ಬಿ.ಜಯಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ. ಜಯಮ್ಮ
Bornನವೆಂಬರ್ ೨೬, ೧೯೧೫
ಚಿಕ್ಕಮಗಳೂರು ಜಿಲ್ಲೆ
Diedಡಿಸೆಂಬರ್ ೨೦, ೧೯೮೮

ಬಿ. ಜಯಮ್ಮ (ನವೆಂಬರ್ ೨೬, ೧೯೧೫ - ಡಿಸೆಂಬರ್ ೨೦, ೧೯೮೮) ಕನ್ನಡ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ ಬಹುದೊಡ್ಡ ಹೆಸರು.

ಜೀವನ[ಬದಲಾಯಿಸಿ]

ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು ನವೆಂಬರ್ 26, 1915ರ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಬಾಲಕಿ ಜಯಮ್ಮನಿಗದರೋ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ.

ರಂಗಭೂಮಿಯಲ್ಲಿ[ಬದಲಾಯಿಸಿ]

ರಸಿಕ ಜನಾನಂದ ನಾಟಕ ಸಭಾ ಕಂಪನಿಯ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ನಟಿಸಿದ ಜಯಮ್ಮನವರು ಸೀತಾಕಲ್ಯಾಣ ನಾಟಕದ ಸೀತಾ ಪಾತ್ರದಿಂದ ಅಪಾರ ಕೀರ್ತಿಗಳಿಸಿದರು. ಮುಂದೆ ಅವರು ದಸ್ತಗೀರ್ ಸಾಹೇಬರ ನಾಟಕ ಸಂಸ್ಥೆ, ಅಗಳಿ ತಿಮ್ಮಪ್ಪಯ್ಯನವರ ನಾಟಕಸಂಸ್ಥೆ, ಬಾಳಬಸವೇಗೌಡರ ನಾಟಕ ಸಂಸ್ಥೆಗಳಲ್ಲಿ ಅನೇಕ ಪ್ರಮುಖಪಾತ್ರಗಳಲ್ಲಿ ನಟಿಸಿದರು. ಗುಲೇಬಕಾವಲಿ ಚಿತ್ರತಾರೆ, ಸದಾರಮೆಯ ಚಂಚುಕುಮಾರಿ ಪಾತ್ರಗಳಲ್ಲಿ ಅವರು ಜನಪ್ರಿಯರಾದರು.

ಮುಂದೆ ಅವರು ಗುಬ್ಬಿವೀರಣ್ಣನವರ ನಾಟಕ ಸಂಸ್ಥೆಗೆ ಪ್ರವೇಶ ಪಡೆದರು. ವೀರಸಿಂಹ ಚರಿತ್ರೆಯಲ್ಲಿ ಅವರದ್ದು ಪ್ರಮುಖ ಪಾತ್ರ. ರಾಜಭಕ್ತಿಯ ಮೃಣಾಲಿನ ಪಾತ್ರದಿಂದ ರಂಗಭೂಮಿಯಲ್ಲಿ ಅವರಿಗೆ ಸುಭದ್ರಸ್ಥಾನ ಪ್ರಾಪ್ತವಾಯಿತು. ಶ್ರೀಕೃಷ್ಣ ಪಾರಿಜಾತ, ರುಕ್ಮಿಣಿ ಕಲ್ಯಾಣ, ಶಿವಜಲಂಧರ, ಸತಿ ಸಾವಿತ್ರಿ, ರಾಮಾಯಣ, ಕುರುಕ್ಷೇತ್ರ ಮುಂತಾದ ಪ್ರಸಿದ್ಧ ನಾಟಕಗಳಲ್ಲಿ ಸತ್ಯಭಾಮೆ, ರುಕ್ಮಿಣಿ, ಬೃಂದಾದೇವಿ, ಸಾವಿತ್ರಿ, ಸೀತಾದೇವಿ ದ್ರೌಪದಿ ಹೀಗೆ ವಿವಿಧ ಪಾತ್ರಧಾರಿಯಾಗಿ ಎಲ್ಲೆಡೆ ಪ್ರಖ್ಯಾತಿ ಪಡೆದರು. ಕೆ. ಹಿರಣ್ಯಯ್ಯನವರ ದೇವದಾಸಿಯ ಮಣಿಮಂಜರಿ ಪಾತ್ರದಿಂದಲೂ ಅವರಿಗೆ ಅಪಾರ ಜನ ಮನ್ನಣೆ ಸಂದಿತು.

ಚಲನಚಿತ್ರರಂಗದಲ್ಲಿ ತ್ರಿಭಾಷಾ ತಾರೆಯಾಗಿ[ಬದಲಾಯಿಸಿ]

ಮುಂದೆ ಚಲನಚಿತ್ರಲೋಕದಲ್ಲಿ ತ್ರಿಭಾಷಾ ತಾರೆಯಾಗಿ ಮಿಂಚಿದ ಬಿ. ಜಯಮ್ಮನವರು ನಟಿಸಿದ ಕೆಲವೊಂದು ಪ್ರಧಾನ ಚಿತ್ರಗಳು ಇಂತಿವೆ:

೧೯೩೧: ಹಿಸ್ ಲವ್ ಅಫೇರ್ (ಮೂಕಿಚಿತ್ರ), ೧೯೩೨: ಹರಿಮಾಯ, ೧೯೩೫: ಸದಾರಮೆ, ೧೯೩೮: ಗುಲೆಬಕಾವಲಿ, ೧೯೪೧: ಸುಭದ್ರ, ೧೯೪೨: ಜೀವನ ನಾಟಕ, ೧೯೪೪: ಭರ್ತ್ಯಹರಿ (ತಮಿಳು), ೧೯೪೫: ಹೇಮರೆಡ್ಡಿ ಮಲ್ಲಮ್ಮ, ಸ್ವರ್ಗ ಸೀಮ (ತೆಲುಗು); ೧೯೪೬: ಲವಂಗಿ, ತ್ಯಾಗಯ್ಯ (ತೆಲುಗು), ೧೯೪೭: ಬ್ರಹ್ಮರಥಂ (ತೆಲುಗು), ೧೯೪೯: ನಾಟ್ಯರಾಣಿ, ಮಂಗಯಾರ್ ಕರಸಿ (ತಮಿಳು), ೧೯೫೦: ರಾಜಾವಿಕ್ರಮ, ೧೯೫೧: ಮಂತ್ರದಂಡಂ (ತಮಿಳು), ಗುಣಸಾಗರಿ, ಸತ್ಯಶೋಧನೈ (ತಮಿಳು), ೧೯೫೩: ಗುಮಾಸ್ತ; ೧೯೫೮: ಅಣ್ಣ-ತಂಗಿ, ೧೯೬೫: ಮಾವನ ಮಗಳು, ೧೯೬೬: ಪ್ರೇಮಮಯಿ, ೧೯೬೭: ಇಮ್ಮಡಿ ಪುಲಿಕೇಶಿ, ೧೯೬೮: ಅಣ್ಣ ತಮ್ಮ, ಬೇಡಿ ಬಂದವಳು, ೧೯೭೦: ಮುಕ್ತಿ, ೧೯೭೧: ಸಾಕ್ಷಾತ್ಕಾರ ಮುಂತಾದವು

ಹೀಗೆ ಜಯಮ್ಮನವರು ಅನೇಕ ಚಲನಚಿತ್ರಗಳಲ್ಲಿ ವಿಜ್ರಂಭಿಸಿದರು.

ನಾಯಕಿ ಮತ್ತು ಗಾಯಕಿ[ಬದಲಾಯಿಸಿ]

ಬಿ. ಜಯಮ್ಮನವರು ಮಹಾನ್ ನಟಿಯಷ್ಟೇ ಅಲ್ಲದೆ ಗಾಯಕಿಯೂ ಆಗಿದ್ದರು. ತಮ್ಮ ಬಹುತೇಕ ನಾಟಕ ಮತ್ತು ಚಲನಚಿತ್ರ ಪಾತ್ರಗಳಿಗೆ ಸ್ವತಃ ಅವರೇ ಗಾಯನವನ್ನೂ ನೀಡಿದ್ದರು.

ಕುಟುಂಬ[ಬದಲಾಯಿಸಿ]

ಗುಬ್ಬಿ ವೀರಣ್ಣನವರ ಮೂರನೆಯ ಪತ್ನಿಯಾಗಿದ್ದ ಬಿ. ಜಯಮ್ಮನವರು ತಮ್ಮ ಪತಿಯವರೊಂದಿಗೇ ಹಲವಾರು ಚಲನಚಿತ್ರಗಳಲ್ಲಿ ಪಾತ್ರನಿರ್ವಹಿಸಿದ್ದರು. ಜಯಮ್ಮನವರು ಹಿರಿಯ ವಯಸ್ಸಿನಲ್ಲಿಯೂ ಕೆಲವೊಂದು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದುಂಟು. ಬಿ. ಜಯಮ್ಮನವರ ಪುತ್ರರಾದ ಜಿ. ವಿ. ಗುರುಪ್ರಸಾದ್ ಹಾಗೂ ಪುತ್ರಿಯರಾದ ಜಿ. ವಿ. ಹೇಮಲತಾ ಮತ್ತು ಜಿ. ವಿ. ಲಕ್ಷ್ಮೀಪ್ರಭಾ ಅವರುಗಳೂ ಅನೇಕ ಚಲನಚಿತ್ರ ಮತ್ತು ನಾಟಕಗಳ ಕಲಾವಿದರಾಗಿದ್ದಾರೆ.

ಸ್ಥಾನಮಾನ, ಗೌರವಗಳು[ಬದಲಾಯಿಸಿ]

೧೯೮೧ರ ವರ್ಷದಲ್ಲಿ ಬಿ. ಜಯಮ್ಮನವರು ವಿಧಾನಸಭೆಗೆ ನಾಮಾಂಕಿತರಾಗಿ ಸೇವೆ ಸಲ್ಲಿಸಿದರು. ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.

ವಿದಾಯ[ಬದಲಾಯಿಸಿ]

ಬಿ. ಜಯಮ್ಮನವರು ಡಿಸೆಂಬರ್ ೨೦, ೧೯೮೮ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಆಕರಗಳು[ಬದಲಾಯಿಸಿ]

  1. ಕಣಜ Archived 2015-11-25 ವೇಬ್ಯಾಕ್ ಮೆಷಿನ್ ನಲ್ಲಿ.
  2. ನಮ್ಮ ಕರ್ನಾಟಕ.ಕಾಂ
  3. ವಿಕಿ ಇಂಡಿಯಾ ಸಿನೆ
  4. ಭರ್ತೃಹರಿ ೧೯೪೪ - ದಿ ಹಿಂದೂ ಪತ್ರಿಕೆ