ಮಕರ ಸಂಕ್ರಾಂತಿ
Wikipedia ಇಂದ
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಪರಿವಿಡಿ |
[ಬದಲಾಯಿಸಿ] ಜ್ಯೋತಿಷದ ತಳಹದಿ
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ ೨೨ಕ್ಕೇ ಆದರೂ, ಹಿಂದಿನಂತೆಯೇ ಜನವರಿ ೧೪ ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ.
[ಬದಲಾಯಿಸಿ] ಆಚರಣೆ
[ಬದಲಾಯಿಸಿ] ಕರ್ನಾಟಕ
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು". ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳು ಬೀರುವುದು" ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು,ಹಣ್ಣು,ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ,ಹುರಿಗಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ.
[ಬದಲಾಯಿಸಿ] ತಮಿಳುನಾಡು
ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
- ಭೋಗಿ: ಹೊಸ ಬಟ್ಟೆಗಳು
- ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ
- ಮಾಟ್ಟು ಪೊಂಗಲ್: ಗೋಪೂಜೆ
- ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ
- ಕಾಣುಮ್ ಪೊಂಗಲ್
[ಬದಲಾಯಿಸಿ] ಇತರ ಸ್ಥಳಗಳು
ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಹಾ. ಎಳ್ಳುಂಡೆಕೊಡುವಾಗ ತಪ್ಪದೆ, " ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ", ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ ! ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು.