬೆಳೆಯಿತೆಂಬುದಕ್ಕೆ ಸಾಕ್ಷಿಯಾಗಿದೆ. ತುಳು ಭಾಷೆಯಲ್ಲಿ ಮೂಡುಬಿದಿರೆಯನ್ನು ಬೆದ್ರ ಎಂದು ಕರೆಯುವುದೂ ಕೂಡಾ ಬಿದಿರಿನ ನಂಟನ್ನು ಸೂಚಿಸುತ್ತದೆ.


ಇತಿಹಾಸ[ಬದಲಾಯಿಸಿ]

ಮೂಡುಬಿದಿರೆಯು ಹಿಂದೆ ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ಚೌಟರ ಅರಮನೆಯಲ್ಲಿ ಇಂದಿಗೂ ಅರಸು ವಂಶಸ್ಥರು ವಾಸವಾಗಿದ್ದಾರೆ. ಜೈನ ವ್ಯಾಪಾರಿಗಳೂ ಮೂಡುಬಿದಿರೆಯಲ್ಲಿ ಸಾಕಷ್ಟಿದ್ದು, ದೇಶ ವಿದೇಶಗಳಲ್ಲಿ ವ್ಯಾಪಾರೀ ಸಂಬಂಧವನ್ನು ಹೊಂದಿದ್ದರು. ಇಲ್ಲಿನ ಜೈನ ವ್ಯಾಪಾರಿಗಳು ಸೇರಿ ಕಟ್ಟಿದ ಸಾವಿರ ಕಂಭದ ಬಸದಿಯು ಅತ್ಯಾಕರ್ಷಕ ವಾಸ್ತು ಕೃತಿ.

ಸಾಹಿತ್ಯ[ಬದಲಾಯಿಸಿ]

ಮೂಡುಬಿದಿರೆ ಎಂದೊಡನೆ ಮೊದಲು ನೆನಪಿಗೆ ಬರುವುದು ಮಹಾಕವಿ ರತ್ನಾಕರವರ್ಣಿಯ ಹೆಸರು. ಹಳೆಗನ್ನಡದ ಪ್ರಖ್ಯಾತ ಕಾವ್ಯಗಳಲ್ಲೊಂದಾದ ಭರತೇಶ ವೈಭವ ಈತ ರಚಿಸಿದ ಪ್ರಮುಖ ಕೃತಿ. ಆಧುನಿಕರಲ್ಲಿ ಶಿಶುಪಾಲ ಪಾರ್ಶ್ವನಾಥ ಶಾಸ್ತ್ರಿ, ವಿದ್ವಾನ್ ಕಾಂತ ರೈ, ಸಿದ್ದಕಟ್ಟೆ ಚಂದ್ರಯ್ಯ ಶೆಟ್ಟಿ ಕೆಲವು ಸಾಹಿತಿಗಳು. ಪ್ರಚಲಿತದಲ್ಲಿ ಪಳಕಳ ಸೀತಾರಾಮ ಭಟ್ಟ, ಡಾ. ನಾ ಮೊಗಸಾಲೆ, ಇರ್ಶಾದ್ ಮೂಡುಬಿದಿರೆ, ಜಯಪ್ರಕಾಶ ಮಾವಿನಕುಳಿ, ಕವಿ ರಾಮಚಂದ್ರ ಪೈ ಹೆಚ್ಚಾಗಿ ಕೇಳಿ ಬರುವ ಹೆಸರುಗಳು.


ಮೂಡುಬಿದಿರೆಯು ಬಹಳ ಹಿಂದಿನಿಂದಲೂ ಸಾಹಿತ್ಯಾಸಕ್ತರ ಬೀಡಾಗಿದೆ. ಇಲ್ಲಿನ ಸಮಾಜ ಮಂದಿರದಲ್ಲಿ ಊರ ಸಾಹಿತ್ಯಾಸಕ್ತರು ಸೇರಿ ಸ್ಥಾಪಿಸಿದ ಸರಸ್ವತೀ ಸಭಾ ಹಲವು ವರ್ಷಗಳವರೆಗೆ ದಸರಾ ದಿನಗಳಲ್ಲಿ ಪ್ರತಿ ದಿನವೂ ನಾಡ ಪ್ರಖ್ಯಾತ ಸಾಹಿತಿಗಳನ್ನು ಕರೆಸಿ ಏರ್ಪಡಿಸುತ್ತಿದ್ದ ಭಾಷಣಗಳನ್ನು ಊರ ಹಿರಿಯರು ಇಂದಿಗೂ ಮೆಲುಕು ಹಾಕುತ್ತಾರೆ. ಸಾರಸ್ವತ ಲೋಕದ ದಿಗ್ಗಜರೆಲ್ಲರೂ ಬಂದು ತಮ್ಮ ವಿದ್ವತ್ಪ್ರಭೆಯನ್ನು ಬೆಳಗಿ ಹೋದ ಸಮಾಜ ಮಂದಿರವು ಆ ಕಾಲದಲ್ಲಿ ಕನ್ನಡ ವಿದ್ವಾಂಸರಿಗೆ ಪವಿತ್ರ ವೇದಿಕೆಯಾಗಿತ್ತು. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸರಸ್ವತೀ ಸಭಾದಿಂದ ಆಹ್ವಾನಿತರಾಗಿ ಭಾಷಣಗೈಯುವುದೆಂದರೆ ಹೆಮ್ಮೆಪಡುತ್ತಿದ್ದ ಕಾಲವದು.


೨೦೦೩ರಲ್ಲಿ ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿನ ಸಾಹಿತ್ಯ ಚಟುವಟಿಕೆಗಳಿಗೆ ಮುಕುಟವಿಟ್ಟಂತಿತ್ತು. ಈ ಹಿಂದೆ ೧೯೮೯ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ಇಲ್ಲಿ ವೈಭವದಿಂದ ನಡೆದಿತ್ತು.


ಮೂಡುಬಿದಿರೆಯ ಉತ್ಸಾಹಿ ವೈದ್ಯ ಡಾ. ಮೋಹನ ಆಳ್ವರು ಇತ್ತೀಚಿನ ವರ್ಷಗಳಲ್ಲಿ ಏರ್ಪಡಿಸುತ್ತಿರುವ ಆಳ್ವಾಸ್ ನುಡಿಸಿರಿ ಯಾವುದೇ ಸಾಹಿತ್ಯ ಸಮ್ಮೇಳನಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಸಾಹಿತಿಗಳಿಗೂ ಸಾಹಿತ್ಯಾಸಕ್ತರಿಗೂ ಸೂಕ್ತ ವೇದಿಕೆ ಒದಗಿಸಿ ಕನ್ನಡ ಸರಸ್ವತಿಯ ಜಾತ್ರೆಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಿರುವ ನುಡಿಸಿರಿ, ವರ್ಷಗಳುರುಳಿದಂತೆ ಹೆಚ್ಚಿನ ಕಳೆ, ಪ್ರಸಿದ್ಧಿ ಪಡೆದುಕೊಳ್ಳುತ್ತಾ ಸಾಹಿತ್ಯ ವಲಯದಲ್ಲಿ ಮೂಡುಬಿದಿರೆಯ ಹೆಸರನ್ನು ಮೇಲಕ್ಕೆತ್ತುತ್ತಿದೆ.

ಸಂಸ್ಕೃತಿ[ಬದಲಾಯಿಸಿ]

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಕಲ ವಿಶಿಷ್ಟ ಸಂಸ್ಕೃತಿಗಳನ್ನೂ ಮೈಗೂಡಿಸಿಕೊಂಡಿರುವ ಮೂಡುಬಿದಿರೆಯು ನಾಗಾರಾಧನೆ, ಭೂತ ಕೋಲಗಳಂತಹ ಆಚರಣೆಗಳನ್ನೂ ಯಕ್ಷಗಾನ ಬಯಲಾಟ, ನಾಟಕಗಳನ್ನೂ, ಸಂಗೀತ, ನೃತ್ಯ ಕಲೆಗಳನ್ನೂ ಒಳಗೊಂಡ ಶ್ರೀಮಂತ ಸಂಸ್ಕೃತಿಯ ಬೀಡಾಗಿದೆ. ಸಕಲ ಧರ್ಮ ಸಮನ್ವಯಕ್ಕೆ ಹೆಸರಾದ ದಕ್ಷಿಣ ಕನ್ನಡದ ಭಾಗವಾದ ಮೂಡುಬಿದಿರೆಯು ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ, ಮಹಾಕಾಳಿ ಮಾರಿಗುಡಿ ಜಾತ್ರೆಗಳನ್ನೂ, ಜೈನರಲ್ಲಿ ಸಾವಿರಕಂಭದ ಬಸದಿಯ ವಾರ್ಷಿಕೋತ್ಸವ, ಪದ್ಮಾವತಿ ಅಮ್ಮನವರ ಬಸದಿಯ ನವರಾತ್ರಿ ಉತ್ಸವಗಳನ್ನೂ ಮುಸ್ಲಿಮರ ಉರೂಸ್ ಮುಬಾರಕ್‍ಗಳನ್ನೂ ಕ್ರೈಸ್ತರ ಸಂತ ಮೇರಿ ಉತ್ಸವ, ಕ್ರಿಸ್‍ಮಸ್‍ಗಳನ್ನೂ ಸಂಭ್ರಮದಿಂದ ಆಚರಿಸುತ್ತದೆ. ಆ ಮೂಲಕ ಸರ್ವಧರ್ಮ ಸಮನ್ವಯ ಮತ್ತು ಸಾಮಾಜಿಕ ಸಹಬಾಳ್ವೆಗೆ ಉತ್ತಮ ಮಾದರಿಯಾಗಿದೆ ಮೂಡುಬಿದಿರೆ.ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯ ಯಾವ ಭಾಗದಲ್ಲೂ ಗಲಭೆ ನಡೆದರೂ ಮೂಡುಬಿದಿರೆಯಲ್ಲಿ ಇದರ ಪರಿಣಾಮ ಕಾಣುವುದಿಲ್ಲ.


ಇಲ್ಲಿ ಪ್ರತಿ ವರ್ಷ ಛಳಿಗಾಲದಲ್ಲಿ ನಡೆಯುವ ಆಳ್ವಾಸ್ ವಿರಾಸತ್ ಸಂಗೀತ ನೃತ್ಯಗಳ ಮಹಾ ಮಹೋತ್ಸವವಾಗಿ ಹೊಮ್ಮುತ್ತಿದೆ. ಡಾ.ಮೋಹನ ಆಳ್ವರು ತಮ್ಮ ಹುಟ್ಟೂರಾದ, ಮೂಡುಬಿದಿರೆಯ ಸಮೀಪದ ಮಿಜಾರಿನ, ತಮ್ಮ ವಿಶಾಲವಾದ ತೋಟದ ಮಧ್ಯೆ ಪ್ರತಿ ವರ್ಷ ಏರ್ಪಡಿಸುವ ಈ ಉತ್ಸವಕ್ಕೆ ಊರು, ಪರ ಊರುಗಳಿಂದ ಸಹಸ್ರಾರು ಕಲಾಭಿಮಾನಿಗಳು ಬಂದು ಸಂಗೀತ ನೃತ್ಯಗಳ ರಸದೌತಣವನ್ನು ಸವಿಯುತ್ತಾರೆ. ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಮಹಾನ್‌ ಕಲಾವಿದರು ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿ ಜನರ ಮನ ತಣಿಸುವುದಲ್ಲದೆ, ತಾವೂ ಅತೀವ ಸಂತೋಷ ಪಡುವುದು ಈ ಉತ್ಸವದ ವಿಶೇಷ.


ಕೆಲವೇ ವರ್ಷಗಳ ಹಿಂದೆ ಇಲ್ಲಿನ ಕಡಲಕೆರೆಯ ಬಳಿ ನಿರ್ಮಿಸಲಾದ ಕಂಬಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳವು ಮೂಡುಬಿದಿರೆಯ ಆಕರ್ಷಣೆಯನ್ನು ಹೆಚ್ಚಿಸಿದೆ. ದಕ್ಷಿಣ ಕನ್ನಡದ ಜಾನಪದ ಕ್ರೀಡೆಯಾದ ಕಂಬಳದಲ್ಲಿ ಕಟ್ಟು ಮಸ್ತಾದ ಕೋಣಗಳ ಮತ್ತು ಅವುಗಳನ್ನು ಓಡಿಸುವವರ ಓಟವನ್ನು ನೋಡಲು ಅಪಾರ ಜನಸ್ತೋಮ ಸೇರಿರುತ್ತದೆ.

ಶಿಕ್ಷಣ[ಬದಲಾಯಿಸಿ]

ಮೂಡುಬಿದಿರೆಯು ಶಿಕ್ಷಣ ಕ್ಷೇತ್ರದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತಿಯನ್ನು ಪಸರಿಸುವಲ್ಲಿ ತನ್ನ ಕೊಡುಗೆ ನೀಡುತ್ತಾ ಬಂದಿದೆ. ಇಲ್ಲಿನ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಜೈನ ಪ್ರೌಢ ಶಾಲೆ ಮತ್ತು ಪದವಿಪೂರ್ವ ವಿದ್ಯಾಲಯ, ಶ್ರೀ ಮಹಾವೀರ ಮಹಾವಿದ್ಯಾಲಯ, ಶ್ರೀಧವಳಾ ಮಹಾವಿದ್ಯಾಲಯ, ದಿಗಂಬರ ಜೈನ ಪ್ರಾಥಮಿಕ ಶಾಲೆ, ಬಾಬು ರಾಜೇಂದ್ರ ಪ್ರಸಾದ ಪ್ರೌಢ ಶಾಲೆ, ಹೋಲಿ ರೋಸರಿ ಪ್ರೌಢ ಶಾಲೆ, ಜ್ಯೋತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಂತ್ಯ ಹಿರಿಯ ಪ್ರಾಥಮಿಕ ಶಾಲೆ ಪ್ರಮುಖವಾದವು. ನಂತರದ ದಿನಗಳಲ್ಲಿ ಪ್ರಾಂತ್ಯ ಸರಕಾರಿ ಪ್ರೌಢ ಶಾಲೆ, ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸಂತ ಥಾಮಸ್‍ ಶಾಲೆ, ಕಲ್ಲಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ ಮತ್ತಿತರವು ಅಸ್ತಿತ್ವಕ್ಕೆ ಬಂದವು. ಎಂಭತ್ತರ ದಶಕದಲ್ಲಿ ಸ್ಥಾಪಿತವಾದ ಸರಕಾರಿ ಸಹಕಾರ ತರಬೇತಿ ಸಂಸ್ಥೆ, ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್‍, ಎ ಜಿ ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆ, ಎಂ ಕೆ ಅನಂತರಾಜ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳು ವೃತ್ತಿಪರ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿದವು. ತೊಂಭತ್ತರ ದಶಕದಲ್ಲಿ ಸ್ಥಾಪಿತವಾಗಿ ದೇಶಾದ್ಯಂತ ಹೆಸರು ಮಾಡಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪದವಿಪೂರ್ವ ಮತ್ತು ಪದವಿ ವಿದ್ಯಾಲಯ, ದಾದಿಯರ ಶಿಕ್ಷಣ ಸಂಸ್ಥೆ, ಆಯುರ್ವೇದ ಮಹಾವಿದ್ಯಾಲಯ, ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳನ್ನೊಳಗೊಂಡಿವೆ. ಇವುಗಳೊಂದಿಗೆ ಮಿಜಾರು ತಾಂತ್ರಿಕ ಶಿಕ್ಷಣ ಸಂಸ್ಥೆಯೂ ಸೇರಿ ಮೂಡುಬಿದಿರೆಯು ಶಿಕ್ಷಣ ಕ್ಷೇತ್ರದ ಭೂಪಟದಲ್ಲಿನ ಪ್ರಮುಖ ಚುಕ್ಕೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ.

ವಾಣಿಜ್ಯ[ಬದಲಾಯಿಸಿ]

ಮೂಡುಬಿದಿರೆಯು ಬಹಳ ಹಿಂದಿನಿಂದಲೂ ವ್ಯಾಪಾರ ವಾಣಿಜ್ಯದಲ್ಲಿ ಹೆಸರುವಾಸಿಯಾಗಿದ್ದ ಪಟ್ಟಣ. ಇಲ್ಲಿನ ವ್ಯಾಪಾರಿಗಳು ದೇಶ-ವಿದೇಶಗಳ ವಿವಿಧ ಸ್ಥಳಗಳ ವ್ಯಾಪಾರಿಗಳೊಂದಿಗೆ ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದರೆಂದು ತಿಳಿದಿದೆ. ಇದಕ್ಕೆ ಸಣ್ಣ ಉದಾಹರಣೆಯಾಗಿ ಸಾವಿರ ಕಂಭದ ಬಸದಿಯ ಗೋಡೆಯ ಮೇಲೆ ಕೆತ್ತಲಾದ ಡ್ರಾಗನ್ ಪ್ರಾಣಿಯ ಉಬ್ಬು ಚಿತ್ರವನ್ನು ಗಮನಿಸಬಹುದು. ಆ ಕಾಲದಲ್ಲೇ ವ್ಯಾಪಾರಿಗಳು ಚೀನಾದೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದರೆಂದು ಇದರಿಂದ ತಿಳಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮೂಡುಬಿದಿರೆ ಮತ್ತು ಆಸುಪಾಸಿನಲ್ಲಿ ಗೋಡಂಬಿ ಉದ್ಯಮ, ಕೃಷಿ, ಸಣ್ಣ ಕೈಗಾರಿಕೆಗಳು, ಭತ್ತ, ಎಣ್ಣೆಯ ಗಾಣಗಳು, ಆಯುರ್ವೇದೀಯ ಔಷಧ ತಯಾರಿಕೆ ಇತ್ಯಾದಿಗಳು ಬೆಳೆದು ನಿಂತಿವೆ.