ಬಿ.ಎಲ್.ರೈಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬಿ.ಎಲ್‌. ರೈಸ್‌ ಇಂದ ಪುನರ್ನಿರ್ದೇಶಿತ)

ಬಿಳಿ ಕನ್ನಡಿಗ ಎಂದು ಖ್ಯಾತಿಯನ್ನು ಹೊಂದಿದ್ದ ಬಿ ಎಲ್ ರೈಸ್ (ಜನನ:.೧೮೩೬ರ ಜುಲೈ ೧೭- ಮರಣ: ೧೯೨೭ ಜುಲೈ ೧೦) ರವರು ಕನ್ನಡ ಭಾಷೆ, ಕನ್ನಡನಾಡಿನ ಮೇಲೆ ಅಪಾರ ಪ್ರೇಮವನ್ನಿಟ್ಟುಕೊಂಡಿದ್ದ ವ್ಯಕ್ತಿ. ಕನ್ನಡ ಶಾಸನಗಳ ಬಗ್ಗೆ ಅವರು ಮಾಡಿದ ಅಗಾಧ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್‌. ರೈಸ್‌ ಅವರದು. ಅವರು ನಮ್ಮ ನಾಡಿನ ಹಳೆಯ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ಶಾಸನಗಳ ಸಂಶೋಧನೆಯನ್ನು ಮೂಲಾಧಾರವಾಗಿಸಿಕೊಂಡು ಸಾಹಿತ್ಯ ಮತ್ತು ಇತಿಹಾಸಗಳಿಗೆ ನಿಖರರೂಪ ನೀಡಿದವರಲ್ಲಿ ಇವರು ಪ್ರಮುಖರು. ಇವರಿಗಿಂತ ತುಸು ಮುಂಚೆ ಜಾನ್‌ ಫ್ಲೀಟರು ಉತ್ತರ ಕರ್ನಾಟಕದ ಪ್ರದೇಶದಲ್ಲಿ ಕ್ಷೇತ್ರಕಾರ್ಯಕೈಕೊಂಡು ಶಾಸನ ಸಂಗ್ರಹಕ್ಕೆ ಮೊದಲು ಮಾಡಿದರೂ, ಪುಸ್ತಕ ರೂಪದಲ್ಲಿ ಅನೇಕ ಸಂಪುಟಗಳನ್ನು ಪ್ರಕಟಿಸಿದವರು ಮಾತ್ರ ಬೆಂಜಮಿನ್‌ರೈಸ್‌.

ಹುಟ್ಟು, ಬಾಲ್ಯ[ಬದಲಾಯಿಸಿ]

ಬಿ ಎಲ್ ರೈಸ್ ಅವರ ಪೂರ್ಣ ಹೆಸರು ’ ’ ’ಬೆಂಜಮಿನ್ ಲೂಯಿಸ್ ರೈಸ್’ ’. ರೈಸರ ತಂದೆ ಬೆಂಜಮಿನ್ ರೈಸ್ ಮೂಲತಃ ವಿದೇಶದವರಾಗಿದ್ದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಈಸ್ಟ್ ಪೆರೇಡ್ ಚರ್ಚಿನಲ್ಲಿ ಧರ್ಮಬೋಧಕರಾಗಿದ್ದರು[೧]. ಬಂದಕೂಡಲೇ ಜನಸಾಮಾನ್ಯರೊಡನೆ ಸುಲಭವಾಗಿ ಬೆರೆತು ಮುಕ್ತವಾಗಿ ಸಂವಹನ ನಡೆಸಲು ಕನ್ನಡ ಭಾಷೆ ಕಲಿತಿದ್ದರು. ಅವರ ಐವರು ಮಕ್ಕಳಲ್ಲಿ ಒಬ್ಬರಾದ ಬಿ ಎಲ್ ರೈಸ್ ಕ್ರಿ.ಶ.೧೮೩೬ರ ಜುಲೈ ೧೭ರಂದು ಬೆಂಗಳೂರಿನಲ್ಲೇ ಹುಟ್ಟಿದರು.ಹಾಗಾಗಿ ಅವರ ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲೇ ಆಯಿತು.ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗಿಬಂದರು. ಅವರು ಶಿಕ್ಷಣ ಪಡೆದಿದ್ದು ತಮ್ಮ ಮೂಲಸ್ಥಳನವಾಗಿದ್ದ ಇಂಗ್ಲಂಡಿನ ಹ್ಯಾರೋ ನಗರದಲ್ಲಿ. ಆದರೆ ಮತ್ತೆ ಕನ್ನಡನಾಡಿಗೆ ಮರಳುವ ಆಶೆ ಪ್ರಬಲವಾಗಿ ಇತ್ತು. ಪದವಿಧರರಾದ ಮೇಲೆ ಕೆಲಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಐಸಿಎಸ್‌ ಪರೀಕ್ಷೆಗೆ ತಯಾರಿ ನಡೆಸಿದರು. ಆಗಲೇ ಅವರಿಗೆ ಉದ್ಯೋಗದ ಆಹ್ವಾನ ಬೆಂಗಳೂರಿನಿಂದ ಬಂದಿತು.ಅದರ ಮೇರೆಗೆ ಅವರು ೧೮೬೦ ರಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಮೈಸೂರು ರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅವರಿಗೆ ಉದ್ಯೋಗ ದೊರಕಿತು. ಈಗಲೂ ಅವೆನ್ಯೂ ರೋಡ್‌ನಲ್ಲಿ ರೈಸ್‌ ಸ್ಮಾರಕ ಚರ್ಚ ಇದೆ. ಅಷ್ಟೇ ಅಲ್ಲ, ಕಲಿಸಲು ಕನ್ನಡದಲ್ಲಿ ಪಠ್ಯ ಪುಸ್ತಕಗಳು ಇಲ್ಲವೆಂದು ತಾವೇ ಶಾಲಾಮಕ್ಕಳ ಉಪಯೋಗಕ್ಕೆ ಕನ್ನಡದಲ್ಲಿ ಪುಸ್ತಕ ಬರೆದರು ರೈಸ್‌ ಅವರ ತಾಯಿ ಗಂಡನ ಕೆಲಸದಲ್ಲಿ ಸಹಕರಿಸಲು ತಾವೂ ಕನ್ನಡ ಕಲಿತು ಸ್ಥಳೀಯ ಹೆಣ್ಣು ಮಕ್ಕಳ ಜೊತೆ ಸರಳವಾಗಿ ಬೆರೆಯುತ್ತಿದ್ದರು.ಅಕ್ಕಪಕ್ಕದ ಮಕ್ಕಳನ್ನು ಸೇರಿಸಿ ಅವರಿಗೆ ಕನ್ನಡ ಅಕ್ಷರಾಭ್ಯಾಸ ಮಾಡಿಸುತಿದ್ದರು. ಹೀಗೆ ಮನೆಯಲ್ಲಿ ಸಂಪೂರ್ಣ ಕನ್ನಡದ ವಾತಾವರಣದಲ್ಲಿಯೇ ಬಿ. ಎಲ್‌.ರೈಸ್‌ರ ಜನನವಾಯಿತು.

ಕನ್ನಡದ ಬಗ್ಗೆ ಅರಿವು[ಬದಲಾಯಿಸಿ]

ಮೈಸೂರು ಸಂಸ್ಥಾನದ ಶಾಲಾ ಇನ್ಸ್ಪೆಕ್ಟರ್ ಹುದ್ದೆಯಲ್ಲಿದ್ದಾಗ ಪ್ರವಾಸದ ಅಂಗವಾಗಿ ಓಡಾಡಿದ ಕಾರಣದಿಂದ ರೈಸರಿಗೆ ಕನ್ನಡದ ಆಡುನುಡಿಗಳು, ರೀತಿನೀತಿಗಳು ಮುಂತಾದವುಗಳನ್ನು ಅರಿಯುವ ಅವಕಾಶ ದೊರೆಯಿತು. ಅಲ್ಲಲ್ಲಿ ಕಂಡುಬರುತ್ತಿದ್ದ ಶಿಲಾಶಾಸನಗಳನ್ನು ನೋಡಿ ಕುತೂಹಲಭರಿತರಾಗಿ ಅವುಗಳ ಕೂಲಂಕಷ ಅಧ್ಯಯನಕ್ಕೆ ತೊಡಗಿಸಿಕೊಂಡರು. ಆ ಶಿಲಾಲೇಖಗಳು ವಿವಿಧ ಕಾಲ ಮತ್ತು ಸಂದರ್ಭಗಳಲ್ಲಿ ರಚಿತವಾದುದಾಗಿದ್ದವು. ಮಾತ್ರವಲ್ಲ ವಿವಿಧ ಪ್ರದೇಶಗಳಲ್ಲಿ ಹರಡಿದ್ದವು. ಅವುಗಳಲ್ಲಿ ಕೆಲವು ದಾನಶಾಸನಗಳು, ಕೆಲವು ರಾಜಾಜ್ಞೆಗಳು, ಕೆಲವು ವೀರಗಲ್ಲುಗಳು, ಕೆಲವು ಪ್ರಶಸ್ತಿಗಳು, ಇನ್ನೂ ಕೆಲವು ಮರಣಶಾಸನಗಳು. ಅವುಗಳಲ್ಲಿ ನೂರಕ್ಕೆ ೯೯ರಷ್ಟು ಕನ್ನಡದವೇ ಆಗಿದ್ದರೂ ವಿವಿಧ ಕಾಲಘಟ್ಟಗಳ ಲಿಪಿ ವೈವಿಧ್ಯತೆಯ ಕಾರಣದಿಂದ ಸುಲಭವಾಗಿ ಓದಲು ಅಸಾಧ್ಯವಾಗಿತ್ತು.

ಕನ್ನಡ ಶಾಸನಗಳ ಅಧ್ಯಯನ[ಬದಲಾಯಿಸಿ]

ಅವರಿಗೆ ೧೮೬೫ ರಿಂದ ಮೂರು ವರ್ಷಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್‌ ಆಗಿ ನೇಮಕಾತಿ ಆಯಿತು.[೨] ಆಗ ಮುಖ್ಯ ಕಮಿಷನರ್‌ ಆಗಿದ್ದ ಬೌರಿಂಗ್‌ ಹಲವು ಶಾಸನಗಳ ಛಾಯಾಚಿತ್ರ ತೆಗೆಸಿದ್ದರು. ಅದೇ ಸಮಯದಲ್ಲಿ ಮೇಜರ್‌ಡಿಕ್ಸನ್‌ ಹಲವು ಶಾಸನಗಳ ಭಾವಚಿತ್ರ ನೀಡಿ ಬಿಡುವಾದಾಗ ಭಾಷಾಂತರ ಮಾಡಲು ಕೋರಿದರು. ಅವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು.ಅವರು ಹೈಗ್ರೌಂಡಿನಲ್ಲಿದ್ದ ನಿವೇಶನದಲ್ಲಿ ತಮ್ಮವಾಸಕ್ಕಾಗಿ ಸುಸಜ್ಜಿತ ಮನೆ ನಿರ್ಮಿಸಿಕೊಂಡರು ಅವರ ಮನೆ ಈಗಿನ ಸ್ಯಾಂಕಿರೋಡನಲ್ಲಿ ವಂಡ್ಸರ್‌ಮ್ಯಾನರ್‌ ಹೋಟೆಲ್‌ ಎದುರು ಇತ್ತು . ಅವರ ಮೊದಲ ಮಗು ಅಲ್ಲಿಯೇ ಜನಿಸಿತು.ಆ ಅವಧಿಯಲ್ಲಿಯೇ ಅವರ ಶಾಸನ ಸಂಗ್ರಹದ ಆಸಕ್ತಿ ಚಿಗುರೊಡೆಯಿತು ಹೋದ ಊರುಗಳಲ್ಲೆಲ್ಲ ಶೈಕ್ಷಣಿಕ ತಪಾಸಣೆ ಜತೆ ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಮೀಕ್ಷೆ, ಅಧ್ಯಯನ ಮೊದಲುಮಾಡಿದರು. ಕನ್ನಡ ನುಡಿಗೆ ಅವರು ಸಲ್ಲಿಸಲಿದ್ದ ಮಹಾನ್‌ ಕೊಡುಗೆಗೆ ಈ ಕೆಲಸವೇ ಮುನ್ನುಡಿ ಬರೆಯಿತು.

ರೈಸರು ಈ ಶಾಸನಾಧ್ಯಯನದ ಕೆಲಸವನ್ನು ಹವ್ಯಾಸದಂತೆ ಅಲ್ಲ ಒಂದು ವ್ರತದಂತೆ ಸ್ವೀಕರಿಸಿದರು. ಇವರ ಶಿಫಾರಸಿನ ಮೇರೆಗೆ ಅಂದಿನ ಮಹಾರಾಜರ ಸಚಿವಾಲಯದಲ್ಲಿ ಕ್ರಿ.ಶ.೧೮೯೦ರಲ್ಲಿ ಪುರಾತತ್ವ ಅಧ್ಯಯನಕ್ಕೆಂದೇ ಹೊಸ ಇಲಾಖೆಯು ರೂಪುಗೊಂಡು ವಿಶೇಷ ಅನುದಾನ ಲಭ್ಯವಾಯಿತು. ರೈಸರನ್ನೇ ಆ ಇಲಾಖೆಯ ಮುಖ್ಯಸ್ಥರನ್ನಾಗಿಯೂ ನೇಮಿಸಲಾಯಿತು. ಮೊತ್ತಮೊದಲಿಗೆ ಅವರು ಕನ್ನಡನಾಡಿನಲ್ಲಿ ಅದುವರೆಗೆ ಆಗಿದ್ದ ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ ತಾಳೆಯೋಲೆಯ ರೂಪದಲ್ಲಿದ್ದ ಅವುಗಳನ್ನು ಮುದ್ರಣಮಾಧ್ಯಮಕ್ಕೆ ಪರಿವರ್ತಿಸುವ ಕೆಲಸವನ್ನು ಹಮ್ಮಿಕೊಂಡರು. ತಾಳೆಯೋಲೆಗಳನ್ನು ಸಂಗ್ರಹಿಸಿ ಅವುಗಳ ಸಾಚಾತನವನ್ನು ಒರೆಗೆ ಹಚ್ಚಿ ಪ್ರಕ್ಷಿಪ್ತ ಸಂಗತಿಗಳನ್ನು ಗಮನಿಸಿ ಗ್ರಂಥಸಂಪಾದನೆ ಮಾಡಿ ಶುದ್ಧ ಪ್ರತಿಗಳನ್ನು ಮುದ್ರಿಸುವ ಕೆಲಸಕ್ಕೆ ಚಾಲನೆ ನೀಡಿದರು. ಬಿಬ್ಲಿಯಾಥಿಕಾ ಕರ್ನಾಟಿಕಾ ಎಂಬ ಆ ಯೋಜನೆಯಲ್ಲಿ ಪಂಪಭಾರತ, ಪಂಪರಾಮಾಯಣ, ಕರ್ನಾಟಕ ಶಬ್ದಾನುಶಾಸನ, ಕರ್ನಾಟಭಾಷಾಭೂಷಣ, ಕವಿರಾಜಮಾರ್ಗ, ಅಮರಕೋಶ, ಕಾವ್ಯಾಲೋಕನ ಮೊದಲಾದ ಕೃತಿಗಳು ಅಪೂರ್ವವಾದ ರೀತಿಯಲ್ಲಿ ಗ್ರಂಥಸಂಪಾದನೆಗೊಳಗಾಗಿ ಪೀಠಿಕೆ ಟಿಪ್ಪಣಿಗಳೊಂದಿಗೆ ಪ್ರಕಟವಾದವು. ಈ ಕೆಲಸದಲ್ಲಿ ಇವರಿಗೆ ನೆರವಾದ ಆರ್ ನರಸಿಂಹಾಚಾರ್ಯರು ಇವರ ನಂತರವೂ ಅದನ್ನು ಅಚ್ಚುಕಟ್ಟಾಗಿ ಮುಂದುವರಿಸಿದರು.

ಅವುಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಮೊದಲು ಮಾಡಿದರು.ಅವರ ಶಿಕ್ಷಣಾಸಕ್ತಿಯನ್ನು ಮತ್ತು ಶಿಕ್ಷಣ ಕ್ಷೇತ್ರದ ಪರಿಣತೆಯನ್ನೂ ಗಮನಿಸಿದ ಬ್ರಿಟಿಷ್‌ ಸಮಗ್ರ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾಣೆ ತರುವ ಉದ್ದೇಶದಿಂದ ಹಂಟರ್‌ ಶಿಕ್ಷಣ ಆಯೋಗದ ರಚಿಸಿತು. ರೈಸ್‌ ಅವರಿಗೆ ಆಯೋಗದ ಕಾರ್ಯದರ್ಶಿ ಸ್ಥಾನ ಕೊಡಲಾಯಿತು. ಒಂದೇ ವರ್ಷದಲ್ಲಿ ಶಿಕ್ಷಣ ವರದಿ ಸಿದ್ಧವಾಯಿತು. ಆ ಕೆಲಸ ಮುಗಿದ ಕೂಡಲೇ ಮೈಸೂರು ಸಂಸ್ಥಾನದಲ್ಲಿ ಹೊಸದಾಗಿ ಪ್ರಾರಂಭಗೊಂಡ ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ವಿದ್ಯಾಇಲಾಖೆಯ ಹೊಣೆಯ ಜೊತೆಯಲ್ಲಿಯೇ ಪ್ರಭಾರಿಯಾಗಿ ನೋಡಿಕೊಳ್ಳಲು ನೇಮಕಗೊಂಡರು. ಹೊಸ ಹುದ್ದೆಯ ಕಾರ್ಯವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು.

ಆ ನಂತರ ರೈಸ್ ಅವರು ಎಪಿಗ್ರಾಫಿಯ ಕರ್ನಾಟಿಕ ಎಂಬ ಯೋಜನೆಯಡಿ ಶಾಸನಾಧ್ಯಯನ ಕಾರ್ಯವನ್ನು ಕೈಗೊಂಡು ಕ್ರಿ.ಶ.೧೯೧೬ರವರೆಗೆ ಸಂಗ್ರಹಿಸಿದ ೮೮೬೯ ಶಾಸನಗಳು ೧೨ ಸಂಪುಟಗಳಲ್ಲಿ ದಾಖಲೆಯಾಗಿವೆ. ಕ್ರಿಸ್ತಪೂರ್ವ ೨೫೦ರಷ್ಟು ಹಳೆಯದಾದ ಸಾಮ್ರಾಟ್ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ಅವರದ್ದು. ಚಂದ್ರಗುಪ್ತ ಮೌರ್ಯನು ಶ್ರವಣಬೆಳಗೊಳಕ್ಕೆ ಬಂದಿದ್ದನ್ನು ಸಂಶೋಧಿಸಿದವರು ಅವರೇ!

ಇವರು ಈಗಾಗಲೇ "ಮೈಸೂರು ಇನಸ್ಕ್ರಿಪ್ಷನ್‌” ಎಂಬ ಶಾಸನ ಕುರಿತಾದ ಕೃತಿ ಪ್ರಕಟಿಸಿದ್ದರು.ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು. ಸರ್ಕಾರವು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಅದರ ತಯಾರಿಯ ಕೆಲಸ ರೈಸ್‌ರ ಪಾಲಿಗೆ ಬಂದಿತು. ಪ್ರಥಮ ಜನಗಣತಿ ವರದಿಯನ್ನು ಸಿದ್ಧಪಡಿಸಿದರು. ನಂತರ ಇವರ ಸೇವೆ ಗೆಜೆಟಿಯರ್‌ಗಳ ಪ್ರಕಟನೆಗೆ ಬಳಸಲಾಯಿತು. ಇವರು ಸಿದ್ಧಪಡಿಸಿದ ಗೆಜೆಟಿಯರ್‌ಗಳು ಬರಿ ಅಂಕೆ ಸಂಖ್ಯೆಗಳ ದಾಖಲೆಗಳಾಗಿರದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನೂ ಒಳಗೊಂಡು ಓದುಗರ ಆಸಕ್ತಿ ಕೆರಳಿಸುವಂತೆ ಇವೆ. ಆದ್ದರಿಂದ ಅವು ಇಂದಿಗೂ ಆಡಳಿತ ಸಂಶೋಧನೆಯ ಉತ್ತಮ ಮಾದರಿಗಳಾಗಿವೆ ಎನ್ನಬಹುದು.

ಸಂಶೋಧನೆಯಲ್ಲಿ ಇವರದು ಮುಕ್ತ ಮನಸ್ಸು. ತಮ್ಮ ಸಮಕಾಲೀನರಾದ ವಿದ್ವಾಂಸರೊಡನೆ ಈ ಕುರಿತು ಅವರು ಸಮಾಲೋಚನೆ ನಡೆಸಲು ಹಿಂದು ಮುಂದು ನೋಡುತ್ತಿರಲಿಲ್ಲ. ಮುಂಬಯಿ ಪ್ರಾಂತ್ಯದಲ್ಲಿ ತಮಗಿಂತ ಮೊದಲೇ ಶಾಸನ ಸಂಶೋಧನೆಯ ಕಾರ್ಯ ಕೈಗೊಂಡಿದ್ದ ಜಾನ್‌ಫ್ಲೀಟ್‌ಅವರೊಡನೆ ಈ ವಿಷಯದಲ್ಲಿ ಪತ್ರ ವ್ಯವಹಾರ ಮಾಡುತಿದ್ದರು. ಅಗತ್ಯ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತಿದ್ದರು.ಅನೇಕ ಬಾರಿ ಭಿನ್ನಾಭಿಪ್ರಾಯ ಬಂದರೂ ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಕೆ ಇರಲಿಲ್ಲ.

ಶಾಸನ ಸಂಗ್ರಹದ ಬಗ್ಗೆ ಮಾತ್ರ ಗಮನ ಕೊಡದೆ ಶಾಸನಗಳ ಸಂರಕ್ಷಣೆಯ ಕಡೆಗೂ ಕಾಳಜಿ ವಹಿಸಿದರು. ಆವರ ಕಾಲದಲ್ಲೇ ಬೆಳಕಿಗೆ ಬಂದ ಅಶೋಕನ ಶಾಸನಗಳ ಸಂರಕ್ಷಣೆಗಾಗಿ ಸರ್ಕಾರಕ್ಕೆ ಒತ್ತಡ ಹಾಕಿದರು. ಅವರ ಆಗ್ರಹಕಕ್ಕೆ ಮಣಿದು ಸರ್ಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಅಶೋಕ ಸಿದ್ದಾಪುರ ಮತ್ತು ಇತರೆಡ ಶಾಸನಗಳ ಸುತ್ತಲೂ ಗೋಡೆ ಕಟ್ಟಿಸಿದಾಗ ಮತ್ತೊಮ್ಮೆ ಭೇಟಿ ನೀಡಿ ಅಲ್ಲಿರುವ ಅವೈಜ್ಞಾನಿಕ ರಚನೆಗಳನ್ನು ವಿರೋಧಿಸಿ ಪತ್ರ ಬರೆದರು. ಆಗ ಸರ್ಕಾರವು ಪುರಾತತ್ವ ಸ್ಮಾರಕಗಳಲ್ಲಿ ಯಾವುದೇ ಕಾಮಗಾರಿ ಮಾಡುವಾಗ ರೈಸ್‌ ಅವರ ಪೂರ್ವಾನುಮತಿ ಪಡೆದು ಅವರ ಸಲಹೆಯಂತೆ ಕೆಲಸ ಮಾಡಲು ಇಲಾಖೆಗೆ ಪುರಾತನ ದಾಖಲೆಗಳಿಂದ ಕಂಡು ಬರುವುದು.ಇವರ ಶಾಸನಗಳ ಶೋಧನೆಯಿಂದ ಕರ್ನಾಟಕದ ಇತಿಹಾಸವೇ ಬದಲಾಯಿತು.ಅಶೋಕನ ಬ್ರಹ್ಮಗಿಗಿರ ಶಾಸನ, ಬನವಾಸಿಯ ತಾಳಗುಂದದ ಸ್ತಂಭ ಶಾಸನ, ಶ್ರವಣಬೆಳಗೊಳದ ಶಾಸನಗಳು ಬಹಳ ಮಹತ್ವ ಪಡೆದಿವೆ. ಶಾಸನಗಳ ಪಾಠ ಸಿದ್ದತೆ ಮತ್ತು ಪರಿಷ್ಕರಣೆಯಲ್ಲಿ ಸ್ಥಳೀಯ ವಿದ್ವಾಂಸರ ಸಹಾಯ ಪಡೆಯುತಿದ್ದರು.ಸೋಸಲೇಅಯ್ಯಾ ಶಾಸ್ತ್ರಿ, ಚಿಂಚೊಳಿ ವೆಂಕಣ್ಣಾಚಾರ್ಯ,ಗೌಡ ಗೆರೆಯ ವೆಂಕಟರಮಣಾಚಾರ್ಯ, ತಮಿಳು ವಿದ್ವಾಂಸ ಪರಮ ಶಿವ ಅಯ್ಯರ್‌,ಪಂಡಿತ ನಟೇಶ ಶಾಸ್ತ್ರಿ ಮೊದಲಾದವರ ಸಹಾಯ ಪಡೆದರು.

ರೈಸರು ತಮ್ಮ ಮಾಹಿತಿಯನ್ನು ಸಂಗ್ರಹಿಸಲು ಸ್ಥಳೀಯ ಅಧಿಕಾರಿಗಳನ್ನೂ ಬಳಸಿಕೊಳ್ಳುತಿದ್ದರು. ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರರಿಗೆ ಅವರ ವ್ಯಾಪ್ತಿಯಲ್ಲಿ ಇರಬಹುದಾದ ಪುರಾತತ್ವ ವಸ್ತುಗಳ ಬಗ್ಗೆ ಪ್ರಶ್ನಾವಳಿ ಕಳುಹಿಸುತಿದ್ದರು. ನಂತರ ತಮ್ಮ ಬಿಳಿ ಕುದುರೆ ಏರಿ ಪ್ರವಾಸ ಕ್ಕೆ ಹೊರಡುವರು. ಆಗ ಅವುಗಳ ಪರಿಶೀಲನೆ ಮಾಡುವರು.ಅವರು ಅರೆ ಕಾಲಿಕ ಪುರಾತತ್ವ ನಿರ್ದೇಶಕರಾಗಿದ್ದಾಗಲೇ ಒಂದು ವರ್ಷದಲ್ಲಿ ೨೪೫ ದಿನಪ್ರವಾಸ ಮಾಡಿ ೬೫೪ ಐತಿಹಾಸಿಕ ಪ್ರಾಮುಖ್ಯತೆ ಇರುವ ಪಟ್ಟಣ ಮತ್ತು ಗ್ರಾಮಗಳಿಗೆ ಭೇಟಿ ನೀಡಿದ್ದರು.ಈ ಕೆಲಸ ನಂತರ ಇನ್ನೂ ತೀವ್ರಗತಿಯಲ್ಲಿ ನಡೆಸಿದರು ಅವರ ಹೆಂಡತಿ ಸೋಫಿಯಾ ಮೇರಿ ಗ್ಯಾರೆಟ್‌ ಅವರಿಗೆ ತುಂಬ ಸಹಕಾರ ನೀಡುತಿದ್ದರು. ಅವರದು ಹತ್ತು ಮಕ್ಕಳ ತುಂಬು ಸಂಸಾರ ತಾವೇ ನಿರ್ವಹಿಸಿ ಕಾರ್ಯ ತತ್ಪರ ಗಂಡನಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುತಿದ್ದರು.

ರೈಸರ ಕಾರ್ಯದ ಮಹತ್ವ[ಬದಲಾಯಿಸಿ]

ಒಂದು ವಿಶ್ವವಿದ್ಯಾಲಯವು ಮಾಡಲಾಗದ ಕೆಲಸವನ್ನು ಒಂದು ಇಲಾಖೆಯ ಮೂಲಕ ಮಾಡಿಸಿದ ಸಾಮರ್ಥ್ಯ ರೈಸರಿಗಿತ್ತು ಎಂಬುದು ಮೆಚ್ಚತಕ್ಕ ವಿಷಯ. ಅವರು ಶಾಸನಗಳನ್ನು ಅವುಗಳ ಮೂಲಪಠ್ಯವನ್ನು ಓದಿ ಮುದ್ರಣರೂಪಕ್ಕೆ ತಂದರು ಎಂದುಬಿಟ್ಟರೆ ಆ ಕೆಲಸದ ಅಗಾಧತೆಯನ್ನು ಹೇಳಿದಂತಾಗುವುದಿಲ್ಲ. ಅದು ಒಂದು ರೀತಿಯಲ್ಲಿ ಪುರಾತನ ನಿವೇಶನವೊಂದರ ಉತ್ಖನನ ನಡೆಸಿದಂತೆ ಕ್ಲಿಷ್ಟಕರ ಕೆಲಸ. ಹೇಳಿಕೇಳಿ ಶಿಲಾಶಾಸನಗಳು ಪ್ರಾಕೃತಿಕ ವೈಪರೀತ್ಯಗಳಿಗೆ ಸುಲಭವಾಗಿ ಪಕ್ಕಾಗುವಂಥವು. ಸುಲಭದಲ್ಲಿ ಮುಕ್ಕಾಗುವಂಥವು. ಅವುಗಳ ಅಕ್ಷರಗಳೂ ಕೆಲವೊಮ್ಮೆ ತ್ರುಟಿತವಾಗಿರುವುದೂ ಉಂಟು. ಮೂಲ ಅಕ್ಷರಗಳಿಗೆ ಹಾನಿಯಾಗದಂತೆ ಆ ಪಠ್ಯವನ್ನು ಕಾಗದಕ್ಕೆ ವರ್ಗಾಯಿಸಿ ಓದಿ ಅರ್ಥೈಸಿ ತುಲನಾತ್ಮಕವಾಗಿ ವಿಶ್ಲೇಷಿಸಿ ಶುದ್ಧರೂಪದಲ್ಲಿ ಪ್ರಕಟಿಸಬೇಕು. ಆ ಕೆಲಸಕ್ಕೆ ವಿವಿಧ ಕಾಲಘಟ್ಟಗಳ ಕನ್ನಡ ಭಾಷಾ ಪರಿಚಯವಿರಬೇಕು. ಇಂದಿನ ವರ್ಣಮಾಲೆಯಲ್ಲಿ ಕಂಡುಬರದಂಥ ವಿಭಿನ್ನ ಅಕ್ಷರಗಳನ್ನು ಸರಿಯಾಗಿ ಗುರುತಿಸುವುದು ಮಾತ್ರವಲ್ಲ ನಡುಗನ್ನಡ, ಹಳಗನ್ನಡ ಮತ್ತು ಪೂರ್ವದ ಹಳಗನ್ನಡಗಳ ಭಾಷಾಬಂಧವನ್ನು ಅರಿತುಕೊಂಡು ಈ ಕೆಲಸ ಮಾಡಬೇಕಾಗುತ್ತದೆ. ರೈಸರು ಈ ಅಧ್ಯಯನದಲ್ಲಿ ಸಾಕಷ್ಟು ತೊಡಗಿಸಿಕೊಂಡದ್ದರಿಂದಲೇ ಅವರಿಂದ ಕರ್ನಾಟಕದ ಸರ್ವಾಂಗೀಣ ಇತಿಹಾಸವನ್ನು ರಚಿಸಲು ಸಾಧ್ಯವಾಯಿತು.

ಸುಮಾರು ಕ್ರಿ.ಶ. ೧೮೯೧ರಲ್ಲಿ ಬೆಂಗಳೂರಿನ ಪ್ರದೇಶವೊಂದರಲ್ಲಿ ರೋಮನ್ ನಾಣ್ಯಗಳು ದೊರೆತಾಗ ಕನ್ನಡನಾಡು ಮತ್ತು ರೋಮನ್ ಚಕ್ರಾಧಿಪತ್ಯದ ನಡುವಿನ ಕೊಳುಕೊಡುಗೆಯ ಕುರಿತಂತೆ ಪುಸ್ತಕವೊಂದನ್ನು ಪ್ರಕಟಿಸಿದರು. ಸಂಶೋಧನಾ ತಜ್ಞರಾಗಿದ್ದ ರೈಸ್ ಬರೆದ ಬರಹವೆಲ್ಲವೂ ಅನುಪಮ ಮೇಧಾಶಕ್ತಿಯಿಂದ ಕೂಡಿದ್ದಾಗಿದ್ದು ವಿದ್ವತ್ ನೆಲೆಯಲ್ಲಿ ಉಚ್ಚಮಟ್ಟದಲ್ಲಿ ನಿಲ್ಲುವಂಥದ್ದಾಗಿವೆ. Mysore and Coorg from Inscriptions ಎಂಬದು ಅವರ ಮಹೋನ್ನತ ಸಂಶೋಧನಾ ಕೃತಿ. ಕ್ರಿ.ಶ.೧೮೪೨-೪೩ರಲ್ಲಿ ಬೆಂಗಳೂರಿನಲ್ಲಿ ಅಂದಿನ ಮೈಸೂರು ಸರ್ಕಾರವು ಸ್ಥಾಪಿಸಿದ ಮುದ್ರಣಾಲಯವನ್ನು ರೈಸರು ಈ ಶಾಸನಗಳ ಮತ್ತು ಹಳಗನ್ನಡ ಕಾವ್ಯಗಳ ಮುದ್ರಣಕ್ಕಾಗಿ ನವೀಕರಿಸಿದರೆಂಬುದು ವಿಶೇಷ. ಅವರು ಮೈಸೂರು ಮತ್ತು ಕೊಡಗಿನ ವಿವರಗಳನ್ನೊಳಗೊಂಡ ಎರಡು ಗೆಝೆಟಿಯರ್ ಸಂಪುಟಗಳನ್ನು ಪ್ರಕಟಿಸಿದಾಗ ಆ ಕಾರ್ಯಕ್ಕಾಗಿ ಇಂಡಿಯಾಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಿತು. ಈ ಗೆಝೆಟಿಯರ್ ಸಂಪುಟಗಳನ್ನು ನೋಡಿ ಪ್ರಭಾವಿತರಾದ ಡಬ್ಲ್ಯು ಡಬ್ಲ್ಯು ಹಂಟರ್ ಎಂಬುವರು ತಾವು ಸಂಪಾದಿಸಿದ್ದ ಇಂಪೀರಿಯಲ್ ಗೆಝೆಟಿಯರ್ ಸಂಪುಟಗಳಿಗೆ ಇವೆರಡನ್ನೂ ಸೇರಿಸಿಕೊಂಡರು. ಶಾಸನಗಳ ಅಧ್ಯಯನ ಮತ್ತು ಇತಿಹಾಸ ನಿರೂಪಣೆಯ ನೆವದಲ್ಲಿ ರೈಸರು ಭಾರತೀಯ ಇತಿಹಾಸ ಸಂಶೋಧನೆಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆಂಬುದನ್ನು ಅಲ್ಲಗಳೆಯುವಂತಿಲ್ಲ.

ಶಿಕ್ಷಣಾಧಿಕಾರಿ[ಬದಲಾಯಿಸಿ]

ಅದೇ ರೀತಿ ಶಿಕ್ಷಣಾಧಿಕಾರಿಯಾಗಿ ರೈಸರು ಮೈಸೂರಿನ ಶಿಕ್ಷಣಕ್ಷೇತ್ರಕ್ಕೂ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅವರು ಕ್ರಿ.ಶ.೧೮೬೮ರಲ್ಲಿ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಒಂದು ವಿಸ್ತೃತ ಯೋಜನೆಯ ಪ್ರಕಾರ ಹೋಬಳಿಗೊಂದು ಶಾಲೆ ಇರಬೇಕೆಂಬ ವಿಚಾರವು ಸ್ವೀಕೃತವಾಗಿ ಕೂಡಲೇ ಜಾರಿಗೆ ಬಂತು. ಮುಂದೆ ಮೈಸೂರು ಸಂಸ್ಥಾನದ ಜನಗಣತಿಯ ಕಾರ್ಯಭಾರ ಹೊತ್ತು ಮೂರುವರ್ಷಗಳ ಕಾಲಾವಧಿಯಲ್ಲಿ ಒಂದು ಪರಿಪೂರ್ಣ ಅಂಕಿಅಂಶಗಳನ್ನು ನೀಡಿದರು.

ಕನ್ನಡ ಪ್ರೇಮ[ಬದಲಾಯಿಸಿ]

ರೈಸರೂ ಮೂಲತಃ ಪರದೇಶೀಯರಾಗಿದ್ದರೂ, ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೋಗಿ ಬಂದರಾದರೂ, ಬೆಂಗಳೂರು ಸೇರಿದಂತೆ ಕನ್ನಡನಾಡಿನ ಬಗ್ಗೆ ಮತ್ತು ಕನ್ನಡಭಾಷೆಯ ಬಗ್ಗೆ ಅವರಿಗೆ ಅವ್ಯಾಜ ಪ್ರೇಮವಿತ್ತು. ಅವರು ಇಂಗ್ಲೆಂಡಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾಗ ನಡೆದ ಒಂದು ಘಟನೆಯನ್ನು ಇಲ್ಲಿ ಸ್ಮರಿಸಲೇಬೇಕು. ಸುಮಾರು ೧೯೨೪ರಲ್ಲಿ ಇಂಗ್ಲೆಂಡಿನಲ್ಲಿ ಒಂದು ಜಾಗತಿಕ ಉದ್ಯಮಗಳ ಸಮಾವೇಶ ನಡೆದಿತ್ತು. ಮೈಸೂರು ಸಂಸ್ಥಾನದ ವತಿಯಿಂದ ಅಲ್ಲಿ ನಡೆದಿದ್ದ ಮೈಸೂರಿನ ಉತ್ಪನ್ನಗಳ ಪ್ರದರ್ಶನ ಮಳಿಗೆಗೆ ಭೇಟಿ ನೀಡಿದ ರೈಸರು ಮಳಿಗೆಯಲ್ಲಿದ್ದ ಶ್ರೀಯುತ ಎಸ್ ಜಿ ಶಾಸ್ತ್ರೀ ಅವರನ್ನು ಕಂಡು ತಮ್ಮನ್ನು ಪರಿಚಯಿಸಿಕೊಂಡರು. ಶಾಸ್ತ್ರಿಗಳು ಇಂಗ್ಲಿಷಿನಲ್ಲೇ ಸಂಭಾಷಿಸುತ್ತಿದ್ದಾಗ ರೈಸರು ಮಧ್ಯೆ ಪ್ರವೇಶಿಸಿ ’ಅಯ್ಯಾ, ಕನ್ನಡದಲ್ಲಿ ಮಾತನಾಡೋಣವೇ?’ ಎಂದು ಹೇಳಿ ’ಆಹಾ! ಕನ್ನಡ ಎಷ್ಟು ಚೆಂದ! ಎಷ್ಟು ಮಧುರ!’ ಎಂದು ಪರವಶರಾದರಂತೆ.

ಅವರು ಕಾಲವಾಗುವ ಕೆಲವೇ ಸಮಯದ ಮುಂಚೆ ಬ್ರಿಟನ್‌ನ ವೆಂಬರ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ನಡೆಯಿತು. ಅಲ್ಲಿ ಕರ್ನಾಟಕದ ಕನ್ನಡ ಮಳಿಗೆಗೆ ಇರುವುದನ್ನು ಅರಿತು, ಅಲ್ಲಿಗೆ ತಮ್ಮಇಳಿವಯಸ್ಸಿನಲ್ಲೂ ಮಕ್ಕಳ ಸಹಾಯ ಪಡೆದು ಭೇಟಿ ನೀಡಿದ್ದರು. ಅಲ್ಲಿರುವ ಕರ್ನಾಟಕದ ಪ್ರತಿನಿಧಿಯಾದ ಸೋಸಲೆ ಗರಳೆಪುರಿ ಶಾಸ್ತ್ರಿಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದರು., ಅವರೊಡನೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಲು ಮೊದಲುಮಾಡಿದರು,ರೈಸ್‌ಅವರು ಶಾಸ್ತ್ರಿಗಳನ್ನು ಮಧ್ಯದಲ್ಲಿಯೇ ತಡೆದು “ ಅಯ್ಯಾ,ಮೊದಲು ಗಾಂಚಲಿ ಬಿಟ್ಟು ಕನ್ನಡದಲ್ಲೇ ಮಾತನಾಡಿ ಎಂದು ಹೇಳಿದರು. "ಮುದ್ದಾದ ಕನ್ನಡ ಕಿವಿಯ ಮೇಲೆ ಬಿದ್ದು ತುಂಬ ದಿನಗಳಾದವು ಕನ್ನಡ ಮಾತನ್ನು ಕೇಳಲೆಂದೆ ನಾನು ಇಲ್ಲಿಗೆ ಬಂದಿರುವೆ ಕನ್ನಡದಲ್ಲೇ ಮಾತನಾಡಿ” ಎಂದು ಮನವಿಮಾಡಿಕೊಂಡು ನಂತರ .ಅಲ್ಲಿದ್ದ ಕನ್ನಡಿಗರ ಜತೆ ಕನ್ನಡದಲ್ಲೆ ಗಂಟೆಗಟ್ಟಲೇ ಬಾಯ್ತುಂಬ ಮಾತನಾಡಿದರಂತೆ.

ಕುವೆಂಪು ಅವರು “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ’.ಎಂದು ಬರೆಯುವ ಅನೇಕ ದಶಕಗಳ ಮೊದಲೇ ಅದರಂತೆ ಬಾಳಿ ಬದುಕಿದ ಹಿರಿಯ ಜೀವ ಅವರದು. ಈ ಘಟನೆ ಅವರ ಅಪಾರ ಕನ್ನಡಾಭಿಮಾನದ ಪ್ರತೀಕ. ಅದಕ್ಕಾಗಿಯೇ ಅವರು ಗತಿಸಿ ನೂರಾರು ವರ್ಷಗಳಾದರೂ ಕನ್ನಡಿಗರಿಗೆ ಪ್ರಾಥಃಸ್ಮರಣೀಯರಾದ ಅನೇಕ ಮಹನೀಯರಲ್ಲಿ ಅವರೂ ಒಬ್ಬರಾಗಿರುವರು.

ತೊಂಬತ್ತು ವರ್ಷದ ತುಂಬು ಜೀವನ ನಡೆಸಿ ೧೯೨೭ರಲ್ಲಿ ಕಾಲವಶರಾದು. ಅವರ ಹೆಸರು ಕರ್ನಾಟಕದ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ. ಕ್ರಿ.ಶ.೧೯೨೭ ಜುಲೈ ೧೦ ರಂದು ನಿಧನರಾದ ರೈಸರ ಹೆಸರನ್ನು ಕನ್ನಡಿಗರೆಲ್ಲರೂ ಚಿರಕಾಲ ನೆನೆಯಬೇಕು. ಬೆಂಗಳೂರು ಮಹಾನಗರಪಾಲಿಕೆಯು ಸೆಂಟ್ ಥಾಮಸ್ ಟೌನ್ ಪ್ರದೇಶವನ್ನು ಬಿ ಎಲ್ ರೈಸ್ ನಗರವೆಂದು ಘೋಷಿಸಿದೆ.

ಆಧಾರ/ಉಲ್ಲೇಖಗಳು[ಬದಲಾಯಿಸಿ]

  1. Iyer, Meera (December 13, 2010). "'My love for Mysore is unending'". Deccan Herald.
  2. "Rev. Benjamin Lewis Rice-Missionaries contributions to India". Christian Persecution Update India. Archived from the original on 2 ಡಿಸೆಂಬರ್ 2011. Retrieved 22 Nov 2011.

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]