ಫೀಲ್ಡ್ ಮಾರ್ಷಲ್ ಕಾರಿಯಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಫೀಲ್ಡ್ ಮಾರ್ಷಲ್ ಕೊದಂಡೆರ ಮಾದಪ್ಪ ಕಾರ್ಯಪ್ಪ

ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ (ಕಾರ್ಯಪ್ಪ) (ಜನವರಿ ೨೮, ೧೮೯೯ಮೇ ೧೫, ೧೯೯೩) ಇವರು ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗರು.

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

 • ಕೊಡಂದೆರ ಮಾದಪ್ಪ ಕಾರಿಯಪ್ಪ ೨೮ನೆಯ ಜನವರಿ, ೧೮೯೯ರಂದು ಕೊಡಗಿಶನಿವಾರಸಂತೆಯಲ್ಲಿ ಜನಿಸಿದರು. (ಆದರೆ ಸೈನ್ಯದ ದಾಖಲೆಗಳ ಪ್ರಕಾರ ಅವರು ಹುಟ್ಟಿದ ವರ್ಷ ೧೯೦೦ ಎಂದಿದೆ.)[೧].ಇವರು ಕೊಡವ ಜನಾಂಗದವರಾಗಿದ್ದು, ಕೊಡಂದೆರ ಮನೆತನಕ್ಕೆ ಸೇರಿದವರು.
 • ತಂದೆ ಮಾದಪ್ಪನವರು ಕಂದಾಯ ಇಲಾಖೆ ಯಲ್ಲಿದ್ದರು. ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲಿಸುವವರು. ತಾಯಿ ಕಾವೇರಿ. ಕಾರ್ಯಪ್ಪನವರು ತಮ್ಮ ಕೊನೆಯುಸಿರಿನವರೆಗೂ ಇವರಿಬ್ಬರನ್ನೂ ದೇವರಂತೆ ಪೂಜಿಸಿದರು. ಸಂಬಂಧಿಗಳಿಗೆಲ್ಲ 'ಚಿಮ್ಮ'ನಾಗಿದ್ದ ಕಾರಿಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು.
 • ಕಾಲೆಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರಿಯಪ್ಪನವರನ್ನು ಒಂದೇ ರೀತಿಯಿಂದ ಆಕರ್ಷಿಸಿದವು. ಇವರು ಸಕ್ರಿಯ ಕ್ರೀಡಾಪಟುವಾಗಿದ್ದು, ಹಾಕಿ ಮತ್ತು ಟೆನ್ನಿಸ್‌ನಂಥ ಆಟಗಳನ್ನು ಹುರುಪಿನಿಂದ ಮತ್ತು ಜಾಣತನದಿಂದ ಆಡುತ್ತಿದ್ದರು. ಇದರ ಜೊತೆಗೆ ಸಂಗೀತವನ್ನು ಮೆಚ್ಚುತ್ತಿದ್ದರು ಮತ್ತು ಕೈ ಚಳಕ ತೋರಿಸುವ ಜಾದುವಿನ ಬಗ್ಗೆಯೂ ಇವರಿಗೆ ಒಲವಿತ್ತು.

ಸೇನೆ ಸೇರಿಕೆ ಮತ್ತು ಮೊದಲಿನ ಕೆಲವು ವರ್ಷಗಳು[ಬದಲಾಯಿಸಿ]

 • ೧೯೧೮ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ರಾಜನ ಸೈನ್ಯದಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಇದರ ನಂತರ ನಡೆದ ಕಠಿಣ ಪರೀಕ್ಷೆಗಳ ನಂತರ ಆಯ್ಕೆಯಾದ ಕೆಲವೇ ಭಾಗ್ಯಶಾಲಿ ಗಳಲ್ಲಿ ಕಾರಿಯಪ್ಪನವರೂ ಕೂಡ ಒಬ್ಬರಾಗಿದ್ದರು, ನಂತರ ಸೇನೆಯ ನಿಯುಕ್ತಿಯ ಮುಂಚಿನ ಕಠಿಣತರವಾದ ತರಬೇತಿಯನ್ನು ಪಡೆದರು.
 • ಇಂದೂರಿನ ಡ್ಯಾಲಿ ಕೆಡೆಟ್ ಕಾಲೇಜ್‌(The Daly College)ನಲ್ಲಿ ಬ್ರಿಟಿಶ್ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ [KCIOs (King's Commissioned Indian Officers)] ಮೊದಲ ವರ್ಗಕ್ಕೆ ಸೇರಿಕೊಂಡರು. ನಂತರ ೧ನೇ ಡಿಸೆಂಬರ್ ೧೯೧೯ರಲ್ಲಿ ಮುಂಬಯಿಯಲ್ಲಿದ್ದ ೨ನೇ ಬೆಟ್ಯಾಲಿಯನ್ ೮೮ನೇ ಕಾರ್ನಾಟಿಕ್ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾದರು.
 • ಮೂರು ತಿಂಗಳ ನಂತರ ೨/೧೨೫ನೇಪಿಯರ್ ರೈಫ್‌ಲ್ಸ್ (ಸ್ವಾತಂತ್ರ್ಯಾನಂತರ ೫ನೇ ರಜಪುತಾನ ರೈಫ್‌ಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿ ನೇಮಕಗೊಂಡರು. ಅಲ್ಲಿ ಇದ್ದ ಎರಡು ವರ್ಷಗಳಲ್ಲಿ ಬಂಡುಗೋರರನ್ನು ಹತೋಟಿಗೆ ತರುವುದರಲ್ಲಿ ಸಫಲರಾದರು.
 • ತದ ನಂತರ ಭಾರತಕ್ಕೆ ಮರಳಿ ಬಂದು, ವಾಯವ್ಯ ಗಡಿ ಪ್ರದೇಶ(North-west Frontier Province)ದ ಅಫಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ ೭ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು.
 • ಮರುಭೂಮಿಯಂಥ ವಿಪರೀತ ಹವಾಮಾನವಿರುವ ಆ ಪ್ರದೇಶದಲ್ಲಿ ಲೆಫ್ಟಿನೆಂಟ್ ಕಾರ್ಯಪ್ಪನವರು, ದೂರದರ್ಶಕ ಯಂತ್ರವಿಲ್ಲದಿರುವ ಕೋವಿ(non-telescopic rifles)ಗಳಿಂದ ಶತ್ರುವಿನ ಎರಡೂ ಕಣ್ಣುಗಳ ಮಧ್ಯಕ್ಕೆ ಗುಂಡು ಹೊಡೆಯುವ ನೈಪುಣ್ಯವಿರುವ ಪಠಾಣರ ವಿರುದ್ಧ ಹೋರಾಡಿ ಜಯಶೀಲರಾದರು. ಅತೀವ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಕಾರ್ಯಪ್ಪನವರು ಗಳಿಸಿದ ವಿಜಯಶ್ರೀ ಬ್ರಿಟಿಶ್ ಸೈನ್ಯದ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಿತು.
 • ಇದು ಸೈನ್ಯದಲ್ಲಿ ಅವರ ಏಳಿಗೆಗೆ ಪ್ರೋತ್ಸಾಹದಾಯಕವಾಯಿತು. ಅಲ್ಲಿಂದ ಇವರನ್ನು ೧/೭ನೇ ರಜಪೂತ ರೆಜಿಮೆಂಟ್‌ಗೆ (ವಿಕ್ಟೊರಿಯಾ ರಾಣಿಯ ಸ್ವಂತ ಲಘು ಪದಾತಿದಳಕ್ಕೆ) ವರ್ಗಾಯಿಸಲಾಯಿತು. ಈ ದಳವೇ ಇವರು ಸೈನ್ಯದಿಂದ ನಿವೃತ್ತಿಯಾಗುವವರೆಗೆ ಇವರ ಮೂಲ ನೆಲೆಯಾಯಿತು. ಇರಾಕ್ ಮತ್ತು ವಜೀರಿಸ್ತಾನದಲ್ಲಿ ನಡೆಸಿದ ಸೈನ್ಯ ಕಾರ್ಯಾಚರಣೆಯ ಅನುಭವವು ಇವರ ಮುಂದಿನ ಜೀವನದ ಶೌರ್ಯ-ಸಾಹಸಗಳಿಗೆ ಅಡಿಪಾಯವನ್ನು ರಚಿಸಿತು.
 • ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೩೩ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿಯಾಗಿದ್ದರು. ಮುಂದೆ ೧೯೪೬ರಲ್ಲಿ ಇವರಿಗೆ ಫ್ರಂಟೀಯರ ಬ್ರಿಗೆಡ್ ಗುಂಪಿನ ಬ್ರಿಗೆಡಿಯರರಾಗಿ ಬಡ್ತಿ ಕೊಡಲಾಯಿತು. ಇದೇ ಅವಧಿಯಲ್ಲಿ ಕರ್ನಲ್ ಅಯೂಬ್ ಖಾನ್ (ಮುಂದೆ ಇವರು ಪಾಕಿಸ್ತಾನದ ಸೈನ್ಯದ ಫೀಲ್ಡ ಮಾರ್ಷಲ್ ಮತ್ತು ೧೯೬೨ರಿಂದ ೧೯೬೯ರವರೆಗೆ ರಾಷ್ಟ್ರಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ವಿದೇಶಗಳಲ್ಲಿ ಸೇವೆ[ಬದಲಾಯಿಸಿ]

 • ೧೯೪೧-೪೨ರ ಅವಧಿಯಲ್ಲಿ ಕಾರಿಯಪ್ಪನವರು ಇರಾಕ್, ಸಿರಿಯಾ ಮತ್ತು ಇರಾನ್ ದೇಶಗಳಲ್ಲಿ ಮತ್ತು ೧೯೪೩-೪೪ರಲ್ಲಿ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೪೨ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅಂತಹ ಅಧಿಕಾರ ದೊರಕಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದರು.
 • ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ ೨೬ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿ ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ (Order of the British Empire (OBE)) ಪ್ರಶಸ್ತಿಯನ್ನು ಕೊಡಲಾಯಿತು.
 • ೧೯೪೭ರಲ್ಲಿ ಯುನೈಟೆಡ್ ಕಿಂಗಡಮನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು, ಇಂತಹ ತರಬೇತಿಯನ್ನು ಪಡೆದ ಮೊದಲ ಭಾರತೀಯರು ಕಾರಿಯಪ್ಪನವರು.ಹೃದಯವಿದ್ರಾವಕವಾದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು, ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಸಂಯಮತೆಯಿಂದ ಮತ್ತೂ ಎರಡೂ ಪಕ್ಷಗಳಿಗೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಇವರು ಈ ನಿರ್ಗಮನದ ಕಾರ್ಯದ ಭಾರತದ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದರು.

ಸ್ವಾತಂತ್ರ್ಯಾನಂತರ ಸೇವೆ[ಬದಲಾಯಿಸಿ]

 • ಸ್ವಾತಂತ್ರ್ಯಾನಂತರ ಕಾರಿಯಪ್ಪನವರನ್ನು ಮೇಜರ ಜನರಲ್ ಪದವಿಗೆ ಏರಿಸಿ ಇವರನ್ನು ಸೈನ್ಯದ ಉಪ ದಂಡನಾಯಕರನ್ನಾಗಿ ಮಾಡಿದರು. ನಂತರ ಲೆಫ್ಟನೆಂಟ್ ಜನರಲ್ ಎಂದು ಪದೊನ್ನತಿಗೊಳಿಸಿದಾಗ ಇವರು ಪೂರ್ವದ ಸೈನ್ಯದ ಕಮಾಂಡರ್(Eastern Army Commander) ಆದರು. ೧೯೪೭ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು.
 • ಝಿಲಾ, ದ್ರಾಸ್ ಮತ್ತು ಕಾರ್ಗಿಲ್ ಗಳನ್ನು ವಾಪಸ್ ಪಡೆಯಲು ಸೈನ್ಯಕ್ಕೆ ಕಾರಿಯಪ್ಪನವರು ಸರಿಯಾದ ದಿಕ್ಕು ತೋರಿಸಿದರು ಮತ್ತು ಲೆಹ್ ಗೆ ಕಡಿದುಹೋದ ಸಂಪರ್ಕವನ್ನು ದೊರಕಿಸಿದರು. ಕೊಡವ ಸಾಂಪ್ರದಾಯಿಕ ಉಡುಪಿನ ಕಟ್ಟಾ ಅಭಿಮಾನಿಯಾದ ಇವರು ದಿ.ಪುಟ್ಟಣ್ಣ ಕಣಗಾಲ್ ರವರ ಶರಪಂಜರ ಸಿನಿಮಾದ ಒಂದು ದೃಶ್ಯದಲ್ಲಿ ಇವರು ನಟಿಸಿದ್ದಾರೆ.ಕೊಡವ ಮದುವೆ ಸಂದರ್ಭದಲ್ಲಿ ಕಾರಿಯಪ್ಪನವರು ಕೊಡವ ಉಡುಪು ಕುಪ್ಯ, ಚೇಲೆ ಧರಿಸಿ ಮದುವೆಯಲ್ಲಿ ಪಾಲ್ಗೊಂಡಿರುವುದನ್ನು ವಿಶೇಷವಾಗಿ ಚಿತ್ರಿಕರಿಸಿದ್ದಾರೆ.

ಉಲ್ಲೇಖ[ಬದಲಾಯಿಸಿ]

 1. Field Marshal K M Cariappa, by Air Marshal KC Cariappa (Retd), published by Niyogi books, New Delhi 110020, 2008, p16