ಭರತ್ ಕುಮಾರ್ ಪೊಲಿಪು
ಮುಂಬೈಕನ್ನಡಿಗರ ಮನೆಮಾತಾಗಿರುವ, ಎಲ್ಲ ಕನ್ನಡಿಗರಿಗೆ ಚಿತಪರಿಚಿತರಾದ ಭರತ್ ಕುಮಾರ್ ಪೊಲಿಪು ಸನ್, ೧೯೮೨ ರಲ್ಲಿ ಮುಂಬೈನಗರಕ್ಕೆ ಪಾದಾರ್ಪಣೆಮಾಡಿದರು. ತಮ್ಮ ಸುಮಾರು ೩ ದಶಕಗಳ ಮುಂಬೈಜೀವನದಲ್ಲಿ ಅವರೊಬ್ಬ ಅತ್ಯುತ್ತಮ ಲೇಖಕ, ಸಂಘಟಕ, ರಂಗಕರ್ಮಿ, ಸೃಜನಶೀಲ ನಾಟಕ ನಿರ್ದೇಶಕ, ಮೇಲಾಗಿ ಮುಂಬೈ ಉಪನಗರ ಮಾಹಿಮ್,ನಲ್ಲಿರುವ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಹಂತ ಹಂತವಾಗಿ ಮೇಲೇರಿ ತಮ್ಮ ಅನುಪಮ ಕಾಣಿಕೆಯನ್ನು ನೀಡಿದ್ದಾರೆ. ಎಲ್ಲ ಅತ್ಯುತ್ತಮ ಗುಣವಾಚಕ ಶಬ್ದಗಳೂ ಒಬ್ಬ ವ್ಯಕ್ತಿಯಲ್ಲಿ ಮೇಳೈಸಿರುವ, ಮುಂಬೈನ ರಂಗಭೂಮಿಯಲ್ಲಿ ಕಳೆದ ಎರದು ದಶಕಗಳಿಗಿಂತಲೂ ಹೆಚ್ಚು ಸಮಯ ಕ್ರಿಯಾಶೀಲರಾಗಿ ದುಡಿಯುತ್ತಿರುವ ಭರತ್ ಕುಮಾರ್ ಪೊಲಿಪು ರವರು, ಕರ್ನಾಟಕ ಸಂಘ ಮುಖಪತ್ರಿಕೆಯಾದ ಸ್ನೇಹಸಂಬಂಧ ಪತ್ರಿಕೆಯ ಲೇಖಕರು,ಹಾಗೂ ಪ್ರಕಾಶಕರು. 'ಭರತ್ ಕುಮಾರ್ ಪೊಲಿಪು,' ಸದಾ ನಗುಮುಖದಿಂದ ಎಲ್ಲರೊಡನೆ ವ್ಯವಹಹರಿಸುವ ಸರಳ ಸಜ್ಜನ ವ್ಯಕ್ತಿ.
ಬಾಲ್ಯ, ಶಿಕ್ಷಣ[ಬದಲಾಯಿಸಿ]
ಮೂಲತಃ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪೊಲಿಪು ಅವರು ಜನಿಸಿದ ಸ್ಥಾನ. 'ಉಡುಪಿಯ ಪೂರ್ಣಪ್ರಜ್ಞ ಕಾಲೇಜಿ'ನಲ್ಲಿ ಬಿ.ಕಾಂ ಪದವಿಯನ್ನು ಗಳಿಸಿ, ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ 'ಎಂ.ಎ.ಪದವಿ'ಯನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿನಂತರ, ಕೆಲ ಕಾಲ ತಮ್ಮ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿದ್ದರು. ನಂತರ ಅವರು ಪಿ.ಎಚ್.ಡಿ ಗೆ ಓದುವ ಹವ್ಯಾಸವನ್ನು ಪುನಃ ಆರಂಭಿಸಿ,’ಮುಂಬಯಿ ಕನ್ನಡ ರಂಗಭೂಮಿ-ಒಂದು ತೌಲನಿಕ ಅಧ್ಯಯನ' ವೆಂಬ ಮಹಾಪ್ರಬಂಧವನ್ನು ಕನ್ನಡ ವಿಭಾಗದ ಮುಖ್ಯಸ್ಥ, ಡಾ.ಜಿ.ಎನ್.ಉಪಾಧ್ಯರವರ ಮಾರ್ಗದರ್ಶನದಲ್ಲಿ ಸಂಶೋಧನ ಪ್ರಬಂದವನ್ನು ಮಂಡಿಸಿ,'ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ'ಯನ್ನು ಗಳಿಸಿದ್ದಾರೆ.
ಮುಂಬೈನ ಕನ್ನಡ ರಂಗಭೂಮಿಯಲ್ಲಿ[ಬದಲಾಯಿಸಿ]
ಪೊಲಿಪುರವರು ತಮ್ಮ ಶಾಲಾ ಕಾಲೇಜು ದಿನಗಳಲ್ಲೇ ನಾಟಕರಂಗದಲ್ಲಿ ಆಸಕ್ತಿವಹಿಸಿದ್ದು, ಸ್ತ್ರೀಪಾತ್ರಗಳ ಮೂಲಕ ರಂಗಪ್ರವೇಶಮಾಡಿದ್ದರು. ಉಡುಪಿ ಪೂರ್ಣಪ್ರಜ್ಞ ಕಾಲೇಜ್ ನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದ, ಖ್ಯಾತ ರಂಗ ನಿರ್ದೇಶಕರಾದ ಬಿ.ಆರ್.ನಾಗೇಶ್ ರವರ ಗರಡಿಯಲ್ಲಿ ಪಳಗಿದವರು. ಉದ್ಯಾವರ ಮಾಧವಚಾರ್ಯ, ಪ್ರಸನ್ನ, ಶ್ರೀನಿವಾಸ ಪ್ರಭು, ರಾಮದಾಸ್ ಮೊದಲಾದವರ ಮಾರ್ಗದರ್ಶನದಲ್ಲಿ ಜೊತೆಗೂಡಿ ಕಾರ್ಯ ನಿರ್ವಹಿಸಿದ್ದಲ್ಲದೆ, ತಮ್ಮದೇ ಆದ ಸೃಜನಶೀಲ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡು ಗುರುತಿಸಲ್ಪಟ್ಟಿದ್ದಾರೆ. ಹಲವಾರು ತುಳು ನಾಟಕಗಳನ್ನು ರಚಿಸಿ, ಪ್ರಸ್ತುತಿಪಡಿಸಿದ್ದಾರೆ. ಶಿವರಾಮ ಕಾರಂತರ ಶಿಷ್ಯ,'ಬನ್ನಂಜೆ ಸಂಜೀವ ಸುವರ್ಣ'ರಿಂದ ಯಕ್ಷಗಾನ ಬಡಗು ತಿಟ್ಟಿನ ನೃತ್ಯಾಭ್ಯಾಸವನ್ನು ಕಲಿತಿದ್ದಾರೆ. ಮೈಸೂರು ಆರ್.ಮೋಹನ್ ರವರಿಂದ ಭರತನಾಟ್ಯ ಕಲಿತರು. ಜಿಲ್ಲಾದ್ಯಂತ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು.ಶಾಲಾ ಕಾಲೇಜು ದಿನಗಳಲ್ಲಿ ನಾಗನೃತ್ಯ, ಬೇಟೆಗಾರ-ನೃತ್ಯಗಳಿಗೆ ಹತ್ತು ಹಲವು ಬಹುಮಾನಗಳನ್ನು ಗಳಿಸಿದ್ದಾರೆ. ಈಗ ಅವರು, ಮುಂಬೈನ ರಂಗಭೂಮಿಯಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ. ಪೊಲಿಪುರವರ ನಿರ್ದೇಶನದಲ್ಲಿ ಬೆಳಕುಕಂಡ ಕನ್ನಡ ನಾಟಕಗಳಗಳಲ್ಲಿ ಮುಖ್ಯವಾದದ್ದು :
- ರಾವಿನದಿಯ ದಂಡೆಯಲ್ಲಿ,
- ಆಷಾಢದ ಒಂದು ದಿನ,
- ನೀ ಮಾಯೆಯೊಳಗೋ,
- ಪೋಲೀಸರಿದ್ದಾರೆ ಎಚ್ಚರಿಕೆ,(ಪಿ.ಲಂಕೇಶ್ ವಿರಚಿತ)
- ಗುಮ್ಮನೆಲ್ಲಿಹ ತೋರಮ್ಮ, (ಶ್ರೀರಂಗ ವಿರಚಿತ)
- ಬದುಕ ಮನ್ನಿಸು ಪ್ರಭುವೇ,
- ಸಾಯೋ ಆಟ,
- ಯಾವನದಿ ಯಾವಪಾತ್ರ,(ಜಯಂತ ಕಾಯ್ಕಿಣಿಯವರ)
- ಗಿಡಗಳ ಜೊತೆ ಮಾತನಾಡುವ ಹುಡುಗ,
- ಉರಿದವರು,(ಎಂ.ಎಸ್.ವೇದಾರವರ)
- ಟಿ ಪ್ರಸನ್ನನ ಗೃಹಸ್ಥಾಶ್ರಮ,
- ಶಾಂಡಿಲ್ಯ ಪ್ರಹಸನ,
- ಅಂಬೆ,(ಡಾ.ಸರಜೂ ಕಾಟ್ಕರ್)
- ಮೃಗ ತೃಷ್ಣಾ,(ವಸುಮತಿ ಕುಡುಪರವರ)
- ಸಿದ್ಧಾರ್ಥ(ಯಶವಂತ ಚಿತ್ತಾಲ ವಿರಚಿತ)
- ಸ್ಪರ್ಶ(ಜಯವಂತ ದಳವಿ)
ಮುಂತಾದ ಪರಿಣಾಮಕಾರಿ ನಾಟಕಗಳನ್ನು ನಿರ್ದೆಶಿಸಿ, ಮುಂಬೈನ ವೈವಿಧ್ಯಮಯ ಮೂಲಗಳಿಂದ ಬಂದು ವೀಕ್ಷಿಸಿದ ರಸಿಕವೃಂದದಿಂದ 'ಸೈ'ಯೆನ್ನಿಸಿಕೊಂಡಿದ್ದಾರೆ. ಮುಂಬೈನ ಪ್ರಯೋಗ ರಂಗದ ಮೂಲಕ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ, 'ಪ್ರಯೋಗ ಪ್ರಕಾಶನಾಲಯ'ವೆಂಬ 'ಪ್ರಕಾಶನ ಸಂಸ್ಥೆ'ಯೊಂದನ್ನು ಹುಟ್ಟುಹಾಕಿದ್ದಾರೆ. ಅರವಿಂದ ನಾಡಕರ್ಣಿಯವರ ಕೃತಿಗಳ ವಿಮರ್ಶೆಯ 'ಬೇರು ಬಿಳಲು', 'ವಿ.ಎಸ್.ಶ್ಯಾನುಭೋಗ್' ರವರ ಕವನ ಸಂಕಲನ 'ತಟ್ಟೀರಾಯ' ಹೊರತಂದದ್ದು ಇದೆ. ಹೀಗೆ ಮುಂದುವರೆದು ಪ್ರಯೋಗರಂಗ ತನ್ನ ಬೆಳ್ಳಿಹಬ್ಬವನ್ನು ಆಚರಿಸಿದ ಮುಂಬೈನ ನಾಟಕತಂಡಗಳಲ್ಲಿ ಇದೂ ಒಂದು. ಒಬ್ಬ ಸೃಜನಶೀಲ ವಸ್ತುನಿಷ್ಠ ನಾಟಕ ವಿಮರ್ಶಕರೆಂಬ ಹೆಸರುಗಳಿಸಿರುವ 'ಪೊಲಿಪು'ರವರು, ಮುಂಬೈನಿಂದ ಹೊರಡುವ ಕರ್ನಾಟಕ ಮಲ್ಲ, ಪತ್ರಿಕೆಯಲ್ಲಿ ಸಾಕಷ್ಟು ಉತ್ತಮ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. 'ಉದಯದೀಪ', 'ಸಂಜೆಸುದ್ದಿ' ಪತ್ರಿಕೆಗಳಲ್ಲಿ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರಿನ ಪತ್ರಿಕೆ,'ಮುಂಗಾರು'ವಿಗೆ, ಮುಂಬೈನಿಂದಲೇ ವರದಿ/ನಾಟಕ ವಿಮರ್ಶೆಗಳನ್ನು ಬರೆಯುತ್ತಾ ಬಂದಿದ್ದಾರೆ. 'ಭರತ್ ಕುಮಾರ್' ರವರು, ಅಭಿವ್ಯಕ್ತ (ಮಂಗಳೂರು), 'ಕರ್ನಾಟಕ ನಾಟಕ ಅಕಾಡೆಮಿ '(ದಾವಣಗೆರೆ) ಇವುಗಳು ಆಯೋಜಿಸಿದ್ದ 'ವಿಚಾರಗೋಷ್ಟಿ,' 'ಸಾಹಿತ್ಯ ಕಮ್ಮಟ'ಗಳಲ್ಲಿ ಭಾಗವಹಿಸಿ ರಂಗಭೂಮಿಯ ಬಗ್ಗೆ ಪ್ರಬಂಧಗಳನ್ನು ಮಂಡಿಸಿದ್ದಾರೆ.'ಕರ್ನಾಟಕ ಸಂಘ'ದಲ್ಲಿ ರಂಗಭೂಮಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ಸಮಯವನ್ನು ವಿನಿಯೋಗಿಸಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. 'ಪೊಲಿಪು' ನಿರ್ದೇಶಿಸಿದ ನಾಟಕಗಳು, ಬೆಳಗಾಂ, ದೆಹಲಿ, ತುಮಕೂರು, ಧಾರವಾಡ, ಮೊದಲಾದ ನಗರಗಳಲ್ಲಿ ಪ್ರದರ್ಶನ ಕಂಡಿವೆ.
ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]
- ಅರುಂಧತಿಯೆಂಬ ನಾಟಕಕ್ಕೆ ರತ್ಮಮ್ಮ ಹೆಗ್ಗಡೆ ಪ್ರಶಸ್ತಿ ಪ್ರಾಪ್ತವಾಗಿದೆ.
- ’ಮಾಸ್ಟರ್ ಹಿರಣ್ಣಯ್ಯ ದತ್ತಿ ನಿಧಿ ಪುರಸ್ಕಾರ,’ 'ಕರ್ನಾಟಕ ಅಕಾಡೆಮಿ'ಯ ವತಿಯಿಂದ,
- ಸನ್ ೨೦೧೧ ರಲ್ಲಿ 'ಪಿ.ಎಚ್.ಡಿ ಪದವಿ'ಯನ್ನು 'ಮುಂಬೈ ವಿಶ್ವವಿದ್ಯಾಲಯ'ದಿಂದ ಗಳಿಸಿದ್ದಾರೆ.
- ಸನ್ ೨೦೧೧ ರಲ್ಲಿ, ಮುಂಬೈನ ಕೋಟೆ ಪರಿಸರದಲ್ಲಿರುವ 'ಮೊಗವೀರ ಬ್ಯಾಂಕ್ ನ ನಿರ್ದೇಶನ ಮಂಡಳಿ'ಯ ವತಿಯಿಂದ 'ಪ್ರಶಸ್ತಿಪತ್ರ' ಹಾಗೂ 'ಸನ್ಮಾನ'.
- 'ಸನ್.೨೦೧೩ ರ, ಸುವರ್ಣ ರಂಗ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಮಾರ್ಚ್ ೨೪ ರಂದು, 'ಕಾಂತಾವರದ ಕೆ.ಬಿ.ಐನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ'ದ 'ಪಂಪ ಮಹಾಕವಿ ಸಭಾಸದನ'ದಲ್ಲಿ ಗಣ್ಯರೆಲ್ಲರ ಉಪಸ್ಥಿತಿಯಲ್ಲಿ ಜರುಗಿದ ಸಮಾರಂಭದಲ್ಲಿ ಪ್ರದಾನಿಸಲಾಯಿತು.
