ಬೆಂಗಳೂರು ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bangalore Fort
ಬೆಂಗಳೂರು ಇದರ ಭಾಗ
ಕರ್ನಾಟಕ, ಭಾರತ
Bangalore Fort
Plan of Bangalore Fort, 1792
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Bangalore" does not exist.
ನಿರ್ದೇಶಾಂಕಗಳು12°57′46″N 77°34′33″E / 12.962875°N 77.575956°E / 12.962875; 77.575956
ಶೈಲಿFort
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಭಾರತದ ಪುರಾತತ್ವ ಸಮೀಕ್ಷೆ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಚನ್ನಾಗಿದೆ
ಸ್ಥಳದ ಇತಿಹಾಸ
ಕಟ್ಟಿದ್ದು1537
ಕಟ್ಟಿದವರು Kempegowda I
ಸಾಮಗ್ರಿಗಳುಆರಂಭದಲ್ಲಿ (1537 ರಲ್ಲಿ) ಮಣ್ಣಿನಿಂದ ನಿರ್ಮಿಸಲಾಯಿತು, ನಂತರ 1751 ರಲ್ಲಿ ಗ್ರಾನೈಟ್ ಕಲಿನಿಂದ ನವೀಕರಿಸಲಾಯಿತು

ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ಬೆ೦ಗಳೂರಿನಲ್ಲಿ ೧೫೩೭ರಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ನಂತರ ೧೭೬೧ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು.

ಬೆಂಗಳೂರು ಕೋಟೆ-ಪೇಟೆ ನಿರ್ಮಾಣ[ಬದಲಾಯಿಸಿ]

ಹಿರಿಯ ಕೆಂಪೇಗೌಡ ಶಾಲಿವಾಹನ ಶಕ ವರ್ಷ ೧೪೫೯ರ ಹೇವಿಳಂಬಿ ಸಂವತ್ಸರದ ಮಾಘ ಶುದ್ಧ ತ್ರಯೋದಶಿ ಶುಕ್ರವಾರದಂದು (ಪ್ರ.ವ.೧೪-೧-೧೫೩೮) ಬೆಂಗಳೂರು ಕೋಟೆ ಮತ್ತು ಪೇಟೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದನು. ಅದು ನಾಲ್ಕು ಮೈಲಿ ಸುತ್ತಳತೆಯ, ನಾಲ್ಕು ಬತೇರಿಯ, ಒಂಬತ್ತು (ನಾಲ್ಕು ಪ್ರಧಾನ ಮತ್ತು ಐದು ಸಾಮಾನ್ಯ) ದ್ವಾರಗಳ ಅಂಡಾಕಾರದ ಕೋಟೆ. ಹದಮಾಡಿದ ಮಣ್ಣಿನ ಹೆಂಟೆಗಳಿಂದ ನಿರ್ಮಿಸಿದ್ದು. ಒಳ ಹಾಗೂ ಹೊರಭಾಗದಲ್ಲಿ ದಿಂಡುಗಲ್ಲಿನ ಒತ್ತಾಸೆ. ಆ ಕಾಲಕ್ಕೆ ಅದು ಬಯಲು ಸೀಮೆಯ ದೊಡ್ಡ ಕೋಟೆ. ಅರಮನೆ ಆವರಣಕ್ಕೆ ಹೊಂದಿಕೊಂಡಂತೆ ಚಿಕ್ಕಪೇಟೆ ಮತ್ತು ದೊಡ್ಡಪೇಟೆ ಎಂಬ ಎರಡು ಪೇಟೆಗಳು. ಈಗಿನ ಚಿಕ್ಕಪೇಟೆ ವೃತ್ತದ ಬಲಿ ಅರಮನೆ. ಅದರ ಸುತ್ತಮುತ್ತ ಭೈರವೇಶ್ವರ, ಶ್ರೀ ವೆಂಕಟರಮಣ, ಸೋಮೇಶ್ವರ, ಶ್ರೀ ರಂಗನಾಥ, ಕಾಳಾಂಬಾ, ಕೋದಂಡಸ್ವಾಮಿ ದೇವಾಲಯಗಳು. ರಾಜ ಮನೆತನದ ಮನೆ, ಅಗತ್ಯ ಸೈನಿಕರ ಮನೆ, ಅಂಗಡಿ ಮುಂಗಟ್ಟು ಪೇಟೆ ಮೊದಲಾದವು. ಬೆಂಗಳೂರು

ಕೋಟೆಯ ಒಳಗಿನ ದೇವಾಲಯಗಳು ಹೀಗಿವೆ[ಬದಲಾಯಿಸಿ]

ಧರ್ಮರಾಯ ಸ್ವಾಮಿ, ಕಾಳಮ್ಮ, ಆಂಜನೇಯಸ್ವಾಮಿ, ಚೌಡೇಶ್ವರಿ, ವೆಂಕಟೇಶ್ವರ (ವೆಂಕಟರಮಣಸ್ವಾಮಿ), ನರಸಿಂಹಸ್ವಾಮಿ, ಚೆನ್ನಿಗರಾಯಸ್ವಾಮಿ, ಕೇಶವಸ್ವಾಮಿ, ರಂಗನಾಥ, ಶ್ರೀಕೃಷ್ಣ, ಕಾಶಿವಿಶ್ವೇಶ್ವರ, ಬಸವೇಶ್ವರ.

ಕೋಟೆಯ ಒಂಬತ್ತು ಬಾಗಿಲುಗಳು[ಬದಲಾಯಿಸಿ]

ಹಿರಿಯ ಕೆಂಪೇಗೌಡ ಕಟ್ಟಿಸಿದ ಕೋಟೆಯ ಒಂಬತ್ತು ಬಾಗಿಲುಗಳು ಹೀಗಿದ್ದವು: ೧) ಪೂರ್ವಕ್ಕೆ ಹಲಸೂರು ಹೆಬ್ಬಾಗಿಲು. ೨) ಉತ್ತರಕ್ಕೆ ಯಶವಂತಪುರ ಉಪದ್ವಾರ (ದೆಹಲಿದ್ವಾರ, ಈಗಿನ ಉಪ್ಪಾರ ಪೇಟೆ ಪೊಲೀಸ್ ಠಾಣೆ). ೩) ಪಶ್ಚಿಮಕ್ಕೆ ಸೊಂಡೆಕೊಪ್ಪ ಹೆಬ್ಬಾಗಿಲು (ಈಗಿನ ರೈಲ್ವೆ ಮೇಲುಸೇತುವೆ ಬಳಿ). ೪) ಕೆಂಗೇರಿ ಉಪದ್ವಾರ (ಮೈಸೂರು ದ್ವಾರ). ೫) ಕಾನಕಾನಹಳ್ಳಿ ಉಪದ್ವಾರ (ಈಗಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಬಳಿ). ೬) ದಕ್ಷಿಣಕ್ಕೆ ಆನೇಕಲ್ ಹಿಬ್ಬಾಗಿಲು (ಈಗಿನ ಕಲಾಸಿಪಾಳ್ಯ ಪೊಲೀಸ್ ಠಾಣೆ ಹಿಂಭಾಗ). ೭) ಯಲಹಂಕ ಹೆಬ್ಬಾಗಿಲು. ೮) ಸಜ್ಜಾಪುರ ಉಪದ್ವಾರ ೯) ವರ್ತೂರು ಉಪದ್ವಾರ. ಕೋಟೆಯ ಒಳಗಡೆ, ಪೂರ್ವ ಪಶ್ಚಿಮ ಹಾಗೂ ಉತ್ತರ ದಕ್ಷಿಣಕ್ಕೆ ಹರಿದ ನಾಲ್ಕು ಮುಖ್ಯ ರಸ್ತೆಗಳು. ಎರಡೂ ಕೂಡುವ ಸ್ಥಳದಲ್ಲಿ (ಚಿಕ್ಕಪೇಟೆ ವೃತ್ತ) ಅರಮನೆ. ಒಳಹೊರಭಾಗದಲ್ಲಿ ಮುಖ್ಯ ಪೇಟೆಗಳು. ಉದಾಹರಣೆಗೆ: ಒಕ್ಕಲಿಗರಪೇಟೆ,. ಕುರುಬರಪೇಟೆ, ಮನವಾರ್ತೆಪೇಟೆ, ತಿಗಳರಪೇಟೆ, ಗಾಣಿಗರ ಪೇಟೆ, ಕುಂಬಾರಪೇಟೆ, ನಗರ್ತರಪೇಟೆ, ಸುಣ್ಣಕಲ್ ಪೇಟೆ, ಬ್ರಾಹ್ಮಣರಪೇಟೆ, ಮಂಡಿಪೇಟೆ, ದೊಡ್ಡಪೇಟೆ, ಬಳ್ಳಾಪುರಪೇಟೆ (ಮುತ್ಯಾಲಪೇಟೆ), ಸಂತೆಪೇಟೆ, ಚಿಕ್ಕಪೇಟೆ, ಬಳೇಪೇಟೆ, ಅರಳೆಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಹಳೆತರಗುಪೇಟೆ, ಹೊಸತರಗುಪೇಟೆ, ಇತ್ಯಾದಿ. ಕೆಂಪೇಗೌಡನ ಕಾಲದಲ್ಲಿ ಎಲ್ಲಾ ಜಾತಿಯ ಜನರ ವಸತಿಗೂ ಪ್ರತ್ಯೇಕ ಪೇಟೆಗಳಿದ್ದವು. ಈಗಿನ ಟಿ.ಆರ್.ಮಿಲ್ಲಿನ ಮುಂಭಾಗ (ಚಾಮರಾಜಪೇಟೆ)ವನ್ನು ಗೌಡರಪೇಟೆ ಎಂದು ಕರೆಯುತ್ತಿದ್ದರು. ಈಗ ಹೆಸರು ಬದಲಾಗಿದೆ. ಗೌಡರ ಪೇಟೆಗೆ ಹೊಂದಿಕೊಂಡಂತೆ ಕುರುಬರಪೇಟೆ ಇತ್ತು. ಈಗ ಅದಿಲ್ಲ. ಕೆಂಪೇಗೌಡನ ಕಾಲದಲ್ಲಿ ದೊಡ್ಡಪೇಟೆ ಇತ್ತು. ಈಗ ಅದು ಅವಿನ್ಯೂ ರಸ್ತೆಯಾಗಿದೆ. ಹಳೆಯ ಹೆಸರುಗಳನ್ನು ಉಳಿಸಿಕೊಳ್ಳದೆ ನಮ್ಮ ಜನ ಚರಿತ್ರೆಯನ್ನು ಹಾಳು ಮಾಡಿದ್ದಾರೆ. ಕೆಂಪೇಗೌಡ ಕಲ್ಪಿಸಿದ ಹಲವು ಪೇಟೆಗಳು ನಿರ್ಧಿಷ್ಟ ಜಾತಿ ಪಂಗಡಗಳಿಗೆ ಸಂಬಂಧಿಸಿದವಾಗಿದ್ದವು. ವೃತ್ತಿ ಹಿನ್ನೆಲೆಯ ಆ ವ್ಯವಸ್ಥೆ ಕೆಂಪೇಗೌಡನ ಆಡಳಿತ ಕಾಲಕ್ಕೆ ಸರಿಯಾಗಿಯೇ ಇತ್ತು. ಆಯಾ ಪಂಗಡಕ್ಕೆ ಸಂಬಂಧಿಸಿದ ದೇವಾಲಯಗಳು ಆಯಾ ಪ್ರದೇಶದಲ್ಲೇ ಇವೆ. ಆಗ ಅವು ಧರ್ಮಸಮನ್ವಯಕ್ಕೆ, ಜಾತಿ ಸಮನ್ವಯಕ್ಕೆ ಹೆಸರಾಗಿದ್ದವು. ಯಾವ ಘರ್ಷಣೆಗಳೂ ಇರುತ್ತಿರಲಿಲ್ಲ. ಎಲ್ಲಾ ವೃತ್ತಿಗಳಿಗೂ ವೃತ್ತಿಗಳವರಿಗೂ ಸಮಾನ ಗೌರವ, ಸಮಾನ ಸ್ಥಾನಮಾನ ಇದ್ದ ಕಾಲ ಅದು. ಹಿರಿಯ ಕೆಂಪೇಗೌಡ ಹೆಸರಿಸಿದ ಪೇಟೆಗಳಲ್ಲಿ ಕೆಲವು ವೃತ್ತಿಗಳಿಗೆ ಸಂಬಂಧಿಸಿದವು; ಮತ್ತೆ ಕೆಲವು ಜಾತಿಗೆ ಸಂಬಂಧಿಸಿದವು. ಉದಾಹರಣೆಗೆ: ಬಳೇಪೇಟೆ (ಬಣಜಿಗರ ಪೇಟೆ)-ಹರಿಶಿನ ಕುಂಕುಮ ಬಳೆ ಮೊದಲಾದ ಮಂಗಳ ಪದಾರ್ಥಗಳನ್ನು ಮಾರುವ ಸ್ಥಳ. ಅರಳೇ ಪೇಟೆ (ನೇಕಾರರ ಬೀದಿ)-ಹತ್ತಿ ರೇಷ್ಮೆ, ಬಟ್ಟೆ, ನೂಲು ವ್ಯಾಪಾರದ ಸ್ಥಳ. ನಗರ್ತರ ಪೇಟೆ-ಚಿನ್ನ, ಬೆಳ್ಳಿ ವ್ಯಾಪಾರಗಾರರ ಸ್ಥಳ. ಮುತ್ಯಾಲ ಪೇಟೆ (ಮುತ್ತಿನ ಪೇಟೆ, ಕೋಮಟಿ ಪೇಟೆ)-ಮುತ್ತು, ರತ್ನ ವ್ಯಾಪಾರದ ಸ್ಥಳ. ಅಕ್ಕಿಪೇಟೆ-ಅಕ್ಕಿಮಂಡಿ, ಅಕ್ಕಿ ದೊರೆಯುವ ಸ್ಥಳ. ರಾಗಿಪೇಟೆ-ರಾಗಿ ಮಂಡಿ. ತಿಗಳರ ಪೇಟೆ-ಹೂ, ಹಣ್ಣು, ತರಕಾರಿ ಮೊದಲಾದವುಗಳ ಮಾರಾಟಗಾರರ ಸ್ಥಳ ಸ್ವಕುಲಸಾಲಿ ಪೇಟೆ-ಮರಾಠಿ ನೇಯ್ಗೆಯವರ ಸ್ಥಳ. ಉಪ್ಪಾರಪೇಟೆ-ಉಪ್ಪು ತಯಾರಿಸಿ ಮಾರುವವರ ಪೇಟೆ. ಮಾಮೂಲು ಪೇಟೆ-ಎಲ್ಲಾ ಅಗತ್ಯ ವಸ್ತುಗಳು ಒಂದೇ ಕಡೆ ದೊರೆಯುವ ಪೇಟೆ. ಮನೆವಾರ್ತೆ ಪೇಟೆ-ಸಂಸಾರಿಗಳ ವಾಸಸ್ಥಳ. ದೊಡ್ಡಪೇಟೆ-ಸಗಟು ವ್ಯಾಪಾರ ಕೇಂದ್ರ. ಚಿಕ್ಕಪೇಟೆ-ಚಿಲ್ಲರೆ ವ್ಯಾಪಾರ ಕೇಂದ್ರ. ಮಾರವಾಡಿಪೇಟೆ-ಮಾರವಾಡಿ ಜನರ ವಾಸ ಮತ್ತು ವ್ಯವಹಾರದ ಸ್ಥಳ. ತರಗುಪೇಟೆ (ಹಳೆ ತರಗು ಪೇಟೆ, ಹೊಸ ತರಗು ಪೇಟೆ)-ಬಾಳೆ ಎಲೆ, ಊಟದ ಎಲೆ, ದೊನ್ನೆ ಮಾರಾಟದ ಸ್ಥಳ. ಪಟ್ನೂಲು ಪೇಟೆ (ಹಳೆ ಪಟ್ಟೆನೂಲು ಪೇಟೆ, ಹೊಸ ಪಟ್ಟೆನೂಲು ಪೇಟೆ)- ರೇಷ್ಮೆದಾರದ ಮಾರಾಟ ಕೇಂದ್ರ. ಹುರಿಯೋ ಪೇಟೆ-ಕಡಲೆಪುರಿ, ಕಡಲೆ ಮಾರಾಟ ಕೇಂದ್ರ, ಮರಾಠಿ ದರ್ಜಿ ಪೇಟೆ, ಸೌರಾಷ್ಟ್ರ ದರ್ಜಿ ಪೇಟೆ. ಸುಣ್ಣಕಲ್ಲು ಪೇಟೆ-ಸುಣ್ಣ, ಸುಣ್ಣಕಲ್ಲು ಮಾರಾಟದ ಸ್ಥಳ. ಹೊರಪೇಟೆ-ಬೆಂಗಳೂರು ಕೋಟೆಯ ಹೊರಗಡೆಯಿದ್ದ ಪೇಟೆ.

ಕೆಲವು ಪೇಟೆಗಳು ವಾಸಕ್ಕೆ ಮೀಸಲಾಗಿದ್ದವು. ಉದಾಹರಣೆಗೆ: ಗೊಲ್ಲರಪೇಟೆ, ಕುಂಬಾರಪೇಟೆ, ಗಾಣಿಗರ ಪೇಟೆ, ಹೂವಾಡಿಗರ ಪೇಟೆ, ಮೇದರ ಪೇಟೆ, ಸಣ್ಣ ಕಂಬಳಿ ಕುರುಬರ ಪೇಟೆ, ಕುಂಚಿಟಿಗರ ಪೇಟೆ, ಕಲ್ಲಾರ ಪೇಟೆ, ತಿಗಳರ ಪೇಟೆ, ತೆಲುಗು ಪೇಟೆ, ಖತ್ರಿ ಪೇಟೆ, ಮಲ್ದಾರ ಪೇಟೆ, ಗುಡುಮಯ್ಯ ಪೇಟೆ, ಬಳ್ಳಾಪುರ ಪೇಟೆ, ಜೋರಿಪೇಟೆ. ಬೆಂಗಳೂರು ಕೋಟೆಯೊಳಗಿನ ಅರಮನೆಯಲ್ಲಿ ಒಡ್ಡೋಲಗದ ಚಾವಡಿಯಿತ್ತು. ಅಲ್ಲೇ ಕೆಂಪೇಗೌಡನ ದರ್ಬಾರು ನಡೆಯುತ್ತಿತ್ತು. ಅಲ್ಲಿ ಆಗಾಗ ನ್ಯಾಯ ತೀರ್ಮಾನದ ಸಭೆ ಸೇರುತ್ತಿತ್ತು. ಕೋಟೆಯ ಒಳಗೆ ಉನ್ನತ ಅಧಿಕಾರಿಗಳ ಅಧೀನದಲಿ ಬೊಕ್ಕಸ, ಠಾಣೆ, ಗೋವು, ಸುಂಕದ ಚಾವಡಿಗಳಿದ್ದವು. ವಿಶೇಷ ನ್ಯಾಯ ವಿಚಾರಣೆಗೆ, ಜನರ ಕುಂದುಕೊರತೆ ಪರಿಶೀಲನೆಗಳಿಗೆ, ವಿಶೇಷ ಮಂತ್ರಾಲೋಚನೆಗೆ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿದ್ದ ’ಕೆಂಪೇಗೌಡ ಹಜಾರ’ ಬಳಕೆಯಾಗುತ್ತಿತ್ತು. ಗೋ ರಕ್ಷಣೆ, ಸ್ತ್ರೀ ರಕ್ಷಣೆ, ಬ್ರಾಹ್ಮಣ ರಕ್ಷಣೆ, ಶಿಷ್ಟ ರಕ್ಷಣೆಗೆ ಹೆಚ್ಚು ಗಮನ ಕೊಡಲಾಗುತ್ತಿತ್ತು. ಬಲಿಷ್ಠ ಯುವಕರನ್ನು ರಾಜ್ಯ ರಕ್ಷಣೆ, ಕೋಟೆ ರಕ್ಷಣೆ, ಯುದ್ಧಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಕೆಂಪೇಗೌಡನದು ಅಚ್ಚುಕಟ್ಟಾದ ಆಡಳಿತ ವ್ಯವಸ್ಥೆ.

ಕೆಂಪೇಗೌಡ ಕೋಟೆಯ ಒಳಗಿನ ಬೀದಿಗಳಿಗೆ ಆಕರ್ಶಕವಾದ, ದೈವಭಕ್ತಿಗೆ ಇಂಬಾದ ಹೆಸರುಗಳನ್ನು ಇಟ್ಟಿದ್ದನು. ಉದಾಹರಣೆಗೆ: ಸೂರ್ಯ ಬೀದಿ (ಈಗಿನ ಅವೆನ್ಯೂ ರಸ್ತೆ) ಮತ್ತು ಚಂದ್ರ ಬೀದಿ(ಈಗಿನ ಬಿವಿಕೆ ಅಯ್ಯಂಗಾರ್ ರಸ್ತೆ). ಕೆಂಪೇಗೌಡ ನಿರ್ಮಿಸಿದ ನಾಲ್ಕು ಬತೇರಿ, ಒಂಬತ್ತು ದ್ವಾರಗಳ ಕೋಟೆ ರಕ್ಷಣಾತ್ಮಕವಾದದ್ದು. ವ್ಯಾಪಾರಿಗಳಿಗೆ, ವಿವಿಧ ಕಸಬುದಾರರಿಗೆ, ನಗರ ರಾಜಧಾನಿ ಆಡಳಿತಕ್ಕೆ, ನಗರವಾಸಿಗಳಿಗೆ ರಕ್ಷಣೆ ನೀಡುವುದೇ ಅದರ ನಿರ್ಮಾಣದ ಮೂಲೋದ್ದೇಶ. ಅಂದಿನ ವ್ಯಾಪಾರಿಗಳ, ವ್ಯವಹಾರಿಕ ಮಧ್ಯವರ್ತಿಗಳ ಕೇಂದ್ರವಾಗಿತ್ತು. ವಿವಿಧ ನಗರಗಳ ಸಂಪರ್ಕ ಸಾಧನವಾಗಿತ್ತು.

ಸೊಸೆ ಲಕ್ಷ್ಮೀದೇವಿ[ಬದಲಾಯಿಸಿ]

ಯಲಹಂಕ ನಾಡಪ್ರಭುಗಳಲ್ಲಿ ಅತ್ಯಂತ ಜನಪ್ರಿಯನಾದ ಹಿರಿಯ ಕೆಂಪೇಗೌಡನ ಬಗೆಗೆ ಅನೇಕ ಐತಹ್ಯಗಳು ಹುಟ್ಟಿಕೊಂಡಿವೆ. ಬೆಂಗಳೂರು ಕೋಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೃದಯವಿದ್ರಾವಕ ಕಟ್ಟುಕಥೆಯೊಂದು ಪ್ರಸಿದ್ಧವಾಗಿದೆ. ಅದು ಹೀಗಿದೆ:ಹಿರಿಯ ಕೆಂಪೇಗೌಡ ಬೆಂಗಳೂರು ಕೋಟೆಯನ್ನು ಕಟ್ಟಿಸುವಾಗ, ಕೋಟೆಯ ಮುಖ್ಯಬಾಗಿಲು (ಆನೆಬಾಗಿಲು) ನಿಲ್ಲುತ್ತಿರಲಿಲ್ಲ. ಬೆಳಗ್ಗೆಯಿಂದ ಕಟ್ಟಿದ್ದು ಸಂಜೆಗೆ ಬಿದ್ದುಹೋಗುತ್ತಿತ್ತು. ಮಾನವ ರಕ್ತಪಿಪಾಸಿ ಮಹಾಭೂತ ಹೊಕ್ಕಿದ್ದು ಕಾರಣವೆಂದು ಜ್ಯೋತಿಷಿಗಳ ನಂಬಿಕೆ. ಗರ್ಭಿಣಿ ಸ್ತ್ರೀಯನ್ನು ಬಲಿಕೊಟ್ಟರೆ ಬಾಗಿಲು ನಿಲ್ಲುವುದೆಂದು ಶಾಸ್ತ್ರ ಕೇಳಿಬಂತು. ನಾಡಪ್ರಭು ಕೆಂಪೇಗೌಡನಿಗೆ ಚಿಂತೆಯಾಯಿತು. ಇದನ್ನು ಅರಿತ ಕೆಂಪೇಗೌಡನ ಸೊಸೆ ಲಕ್ಷ್ಮೀದೇವಿ ಸ್ವಯಿಚ್ಛೆಯಿಂದ, ರಾಜ್ಯದ ಸಲುವಾಗಿ ಕೋಟೆಯ ಬಾಗಿಲ ಬಳಿ ಆತ್ಮಾರ್ಪಣೆ ಮಾಡಿಕೊಂಡಳು. ಕೋರಮಂಗಲದಲ್ಲಿ ಅವಳ ಸಮಾಧಿಯನ್ನು ಮಾಡಲಾಯಿತು. ಆಕೆ ಕುಲದೇವತೆಯಂತೆ ಪೂಜೆಗೆ ಅರ್ಹಳಾದಳು. ಈ ಪ್ರಸಂಗ ಸತ್ಯಕ್ಕೆ ದೂರವಾಗಿದೆ. ಯಾಕೆಂದರೆ ಬೆಂಗಳೂರು ಕೋಟೆ ನಿರ್ಮಾಣವಾಗುವ ಕಾಲಕ್ಕೆ (೧೫೩೮) ಹಿರಿಯ ಕೆಂಪೇಗೌಡನಿಗೆ ಮದುವೆ ವಯಸ್ಸಿನ ಮಕ್ಕಳಿರಲಿಲ್ಲ. ಆಗ ಅವನ ಮೊದಲ ಮಗನ ವಯಸ್ಸು ಕೇವಲ ಆರು ವರ್ಷ. ಅಂಥ ಬಾಲಕನಿಗೆ ಮದುವೆ ಮಾಡಲು ಸಾಧ್ಯವೇ? ಅವನ ಹೆಂಡತಿ ಗರ್ಭಿಣಿಯಾಗಲು ಸಾಧ್ಯವೇ? ಕೆಂಪೇಗೌಡನ ಕಾಲದಲ್ಲಿ ಅರಮನೆಗೆ ಸಂಬಂಧಿಸಿದ ಸ್ಮಶಾನ ಇದ್ದದ್ದು ಈಗಿನ ಚಾಮರಾಜಪೇಟೆ ಸಂತಮೇರಿ ಆಸ್ಪತ್ರೆ ಹಾಗೂ ಸೀತಾಪತಿ ಅಗ್ರಹಾರದ ನಡುವೆ. ಸುಮಾರು ನಾಲ್ಕು ಎಕರೆ ಪ್ರದೇಶದ್ದು. ಬೆಂಗಳೂರು ನಗರದ ಸಾರ್ವಜನಿಕರಿಗಾಗಿ ಈಗಿನ ಶಂಕರಮಠದ ಪಕ್ಕದಲ್ಲಿ, ಎಂಟು ಎಕರೆ ವಿಸ್ತೀರ್ಣದಲ್ಲಿ ಸ್ಮಶಾನವಿತ್ತು. ಈ ಸ್ಥಳಗಳಲ್ಲಿ ಲಕ್ಷ್ಮೀದೇವಿ ಸಂಸ್ಕಾರ ಮಾಡದೆ ಕೋರಮಂಗಲದಲ್ಲಿ ಏಕೆ ಸಮಾಧಿ ಮಾಡಲಾಯಿತು? ಅದು ಅವಳ ತಂದೆಯ ಊರಾಗಿತ್ತು ಎಂದು ಸಮಜಾಯಿಷಿ ಹೇಳಬಹುದು. ಹೆಣ್ಣು ಲಗ್ನವಾದ ಮೇಲೆ ಗಂಡನ ಮನೆಯ ಲೆಕ್ಕಕ್ಕೆ ಬರುತ್ತಾಳೆಯೇ ಹೊರತು, ತಂದೆಯ ಮನೆಗಲ್ಲ. ಒಟ್ಟಿನಲ್ಲಿ ಕೋಟೆಗೆ rajan ಬಲಿಯಾದವಳು ನಾಡಪ್ರಭು ಕೆಂಪೇಗೌಡನ ಸ್ವಂತ ಸೊಸೆಯಂತೂ ಅಲ್ಲ. ಸಂದರ್ಭ, ಸ್ಥಳ ಯಾವುದೇ ಆಗಲಿ, ವ್ಯಕ್ತಿ ಯಾರೇ ಆಗಲಿ ಆತ್ಮಾಹುತಿಯಾದ ಕಡೆ ಸ್ಮಾರಕವಾದರೆ ಸಾಂಕೇತಿಕವಾಗಿರುತ್ತದೆ; ಸಂಸ್ಮರಣೆಗೆ ಅರ್ಹವಾಗಿರುತ್ತದೆ. ಅದು ಬಿಟ್ಟು ಬೇರೆ ಜಾಗದಲ್ಲಾದರೆ ಅರ್ಥಹೀನವಾಗುತ್ತದೆ. ಭಾರತದಲ್ಲಿ ಕೊಲೆಯಾದ ಗಾಂಧೀಜಿಯ ಸ್ಮಾರಕ ಅಮೆರಿಕದಲ್ಲಿದೆ ಎಂದರೆ ನಂಬಬೇಕೆ? ಕೋಟೆಯ ಹೆಬ್ಬಾಗಿಲು ನಿಲ್ಲುದುದಕ್ಕೆ ಗರ್ಭಿಣಿ ಸ್ತ್ರೀಯ ಬಲಿಕೊಡಬೇಕೆಂಬ ಕಥೆಗೆ ಬೇರೆಯಾದ ಬಾಯ್ದೆರೆ ಹೇಳಿಕೆಯೊಂದು ರೂಢಿಯಲ್ಲಿದೆ. ಕೆಂಪೇಗೌಡನ ಹಿತಶತ್ರುಗಳು, ಅವನ ಮನಸ್ಸನ್ನು ಜರ್ಝರಿತಗೊಳಿಸಬೇಕೆಂದು, ಕುತಂತ್ರದಿಂದ ಜ್ಯೋತಿಷಿಗಳಿಗೆ ಆಮಿಷವೊಡ್ಡಿ, ಗರ್ಭಿಣಿ ಬಲಿಕೊಡಬೇಕೆಂದು ಸುಳ್ಳು ಸುದ್ದಿ ಹರಡಿಸಿದರಂತೆ. ಕೋಟೆ ಬಾಗಿಲು ನಿಲ್ಲದಿದ್ದರೂ ಪರವಾಗಿಲ್ಲ, ಅಮಾನುಷವಾದ ಸ್ತ್ರೀ ಹತ್ಯೆಗೆ ತಾನು ಒಪ್ಪುವುದಿಲ್ಲವೆಂದು ಕೆಂಪೇಗೌಡ ನಿಷ್ಠುರವಾಗಿ ಹೇಳಿದನಂತೆ. ಆದರೂ ಅವನ ಕೊರಗು ನಿಲ್ಲಲಿಲ್ಲ. ರಾಜನ ಒಳತೋಟಿಯನ್ನು ಕೇಳಿ, ರಾಜ್ಯ ಹಿತಕ್ಕಾಗಿ ನಾಡಭಕ್ತೆ ಸ್ತ್ರೀಯೊಬ್ಬಳು ಬಲಿಯಾದಳಂತೆ. ಈ ಐತಿಹ್ಯದ ಪ್ರಕಾರವಾಗಿಯೂ ಬಲಿಯಾದವಳು ಕೆಂಪೇಗೌಡನ ಸೊಸೆಯಲ್ಲವೆಂಬುದು ವೇದ್ಯವಾಗುತ್ತದೆ.

ಆದರೆ ಹಿಂದೆ ಕೋಟೆ, ಕೆರೆಗಳಿಗೆ ಬಲಿಕೊಡುತ್ತಿದ್ದುದು ಉಂಟು. ಬೆಂಗಳೂರು ಕೋಟೆಯ ಬಾಗಿಲು ನಿಲ್ಲುತ್ತಿರಲಿಲ್ಲ ಎಂಬ ಸುದ್ದಿಯನ್ನು, ಅದಕ್ಕೆ ಗರ್ಭಿಣಿ ಸ್ತ್ರೀಯ ಬಲಿಕೊಡಬೇಕು ಎಂಬ ಕಣಿಯನ್ನು ಕೇಳಿ, ಬೆಂಗಳೂರಿಗೆ, ನಾಡಪ್ರಭುವಿಗೆ ಒಳ್ಳೆಯದಾಗಲಿ ಎಂಬ ತೀರ್ಮಾನಕ್ಕೆ ಬಂದು, ಆವೇಶದಲ್ಲಿ, ಆದರ್ಶದ ಅನುಕರಣೆಯಲ್ಲಿ ಯಾರೋ ಗರ್ಭಿಣಿ ಹೆಂಗಸು (ಆಕೆ ಅರಮನೆಗೆ ಸೇರಿದ ದೂರದ ಸಂಬಂಧಿ ಎಂದೂ ಹೇಳುವುದುಂಟು). ಸ್ವಯಿಚ್ಛೆಯಿಂದ ಬಲಿಯಾಗಿರಬಹುದು. ನಾಡಿಗಾಗಿ ಬಲಿಯಾದ ಆಕೆಯ ಬಗೆಗೆ ನಾಡಪ್ರಭುವಿಗೆ ಗೌರವ ಉಂಟಾಗಿ ಪೂಜಾರ್ಹಳೆಂದು ಭಾವಿಸಿರಬಹುದು. ಈ ಕರುಣಾಪೂರಿತ ಕಥೆಗೆ ಈವರೆಗೆ ಲಭ್ಯವಾಗಿರುವ ಬಖೈರುಗಳಲ್ಲಿ, ಶಾಸನಗಳಲ್ಲಿ ಆಧಾರವಿಲ್ಲ. ಆದರೆ ಜನಪದ ಗಾಯಕರು, ಸೃಜನಶೀಲ ಲೇಖಕರು ತಮ್ಮ ಹಾಡು ಕಥೆ ಕಾದಂಬರಿ ನಾಟಕಗಳಲ್ಲಿ ರೋಚಕವಾಗಿ ಬರೆದಿದ್ದಾರೆ. ನಾಡಪ್ರಭುಗಳ ಮೊದಲ ಕೆಲಸ ರಕ್ಷಣೆಗಾಗಿ ಕೋಟೆ ಕಟ್ಟುವುದು. ಆಕ್ರಮಣಗಳು sಸಾಮಾನ್ಯವಾಗಿದ್ದ ಹಿಂದಿನ ಕಾಲದಲ್ಲಿ, ಸುರಕ್ಷಿತವಾದ ಕೋಟೆಯಿಲ್ಲದೆ ಆಡಳಿತ ನಡೆಸುವುದಕ್ಕಾಗುತ್ತಿರಲಿಲ್ಲ. ಬಯಲು ನಾಡಿನಲ್ಲಂತೂ ಭದ್ರವಾದ ಕೋಟೆಯಿಲ್ಲದಿದ್ದರೆ, ಸುಲಭವಾಗಿ ಶತ್ರುಗಳ ದಾಳಿಗೆ ತುತ್ತಾಗುವ ಭಯವಿತ್ತು. ಬೆಂಗಳೂರು ನಗರ ನಿರ್ಮಾಣವಾಗುತ್ತಿದ್ದಂತೆಯೇ ಹಿರಿಯ ಕೆಂಪೇಗೌಡ ಭದ್ರವಾದ ಕೋಟೆಯನ್ನು ಕಟ್ಟಿಸಿದ. ಕೆಂಪೇಗೌಡನಿಗೂ ಅವನ ಅನಂತದವರಿಗೂ ಕೋಟೆ ರಕ್ಷಣೆ ನೀಡಿತು. ಕೋಟೆಗೆ ಸ್ಥಳೀಯ ಕಲ್ಲುಗಳನ್ನು ಬಳಸಿದೆ. ಕೆಂಪೇಗೌಡ ಕಟ್ಟಿಸಿದ ಕೋಟೆಗೆ ಯಾವ ವ್ಯತ್ಯಾಸವನ್ನೂ ಮಾಡದೆ, ಹೈದರಾಲಿ ಕಾಲದಲ್ಲಿ ಸುತ್ತಲೂ ಶಿಥಿಲವಾಗಿದ್ದ ಕಡೆ ಮತ್ತೆ ದಿಂಡು ಕಲ್ಲಿನ ರಕ್ಷಣೆಯನ್ನು ಮಾಡಲಾಯಿತು. (ಕ್ರಿ.ಶ.೧೭೫೯). ಬಯಲು ಸೀಮೆಯ ಕೋಟೆ ಸುರಕ್ಷಿತವಲ್ಲವೆಂದು ಟಿಪ್ಪುಸುಲ್ತಾನ ಕೋಟೆಯ ಬಹುಭಾಗವನ್ನು ದ್ವಂಸಮಾಡಿಸಿದ. ಟಿಪ್ಪುಸುಲ್ತಾನನ ಅರಮನೆಯ ಮುಂದೆ ನಿಂತರೆ, ಅದರ ಮಹಡಿಯಲ್ಲಿ ಕುಳಿತರೆ, ಎದುರಿಗೆ ಬೆಂಗಳೂರು ಕೋಟೆ ಕಾಣುತ್ತಿತ್ತು. ಅದು ಟಿಪ್ಪು ಸುಲ್ತಾನನಿಗೆ ಸಹನೆಯಾಗಲಿಲ್ಲ. ತನ್ನ ಅರಮನೆಯ ಮುಂದೆ ವಿಶಾಲ ಬಯಲಿರಲಿ, ಎದುರಿಗೆ ಏನೂ ಅಡ್ಡಿಯಿರದಿರಲಿ ಎಂದು ಟಿಪ್ಪುಸುಲ್ತಾನ ಬೆಂಗಳೂರು ಕೋಟೆಯನ್ನು ನಾಶಮಾಡಿದ ಎಂದೂ ಹೇಳುವುದುಂಟು. ಮುಂದೆ ಯದುವಂಶದವರ ಕಾಲದಲ್ಲಿ ಕೋಟೆಯನ್ನು ಮತ್ತೆ ಹಿಂದೆ ಇದ್ದಂತೆ ದುರಸ್ಥಿ ಮಾಡಿಸಲಾಯಿತು. (ಹಿರಿಯ ಕೆಂಪೇಗೌಡ ಬೆಂಗಳೂರು ಕೋಟೆಯನ್ನು ಕಟ್ಟಿಸಲಿಲ್ಲವೆಂದು ಹೇಳುವ ಕೆಲವರ ವಿತಂಡವಾದ ಸತ್ಯಕ್ಕೆ ದೂರವಾಗಿದೆ. ೧೫೩೮ರಲ್ಲಿ ಬೆಂಗಳೂರು ಕೋಟೆಯ ಕೆಲಸ ನಡೆಯುತ್ತಿದ್ದುದಕ್ಕೆ ವಿದೇಶಿ ಪ್ರವಾಸಿಗರ ಕಥನದಲ್ಲಿಯೂ ಸೂಚನೆಗಳಿವೆ).

ಹನ್ನೆರಡು ಹೋಬಳಿಗಳ ಆದಾಯ[ಬದಲಾಯಿಸಿ]

ಕೆಂಪೇಗೌಡ ಬೆಂಗಳೂರು ಕೋಟೆಯನ್ನು ನಿರ್ಮಿಸಿದ ಸಂದರ್ಭದಲ್ಲಿ ವಿಜಯನಗರದ ಅರಸ ಅಚ್ಚುತರಾಯ ಹನ್ನೆರಡು ಹೋಬಳಿಗಳ ಆದಾಯವನ್ನು ಬಳುವಳಿಯಾಗಿ ನೀಡಿದ. ಅವು ಹೀಗಿವೆ:

  • ೧. ಕಸಬಾ ಹಳೆ ಬೆಂಗಳೂರು.
  • ೨. ವರ್ತೂರು ಹೋಬಳಿ
  • ೩. ಯಲಹಂಕನಾಡು
  • ೪. ಬೇಗೂರು ಹೋಬಳಿ
  • ೫. ಹಲಸೂರು ಹೋಬಳಿ
  • ೬. ತೆಂಗರ (ಕೆಂಗೇರಿ) ಹೋಬಳಿ
  • ೭. ತಲಘಟ್ಟಪುರ ಹೋಬಳಿ
  • ೮. ಜಿಗಣಿ ಹೋಬಳಿ
  • ೯. ಕುಂಬಳಗೋಡು ಹೋಬಳಿ
  • ೧೦. ಕನ್ನೇಲ್ಲಿ ಹೋಬಳಿ
  • ೧೧. ಬಾಣಾವರ ಹೋಬಳಿ
  • ೧೨. ಹೆಸರುಘಟ್ಟ ಹೋಬಳಿ.

ಈ ಹನ್ನೆರಡು ಹೋಬಳಿಗಳಿಂದ ಮೂವತ್ತು ಸಾವಿರ ಪಗೋಡಗಳ ಕಂದಾಯ ಬರುತ್ತಿತ್ತು. ಈ ಪ್ರದೇಶಗಳು ಈಗಾಗಲೇ ಕೆಂಪೇಗೌಡನ ಆಳ್ವಿಕೆಗೆ ಒಳಪಟ್ಟಿದ್ದು. ಇವುಗಳನ್ನು ಉತ್ಪತ್ತಿಯನ್ನು ಪೂರ್ತಿಯಾಗಿ ರಾಜಧಾನಿ ಕೋಟೆ ಪೇಟೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಬಿಟ್ಟುಕೊಟ್ಟಿದ್ದು ವಿಶೇಷ. ಇವುಗಳ ಆದಾಯದಲ್ಲಿ ಚಕ್ರವರ್ತಿಗೆ ವಾರ್ಷಿಕ ಕಪ್ಪಕಾಣಿಕೆ ಕೊಡಬೇಕಾಗಿರಲಿಲ್ಲ. ಕೆಂಪೇಗೌಡ ಹೊಸ ಬೆಂಗಳೂರು ರಾಜಧಾನಿಯನ್ನು ನಿರ್ಮಿಸಿದ ಮೇಲೆ ’ಯಲಹಂಕ ನಾಡಪ್ರಭು’ (ಯಲಹಂಕ ರಾಜ್ಯದ ಅಧಿಪತಿ) ಎಂಬ ಬಿರುದನ್ನು ಧರಿಸಿದನು. ವಿಜಯನಗರದ ಅರಸು ಅಚ್ಚುತರಾಯನೂ ಹಲವು ಬಿರುದು ಬಾವಲಿಗಳನ್ನಿತ್ತು ಸಂತೋಷಪಡಿಸಿದನು. ಬೆಂಗಳೂರು ನಗರ ನಿರ್ಮಾಣದಲ್ಲಿ ಮಿಶ್ರವಾಸ್ತು ಶೈಲಿಯನ್ನು ಕಾಣಬಹುದು. ವಿಜಯನಗರ ವಾಸ್ತು ಶೈಲಿಯ ಜೊತೆಗೆ ಬಹಮನಿ ಸಾಮ್ರಾಜ್ಯದ ಬೀದರ್ ನಗರ ವಾಸ್ತು ಶೈಲಿಯ ಅಂಶಗಳೂ ಇವೆಯೆಂದು ಸಂಶೋಧಕರು ಗುರುತಿಸಿದ್ದಾರೆ. ಕೋಟೆ ಪೇಟೆ ಹಜಾರ ನಿರ್ಮಾಣದಲ್ಲಿ ಅಧಿಕ ಸಾಮ್ಯಗಳಿರುವುದು ಈ ಅಭಿಪ್ರಾಯಕ್ಕೆ ಕಾರಣವಾಗಿದೆ. ಬ್ರಿಟೀಷ್-ಈಸ್ಟ್-ಇಂಡಿಯ-ಕಂಪನಿಯ ಪ್ರತಿನಿಧಿಯಾದ ಲಾರ್ಡ್-ಕಾರ್ನ್-ವಾಲೀಸ್, ೨೧-ಮಾರ್ಚ್-೧೭೯೧ರಂದು ಟಿಪ್ಪು ಸುಲ್ತಾನನಿಂದ ವಶಕ್ಕೆ ಪಡೆಯುತ್ತಾನೆ, ಅದು ಮೂರನೇ ಮೈಸೂರು ಯುದ್ದದ ಸಮಯ (೧೭೯೦-೧೭೯೨)

ಕೋಟೆ ರಚನೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. MacLeod, Norman (1871). Peeps at the Far East: A Familiar Account of a Visit to India. London: Strahan & Co.
  2. Caine, William Sproston (1890). Picturesque India: A Handbook for European Travellers. London: London and G. Routledge & Sons, Limited. p. 523. ISBN 9781274043993.
  3. "Fort and Pettah of Bangalore". Wesleyan juvenile offering. VI. 1849.
  4. Nicholas Bros (1860). Photographs of India and Overland Route.
  5. Vibart Collection: Views in South India.
Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.