ಮದರ್ ತೆರೇಸಾ

ವಿಕಿಪೀಡಿಯ ಇಂದ
(ಮದರ್ ತೆರೆಸಾ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮದರ್ ತೆರೆಸಾ ಪ್ರಾರ್ಥಿಸುತ್ತಿರುವುದು

೨೬ ಆಗಸ್ಟ್ ೧೯೧೦ ರಲ್ಲಿ ಆಲ್ಬೇನಿಯಾದ ಸ್ಕೊಪಿಯೆ ಎಂಬಲ್ಲಿ ಜನಿಸಿದ ಆಗ್ನೆಸ್ ಗಾಂಕ್ಸಾ ಬೊಜಾಜಿಯು ೧೯೨೮ ರಲ್ಲಿ ಲೊರೆಟೊ ಕಾನ್ವೆಂಟ್ (ಕ್ರೈಸ್ತ ಸನ್ಯಾಸಿನಿಯರ ಮಠ) ಸೇರಿ "ಸೋದರಿ ತೆರೇಸಾ" ಆದರು. ನಂತರ ೬ ಜನವರಿ ೧೯೨೯ರಂದು ಇಂಡಿಯಾ ದೇಶಕ್ಕೆ ಬಂದು ಕಲ್ಕತ್ತಾ ನಗರದ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವಾನಿರತರಾದರು. ೧೯೪೪ರಲ್ಲಿ ಆ ಶಾಲೆಯ ಪ್ರಿನ್ಸಿಪಾಲರೂ ಆದರು. ಸುಮಾರು ೧೯೪೮ರಲ್ಲಿ ಕಲ್ಕತ್ತೆಯ ಆಸ್ಪತ್ರೆಯೊಂದರ ಮುಂದೆ ಸಾವಿನಂಚಿನಲ್ಲಿದ್ದ ಅನಾಥ ಹೆಂಗಸನ್ನು ಕಂಡರು. ಆ ಹೆಂಗಸಿಗೆ ಸಾಂತ್ವನ ಹೇಳುತ್ತಾ ಶುಶ್ರೂಷೆ ಮಾಡುತ್ತಿದ್ದಂತೆ ಅವಳು ಕೊನೆಯುಸಿರೆಳೆದಳು.

ಅನಾಥರು ಸಾವಿನ ಸಂದರ್ಭದಲ್ಲಾದರೂ ಶಾಂತಮನಸ್ಕರಾಗಿ ಗೌರವಯುತ ಮರಣ ಹೊಂದುವುದಕ್ಕೆ ಶ್ರಮಿಸುತ್ತೇನೆಂದು ನಿರ್ಧರಿಸಿದ ಮದರ್ ತೆರೇಸಾ ತಾವಿದ್ದ ಕಾನ್ವೆಂಟನ್ನು ತೊರೆದು ಏಕಾಂಗಿಯಾಗಿ ಆಗಸ್ಟ್ ೧೭, ೧೯೪೮ ರಂದು ಮೊತ್ತಮೊದಲ ಬಾರಿಗೆ ನೀಲಿಯಂಚಿನ ಬಿಳಿಸೀರೆ ಉಟ್ಟು ಬೀದಿಗೆ ಇಳಿದು ತಮ್ಮ ಗುರಿಗೆ ಅಂಟಿಕೊಂಡರು. ಕ್ರಮೇಣ ೧೨ ಇತರ ಸನ್ಯಾಸಿನಿಯರು ಅವರನ್ನು ಸೇರಿಕೊಂಡರು. ಅಕ್ಟೋಬರ್ ೭, ೧೯೫೦ ರಲ್ಲಿ ಅವರದೇ ಆದ "ಮಿಷನರೀಸ್ ಆಫ್ ಚಾರಿಟಿ" ಎಂಬ ಕಾನ್ವೆಂಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.

ಕ್ರಿಸ್ತಶಕ ೧೯೫೨ರಲ್ಲಿ "ನಿರ್ಮಲ ಹೃದಯ ನಿವಾಸ" ತಲೆಯೆತ್ತಿ ಮರಣಶಯ್ಯೆಯಲ್ಲಿದ್ದ ನಿರ್ಗತಿಕರಿಗೆ ಮನೆಯಾಯಿತು. ಅವರು ಏಡ್ಸ್ ರೋಗಿಗಳಿರಬಹುದು, ಕುಷ್ಟರೋಗಿಗಳಿರಬಹುದು, ಕ್ಯಾನ್ಸರ್ ಪೀಡಿತರಿರಬಹುದು ಎಲ್ಲರಲ್ಲೂ ತೆರೇಸಾರವರು ಯೇಸುಕ್ರಿಸ್ತನನ್ನು ಕಾಣುತ್ತಿದ್ದರು. ಬಡಬಗ್ಗರಿಗೂ ಅನಾಥರಿಗೂ ಮದರ್ ತೆರೇಸಾ ತೋರುತ್ತಿದ್ದ ನಿಷ್ಕಾಮ ಕಾಳಜಿ ಎಂದೂ ಕುಗ್ಗಲಿಲ್ಲ. ಇಂದು ಅವರ ಕಾನ್ವೆಂಟಿನಲ್ಲಿ ಸುಮಾರು ೪೦೦೦ ಸನ್ಯಾಸಿನಿಯರಿದ್ದು ೧೨೩ ದೇಶಗಳ ೬೧೦ ಬಿಡಾರಗಳಲ್ಲಿ ಸೇವಾತತ್ಪರರಾಗಿದ್ದಾರೆ. ಇಂಡಿಯಾ ಸರ್ಕಾರವು ೧೯೬೨ರಷ್ಟು ಹಿಂದೆಯೇ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿತ್ತು. ೧೯೭೩ರಲ್ಲಿ ಟೆಂಪಲ್‌ಟನ್ ಪ್ರಶಸ್ತಿಯನ್ನೂ ಅವರ ಮುಡಿಗೇರಿತು.ಅವರ ಸಾಧನೆಯನ್ನು ಮನಗಂಡ ಕ್ರೈಸ್ತಧರ್ಮದ ಪರಮೋಚ್ಛ ಪೀಠ ವ್ಯಾಟಿಕನ್ ೧೯೭೮ರಲ್ಲಿ ಅವರನ್ನು ಸನ್ಮಾನಿಸಿ ಪ್ರಶಸ್ತಿಪತ್ರ ನೀಡಿತು. ಅದರ ಮರುವರ್ಷವೇ ಅವರಿಗೆ ವಿಶ್ವವಿಖ್ಯಾತ ನೊಬೆಲ್ ಶಾಂತಿ ಪ್ರಶಸ್ತಿಯೂ ಲಭ್ಯವಾಯಿತು ಮತ್ತು ೧೯೮೦ರಲ್ಲಿ ಇಂಡಿಯಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನೂ ನೀಡಿ ಗೌರವಿಸಲಾಯಿತು.

ತಮ್ಮ ಸೇವಾಕಾರ್ಯಗಳಿಂದ "ಕೊಳೆಗೇರಿಯ ಸಂತ" ರೆಂದು ಪ್ರಸಿದ್ಧರಾದ ಮದರ್ ತೆರೇಸಾರವರು ಶ್ವಾಸಕೋಶದ ಸೋಂಕಿನಿಂದ ಬಳಲಿ ೫ ಸೆಪ್ಟೆಂಬರ್ ೧೯೯೭ ರಲ್ಲಿ ನಿಧನರಾದರು. ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ಅವರು ಕಟ್ಟಿದ ಕಾನ್ವೆಂಟಿನಲ್ಲಿಯೇ ನಡೆಸಲಾಯಿತು. ಅವರ ಜೀವನಚರಿತ್ರೆ ಅಷ್ಟಕ್ಕೇ ಮುಗಿಯಲಿಲ್ಲ. ಕೊಲ್ಕತ್ತಾದ ಜನಮಾನಸದಲ್ಲಿ ಅವರು ಇನ್ನೂ ಜೀವಂತರಾಗಿದ್ದಾರೆ. ಅವರನ್ನು ಪೂಜಿಸುವ ಅರ್ಚಿಸುವ ಜನರ ಸಂಖ್ಯೆಯೂ ಕಡಿಮೆಯಿಲ್ಲ. ಜನಮಾನಸದ ಸದಿಚ್ಛೆಯಂತೆ ಕ್ರೈಸ್ತ ಧರ್ಮಮಂಡಲಿಯು ೧೯ ಅಕ್ಟೋಬರ್ ೨೦೦೩ರಂದು ಅವರಿಗೆ ಪೂಜನೀಯ ಸ್ಥಾನಮಾನ ನೀಡಿ ಗೌರವಿಸಿದೆ.