ಭೀಮಸೇನ್ ಜೋಷಿ
Wikipedia ಇಂದ
ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ(ಜನನ: ಫೆಬ್ರವರಿ ೪, ೧೯೨೨) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.
ಭೀಮಸೇನ ಜೋಷಿಯವರು ೧೯೨೨ ರಲ್ಲಿ ಗದಗ ಜಿಲ್ಲೆಯ ಗದಗ ಪಟ್ಟಣದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕಲಿಯಲೆಂದು ಮನೆಯನ್ನು ಬಿಟ್ಟ ಜೋಷಿಯವರು ನಂತರ ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ.
ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಇವರು ಪ್ರಸಿದ್ಧರು. ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ.
ಪುಣೆಯಲ್ಲಿ ವಾಸಿಸುವ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ ೧೯೫೨ರಿಂದ ಪ್ರತಿ ವರ್ಷವೂ ಅಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಭೀಮಸೇನ ಜೋಷಿಯವರಿಗೆ ಲಭಿಸಿದೆ.
ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಸಂಸ್ಥೆ, ೧೨, ಅಕ್ಟೋಬರ್, ೨೦೦೭ ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, "ಸಂಗೀತಕಲಾನಿಧಿ"ಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಲವಾರು ಗಣ್ಯರಲ್ಲಿ, ಖ್ಯಾತ ನಟ ಮತ್ತು ನಿರ್ದೇಶಕ, ಅಮೋಲ್ ಪಾಲೆಕರ್ ರೂ ಒಬ್ಬರು.
[ಬದಲಾಯಿಸಿ] ಪ್ರಶಸ್ತಿಗಳು
- ಪದ್ಮಶ್ರೀ (೧೯೭೨)
- ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ(೧೯೭೬)
- ಪದ್ಮಭೂಷಣ (೧೯೮೫)
- ಪದ್ಮವಿಭೂಷಣ (೧೯೯೯)
- ಭಾರತ ರತ್ನ(೨೦೦೮)
ಹಿಂದುಸ್ತಾನಿ ಸಂಗೀತ
ಭೀಮಸೇನ್ ಜೋಷಿ | ಪಂಡಿತ್ ಜಸರಾಜ್ | ಮಲ್ಲಿಕಾರ್ಜುನ ಮನ್ಸೂರ್ | ಗಂಗೂಬಾಯಿ ಹಾನಗಲ್ | ಬಸವರಾಜ ರಾಜಗುರು | ನಸ್ರತ್ ಫತೇ ಅಲಿ ಖಾನ್ | ಪಂಡಿತ್ ರವಿಶಂಕರ್ | ಶಿವಕುಮಾರ್ ಶರ್ಮಾ | ಹರಿಪ್ರಸಾದ್ ಚೌರಾಸಿಯಾ | ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್ | ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್
