ಬೋನ್ಸಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೋನ್ಸಾಯ್ ಗಿಡ

ಬೋನ್ಸಾಯ್ ಕುಬ್ಜವಾಗಿ ಮರಗಳನ್ನು ಬೆಳೆಸುವ ಕಲೆ. ಭೂಮಿಯ ಆಸರೆ ಸಿಕ್ಕಿದರೆ ಎಕರೆಗಟ್ಟಲೆ ಜಾಗ ಆಕ್ರಮಿಸುವ ಆಲ, ಅರಳಿ ಮರಗಳು ಬೋನ್ಸಾಯ್ ಮೂಲಕ ಅತೀ ಕುಬ್ಜವಾಗಿ ಕೇವಲ ಒಂದೂವರೆ ಮೊಳದಷ್ಟು ಉದ್ದ ಬೆಳೆಯುತ್ತವೆ. ಒಂದು ಸಣ್ಣ ಟ್ರೇನಲ್ಲಿ ಮಿನಿ ಉದ್ಯಾನವನ್ನೂ ಬೆಳೆಸಬಹುದು. ಇದೆಲ್ಲಾ ಚೀನಿಯರ ಜಗತ್ಪ್ರಸಿದ್ಧ ಕಲೆ ’ಬೋನ್ಸಾಯ್’ನ ಫಲ. ಬೋನ್ಸಾಯ್ ಎಂಬುದೊಂದು ಸಸ್ಯಶಾಸ್ತ್ರದ ಅದ್ಭುತ.

ಬೋನ್ಸಾಯ್ ಎಂದರೆ ಜಪಾನಿ ಭಾಷೆಯಲ್ಲಿ ಟ್ರೇನಲ್ಲಿ ಬೆಳೆಸುವುದು ಎಂದರ್ಥ. ಸಣ್ಣ ಸಣ್ಣ ಸಸ್ಯ ಕುಂಡಗಳಲ್ಲಿ ದೊಡ್ಡ ದೊಡ್ಡ ಮರಗಳ ಕುಬ್ಜ ಪ್ರತಿರೂಪವನ್ನು ಬೆಳೆಸುವ ಕಲೆಯೇ ಬೋನ್ಸಾಯ್. ಈ ಕುಬ್ಜ ಗಿಡಗಳು ದೊಡ್ಡ ಮರಗಳ ಎಲ್ಲಾ ಪ್ರತಿರೂಪವನ್ನು ಹೊಂದಿರುತ್ತವೆ. ಇಂತಹ ಬೋನ್ಸಾಯ್ ಗಿಡಗಳ ಬಗೆಗಿನ ಅಚ್ಚರಿಯ ಸಂಗತಿಯೆಂದರೆ ಇವು ಒಂದು ಶತಮಾನ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಬದುಕಬಲ್ಲವು.

ಇತಿಹಾಸ[ಬದಲಾಯಿಸಿ]

ಬೋನ್ಸಾಯ್ ಕಲೆ ಉಗಮವಾಗಿದ್ದು ಒಂದು ಸಾವಿರ ವರ್ಷಗಳ ಹಿಂದೆ ಚೀನಾದಲ್ಲಿ. ಚೀನೀ ಶ್ರೀಮಂತರು ತಮ್ಮ ಗೃಹಗಳನ್ನು ಅಲಂಕರಿಸುವ ಏಕೋದ್ದೇಶದಿಂದ ಕುಬ್ಜ ಮರಗಳನ್ನು ಬೆಳೆಸುವ ಕಲೆಯನ್ನು ಆರಂಭಿಸಿ ಕರಗತ ಮಾಡಿಕೊಂಡರು. ತತ್ಸಮಯದಲ್ಲೇ ಜಪಾನೀಯರೂ ಈ ಕಲೆಯನ್ನು ಪ್ರಾರಂಭಿಸಿದರು. ಆದರೆ ಜಪಾನಿಯರು ಮಾತ್ರ ಈ ಕಲೆಯನ್ನು ಮುಂದುವರಿಸಿಕೊಂಡು ಬಂದರು. ಕಾಲಾಂತರದಲ್ಲಿ ಚೀನೀಯರ ಕ್ರಾಂತಿ ಅಲ್ಲಿ ಈ ಕಲೆಯನ್ನು ಭೂಗತಗೊಳಿಸಿತು. ಆದರೆ ಜಪಾನೀಯರು ಕೈಬಿಡದೆ ಮುಂದರೆಸಿಕೊಂಡು ಇಂದು ಈ ಕಲೆಯನ್ನು ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿದ್ದಾರೆ. ಹೀಗಾಗಿ ಇಂದು ಜಪಾನಿನಲ್ಲಿ ನೂರಾರು ವರ್ಷಗಳ ಬೋನ್ಸೈ ನೋಡಲು ಲಭ್ಯ. ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿದ್ದ ಆದಿವಾಸಿ ಜಪಾನಿಯರಲ್ಲಿ ಈ ಕಲೆ ಜನಪ್ರಿಯವಾಗಿತ್ತು. ಎರಡನೇ ಜಾಗತಿಕ ಯುದ್ಧದ ನಂತರ ಜಪಾನಿನಿಂದ ನಿವೃತ್ತಿಹೊಂದಿ ಮರಳುತ್ತಿದ್ದ ಅಧಿಕಾರಿಗಳು ತಮ್ಮೊಂದಿಗೆ ಬೋನ್ಸಾಯ್ ಕಲೆಯನ್ನು ಕೊಂಡೊಯ್ದರು. ಬೋನ್ಸಾಯ್ ಗಿಡಗಳ ಅದ್ಭುತ ಸಂಗ್ರಹವನ್ನು ನ್ಯೂಯಾರ್ಕ್ ಪಟ್ಟಣದ ಬ್ರೂಕ್ಲಿನ್ ಸಸ್ಯ ಶಾಸ್ತ್ರೀಯ ತೋಟ ಮತ್ತು ವಾಷಿಂಗ್ಟನ್ ಸಸ್ಯಶಾಸ್ತ್ರೀಯ ತೋಟಗಳಲ್ಲಿ ಕಾಣಬಹುದಾಗಿದೆ.

ಭಾರತದೊಂದಿಗಿನ ಸಂಬಂಧ[ಬದಲಾಯಿಸಿ]

ಆದರೆ ಹಾಸ್ಯ ಸಂಗತಿ ಎಂದರೆ ಈ ಕಲೆಯ ಉಗಮ ಭಾರತ. ಐದು ಸಾವಿರ ವರ್ಷಗಳ ಇತಿಹಾಸವಿರುವ ಭಾರತ ಋಷಿ ಮುನಿಗಳ ದೇಶ. ಅಗ್ನಿಯೇ ಪ್ರಧಾನ ದೇವತೆಯಾಗಿದ್ದ ಭಾರತೀಯ ಸಂಪ್ರದಾಯದಲ್ಲಿ ಋಷಿ ಮುನಿಗಳು ತಮ್ಮ ದಿನಚರಿಯನ್ನು ಅಗ್ನಿಗೆ ಸಮಿತ್ತುಗಳನ್ನು ಪಲಾಶ, ಅಶ್ವತ್ಥ, ಶಮಿ, ಔದುಂಬರ ಮುಂತಾದ ಮರಗಳ ಕಾಂಡಗಳನ್ನು ಅರ್ಪಿಸುವುದರ ಮೂಲಕ ಆರಂಭಿಸುತ್ತಿದ್ದರು. ಅರಣ್ಯವಾಸಿಗಳಾಗಿದ್ದ ಋಷಿಮುನಿಗಳು ಅಲೆಮಾರಿಗಳಾಗಿದ್ದರು. ಆಮಂತ್ರಿಸಿದ ರಾಜ್ಯಗಳಿಗೆ ತೆರಳಿ ರಾಜಾಥಿತ್ಯಗಳನ್ನು ಸ್ವೀಕರಿಸಿ ಅಲ್ಲಿನ ಹಿತಕ್ಕಾಗಿ ಯಾಗ ಯಜ್ಞಗಳನ್ನು ನೆರವೇರಿಸುತ್ತಿದ್ದರು. ಊರಿಂದೂರಿಗೆ ಅಲೆದಾಡುವ ಸಮಯದಲ್ಲಿ ಮಾರ್ಗಮಧ್ಯದಲ್ಲಿ ಸಮಿತ್ತುಗಳ ದುರ್ಲಭತೆಯಿಂದಾಗಿ ಅಗತ್ಯವಾದ ಮರಗಳನ್ನು ಪುಟ್ಟ ಮರದ ಪೆಟ್ಟಿಗೆಗಳಲ್ಲಿ ಬೆಳೆಸಿ -ಕುಬ್ಜವಾಗಿ ಬೆಳೆಯುತ್ತಿದ್ದವು- ಶಿಷ್ಯವೃಂದದ ಜತೆಯಲ್ಲಿ ಕೊಂಡೊಯ್ಯುತ್ತಿದ್ದರು. ಹೀಗಾಗಿ ಅವರ ದಿನನಿತ್ಯದ ಸಮಿತ್ತುಗಳ ಪೂರೈಕೆಯಾಗುತ್ತಿತ್ತು. ಆಗ ಅವಕ್ಕೆ ಬೋನ್ಸೈ ಹೆಸರಿರಲಿಲ್ಲ.

ಬೋನ್ಸಾಯ್ ಕಲೆಗೆ ನಿಸರ್ಗವೇ ಸ್ಫೂರ್ತಿ. ಹೇಗೆಂದರೆ ಬಾನಿನೆತ್ತರದ ಬೆಟ್ಟಗಳಲ್ಲಿನ ಮರಗಳು ಜೀವನ ಪರ್ಯಂತ ಕುಬ್ಜವಾಗಿಯೇ ಇರುತ್ತವೆ. ನಿಸರ್ಗದ ಹವಾಗುಣಕ್ಕೆ ಹೊಂದಿಕೊಂಡು ಹುರಿಯಾಗಿ ಗಂಟುಗಂಟಾಗಿ ಬೆಳೆದು ಒಂದು ಕಲೆಯಾಗುತ್ತವೆ. ಯಾವುದೇ ವರ್ಗದ ಜನ ಹೆಚ್ಚು ಖರ್ಚಿಲ್ಲದೆ ಸುಲಭವಾಗಿ ಮಾಡಬಹುದಾದ ಕಲೆ ಇದಾಗಿದೆ.

ಸೂಕ್ತವಾದ ಸಸ್ಯಗಳು[ಬದಲಾಯಿಸಿ]

ತಾಯಿ ಬೇರಿರುವ ಮರಗಳ ತಾಯಿಬೇರನ್ನು ತುಂಡರಿಸಿದರೆ (ಹಾಗೂ ಮತ್ತು ಹಲವಾರು ಕಾರಣಗಳಿಂದ) ಮರ ಕುಬ್ಜವಾಗಿ ಬೆಳೆಯುತ್ತದೆ. ಹೀಗಾಗಿ ನಾರು ಬೇರುಗಳಿಂದ ಕೂಡಿರುವ ತೆಂಗಿನ ಜಾತಿಯ ಮರಗಳು ತಾಳೆ ಜಾತಿಯ ಮರಗಳನ್ನು ಹೊರತು ಪಡಿಸಿ ಉಷ್ಣವಲಯದಲ್ಲಿ ಬೆಳೆಯುವ ಎರಡು ಸಾವಿರಕ್ಕೂ ಹೆಚ್ಚಿನ ಜಾತಿಯ ಮರಗಳನ್ನು ಬೋನ್ಸೈ ಆಗಿ ಬೆಳೆಸಬಹುದು.

ಬೋನ್ಸಾಯ್ ಕುರಿತು ಜಪಾನಿನಲ್ಲಿ ಸಂಶೋಧನೆ ನಡೆದಿದ್ದು ಉಪ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಬೆಳೆಯುವ ಮರಗಳು ಬೋನ್ಸಾಯ್ ಗೆ ಸರಿ ಹೊಂದುವವು ಎಂದು ಹೇಳಲಾಗಿದೆ. ಬ್ರಹ್ಮಾಮ್ಲಿಕ, ಕದಂಬ, ಬೂರುಗ, ಆಲ, ಬೇವು, ಮುತ್ತುಗದ ಮರ, ಮಾವು, ನಂದಿ ವೃಕ್ಷಗಳು ಹೆಮೀಲಯಾ, ಕಾಡು ಕರಿ ಬೇವು , ಮುಂತಾದವು ಬೋನ್ಸಾಯ್ ಕಲೆಗೆ ಹೊಂದಿಕೊಳ್ಳಬಲ್ಲವು.

ಬೋನ್ಸಾಯ್ ಕಲೆಗೆ ಒಗ್ಗುವಂತಹ ಗಿಡಗಳನ್ನು ಮೊದಲು ಸಣ್ಣ ತಟ್ಟೆಗಳಲ್ಲಿ ಬೆಳೆಸಬೇಕು. ಕಾಡು ಮೇಡಿನಲ್ಲಿ ಬೆಳೆದ ಗಿಡ ಅಥವಾ ವರ್ಷ ನರ್ಸರಿಯಲ್ಲಿ ಬೆಳೆಸಿದ ಮೊಳಕೆಯನ್ನು ಜಾಗರೂಕವಾಗಿ ಕೀಳಬೇಕು. ಲೇಯರ್ ಮಾಡಿ ಕಸಿ ಮಾಡಿ ಅಥವಾ ಕುಂಡಗಳಲ್ಲಿ ಬೀಜಗಳಿಂದ ಸಸಿ ಬೆಳೆಸಿಯೂ ಬೋನ್ಸಾಯ್‍ಗೆ ಉಪಯೋಗಿಸಬಹುದು.

ತಟ್ಟೆಗಳು[ಬದಲಾಯಿಸಿ]

ತಟ್ಟೆಗಳೆಂದರೆ ಆಳವಲ್ಲದ ವಿವಿಧಾಕಾರಾದ ಮತ್ತು ವಿಭಿನ್ನ ಅಳತೆಯ ಕುಂಡಗಳು. ತಟ್ಟೆಗಳು ಮಣ್ಣಿನಿಂದ ಮಾಡಲ್ಪಟ್ಟಿದ್ದು ಅವು ದುಂಡಗೆ, ಅಂಡಾಕಾರ, ಲಂಬಾತ್ಮಕ ಹೀಗೆ ಯಾವುದೇ ಆಕಾರವನ್ನು ಹೊಂದಿರಬಹುದು. ತಟ್ಟೆಯಲ್ಲಿನ ಆಳ ಮತ್ತು ಗಾತ್ರ ಅದರಲ್ಲಿ ಬೆಳೆಯುವ ಗಿಡವನ್ನು ಅವಲಂಬಿಸಿದೆ. ಬಸಿತಕ್ಕಾಗಿ ತಟ್ಟೆಯ ತಳದಲ್ಲಿ ಒಂದೆರಡು ರಂಧ್ರ ಹೊಂದಿರಬೇಕಾಗುತ್ತದೆ.

ಮಣ್ಣು[ಬದಲಾಯಿಸಿ]

ಚೆನ್ನಾಗಿ ಹದವಾಗಿರುವ ಸೋಸಿದ ಮಣ್ಣನ್ನು ಬೋನ್ಸಾಯ್‍ಗೆ ಉಪಯೋಗಿಸಬೇಕು. ಮಣ್ಣು ಉಸುಕು ಉಸುಕಾಗಿರದೆ ಜಿಗುಟಾಗಿರಲೂಬಾರದು. ಅತ್ತ ತೀರ ಆಮ್ಲೀಯವು ಇತ್ತ ಕ್ಷಾರೀಯವು ಆಗಿರಬಾರದು. ಚೆನ್ನಾಗಿ ಕೊಳೆತು ಹದವಾಗಿರುವ ಎಲೆ ಗೊಬ್ಬರವನ್ನು ಅದಕ್ಕೆ ಬೆರೆಸಬೇಕು.

ಮಣ್ಣನ್ನು ಮೊದಲು ಬಿಸಿಲಿನಲ್ಲಿ ಒಣಗಿಸಿ ಮೂರು ಬಗೆಯ ಜಾಲಿಯಿಂದ ಸೋಸಬೇಕು. ದೊಡ್ಡ, ಮಧ್ಯಮ ಮತ್ತು ಅತಿ ಸಣ್ಣ ಮಣ್ಣನ್ನು ವಿವಿದ ತಟ್ಟೆಯಲ್ಲಿ ಇಡಬೇಕು. ಗಿಡ ನೆಡುವಾಗ ದೊಡ್ಡ ಮಣ್ಣನ್ನು ಕುಂಡದ ಬುಡದಲ್ಲಿ ಹಾಕಿ ಮಧ್ಯಮ ಮಣ್ಣನ್ನು ತೆಳುವಾದ ಪದರಿನಂತೆ ಅದರ ಮೇಲೆ ಹರವಿ ಗಿಡ ನೆಡಬೇಕು.

ಗಿಡನೆಡುವುದು[ಬದಲಾಯಿಸಿ]

ತಟ್ಟೆಯನ್ನು ಮೊದಲು ಸಮತಟ್ಟಾದ ಜಾಗದಲ್ಲಿ ಇಡಬೇಕು. ತಟ್ಟೆಯ ಬುಡದಲ್ಲಿನ ರಂಧ್ರಗಳನ್ನು ಪ್ಲಾಸ್ಟಿಕ್‍ನಿಂದ ಮುಚ್ಚಬೇಕು. ದೊಡ್ಡ ಮಣ್ಣಿನ ಕಣಗಳನ್ನು ತಟ್ಟೆಯಲ್ಲಿ ಮೊದಲು ಹಾಕಿ ಅದರ ಮೇಲೆ ಸಣ್ಣ ಮಣ್ಣಿನ ಪದರವನ್ನು ಹಾಕಿ ಗಿಡ ನೆಡಬೇಕು. ಮಣ್ಣನ್ನು ಹದವಾಗಿ ದಿಮ್ಮಿಸಿ ಕೈನಿಂದ ಒತ್ತಬೇಕು. ಗಿಡ ನೆಡುವಾಗ ಅದು ತಟ್ಟೆಯ ಮಧ್ಯಭಾಗದಲ್ಲಿರುವಂತೆ ಎಚ್ಚರ ವಹಿಸಿಬೇಕು. ಇದಾದ ನಂತರ ಗಿಡಕ್ಕೆ ನೀರು ಕೊಡುವುದನ್ನು ಮರೆಯಬಾರದು.

ಗಿಡದ ಆರೈಕೆ[ಬದಲಾಯಿಸಿ]

ಯಾವುದೇ ಗಿಡವನ್ನು ಬೆಳೆಸಿದ ಮೇಲೆ ಜೋಪಾನ ಮಾಡುವುದು ಅತೀ ಮುಖ್ಯ. ಆ ಸಮಯದಲ್ಲಿ ಗಿಡವು ನೆಲೆಗೊಳ್ಳುವುದಲ್ಲದೇ ಬೇರು ಚಿಗುರಲು ಪ್ರಾರಂಭಿಸುತ್ತದೆ. ತಟ್ಟೆಯನ್ನು ಎರಡು ವಾರಗಳಾದರೂ ತಣ್ಣಗಿನ ಮತ್ತು ನೆರಳಿನ ಸ್ಥಾನಕ್ಕೆ ಬದಲಾಯಿಸಬೇಕು. ಗಿಡವನ್ನು ಒಮ್ಮೆಲೇ ಸೂರ್ಯನ ಶಾಖಕ್ಕೆ ತರಬಾರದು. ಮುಂಜಾನೆಯ ಹೊತ್ತಿನ ಬಿಸಿಲಿನಲ್ಲಿ ಎರಡು ಗಂಟೆಗಳಷ್ಟು ಕಾಲ ಇಡುತ್ತಾ ಬಂದು ಕ್ರಮೇಣ ಅದನ್ನು ಪ್ರಖರವಾದ ಬಿಸಿಲಿಗೆ ಒಡ್ಡಬೇಕು.ಯಾವುದೇ ಸಂದರ್ಭದಲ್ಲಿ ಮಣ್ಣನ್ನು ಪೂರ್ತಿ ಒಣಗಲು ಬಿಡಬಾರದು. ಹಿಮದಿಂದಲೂ ಕೂಡ ಗಿಡವನ್ನು ರಕ್ಷಿಸಬೇಕು.

ಬೋನ್ಸಾಯ್ ಸಣ್ಣತಟ್ಟೆಗಳ ಮಣ್ಣನ್ನೇ ಪೂರ್ತಿಯಾಗಿ ಅವಲಂಬಿಸುವುದರಿಂದ ನೀರುಣಿಸುವುದು ಅತೀ ಮುಖ್ಯವಾಗಿದೆ. ಗಿಡವನ್ನು ಯಾವುದೇ ಸಂದರ್ಭದಲ್ಲಿ ಒಣಗಲು ಬಿಡಬಾರದು. ಸಾಮಾನ್ಯವಾಗಿ ಮಣ್ಣು ಸ್ವಲ್ಪ ಒಣಗಿದೆ ಎನ್ನಿಸಿದಾಗ ನೀರು ಹಾಕಬೇಕು. ಹಾಗೆಯೇ ಇದಕ್ಕೆ ಗೊಬ್ಬರದ ಅವಶ್ಯಕತೆಯೂ ಬಹಳಷ್ಟಿದೆ. ಮೂರು ಮುಖ್ಯ ಘಟಕಾಂಶಗಳಾದ ಸಾರಜನಕ, ಫಾಸ್ಪೋರಿಕ್ ಆಮ್ಲ ಮತ್ತು ಪೊಟ್ಯಾಶ್ ನ್ನು ಕ್ರಮವಾಗಿ 50:30:20 ಅನುಪಾತದಲ್ಲಿ ಬೆರೆಸಬೇಕು. ಸಾಸಿವೆ ಹಿಂಡಿ ಹಾಗೂ ಎಲೆಗೊಬ್ಬರಗಳು ಬೊನ್ಸಾಯ್‍ಗೆ ಅತ್ಯುತ್ತಮ ಗೊಬ್ಬರ. ಇದನ್ನು ಘನ ಹಾಗೂ ದ್ರವ ಎರಡು ರೂಪದಲ್ಲೂ ಉಪಯೋಗಿಸಬಹುದು.

ಸಮರುವುದು ಮತ್ತು ಚಿವುಟುವುದು[ಬದಲಾಯಿಸಿ]

ಬೆಳೆಸುವ ಯಾವುದೇ ಗಿಡಕ್ಕೆ ಸೂಕ್ತವಾದ ಆಕಾರ ಕೊಟ್ಟರಷ್ಟೇ ಅದು ಅಂದವಾಗುವುದು. ಮರವನ್ನಾಗಲಿ, ಪೊದೆ ಗಿಡವಾಗಲಿ, ಸ್ವೇಚ್ಛೆಯಾಗಿ ಬೆಳೆಯಲು ಬಿಡದೆ ಸೂಕ್ತವಾದ ಅವುಗಳ ಆಕಾರವು ಅಂದವಾಗಲು ಅನುಕೂಲಕರವಾಗುವಂತೆ ಅನಾವಶ್ಯಕ ಭಾಗಗಳನ್ನು ಕತ್ತರಿಸುವುದಕ್ಕೆ ಸಮರುವುದು ಎನ್ನುತ್ತಾರೆ. ಗಿಡವು ಆಕರ್ಷಕವಾಗಿ ಬೆಳೆಯತೊಡಗಿದರೆ ಚಿವುಟುವುದು ಬೇಡ. ಒಂದು ವೇಳೆ ಗಿಡವು ನಿರ್ಧಿಷ್ಟ ಋತುವಿನಲ್ಲಿ ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದರೆ ಅದರ ತುದಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಚಿವುಟಬೇಕು. ಸಮರುವಾಗ ಮಣ್ಣು ಅಥವಾ ಬೇರಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು. ಬೋನ್ಸಾಯ್ ಅಂದವಾಗಿ ಕಾಣಲು ಕಾಂಡ ಮತ್ತು ಕವಲುಗಳನ್ನು ಸರಿಹೊಂದಿಸುವುದು ಮುಖ್ಯವಾಗಿದೆ. ಗಿಡದ ಆಕಾರ ಮತ್ತು ನೈಸರ್ಗಿಕ ಅಭಿವೃದ್ಧಿಯನ್ನು ಕಾಣಸಿಗಲು ಇದರಿಂದ ಸಹಾಯಕವಾಗುತ್ತದೆ.

ನಾಟಿ ಹಾಕುವುದು[ಬದಲಾಯಿಸಿ]

ತಟ್ಟೆಯಲ್ಲಿನ ಮಣ್ಣು ಪೂರ್ತಿ ನಿಷ್ಕಣವಾದಾಗ ಅಥವಾ ತಟ್ಟೆ ಪೂರ್ತಿ ಬೇರುಗಳಿಂದ ತುಂಬಿದಾಗ ಬೋನ್ಸಾಯ್ ನ್ನು ಸ್ಥಳಾಂತರಿಸಬೇಕು. ಗಿಡವು ಬೆಳೆವಣಿಗೆಯ ಹಂತದಲ್ಲಿದ್ದಾಗ ವರ್ಷಕ್ಕೊಂದು ಬಾರಿ ಅಥವಾ ಪೂರ್ತಿ ಬೆಳೆದಾದ ಮೇಲೆ ಎರಡು ಮೂರು ವರ್ಷಗಳಿಗೊಮ್ಮೆ ಸ್ಥಳಾಂತರಿಸಬೇಕು. ನಾಟಿ ಹಾಕುವಾಗ ಮೊದಲಿನ ಮಣ್ಣನ್ನು ಬದಲಾಯಿಸಬೇಕು. ಶೇಕಡಾ 60 ರಷ್ಟು ಕೆಂಪು ಮಣ್ಣು, ಶೇಕಡಾ 30ರಷ್ಟು ಕಪ್ಪು ಮಣ್ಣು ಮತ್ತು ಶೇ 10ರಷ್ಟು ಕೊಳೆತ ಎಲೆಗಳ ಮಿಶ್ರಣ ಬೆರೆಸಿ ತಯಾರಿಸಿದ ಮಣ್ಣನ್ನು ಉಪಯೋಗಿಸಬೇಕು.

ರೋಗ ಮತ್ತು ಕೀಟಗಳಿಂದ ರಕ್ಷಣೆ[ಬದಲಾಯಿಸಿ]

ರೋಗರುಜಿನ ಹಾಗೂ ಕೀಟಗಳು ಇತರೆ ಗಿಡಗಳಂತೆ ಬೋನ್ಸಾಯ್‍ಗೂ ಸಾಮಾನ್ಯ. ಶಿಲಿಂಧ್ರ ರೋಗ ಬಂದರೆ ಸಾಧ್ಯವಾದಷ್ಟು ಬೇಗ ಆ ಭಾಗವನ್ನು ಕಿತ್ತೆಸೆಯಬೇಕು. ಕೀಟನಾಶಕಗಳನ್ನು ನಿಯಮಿತವಾಗಿ ಸಿಂಪಡಿಸುತ್ತಿರಬೇಕು.

ಹೀಗೆ ಎಚ್ಚರದ ಕ್ರಮಗಳಿಂದ ಬೋನ್ಸಾಯ್ ಬೆಳೆಸಬಹುದು.[೧]

ಉಲ್ಲೇಖಗಳು[ಬದಲಾಯಿಸಿ]

  1. ಮನೀಷಾ ವಾರ್ಷಿಕ ಸಂಚಿಕೆ

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: