ಭಾರತದ ಸ್ವಾತಂತ್ರ್ಯ ಚಳುವಳಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ
೧೯೪೭ಆಗಸ್ಟ್ ೧೫ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ
ಭಾರತೀಯ ಉಪಖಂಡದ ಇತಿಹಾಸ
ಶಿಲಾಯುಗ ಕ್ರಿ.ಪೂ.೭೦,೦೦೦– ೭೦೦೦
ಮೆಹರಗಢ ಸಂಸ್ಕೃತಿ ಕ್ರಿ.ಪೂ.೭೦೦೦– ೩೩೦೦
ಸಿಂಧೂ ನದಿ ನಾಗರಿಕತೆ ಕ್ರಿ.ಪೂ.೩೩೦೦–೧೭೦೦
ಹರಪ್ಪ ನಾಗರಿಕತೆ ಕ್ರಿ.ಪೂ.೧೭೦೦–೧೩೦೦
ವೈದಿಕ ನಾಗರಿಕತೆ ಕ್ರಿ.ಪೂ.೧೫೦೦–೫೦೦
- ಪ್ರಾಚೀನ ರಾಜಮನೆತನಗಳು - ಕ್ರಿ.ಪೂ.೧೨೦೦–೭೦೦
ಮಹಾ ಜನಪದಗಳು ಕ್ರಿ.ಪೂ.೭೦೦–೩೦೦
ಮಗಧ ಸಾಮ್ರಾಜ್ಯ ಕ್ರಿ.ಪೂ.೬೮೪–೨೬
- ಮೌರ್ಯ ಸಾಮ್ರಾಜ್ಯ - ಕ್ರಿ.ಪೂ.೩೨೧–೧೮೪
ನಡುಗಾಲದ ರಾಜಮನೆತನಗಳು ಕ್ರಿ.ಪೂ.೨೦೦– ಕ್ರಿ.ಶ.೧೨೭೯
- ಪ್ರಾಚೀನ ತಮಿಳು ರಾಜರು - ಕ್ರಿ.ಪೂ.೨೦೦–ಕ್ರಿ.ಶ.೨೦೦
- ಕುಶಾನ ಸಾಮ್ರಾಜ್ಯ - ಕ್ರಿ.ಶ.೬೦–ಕ್ರಿ.ಶ.೨೪೦
- ಗುಪ್ತ ಸಾಮ್ರಾಜ್ಯ - ೨೪೦–೫೫೦
- ಚಾಲುಕ್ಯ ಸಾಮ್ರಾಜ್ಯ - ೫೪೩೧೨೦೦
- ಪಾಳ ಸಾಮ್ರಾಜ್ಯ - ೭೫೦೧೧೭೪
- ಚೋಳ ಸಾಮ್ರಾಜ್ಯ - ೮೪೮೧೨೭೯
ಮುಸ್ಲಿಮ್ ಸುಲ್ತಾನರು ೧೨೧೦೧೫೯೬
- ದೆಹಲಿ ಸುಲ್ತಾನರು - ೧೨೧೦೧೫೨೬
- ಡೆಕ್ಕನ್ ಸುಲ್ತಾನರು - ೧೪೯೦೧೫೯೬
ಹೊಯ್ಸಳ ಸಾಮ್ರಾಜ್ಯ ೧೦೪೦೧೩೪೬
ವಿಜಯನಗರ ಸಾಮ್ರಾಜ್ಯ ೧೩೩೬೧೫೬೫
ಮೊಘಲ್ ಸಾಮ್ರಾಜ್ಯ ೧೫೨೬೧೭೦೭
ಮರಾಠ ಸಾಮ್ರಾಜ್ಯ ೧೬೭೪೧೮೧೮
ಬ್ರಿಟಿಷ್ ಆಳ್ವಿಕೆ ೧೭೫೭೧೯೪೭
ಆಧುನಿಕ ಭಾರತ ೧೯೪೭ ನಂತರ
ಇತರೆ ಇತಿಹಾಸಗಳು
ಭಾರತ · ಪಾಕಿಸ್ತಾನ · ಬಾಂಗ್ಲಾದೇಶ
ಶ್ರೀಲಂಕಾ · ನೇಪಾಳ · ಭೂತಾನ್ · ಟಿಬೆಟ್
ಪ್ರಾಂತೀಯ ಇತಿಹಾಸಗಳು
ಪಂಜಾಬ್ · ದಕ್ಷಿಣ ಭಾರತ · ಸಿಂಧ್ · ಬಂಗಾಳ
ವಿಶೇಷ ಇತಿಹಾಸಗಳು
ರಾಜಮನೆತನಗಳು · ಭಾಷೆಗಳು · ಸಾಹಿತ್ಯ
ಸೇನೆ · ಗಣಿತ · ವಿಜ್ಞಾನ ಮತ್ತು ತಂತ್ರಜ್ಞಾನ

ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ.

೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು. ಅಲ್ಪ ಕಾಲಾನಂತರ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್‍ನ ಉಪಾಯಗಳಿಂದ ವಂಗದ ಅಧಿಕಾರವನ್ನು ತನ್ನ ಕೈವಶಮಾಡಿಕೊಂಡಿತು. ಅಲ್ಲಿಂದ ಮುಂದೆ ಬಹುಬೇಗೆ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಅವರು ಕೈವಶ ಮಾಡಿಕೊಂಡರು. ಪ್ಲಾಸೀ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ ೧೮೫೭ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಅಥವ ೧೮೫೭ರ ಸಿಪಾಯಿ ದಂಗೆ) ಕಿಡಿಕಾರಿತು. ಆಂಗ್ಲರ ದಬ್ಬಾಳಿಕೆಯವಿರುದ್ಧ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತು. ಸಿಪಾಯಿ ದಂಗೆ ವಿಫಲವಾದ ಮೇಲೆ, ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಹಾಗೂ ರಾಜಕೀಯವಾಗಿ ಸಂಘಟಿತರಾದರು. ೧೮೮೫ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲು ಬ್ರಿಟಿಷ್ ಸಾಮ್ರಾಜ್ಯದ ಅಧೀನತೆಯಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಬಾಲ ಗಂಗಾಂಧರ ತಿಲಕ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು.

೧೯೧೮ ಹಾಗು ೧೯೨೨ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು. ೧೯೩೦ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ ೧೯೪೨ರಲ್ಲಿ ಬ್ರಿಟಿಷರು ಭಾರತದಿಂದ ತೊಲಗಿ ಆಂಗೋಲನ ಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು. ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು ೧೯೪೨ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗು ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು ೧೫ ಅಗಸ್ಟ ೧೯೪೭ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯಿತು.

ಪರಿವಿಡಿ

[ಬದಲಾಯಿಸಿ] ಯೂರೋಪಿನವರ ರಾಜ್ಯಭಾರ

ರಾಬರ್ಟ್ ಕ್ಲೈವ್ ಪ್ಲಾಸಿ ಕದನವನ್ನು ಗೆದ್ದ ಮೇಲೆ ಮೀರ್ ಜಾಫರ್ ಜೊತೆಗೆ
ರಾಬರ್ಟ್ ಕ್ಲೈವ್ ಪ್ಲಾಸಿ ಕದನವನ್ನು ಗೆದ್ದ ಮೇಲೆ ಮೀರ್ ಜಾಫರ್ ಜೊತೆಗೆ

ಪೋರ್ತುಗೀಯ ಅನ್ವೇಷಕ ವಾಸ್ಕೊ ಡ ಗಾಮಾ ಕಲ್ಲಿಕೋಟೆ ಬಂದರಕ್ಕೆ ೧೪೯೮ರಲ್ಲಿ ಆಗಮಿಸಿದ ನಂತರ, ಯುರೋಪಿನ ವ್ಯಾಪಾರಸ್ಥರು ಸಾಂಬಾರು ಪದಾರ್ಥಗಳ ವ್ಯಾಪಾರದ ಅನ್ವೇಷಣೆಯಲ್ಲಿ ಭಾರತದ ಕರಾವಳಿಗೆ ಬರತೊಡಗಿದರು. ೧೭೫೭ರಲ್ಲಿ ಪ್ಲಾಸಿ ಕದನದಲ್ಲಿ ರಾಬರ್ಟ ಕ್ಲೈವನ ಅಧೀನದಲ್ಲಿದ್ದ ಬ್ರಿಟಿಷ ಸೈನ್ಯ ಬಂಗಾಲದ ನವಾಬ ಸಿರಾಜ್ ಉದ್ ದೌಲನನ್ನು ಪರಾಜಯಗೊಳಿಸಿದ ಬಳಿಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭದ್ರವಾಗಿ ನೆಲೆಗೊಂಡಿತು. ಇದನ್ನು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನಾಂದಿ ಎಂದು ಗುರುತಿಸಲಾಗುತ್ತದೆ. ೧೭೬೫ರಲ್ಲಿ ಬಕ್ಸಾರ್ ಕಾಳಗದ ನಂತರ, ಬಂಗಾಲ, ಬಿಹಾರ ಮತ್ತು ಓರಿಸ್ಸಾಗಳ ಮೇಲೆ ಕಂಪನಿಗೆ ಆಡಳಿತದ ಹಕ್ಕುಗಳು ದೊರೆತವು.

ಹೊಸದಾಗಿ ಗೆದ್ದುಕೊಂಡ ಈ ಪ್ರಾಂತಗಳ ಆಡಳಿತವನ್ನು ನಿಭಾಯಿಸಲು ಹಾಗು ಬಲಪಡಿಸಲು ಬ್ರಿಟಿಷ್ ಸಂಸತ್ತು ಅನೇಕ ಶಾಸನಗಳನ್ನು ರಚಿಸಿತು. ೧೮೩೫ರಲ್ಲಿ ಇಂಗ್ಲಿಷ್ ಅನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಲಾಯಿತು. ಪಾಶ್ಚಾತ್ಯ ಶಿಕ್ಷಣ ಪಡೆದ ಶಿಷ್ಟವರ್ಗದ ಹಿಂದುಗಳು ಹಿಂದೂ ಧರ್ಮದಲ್ಲಿರುವ ವಿವಾದಾಸ್ಪದ ಸಾಮಾಜಿಕ ಪದ್ಧತಿಗಳಾದ ಜಾತಿ ಪದ್ಧತಿ, ಬಾಲ್ಯ ವಿವಾಹ ಮತ್ತು ಸತಿ ಪದ್ಧತಿಗಳ ನಿವಾರಣೆಗೆ ಪ್ರಯತ್ನಪಟ್ಟರು. ಮುಂಬಯಿ ಮತ್ತು ಮದ್ರಾಸುಗಳಲ್ಲಿ ಪ್ರಾರಂಭವಾದ ಸಾಹಿತ್ಯಕ ಮತ್ತು ಚರ್ಚಾಕೂಟ ಸಮಾಜಗಳು ರಾಜಕೀಯ ಆಲೋಚನೆಯ ವೇದಿಕೆಗಳಾದವು. ಆರಂಭಕಾಲದ ಈ ಸುಧಾರಕರ ಶೈಕ್ಷಣಿಕ ಸಾಧನೆ ಮತ್ತು ಮುದ್ರಣ ಮಾಧ್ಯಮದ ಜಾಣತನದ ಉಪಯೋಗ ಇವುಗಳಿಂದಾಗಿ, ಭಾರತೀಯ ಸಾಮಾಜಿಕ ಮೌಲ್ಯಗಳನ್ನು ಹಾಗು ಧಾರ್ಮಿಕ ಆಚರಣೆಗಳನ್ನು ಅಪವರ್ತನಗೊಳಿಸದೆ, ವಿಶಾಲ ತಳಹದಿಯ ಸುಧಾರಣೆಗಳನ್ನು ತರುವ ಸಂಭಾವ್ಯತೆ ಬೆಳೆಯಿತು.

ಭಾರತೀಯ ಸಮಾಜದ ಮೇಲೆ ಆಧುನಿಕೀಕರಣದ ಈ ಪ್ರವೃತ್ತಿ ಕೆಲವು ಸುಧಾರಣಾಕಾರಿ ಪ್ರಭಾವ ಬೀರಿದರೂ ಸಹ, ಬ್ರಿಟಿಷ್ ಆಡಳಿತದಲ್ಲಿ ಭಾರತೀಯರ ದುರಪಚಾರ ಅಮಿತವಾಗಿತ್ತು. ೯ನೆಯ ಲಾನ್ಸರ್ಸ್‍ ಪಡೆಯ ಹೆನ್ರಿ ಔವ್ರಿಯ ಆತ್ಮಕತೆಯಲ್ಲಿ ಸ್ವತಃ ಅನೇಕ ಬಾರಿ ನಿಷ್ಕಾಳಜಿಯಿಂದ ಸೇವಕರಿಗೆ ಕಟುವಾದ ಹೊಡೆತ ನೀಡುವುದನ್ನು ದಾಖಲಿಸಿದ್ದಾನೆ. ಫ್ರ್ಯಾಂಕ್ ಬ್ರೌನ್ ಎನ್ನುವ ಸಾಂಬಾರ ವ್ಯಾಪಾರಿ ಈ ನಿರ್ದಯ ವರ್ತನೆಯ ಕತೆಗಳಲ್ಲಿ ಏನೇನೂ ಉತ್ಪ್ರೇಕ್ಷೆ ಇಲ್ಲವೆಂದೂ, ಅಲ್ಲದೆ ಹೊಡೆತ ಕೊಡುವ ಉದ್ದೇಶದಿಂದಲೆ ಕೆಲವರು ಸೇವಕರನ್ನು ಇಟ್ಟುಕೊಂಡಿದ್ದರೆಂದು ದಾಖಲಿಸಿದ್ದಾನೆ. ಬ್ರಿಟೀಷರ ಅಧಿಕಾರ ಬಲ ಹೆಚ್ಚಿದಂತೆ ಸ್ಥಳೀಯ ಆಚಾರಗಳ ಅವಹೇಳನೆಯೂ ಹೆಚ್ಚತೊಡಗಿತು. ಉದಾಹರಣೆಗೆ ಮಸೀದಿಗಳಲ್ಲಿ ಮೋಜು ಏರ್ಪಡಿಸುವದು, ತಾಜಮಹಲಿನ ಛಾವಣಿಯ ಮೇಲೆ ಸೈನ್ಯದ ತುಕುಡಿಗಳ ವಾದ್ಯಮೇಳಕ್ಕೆ ಹೆಜ್ಜೆಕುಣಿತ ಹಾಕುವದು, ಬಜಾರಗಳ ಜನಜಂಗುಳಿಗಳಲ್ಲಿ ಚಾಟಿ ಬೀಸುತ್ತ ದಾರಿ ಮಾಡಿಕೊಳ್ಳುವದು (ಜನರಲ್ ಹೆನ್ರಿ ಬ್ಲೇಕ್ ವರ್ಣಿಸಿದಂತೆ) ಮತ್ತು ಸಿಪಾಯಿಗಳ ಜೊತೆ ಕೀಳು ವರ್ತನೆ ಮಾಡುವದು. ೧೮೪೯ರಲ್ಲಿ ಪಂಜಾಬ್ ಅನ್ನು ಬ್ರಿಟೀಷರು ತಮ್ಮದಾಗಿಸಿಕೊಂಡ ಬಳಿಕ, ಅನೇಕ ಸಿಪಾಯಿ ಬಂಡಾಯಗಳಾದವು; ಇವೆಲ್ಲವನ್ನೂ ಬಲಪ್ರಯೋಗದಿಂದ ಹತ್ತಿಕ್ಕಲಾಯಿತು.

[ಬದಲಾಯಿಸಿ] ೧೮೫೭ ಕ್ಕೆ ಮುನ್ನ ಪ್ರಾಂತೀಯ ಚಳುವಳಿಗಳು

೧೮೫೭ರ ಮುಂಚಿನ ಭಾರತದಲ್ಲಿ ವಿದೇಶಿ ಆಳ್ವಿಕೆಯ ವಿರುದ್ಧ ಹಲವು ಪ್ರಾಂತೀಯ ಚಳುವಳಿಗಳು ನಡೆದಿದ್ದವು. ಆದರೆ ಆ ಹೋರಾಟಗಳು ಏಕೀಕರಣಗೊಂಡಿರಲಿಲ್ಲವದುದರಿಂದ ಅವುಗಳನ್ನು ವಿದೇಶಿ ಆಡಳಿತಗಾರರು ಸುಲಭವಾಗಿ ಹತ್ತಿಕ್ಕಿದರು. ದಕ್ಷಿಣದ ಕೆಲವು ರಾಜರುಗಳು ವಿದೇಶಿ ಆಡಳಿತಗಾರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು. ಟಿಪ್ಪು ಸುಲ್ತಾನ್ ಹಾಗು ಬ್ರಿಟೀಷರ ನಡುವೆ ನಡೆದ ಮೈಸೂರು ಯುದ್ಧಗಳು, ೧೭೮೭ ರಲ್ಲಿ ಗೋವಾದ ಮೇಲೆ ಪೋರ್ಚುಗೀಯ ನಿಯಂತ್ರಣವನ್ನು ವಿರೋಧಿಸಿ ನಡೆದ ಪಿಂಟೋಗಳ ಒಳಸಂಚು ಹೆಸರಿನ ಜನಾಂಗೀಯ ದಂಗೆ , ತಮಿಳುನಾಡಿನ ಇಂದಿನ ಟ್ಯುಟಿಕಾರಿನ್ ಜಿಲ್ಲೆಯನ್ನು ಆಳಿದ ವೀರ ಪಾಂಡ್ಯ ಕಟ್ಟಿ ಬೊಮ್ಮನ್ ನಡೆಸಿದ ಹೋರಾಟ ಇವುಗಳ ಉದಾಹರಣೆಗಳು. ವೀರ ಪಾಂಡ್ಯನು ಸ್ಥಳೀಯ ಜನರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ವಿದೇಶಿ ಆಡಳಿತಗಾರರಿಗೆ ತೆರಿಗೆ ಕೊಡುವುದರ ಅಗತ್ಯವನ್ನು ಪ್ರಶ್ನಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದನು [೧]. ಉಳಿದ ಚಳುವಳಿಗಳಲ್ಲಿ ಸಂತಾಲರ ದಂಗೆ ಮತ್ತು ಬ್ರಿಟಿಷರಿಗೆ ಬಂಗಾಲದಲ್ಲಿ ಟಿಟುಮೀರ್ ಒಡ್ಡಿದ ಪ್ರತಿರೋಧಗಳು ಸೇರಿದ್ದವು.

[ಬದಲಾಯಿಸಿ] ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

೧೮೫೭ರ ಸಿಪಾಯಿ ದಂಗೆ
೧೮೫೭ರ ಸಿಪಾಯಿ ದಂಗೆ
ನವೆಂಬರ್ ೧೮೫೭ ರಲ್ಲಿ ದಂಗೆಕೋರರನ್ನು ೯೩ ನೇ ಹೈಲ್ಯಾಂಡರ್ ಹಾಗೂ ೪ ನೇ ಪಂಜಾಬು ತುಕಡಿ ಬಗ್ಗುಬಡಿದ ನಂತರದ ಸಿಕಂದರಾ ಬಾಗ್.
ನವೆಂಬರ್ ೧೮೫೭ ರಲ್ಲಿ ದಂಗೆಕೋರರನ್ನು ೯೩ ನೇ ಹೈಲ್ಯಾಂಡರ್ ಹಾಗೂ ೪ ನೇ ಪಂಜಾಬು ತುಕಡಿ ಬಗ್ಗುಬಡಿದ ನಂತರದ ಸಿಕಂದರಾ ಬಾಗ್.

೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (೧೮೫೭ರ ಸಿಪಾಯಿ ದಂಗೆ) ೧೮೫೭-೧೮೫೮ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಉತ್ತರ ಮತ್ತು ಮಧ್ಯ ಭಾರತಗಳಲ್ಲಿ ಭುಗಿಲೆದ್ದ ದಂಗೆ. ಈ ದಂಗೆಯು ಭಾರತೀಯ ಸೈನಿಕರು ಮತ್ತು ಅವರ ಬ್ರಿಟಿಷ್ ಅಧಿಕಾರಿಗಳ ನಡುವಿನ ಜನಾಂಗೀಯ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ಫಲವಾಗಿತ್ತು. ಮುಘಲರು ಮತ್ತು ಮಾಜಿ ಪೇಶ್ವೆಗಳಂತಹ ಭಾರತೀಯ ರಾಜರುಗಳ ಕುರಿತಾದ ಬ್ರಿಟಿಷರ ಅಸಡ್ಡೆ ಮತ್ತು ಔಧ್ ಪ್ರಾಂತವನ್ನು ಬಲವಂತದಿಂದ ಸ್ವಾಧೀನ ಮಾಡಿಕೊಂಡದ್ದು ಭಾರತೀಯರಲ್ಲಿ ಆಕ್ರೋಶವನ್ನುಂಟು ಮಾಡಿದವು. ಡಾಲ್‍ಹೌಸಿಯ ರಾಜ್ಯಗಳನ್ನು ಕೈವಶ ತಗೆದುಕೊಳ್ಳುವ ತಂತ್ರಗಳಲ್ಲಿ ಪ್ರಮುಖವಾದ ಅತ್ಯಂತ ಅನ್ಯಾಯಕಾರಿ ಅನುತ್ತರಾಧಿಕಾರ ಸಂಪದ್ವಶೀಕರಣ, ಮೊಘಲರ ಉತ್ತರಾಧಿಕಾರಿಗಳನ್ನು ಅರಮನೆಯಿಂದ ದೆಹಲಿ ಬಳಿಯ ಕುತ್ಬ್‍ಗೆ ಓಡಿಸುವ ಸಂಚು ಅನೇಕ ಜನಗಳನ್ನು ಕೆರಳಿಸಿದವು.

ಆದರೆ ಸಿಪಾಯಿ ದಂಗೆಗೆ ನಿಕಟವಾದ ಕಾರಣವೆಂದರೆ ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ (ಪಿ/೫೩) ಬಂದೂಕಿನ ತೋಟಾಗಳಿಗೆ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಸೈನಿಕರು ಕಾಡತೂಸುಗಳನ್ನು ತಮ್ಮ ಬಂದೂಕುಗಳಲ್ಲಿ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ಅವುಗಳನ್ನು ತೆರೆಯಬೇಕಾಗಿತ್ತು. ಹೀಗಾಗಿ ಅದರಲ್ಲಿ ಆಕಳು ಮತ್ತು ಹಂದಿಯ ಕೊಬ್ಬು ಇದ್ದರೆ ಹಿಂದು ಮತ್ತು ಮುಸ್ಲಿಮ್ ಸೈನಿಕರಿಗೆ ಮನಸ್ಸು ನೋಯುವಂತಿತ್ತು. ಫೆಬ್ರುವರಿ ೧೮೫೭ ರಲ್ಲಿ ಸಿಪಾಯಿಗಳು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಬ್ರಿಟಿಷರು ತೋಟಾಗಳನ್ನು ಬದಲಿಸಲಾಗಿದೆಯೆಂದೂ, ಬೇಕಿದ್ದರೆ ಸಿಪಾಯಿಗಳು ಜೇನುಮೇಣ ಮತ್ತು ಸಸ್ಯತೈಲವನ್ನು ತಾವೇ ತಯಾರಿಸಿಕೊಳ್ಳಬಹುದೆಂದು ಹೇಳಿದರೂ, ಗಾಳಿಮಾತು ಅಳಿಯಲಿಲ್ಲ.

೧೮೫೭ರ ಮಾರ್ಚಿನಲ್ಲಿ, ೩೪ನೇ ದೇಶೀಯ ಪದಾತಿದಳದ ಸಿಪಾಯಿಯಾದ ಮಂಗಲ ಪಾಂಡೆ, ಬ್ರಿಟಿಷ್ ಸಾರ್ಜೆಂಟ್ (ದಳನಾಯಕ) ಒಬ್ಬನ ಮೇಲೆರಗಿ ಅಡ್‍ಜುಟೆಂಟ್ (ಸೇನಾಧಿಕಾರಿ) ಒಬ್ಬನಿಗೆ ಗಾಯ ಮಾಡಿದನು. ಜನರಲ್ (ಸೇನಾಪತಿ) ಹರ್ಸೇ, ಪಾಂಡೆಗೆ ಯಾವುದೋ 'ಧರ್ಮದ ಮನೋವ್ಯಾಧಿ' ತಗುಲಿದೆಯೆನ್ನುತ್ತಾ, ಪಾಂಡೆಯನ್ನು ಬಂಧಿಸಲು ಜಮಾದಾರ (ಆರಕ್ಷಕ ಪ್ರಮುಖ)ನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದನು. ಏಪ್ರಿಲ್ ೭ ರಂದು ಮಂಗಲ್ ಪಾಂಡೆಯನ್ನು ಜಮಾದಾರನೊಂದಿಗೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ ೧೦ ರಂದು, ೧೧ ನೇ ಹಾಗೂ ೨೦ ನೇ ಅಶ್ವದಳಗಳು ಸೇರಿದಾಗ ಉಕ್ಕುವ ರೋಷದಿಂದ ಸವಾರರು ಅಧಿಕಾರಗಳ ಮಿತಿ ಮೀರಿ, ಮೇಲಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ೩ನೇ ತುಕಡಿಯನ್ನು ಸ್ವತಂತ್ರಗೊಳಿಸಿದ ಅವರು, ಮೇ ೧೧ ರಂದು ದೆಹಲಿಯನ್ನು ತಲುಪಿದರು. ಅಲ್ಲಿ ಉಳಿದ ಭಾರತೀಯರು ಅವರನ್ನು ಸೇರಿಕೊಂಡರು. ಕೆಲಸಮಯದಲ್ಲಿ ಬಂಡಾಯವು ಉತ್ತರ ಭಾರತದ ತುಂಬೆಲ್ಲ ಹರಡಿತು. ಕೆಲವು ಮುಖ್ಯ ನಾಯಕರೆಂದರೆ ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರನಾದ ಅಹ್ಮದ್ ಉಲ್ಲಾ; ನಾನಾ ಸಾಹೇಬ್; ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾಂತ್ಯಾ ಟೋಪಿ ಮತ್ತು ಅಝೀಮುಲ್ಲಾ ಖಾನ್; ಝಾನ್ಸಿಯ ರಾಣಿ ಲಕ್ಷ್ಮೀ ಭಾಯಿ; ಕುಂವರ್ ಸಿಂಹ; ಬಿಹಾರಜಗದೀಶಪುರರಜಪೂತ ನಾಯಕ; ಮತ್ತು ಮುಘಲ್ ದೊರೆ ಬಹಾದುರ್ ಶಹಾನ ಸಂಬಂಧಿ ಫಿರೂಝ್ ಶಹಾ.

ಕೊನೆಯ ಮುಘಲ್ ಚಕ್ರವರ್ತಿ ಎರಡನೇ ಬಹಾದುರ್ ಶಹಾನ ವಾಸಸ್ಥಳವಾದ ಕೆಂಪು ಕೋಟೆಯನ್ನು ಸಿಪಾಯಿಗಳು ಮುತ್ತಿ ವಶಪಡಿಸಿಕೊಂಡರು. ರಾಜನು ಸಿಂಹಾಸನವನ್ನು ಮರಳಿ ಪಡೆಯಬೇಕೆಂದು ಅವರು ಪಟ್ಟು ಹಿಡಿದರು. ಅವನು ಮೊದಲು ಹಿಂಜರಿದನು, ಆದರೆ ನಂತರ ಅವರ ಬೇಡಿಕೆಯನ್ನೊಪ್ಪಿ ಬಂಡಾಯದ ಮುಂದಾಳು ಆದನು .

ಹೆಚ್ಚುಕಡಿಮೆ ಅದೇ ಸಮಯಕ್ಕೆ ಝಾನ್ಸಿಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಶ್ ಸೈನ್ಯಾಧಿಕಾರಿಗಳನ್ನು ಕೊಂದಿತು . ಮೀರತ್ , ಕಾನ್ಪುರ , ಲಖನೌ ಮುಂತಾದ ಪ್ರದೇಶಗಳಲ್ಲಿ ದಂಗೆಗಳೆದ್ದವು. ಬ್ರಿಟಿಷರು ಪ್ರತಿಕ್ರಿಯಿಸುವದರಲ್ಲಿ ವಿಳಂಬವಾದರೂ ಅಪಾರ ಶಕ್ತಿಯೊಂದಿಗೆ ಪ್ರತಿಕ್ರಿಯೆಯನ್ನು ತೋರಿಸಿದರು. ಕ್ರಿಮಿಯಾ ಯುದ್ಧರಂಗದಲ್ಲಿದ್ದ ಹಾಗು ಚೀನಾದ ಕಡೆಗೆ ಹೊರಟಿದ್ದ ಸೈನ್ಯದಳಗಳನ್ನು ಭಾರತಕ್ಕೆ ತಿರುಗಿಸಿದರು. ದಿಲ್ಲಿಗೆ ಮುತ್ತಿಗೆ ಹಾಕುವ ಪೂರ್ವದಲ್ಲಿ, ದಿಲ್ಲಿಯ ಹತ್ತಿರವಿದ್ದ ಬಂಡುಕೋರರ ಪ್ರಮುಖ ಸೈನ್ಯದೊಂದಿಗೆ ಬ್ರಿಟಿಷರು ಬಾದಲ್-ಕೆ-ಸರಾಯಿಯಲ್ಲಿ ಹೋರಾಡಿ ಅವರನ್ನು ಮರಳಿ ದಿಲ್ಲಿಗೆ ಓಡಿಸಿದರು. ದೆಹಲಿಯ ಮುತ್ತಿಗೆಯು ೧ ಜುಲೈ ನಿಂದ ೩೧ ಆಗಸ್ಟ್ ವರೆಗೆ ಬಾಳಿತು. ಒಂದು ವಾರದ ರಸ್ತೆ ಕಾಳಗದ ನಂತರ ಬ್ರಿಟಿಷರು ದೆಹಲಿಯನ್ನು ಮತ್ತೆ ಆಕ್ರಮಿಸಿದರು. ಕೊನೆಯ ಮುಖ್ಯ ಕಾಳಗವು ಗ್ವಾಲಿಯರ್ ನಲ್ಲಿ ಜೂನ್ ೨೦, ೧೮೫೮ ರಂದು ನಡೆಯಿತು. ರಾಣಿ ಲಕ್ಷ್ಮೀ ಬಾಯಿ ಹತಳಾದದ್ದು ಈ ಕಾಳಗದಲ್ಲಿಯೇ. ೧೮೫೯ರ ಕೊನೆಯ ತನಕ ಅಲ್ಲಲ್ಲಿ ಕಾಳಗಗಳು ಮುಂದುವರೆದರೂ, ಬಂಡಾಯಕೋರರನ್ನು ಸೋಲಿಸಲಾಯಿತು.

[ಬದಲಾಯಿಸಿ] ಅನಂತರದ ಫಲಿತಾಂಶ

೧೮೫೭ರ ಯುದ್ಧವು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮುಖ್ಯ ತಿರುವಾಗಿತ್ತು. ಬ್ರಿಟೀಷರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ರದ್ದುಗೊಳಿಸಿ ನೇರ ಬ್ರಿಟನ್ನಿನ ರಾಜಮನೆತನದ ಚಕ್ರಾಧಿಪತ್ಯದಡಿಗೆ ಭಾರತವನ್ನು ತಂದರು. ರಾಜಮನೆತನದ ಪ್ರತಿನಿಧಿಯಾಗಿ 'ವೈಸ್‍ರಾಯ್' ಪಟ್ಟವನ್ನು ಸ್ಥಾಪಿಸಲಾಯಿತು. ಈ ನೇರ ಆಡಳಿತ ಪದ್ದತಿಯ ಘೋಷಣೆಯ ಅಡಿಯಲ್ಲಿ, ಮಹಾರಾಣಿ ವಿಕ್ಟೋರಿಯ "ಭಾರತದ ರಾಜರುಗಳಿಗೆ, ನೇತಾರರಿಗೆ ಮತ್ತು ಜನರಿಗೆ" ಸಮಾನತೆಯನ್ನು ನೀಡುವುದಾಗಿ ಭರವಸೆ ನೀಡಿದಳು. ಆದರೆ ಸಿಪಾಯಿ ದಂಗೆಯಿಂದ ಭಾರತೀಯರಲ್ಲಿ ಮೂಡಿದ ಅವಿಶ್ವಾಸ ಮುಂದುವರೆದಿತ್ತು.

ಭಾರತೀಯರ ಬಲದ ಮೊದಲ ಪೆಟ್ಟಿಗೆ ಎಚ್ಚೆತ್ತುಕೊಂಡ ಬ್ರಿಟಿಷರು ಸುಧಾರಣೆಗಳನ್ನು ಹಮ್ಮಿಕೊಂಡರು; ಸರ್ಕಾರದಲ್ಲಿ ಭಾರತೀಯ ಮೇಲ್ವರ್ಗದವರನ್ನೂ, ರಾಜರುಗಳನ್ನೂ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದರು. ಭೂಕಬಳಿಕೆಯನ್ನು ನಿಲ್ಲಿಸಿ, ಧಾರ್ಮಿಕ ಸೌಹಾರ್ದತೆಯನ್ನು ತೋರಿಸುತ್ತಾ, ಪೌರ ಸೇವೆಗಳಲ್ಲಿ ಭಾರತೀಯರನ್ನು ಕೆಳಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಲಾರಂಭಿಸಿದರು. ಅಲ್ಲದೆ, ದೇಶೀಯರಿಗಿಂತ ಬ್ರಿಟಿಷ್ ಸೈನಿಕರನ್ನು ಹೆಚ್ಚಾಗಿ ಸೈನ್ಯದಲ್ಲಿ ತುಂಬತೊಡಗಿದರು; ಶಸ್ತ್ರಾಸ್ತ್ರಗಳ ಬಳಕೆಯನ್ನು ಬ್ರಿಟಿಷರಿಗೆ ಮಾತ್ರ ಮಿತಿಗೊಳಿಸಿದರು.

ಎರಡನೇ ಬಹಾದುರ್ ಶಹಾನನ್ನು ಬರ್ಮಾರಂಗೂನ್‍ಗೆ ಗಡಿಪಾರು ಮಾಡಲಾಯಿತು. ಅಲ್ಲಿ ಅವನು ೧೮೬೨ ರಲ್ಲಿ ಸತ್ತು ಮುಘಲ್ ವಂಶವು ಕೊನೆಯಾಯಿತು. ೧೮೭೭ ರಲ್ಲಿ ವಿಕ್ಟೋರಿಯಾ ಮಹಾರಾಣಿಯು ಭಾರತದ ಚಕ್ರವರ್ತಿನಿ ಎಂಬ ಬಿರುದನ್ನು ಧರಿಸಿದಳು .

[ಬದಲಾಯಿಸಿ] ಸಂಘಟಿತ ಚಳುವಳಿಗಳ ಹುಟ್ಟು

ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ

ಸಿಪಾಯಿ ದಂಗೆಯ ನಂತರದ ದಶಕಗಳಲ್ಲಿ ರಾಜಕೀಯ ಪ್ರಜ್ಞೆ, ಭಾರತೀಯರ ಲೋಕಾಭಿಪ್ರಾಯ, ಮತ್ತು ರಾಷ್ಟ್ರೀಯ ಮತ್ತು ಪ್ರಾಂತೀಯ ನಾಯಕರ ಹುಟ್ಟುಗಳಾದವು.

ಸಾಮಾಜಿಕ ಧಾರ್ಮಿಕ ಗುಂಪುಗಳ ಪ್ರಭಾವಗಳನ್ನು, ಅದೂ ಧಾರ್ಮಿಕತೆ ಪ್ರಮುಖ ಪಾತ್ರ ವಹಿಸುವಂಥ ದೇಶದಲ್ಲಿ, ಕಡೆಗಣಿಸಲಾಗದು. ಸ್ವಾಮಿ ದಯಾನಂದ ಸರಸ್ವತಿಯವರು ಸ್ಥಾಪಿಸಿದ ಆರ್ಯ ಸಮಾಜವು ಹಿಂದೂ ಸಮಾಜದಲ್ಲಿದ್ದ ಅಕೃ‍ತ್ಯಗಳನ್ನು ಸರಿಪಡಿಸುವ ಮತ್ತು ಕ್ರೈಸ್ತ ಧರ್ಮಪ್ರಚಾರಕರನ್ನು ವಿರೋಧಿಸುವ ಗುರಿ ಹೊಂದಿತ್ತು. ರಾಜಾ ರಾಮ ಮೋಹನ ರಾಯಬ್ರಹ್ಮೋ ಸಮಾಜವು ಕೂಡ ಸತಿ, ವರದಕ್ಷಿಣೆಯಂಥ ದುಷ್ಟ ಪದ್ಧತಿಗಳ, ಅನಕ್ಷರತೆ ಮತ್ತು ಮೌಢ್ಯಗಳ ವಿರುದ್ಧ ಹೋರಾಡಿತು. ಈ ಸಮಾಜಗಳು ಭಾರತದ ಸಾಮಾನ್ಯ ಜನತೆಯಲ್ಲಿ ಜಾಗೃತಿ, ಅಭಿಮಾನ ಮತ್ತು ಸಮಾಜ ಸೇವೆಯ ಪ್ರವೃತ್ತಿಗಳನ್ನು ಹೆಚ್ಚಿಸುವಲ್ಲಿ ಪ್ರಮುಖವಾದವು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶ್ರೀ ಅರಬಿಂದೋ, ಮುಂತಾದವರು ಧಾರ್ಮಿಕ ಸುಧಾರಣೆ ಮತ್ತು ಸಾಮಾಜಿಕ ಸ್ವಾಭಿಮಾನದ ಪ್ರಚಾರದ ಮೂಲಕ ಸಂಪೂರ್ಣ ಸ್ವಾತಂತ್ರ್ಯದ ಬಯಕೆಯನ್ನು ಸಾರ್ವಜನಿಕರಲ್ಲಿ ಹೂಡಿದರು. ಇದಲ್ಲದೆ ಬಂಕಿಮಚಂದ್ರ ಚಟರ್ಜಿ, ಸುಬ್ರಹ್ಮಣ್ಯ ಭಾರತಿ, ರವೀಂದ್ರನಾಥ ಠಾಗೋರ್ ಮುಂತಾದವರು ಭಾವನಾತ್ಮಕ ಸಾಹಿತ್ಯದ ರಚನೆಯಿಂದ ಈ ಸ್ವಾತಂತ್ರ್ಯದ ಬಯಕೆಗೆ ಪ್ರೋತ್ಸಾಹ ನೀಡಿದರು.

[ಬದಲಾಯಿಸಿ] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಬಾಲಗಂಗಾಧರನಾಥ ತಿಲಕ್
ಬಾಲಗಂಗಾಧರನಾಥ ತಿಲಕ್

ನಿವೃತ್ತ ಬ್ರಿಟಿಶ್ ನಾಗರಿಕ ಅಧಿಕಾರಿ ಎ.ಓ.ಹ್ಯೂಮ್ ಮಾಡಿದ ಸಲಹೆಯಿಂದ ಪ್ರೇರಿತರಾಗಿ ೭೩ ಭಾರತೀಯ ಪ್ರತಿನಿಧಿಗಳು ಮುಂಬೈಯಲ್ಲಿ ೧೮೮೫ರಲ್ಲಿ ಸಭೆಸೇರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದರು. ಇವರಲ್ಲಿ ಬಹುತೇಕ ಜನರು ಪಾಶ್ಚಿಮಾತ್ಯ ಶಿಕ್ಷಣ ಪಡೆದ ಪ್ರಾಂತೀಯ ಗಣ್ಯರೂ; ಕಾನೂನು, ಶಿಕ್ಷಣ, ಮತ್ತು ಪತ್ರಿಕೋದ್ಯಮದಂಥ ವೃತ್ತಿಗಳಲ್ಲಿ ತೊಡಗಿದ್ದ ಯಶಸ್ವೀ ಮತ್ತು ಊರ್ಧ್ವಮುಖೀ ಜನರಾಗಿದ್ದರು. ಅವರು ತಮ್ಮ ವೃತ್ತಿಗಳಲ್ಲಿ ಪ್ರಾದೇಶಿಕ ಸ್ಪರ್ಧೆಯಿಂದಲೂ ಮತ್ತು ಅನೇಕ ಶಾಸಕೀಯ ಸಮಿತಿಗಳು, ವಿಶ್ವವಿದ್ಯಾಲಯಗಳು ಮತ್ತು ವಿಶೇಷ ಆಯೋಗಗಳಲ್ಲಿ ಅನೇಕ ಹುದ್ದೆಗಳಲ್ಲಿ ನಾಮಕರಣ ಹೊಂದಿಯೂ ರಾಜಕೀಯ ಅನುಭವವನ್ನು ಪಡೆದಿದ್ದರು. ದಾದಾಭಾಯಿ ನವರೋಜಿಯವರು ಕಾಂಗ್ರೆಸ್ ಸ್ಥಾಪನೆಗೆ ಕೆಲವು ವರ್ಷಗಳ ಮೊದಲೇ ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್‌ನ್ನು ಸ್ಥಾಪಿಸಿದ್ದರು. ಐ.ಎನ್.ಎ. ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಿ ಇನ್ನೂ ದೊಡ್ಡದಾದ ರಾಷ್ಟ್ರೀಯ ವೇದಿಕೆಯನ್ನು ನಿರ್ಮಿಸಿತು. ಕಾಂಗ್ರೆಸ್ಸಿನ ಪ್ರಾರಂಭದ ಹೊತ್ತಿಗೆ, ಯಾವದೇ ನಿಶ್ಚಿತ ಧ್ಯೇಯಾದರ್ಶಗಳು ಇರಲಿಲ್ಲ. ಅದು ವ‍ರ್ಷಕ್ಕೊಮ್ಮೆ ಸಭೆ ಸೇರಿ ನಾಗರಿಕ ಹಕ್ಕುಗಳು ಮತ್ತು ಸರಕಾರದಲ್ಲಿ ಸೇವೆ ಸಲ್ಲಿಸುವ ಅವಕಾಶಗಳಂತಹ ಹೆಚ್ಚು ವಿವಾದಾಸ್ಪದವಲ್ಲದ ಕೋರಿಕೆಗಳ ಬಗ್ಗೆ ಗೊತ್ತುವಳಿಗಳನ್ನು ಪಾಸು ಮಾಡುವ ಚರ್ಚಾವೇದಿಕೆಯಾಗಿಯೇ ಹೆಚ್ಚಾಗಿ ಕಾರ್ಯನಿರ್ವಹಿಸಿತು. ಈ ಗೊತ್ತುವಳಿಗಳನ್ನು ವೈಸ್‍ರಾಯ್ ಸರಕಾರಕ್ಕೆ ಮತ್ತು ಆಗಾಗ ಬ್ರಿಟಿಷ್ ಸಂಸತ್ತಿಗೆ ಸಲ್ಲಿಸಲಾಗುತ್ತಿತ್ತು. ಕಾಂಗ್ರೆಸಿನ ಆರಂಭದ ಸಾಧನೆಗಳು ಅತ್ಯಲ್ಪವಾಗಿದ್ದವು. ಇಡೀ ಭಾರತವನ್ನು ಪ್ರತಿನಿಧಿಸುವದಾಗಿ ಹೇಳಿಕೊಂಡರೂ ಕಾಂಗ್ರೆಸ್ಸು ನಗರಗಳ ಗಣ್ಯಜನರ ಹಿತಾಸಕ್ತಿಗಳಿಗೆ ದನಿಯಾಗಿತ್ತು. ಇತರ ಆರ್ಥಿಕ ಹಿನ್ನೆಲೆಗಳ ಜನರ ಸಂಖ್ಯೆ ಅತ್ಯಲ್ಪವಾಗಿತ್ತು.

೧೮೯೦ರಲ್ಲಿ ಕಾಂಗ್ರೆಸ್ ಅನ್ನು ಸೇರಿದ ಲೋಕಮಾನ್ಯ ಬಾಲಗಂಗಾಧರನಾಥ ತಿಲಕರು ಸೌಮ್ಯವಲ್ಲದ ಅಭಿಪ್ರಾಯಗಳನ್ನು ಹೊಂದಿದ್ದಾಗಿಯೂ, ಜನತೆಯಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ಸುಪ್ರಸಿದ್ಧ ಹೇಳಿಕೆ "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ; ನಾನು ಅದನ್ನು ಪಡೆದೇ ತೀರುವೆನು" ಭಾರತೀಯರಿಗೆ ಸ್ಫೂರ್ತಿಯ ಮೂಲವಾಯಿತು. ಸಾಮಾನ್ಯ ಜನತೆಗೆ ತಮ್ಮ ಬಗ್ಗೆ ಅಭಿಮಾನಪಡಲು, ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯವನ್ನು ಅಧಿಕಾರಯುಕ್ತವಾಗಿ ಬೇಡಲು ತನ್ಮೂಲಕ ಸುಖವನ್ನು ಸಾಧಿಸಲು ಕಾರಣಗಳನ್ನು ಒದಗಿಸಿದ ಈ ವಿದ್ಯಾವಂತ ಜನರು ಜನತೆಯಲ್ಲಿ ಸ್ವಾತಂತ್ರ ಜ್ಯೋತಿಯ ಕಿಡಿಯನ್ನು ಹೊತ್ತಿಸಿದರು. ಇವರೊಂದಿಗೆ ಲಾಲ ಲಜಪತ್ ರಾಯ್ ಹಾಗು ಬಿಪಿನ್ ಚಂದ್ರ ಪಾಲ್ ಕೂಡ ಸ್ವಾತಂತ್ರ್ಯಕ್ಕೆ ಹಿಂಸಾತ್ಮಕ ಹೋರಾಟ ನಡೆಸುವ ಮಾರ್ಗವನ್ನು ಬೆಂಬಲಿಸಿದರು. ಸೌಮ್ಯವಾದಿಗಳಾದ ಗೋಪಾಲಕೃಷ್ಣ ಗೋಖಲೆ ಮತ್ತು ದಾದಾಭಾಯ್ ನೌರೋಜಿಗಳು ಮಾತುಕತೆ ಹಾಗು ರಾಜಕೀಯ ಒತ್ತಡಗಳನ್ನು ತರುವ ಮಾರ್ಗವನ್ನು ಬೆಂಬಲಿಸುತ್ತಿದ್ದರು. ಹೀಗೆ ಎರಡು ಬಣಗಳಾಗಿ ೧೯೦೭ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು.

[ಬದಲಾಯಿಸಿ] ರಾಷ್ಟ್ರೀಯತಾವಾದದ ಬೆಳವಣಗೆ

೧೯೦೦ ರ ಹೊತ್ತಿಗೆ ಕಾಂಗ್ರೆಸ್ಸು ಅಖಿಲ ಬಾರತ ಮಟ್ಟದ ಸಂಘಟನೆಯಾಗಿ ಹೊಮ್ಮಿತ್ತಾದರೂ , ಅದು ಮುಸ್ಲಿಮರನ್ನು ಆಕರ್ಷಿಸುವಲ್ಲಿನ ಸೋಲು ಅದರ ಸಾಧನೆಯನ್ನು ಕಳೆಗುಂದಿಸಿತ್ತು. ಮುಸ್ಲಿಮರು ಸರಕಾರೀ ಸೇವೆಯಲ್ಲಿ ತಮ್ಮ ಪ್ರಾತಿನಿಧ್ಯ ಸಾಕಷ್ಟಿಲ್ಲ ಎಂದು ಭಾವಿಸಿದ್ದರು. ಧಾರ್ಮಿಕ ಮತಾಂತರ , ಗೋಹತ್ಯೆ , ಅರೇಬಿಕ್ ಲಿಪಿಯಲ್ಲಿ ಉರ್ದುವನ್ನು ಉಳಿಸಿಕೊಳ್ಳುವುದು ಇವುಗಳ ವಿರುದ್ಧ ಹಿಂದೂ ಸಮಾಜ ಸುಧಾರಕರ ಪ್ರಚಾರಗಳು , ಕಾಂಗ್ರೆಸ್ಸು ಮಾತ್ರ ಭಾರತದ ಜನತೆಯನ್ನು ಪ್ರತಿನಿಧಿಸುವಂತಾದಾಗ ಅವರ ಅಲ್ಪಸಂಖ್ಯಾತ ಸ್ಥಿತಿ ಮತ್ತು ಹಕ್ಕುಗಳ ನಿರಾಕರಣೆಯ ಕುರಿತಾದ ಅವರ ಆತಂಕಗಳನ್ನು ಹೆಚ್ಚಿಸಿದವು . ಸರ್ ಸಯ್ಯದ್ ಅಹ್ಮದ್ ಖಾನ್ ಅವರು ಮುಸ್ಲಿಂ ಪುನರುಜ್ಜೀವನಕ್ಕಾಗಿ ಚಳುವಳಿಯೊಂದನ್ನು ಆರಂಬಿಸಿದರು . ಅದು ೧೮೭೫ ರಲ್ಲಿ ಉತ್ತರಪ್ರದೇಶದ ಆಲೀಗಢದಲ್ಲಿ ಮುಹಮ್ಮದನ್ ಆಂಗ್ಲೋ ಇಂಡಿಯನ್ ಕಾಲೇಜಿನ ಸ್ಥಾಪನೆಯಲ್ಲಿ ಪರ್ಯವಸಾನಗೊಂಡಿತು. (ನಂತರ ೧೯೨೧ ರಲ್ಲಿ ಅದು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಎಂದು ಮರುಹೆಸರು ಪಡೆಯಿತು.) ಅದರ ಉದ್ದೇಶವು ಆಧುನಿಕ ಪಾಶ್ಚಾತ್ಯ ಜ್ಞಾನದೊಂದಿಗೆ ಇಸ್ಲಾಂನ ಸಾಮರಸ್ಯಕ್ಕೆ ಒತ್ತು ಕೊಡುವ ಶಿಕ್ಷಣವನ್ನು ಶ್ರೀಮಂತ ವಿದ್ಯಾರ್ಧಿಗಳಿಗೆ ನೀಡುವದಾಗಿತ್ತು . ಆದರೆ , ಭಾರತದ ಮುಸ್ಲಿಮರಲ್ಲಿನ ವೈವಿಧ್ಯತೆಯು ಏಕಪ್ರಕಾರದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪುನರುಜ್ಜೀವನವನ್ನು ಅಸಾಧ್ಯಗೊಳಿಸಿತು.

[ಬದಲಾಯಿಸಿ] ವಂಗ ಭಂಗ

ಮುಖ್ಯ ಲೇಖನ: ವಂಗ ಭಂಗ

೧೯೦೫ರಲ್ಲಿ, ವೈಸ್‍ರಾಯ್ ಹಾಗೂ ಗವರ್ನರ್ ಜನರಲ್ (೧೮೯೯-೧೯೦೫) ಆಗಿದ್ದ