ಬದರಿನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬದರೀನಾಥ್ ಇಂದ ಪುನರ್ನಿರ್ದೇಶಿತ)
ಬದರಿನಾಥ ದೇವಾಲಯ

ಬದರಿನಾಥ ಭಾರತಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಹಿಂದೂ ಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಡುವ ಕ್ಷೇತ್ರಗಳಲ್ಲಿ ಬದರಿನಾಥ ಅತಿ ಪ್ರಮುಖವಾದುದು. ಚಾರ್ ಧಾಮ್ (ಚತುರ್ಧಾಮ)ಗಳಲ್ಲಿ ಬದರಿನಾಥವು ಸಹ ಒಂದು. ಸಮುದ್ರ ಮಟ್ಟದಿಂದ ಸರಾಸರಿ ೩೪೧೫ ಮೀ. ಎತ್ತರವಿರುವ ಬದರಿನಾಥವು ಗಢ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಿತವಾಗಿದೆ. ರಿಷಿಕೇಶದಿಂದ ೩೦೧ ಕಿ.ಮೀ. ದೂರದಲ್ಲಿರುವ ಬದರಿನಾಥ ಕೇದಾರನಾಥದಿಂದ (ಗೌರಿಕುಂಡ) ಸುಮಾರು ೨೩೩ ಕಿ.ಮೀ. ದೂರದಲ್ಲಿದೆ.

ಪ್ರಾಮುಖ್ಯ[ಬದಲಾಯಿಸಿ]

ಒಂಭತ್ತನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಬದರಿನಾಥವನ್ನು ಒಂದು ಪ್ರಮುಖ ತೀರ್ಥಕ್ಷೇತ್ರವನ್ನಾಗಿ ಸ್ಥಾಪಿಸಿದರು. ಕಠಿಣಮಾರ್ಗದ ಹೊರತಾಗಿಯೂ ಈಚಿನ ವರ್ಷಗಳಲ್ಲಿ ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ೨೦೦೬ರಲ್ಲಿ ಸುಮಾರು ೬ ಲಕ್ಷ ಮಂದಿ ಯಾತ್ರಿಗಳು ಬದರಿನಾಥ ಕ್ಷೇತ್ರವನ್ನು ಸಂದರ್ಶಿಸಿದ್ದರು.ಅನೇಕ ಪ್ರಾಚೀನ ಗ್ರಂಥಗಳಲ್ಲಿ ಬದರಿನಾಥ ಕ್ಷೇತ್ರವು ಉಲ್ಲೇಖಿಸಲ್ಪಟ್ಟಿದೆ. ಶ್ರೀಮದ್ಭಾಗವತದ ಪ್ರಕಾರ "ಅಲ್ಲಿ ಬದರಿಕಾಶ್ರಮದಲ್ಲಿ ವಿಷ್ಣುವು ತನ್ನ ಅವತಾರಗಳಾದ ನರ ಮತ್ತು ನಾರಾಯಣ ಋಷಿಗಳ ರೂಪದಲ್ಲಿ ನೆಲೆಸಿದ್ದು ಸಮಸ್ತ ಜೀವಿಗಳ ಒಳಿತಿಗಾಗಿ ಯುಗಯುಗಾಂತರಗಳಿಂದ ತಪಸ್ಸಿನಲ್ಲಿ ನಿರತನಾಗಿರುವನು.ಮಹಾಭಾರತದಲ್ಲಿ ಶಿವನು ಅರ್ಜುನನನ್ನು ಕುರಿತು ಹೀಗೆನ್ನುವನು-"ನೀನು ಹಿಂದೊಂದು ಜನ್ಮದಲ್ಲಿ ನರ ನಾಗಿದ್ದು ನಾರಾಯಣ ಜೊತೆಯಲ್ಲಿ ಬದರಿಕಾಶ್ರಮದಲ್ಲಿ ಕಠಿಣ ತಪಸ್ಸನ್ನಾಚರಿಸಿದ್ದೆ".ಇನ್ನೊಂದು ಕಥನದ ಪ್ರಕಾರ-ಭೂಲೋಕದಲ್ಲಿ ಪಾಡುಪಡುತ್ತಿದ್ದ ಮಾನವರನ್ನು ಉದ್ಧರಿಸಲು ಭುವಿಗಿಳಿಯುವಂತೆ ಗಂಗೆಯನ್ನು ಪ್ರಾರ್ಥಿಸಲಾಗಿ ಗಂಗೆಯ ರಭಸವನ್ನು ತಡೆಯಲು ಭೂಮಿಯು ಅಸಮರ್ಥಳಾದಾಗ ಗಂಗೆಯನ್ನು ೧೨ ಪವಿತ್ರ ಕವಲುಗಳನ್ನಾಗಿ ವಿಭಾಗಿಸಲಾಯಿತು. ಅವುಗಳಲ್ಲಿ ಅಲಕನಂದಾ ಸಹ ಒಂದು. ಅಲಕನಂದಾ ಉಗಮಿಸುವ ಸ್ಥಾನ ಬದರಿ ಮುಂದೆ ಮಹಾವಿಷ್ಣುವಿಗೆ ನೆಲೆಯಾಯಿತು.ಬದರಿನಾಥ ಕ್ಷೇತ್ರದ ಪರಿಸರದಲ್ಲಿರುವ ಪರ್ವತಗಳು ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಇಲ್ಲಿಗೆ ಸಮೀಪದ ಸ್ವರ್ಗಾರೋಹಿಣಿ ಎಂಬ ಪರ್ವತವನ್ನು ಹತ್ತಿಹೋಗಿ ಪಾಂಡವರು ಭೂಲೋಕವನ್ನು ತೊರೆದು ಸ್ವರ್ಗವನ್ನೈದಿದರೆಂದು ನಂಬಲಾಗಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಪಾಂಡವರು ಬದರಿನಾಥ ಕ್ಷೇತ್ರ ಮತ್ತು ಮಾಣಾಗಳನ್ನು ಹಾದುಹೋಗಿ ಮುಂದೆ ಸ್ವರ್ಗಾರೋಹಿಣಿ ಪರ್ವತವನ್ನು ತಲುಪಿದರು. ಮಾಣಾದಲ್ಲಿ ವ್ಯಾಸಗುಹೆ ಎಂಬ ಹೆಸರಿನ ಗುಹೆಯಿದ್ದು ಇಲ್ಲಿಯೇ ವೇದವ್ಯಾಸ ಮಹಾಋಷಿ ಗಳು ಮಹಾಭಾರತವನ್ನು ಗಣೇಶನಿಗೆ ಹೇಳುವ ಮೂಲಕ ರಚಿಸಿದರೆಂದು ನಂಬಿಕೆ. ಗಣೇಶನು ವ್ಯಾಸರು ಹೇಳಿದ್ದನ್ನು ಕೇಳಿಸಿಕೊಂಡು ಬರೆಯುತ್ತಿದ್ದ ಸ್ಥಳವೆನ್ನಲಾದ ಗಣೇಶ ಗುಹೆ ಎಂಬ ಹೆಸರಿನ ಗುಹೆಯು ಸಹ ಬಳಿಯಲ್ಲಿದೆ.ಪದ್ಮ ಪುರಾಣ, ಸ್ಕಂದ ಪುರಾಣಗಳಲ್ಲಿ ಸಹ ಬದರಿನಾಥ ಕ್ಷೇತ್ರದ ಬಗ್ಗೆ ನುಡಿಗಳಿವೆ.

ಬದರಿನಾಥ ಮಂದಿರ[ಬದಲಾಯಿಸಿ]

ಬದರಿನಾಥದ ವೇದವ್ಯಾಸ ಮಂದಿರ

ಬದರಿನಾರಾಯಣ ಮಂದಿರವೆಂದು ಸಹ ಕರೆಯಿಸಿಕೊಳ್ಳುವ ಈ ಮಂದಿರವು ಅಲಕನಂದಾ ನದಿಯ ದಂಡೆಯ ಮೇಲೆ ಇದೆ. ಆದಿ ಶಂಕರರು ಅಲಕನಂದಾ ನದಿಯಲ್ಲಿ ಮುಳುಗಿದ್ದ ಮೂರ್ತಿಯನ್ನು ತಪ್ತ ಕುಂಡದ ಬಳಿಯ ಗುಹೆಯೊಂದರಲ್ಲಿ ಪ್ರತಿಷ್ಠಾಪಿಸಿದರು. ಜೊತೆಗೆ ಮೂರ್ತಿಗೆ ನಿಯಮಿತ ಪೂಜಾವ್ಯವಸ್ಥೆಗಳನ್ನು ಸಹ ನಿಗದಿಮಾಡಿದರು. ಮುಂದೆ ೧೬ನೆಯ ಶತಮಾನದಲ್ಲಿ ಗಢ್ವಾಲ್‌ನ ಅರಸನು ಇಂದು ಕಾಣುವ ಹೊಸ ದೇವಾಲಯವನ್ನು ನಿರ್ಮಿಸಿ ಬದರಿನಾರಾಯಣ ಮೂರ್ತಿಯನ್ನು ಅಲ್ಲಿ ಪುನರ್ಪ್ರತಿಷ್ಠಾಪಿಸಿದನು.ಈ ಮಂದಿರವು ಹಲವು ಬಾರಿ ಪುನರುಜ್ಜೀವನಗೊಳಿಸಲ್ಪಟ್ಟಿದೆ. ತೀವ್ರ ಹಿಮಪಾತ ಮತ್ತು ಭೂಕಂಪಗಳಂತಹ ನೈಸರ್ಗಿಕ ಪ್ರಕೋಪಗಳು ದೇವಾಲಯದ ಕಟ್ಟಡಕ್ಕೆ ಸಾಕಷ್ಟು ಬಾರಿ ಹಾನಿಯುಂಟುಮಾಡಿವೆ.ಮಂದಿರ ಮುಖ್ಯ ಆರಾಧ್ಯ ಮೂರ್ತಿಯು ಶ್ರೀಮನ್ನಾರಾಯಣನದಾಗಿದ್ದು ಈ ಮೂರ್ತಿಯು ಕಪ್ಪು ಶಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದು ಮೀ. ಎತ್ತರವಾಗಿದೆ. ಈ ವಿಗ್ರಹವು ಒಂದು ಸ್ವಯಂ ವ್ಯಕ್ತ ಕ್ಷೇತ್ರವೆಂದು ಹಿಂದೂ ಧರ್ಮೀಯರು ತಿಳಿಯುವರು. ಇಲ್ಲಿ ನಾರಾಯಣನು ಧ್ಯಾನನಿರತ ಭಂಗಿಯಲ್ಲಿ ನೆಲೆಯಾಗಿರುವನು. ಸುಮಾರು ೫೦ ಅಡಿ ಎತ್ತರವಾಗಿರುವ ದೇವಾಲಯವು ಚಿನ್ನದ ವಿಮಾನ ಮತ್ತು ಚಾವಣಿಗಳನ್ನು ಹೊಂದಿದೆ. ದೇವಾಲಯದಲ್ಲಿ ಬದರಿನಾರಾಯಣನ ಮೂರ್ತಿಯ ಜೊತೆಗೆ ನರ ಮತ್ತು ನಾರಾಯಣ, ನರಸಿಂಹ, ಲಕ್ಷ್ಮಿ, ಉದ್ಧವ, ಗರುಡ, ಕುಬೇರ, ನಾರದ ಮತ್ತು ನವದುರ್ಗೆಯರ ಮೂರ್ತಿಗಳು ಸಹ ಸ್ಥಾಪಿಸಲ್ಪಟ್ಟಿದ್ದು ಪೂಜಿಸಲ್ಪಡುತ್ತಿವೆ. ದೇವಾಲಯದ ಬಳಿಯಲ್ಲಿರುವ ತಪ್ತ ಕುಂಡವೆಂಬ ಹೆಸರಿನ ಬಿಸಿನೀರಿನ ಕೊಳಗಳಲ್ಲಿ ಸ್ನಾನ ಮಾಡಿದ ನಂತರವೇ ದೇವರ ದರ್ಶನಕ್ಕೆ ತೆರಳುವುದು ವಾಡಿಕೆ.

ನಂಬೂದಿರಿ ಪರಂಪರೆ[ಬದಲಾಯಿಸಿ]

ಬದರಿನಾಥ ಕ್ಷೇತ್ರವು ಭಾರತದ ಉತ್ತರದ ತುದಿಯಲ್ಲಿದ್ದರೂ ಸಹ ಇಲ್ಲಿನ ಮುಖ್ಯ ಅರ್ಚಕರು(ರಾವಲ್) ದಕ್ಷಿಣದ ಕೇರಳನಂಬೂದಿರಿ ಬ್ರಾಹ್ಮಣ ಮನೆತನಕ್ಕೆ ಸೇರಿದವರಾಗಿರುತ್ತಾರೆ. ಆದಿ ಶಂಕರಾಚಾರ್ಯರು ಈ ಪರಂಪರೆಯನ್ನು ಸ್ಥಾಪಿಸಿದರು. ರಾವಲ್‌ರಿಗೆ ಪೂಜಾ ಕೈಂಕರ್ಯಗಳಲ್ಲಿ ನೆರವಾಗಲು ಗಢ್ವಾಲ್‌ನ ಡಿಮ್ಮರ್ ಗ್ರಾಮದ ಡಿಮ್ರೀ ಪಂಡಿತರೆಂದು ಹೆಸರಾದ ಬ್ರಾಹ್ಮಣ ವಿದ್ವಾಂಸರು ಇರುತ್ತಾರೆ.ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತವಿರುವ ಶ್ರೌತ ಸಂಪ್ರದಾಯದ ತಂತ್ರ ವಿಧಿಗಳನ್ನು ಅನುಸರಿಸುವ ಉತ್ತರ ಭಾರತದ ಕೆಲವೇ ದೇವಾಲಯಗಳಲ್ಲಿ ಬದರಿನಾಥ ಕ್ಷೇತ್ರ ಒಂದು.

ಯಾತ್ರೆಗೆ ಸೂಕ್ತ ಸಮಯ[ಬದಲಾಯಿಸಿ]

ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನನಿಂದ ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.

ಪಂಚ ಬದರಿಗಳು[ಬದಲಾಯಿಸಿ]

ಮಹಾವಿಷ್ಣುವನ್ನು ಕುರಿತಾದ ಹಿಮಾಲಯದ ಐದು ಕ್ಷೇತ್ರಗಳು ಪಂಚ ಬದರಿ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಬದರಿನಾಥ ಕ್ಷೇತ್ರವು ಸಹ ಸೇರಿದೆ.

  1. ವಿಶಾಲ ಬದರಿ : ಬದರಿನಾಥ ಕ್ಷೇತ್ರ
  2. ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
  3. ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
  4. ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
  5. ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Official Site

Badrinath

1280x960 - 2816x2112 photos of Badrinath temple, published by author

Photos and story of pilgrimage to Badrinath Archived 2013-04-08 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ಬದರಿನಾಥ&oldid=1056702" ಇಂದ ಪಡೆಯಲ್ಪಟ್ಟಿದೆ