ಮಹೀದಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹೀದಾಸನು ಅಥವಾ ಮಹೀದಾಸ ಐತರೇಯನು ವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ಒಬ್ಬ ಋಷಿ. ಸಂಪ್ರದಾಯದ ಪ್ರಕಾರ, ಐತರೇಯ ಅರಣ್ಯಕ ಮತ್ತು ಐತರೇಯ ಬ್ರಾಹ್ಮಣಗಳ ಋಷಿಯು ಮಹೀದಾಸನು.ಇವನ ಇನ್ನೊಂದು ಹೆಸರು "ಐತರೇಯ". ಈತನು "ಇತರಾ" ಎಂಬುವಳ ಮಗನಾದ್ದರಿಂದ ಐತರೇಯನೆಂದು ಕರೆಯಪ್ಪಟ್ಟಿದ್ದಾನೆ. ಈತನಿಂದ ಪ್ರಕಾಶಿಸಲ್ಪಟ್ಟ ವೇದ ಭಾಗಗಳನ್ನು ಈತನ ಹೆಸರಿನಿಂದಲೇ ಐತರೇಯ ಅರಣ್ಯಕ, ಐತರೇಯ ಬ್ರಾಹ್ಮಣ ಮತ್ತು ಐತರೇಯ ಉಪನಿಷತ್ ಗಳೆಂದು ಕರೆಯಲಾಗಿದೆ. ಇವನು ೧೧೬ ವರ್ಷಗಳವರೆಗೆ ಜೀವಿಸಿದ್ದನೆಂದು ಛಾಂದೋಗ್ಯೋಪನಿಷತ್ ನಲ್ಲಿ ಉಲ್ಲೇಖವಿದೆ. ವೇದ ಭಾಷ್ಯಕಾರರಾದ ಸಾಯಣಾಚಾರ್ಯರ ಪ್ರಕಾರ ಮಹೀದಾಸನ ಬ್ರಾಹ್ಮಣ ತಂದೆಯು ಅನೇಕ ಪತ್ನಿಯರನ್ನು ಹೊಂದಿದ್ದನು. ಅವರಲ್ಲಿ ಮಹೀದಾಸನ ತಾಯಿ "ಇತರಾ" ಕೂಡ ಒಬ್ಬಳು. ಕುಲೀನ ಪತ್ನಿಯಲ್ಲದ ಕಾರಣ ಅವಳನ್ನು ನಿಜವಾದ ಹೆಸರಿನಿಂದ ಕರೆಯದೆ, "ಇತರಾ" (ಬೇರೆಯವಳು) ಎಂದು ಕರೆಯಲಾಗುತ್ತಿತ್ತು ಹಾಗೂ ನಿಷ್ಕೃಷ್ಟವಾಗಿ ಕಾಣಲಾಗುತ್ತಿತ್ತು. ಆವಳ ಮಗನಾದ ಮಹೀದಾಸನು ವಿದ್ಯೆಯಲ್ಲಿ,ಬುದ್ಧಿಯಲ್ಲಿ ತನ್ನ ತಂದೆಗೆ ಇನ್ನುಳಿದ ಪತ್ನಿಯರಿಂದ ಹುಟ್ಟಿದ ಮಕ್ಕಳಿಗಿಂತ ಹೆಚ್ಚು ಚುರುಕಾಗಿದ್ದನು. ಆದರೆ ಅವನ ತಂದೆಯು ಉಳಿದ ಮಕ್ಕಳನ್ನು ಹೆಚ್ಚು ಪ್ರೇಮದಿಂದ ಕಾಣುತ್ತಿದ್ದನು. ಮಹೀದಾಸನು ಚಿಕ್ಕವನಾಗಿದ್ದಾಗ, ಒಂದು ದಿನ ಅವನ ತಂದೆಯು ಹೋಮವೊಂದರಲ್ಲಿ ವ್ಯಸ್ತನಾಗಿದ್ದಾಗ ಅವನ ತೊಡೆಯಮೇಲೆ ತನ್ನ ಇತರ ಸಹೋದರರು ಕುಳಿತುಕೊಂಡದ್ದನ್ನು ಕಂಡ ಮಹೀದಾಸನು ತಾನೂ ಕುಳಿತುಕೊಳ್ಳಲು ಹೋದನು ಆದರೆ ಅವನ ತಂದೆಯು ಅನುಮತಿಸಲಿಲ್ಲ. ಇದರಿಂದ ನೊಂದ ಬಾಲಕ ಮಹೀದಾಸನು ತಾಯಿಯ ಬಳಿಸಾರಿ ತನ್ನ ದುಃಖವನ್ನು ಹೇಳಿಕೊಂಡನು.ಬಹಳ ಕಾಲದಿಂದ ತನ್ನನ್ನು ಮತ್ತು ತನ್ನ ಮಗುವನ್ನು ಕೀಳಾಗಿ ಕಾಣುವುದರಿಂದ ನೊಂದುಕೊಳ್ಳುತ್ತಿದ್ದ ಅವಳು ಅಂದು ಭರಿಸಲಾರದೆ ತಾನು ನಿತ್ಯವೂ ಪೂಜಿಸುತ್ತಿದ್ದ ಪೃಥ್ವೀ ದೇವಿ ಯನ್ನು ಅಳುತ್ತಾ ಪ್ರಾರ್ಥಿಸಿದಳು. ಆಗ ಪೃಥ್ವೀ ದೇವಿಯು ಪ್ರತ್ಯಕ್ಷಳಾಗಿ ಮಹೀದಾಸನಿಗೆ ವರಸ್ವರೂಪವಾಗಿ ಅದುವರೆಗೂ ಪ್ರಕಾಶಿಸಲ್ಪಡದ ವೇದ ಙ್ಞಾನವನ್ನು ಪ್ರಸಾದಿಸಿದಳು.ನಂತರ ಮಹೀದಾಸ ಋಷಿಯೆಂದು ಗೌರವಿಸಲ್ಪಟ್ಟನು. ಪೃಥ್ವೀ ದೇವತೆಯಿಂದ ಮಹೀದಾಸ ಐತರೇಯನಿಗೆ ಪ್ರಾಪ್ತವಾದ ವೇದ ಭಾಗಗಳನ್ನೇ ನಂತರ ಐತರೇಯ ಅರಣ್ಯಕ ಮತ್ತು ಐತರೇಯ ಬ್ರಾಹ್ಮಣಗಳೆಂದು ಕೆರೆಯಲಾಯಿತು. ತನ್ನ ತಾಯಿಯ ಕಾರಣದಿಂದ ಙ್ಞಾನ ಸಂಪಾದಿಸಿದ್ದರಿಂದ ಮಹೀದಾಸನನ್ನು ಅವನ ತಂದೆಯಿಂದ ಗುರುತಿಸದೇ, ತಾಯಿಯ ಬಳಕೆಯ ನಾಮವಾದ "ಇತರಾ" ಎಂಬುವದರಿಂದ "ಐತರೇಯ" ನೆಂದು ಗುರುತಿಸಲಾಗುತ್ತದೆ. ಮಹೀದಾಸ ಎಂಬ ಹೆಸರೂ "ಪೃಥ್ವಿಯ ದಾಸ" (ಮಹೀ ಎಂದರೆ ಭೂಮಿ ಅಥವಾ ಪೃಥ್ವಿ) ಎಂದು ಅರ್ಥಕೊಡುತ್ತದೆ ಎಂಬುದನ್ನು ಗಮನಿಸಬಹುದು.

"https://kn.wikipedia.org/w/index.php?title=ಮಹೀದಾಸ&oldid=116893" ಇಂದ ಪಡೆಯಲ್ಪಟ್ಟಿದೆ